ನರಗುಂದ ನವಲುಗುಂದದ ಗೋಲಿಬಾರ್ ನಂತರ ನಡೆದ ರೈತ ಚಳುವಳಿಗೆ ಕೇರ್ ಮಾಡದ ಸರಕಾರ ಹಲವು ಬಾರಿ ಗೋಲಿಬಾರ್ ನಡೆಸಿತು. ಇದರಿಂದ ನಾಡಿನಾದ್ಯಂತ ಪ್ರತಿಭಟನೆಗಳಾದವು. ಅಸಂಘಟಿಕರು, ನಿರಾಯುಧರು ಮತ್ತು ಅಸಹಾಯಕರಾದ ರೈತರ ಮೇಲೆ ಬ್ರಿಟಿಷರೂ ಕೂಡ ಈ ರೀತಿಯಾಗಿ ಗೋಲಿಬಾರು ಮಾಡಿರಲಿಲ್ಲ. ಅಂತಾದ್ದರಲ್ಲಿ ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಇಷ್ಟು ಕ್ರೂರಿಗಳಾದದು ಹೇಗೆ ಎಂದು ರೈತ ಸಂಘದ ಲೀಡರುಗಳು ಸದ್ಯದ ಸ್ಥಿತಿಯನ್ನು ತಮ್ಮ ಜೀವನ್ಮರಣದ ಪ್ರಶ್ನೆಯಾಗಿ ತೆಗೆದುಕೊಂಡರು.
ಶಿವಮೊಗ್ಗ ಈ ನಾಡಿನ ಚಳುವಳಿಗಳ ಉಗಮ ಸ್ಥಾನ. ಮಹಾರಾಜರ ಕಾಲದಲ್ಲಿ ಶಿವಮೊಗ್ಗ ರೈತರ ದಂಗೆಯನ್ನು ರೂಪಿಸಿತ್ತು. ಹಾಗೆಯೇ ಸಮಾಜವಾದಿಗಳ ಉಗಮಸ್ಥಾನ ಕಮ್ಯುನಿಸ್ಟರ ಕಾರ್ಯಕ್ಷೇತ್ರವಾಗಿತ್ತು. ದಲಿತ ಸಂಘರ್ಷ ಸಮಿತಿ ಉದ್ಭವಿಸಿದ್ದು ಇಲ್ಲಿಂದಲೇ. ಇನ್ನು ಪುರೋಹಿತಶಾಹಿಗಳ ಕಾರ್ಯಸ್ಥಾನವೂ ಕೂಡ ಇದೇ ಶಿವಮೊಗ್ಗ. ಅದಕ್ಕೆ ಇಲ್ಲಿಗೆ ವಾಜಪೇಯಿ ಅಡ್ವಾನಿಯಲ್ಲದೆ ಇನ್ನಿತರ ಬಿಜೆಪಿ ನಾಯಕರು ಬಹಳ ಸಾರಿ ಬಂದು ಹೋಗಿದ್ದರು. ಹಾಗೆ ನೋಡಿದರೆ ಇದು ಇಡೀ ಇಂಡಿಯಾವನ್ನೇ ಪ್ರತಿನಿಧಿಸುವ ಜಿಲ್ಲೆ. ಇಂತಹ ತಾಣದಲ್ಲಿ ಗುಂಡೂರಾಯರ ಗೋಲಿಬಾರಿಗೆ ತೀವ್ರ ಪ್ರತಿಭಟನೆ ವ್ಯಕ್ತವಾದುದಲ್ಲದೆ ಹೆಚ್.ಎಸ್ ರುದ್ರಪ್ಪ, ನಂಜುಂಡಸ್ವಾಮಿ, ಸುಂದರೇಶ್, ಕಡಿದಾಳು ಶಾಮಣ್ಣ, ಗಂಗಾಧರ್, ಬಸವರಾಜಪ್ಪ ಇವರೆಲ್ಲಾ ಒಗ್ಗೂಡಿ ಮೊದಲ ರೈತ ಸಂಘದ ಸಭೆಯನ್ನು ಧಾರವಾಡದಲ್ಲಿ ಕರೆದರು.

ಎಚ್.ಎಸ್ ರುದ್ರಪ್ಪನವರು, ಪ್ರೊ ನಂಜುಂಡಸ್ವಾಮಿ, ಸುಂದರೇಶ್, ಬೆಲ್ಲದ ಚೆನ್ನಪ್ಪ, ಕುಂದುರನಾಡಿನ ಪಾಟೀಲ, ರೇವಣಸಿದ್ದಪ್ಪ ಬಳ್ಳಾರಿ, ಶಂಕರಿಕೊಪ್ಪ ಹಾವೇರಿ, ಹಾಸನದ ದತ್ತ, ಮಂಜುನಾಥ್, ಕೊಡಗಿನ ಶಿವರಾಂ, ತುಮಕೂರಿನ ದೊ ರಂಗೇಗೌಡ, ಮಂಡ್ಯದ ಸಿಂಗಾರಿಗೌಡರು, ಶ್ರೀರಂಗಪಟ್ಟಣದ ಬಂಡಿ ಸಿದ್ದೇಗೌಡರು ಇವರೆಲ್ಲಾ ರೈತ ಸಂಘದ ಸಂಸ್ಥಾಪಕ ಸದಸ್ಯರಾಗಿ ಅಲ್ಲಿ ಹೋರಾಟಕ್ಕಿಳಿದರು. ಬಯಲುಸೀಮೆ ರೈತ, ನೀರಾವರಿ ರೈತ, ಮಲೆನಾಡು ರೈತ ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳನ್ನೊಳಗೊಂಡ ಪಂಚ ಸೂತ್ರಗಳು ಕಿಡಿಯಾದವು. ಇವು ಸರಕಾರದ ಮುಂದಿಟ್ಟ 19 ಬೇಡಿಕೆಗಳಲ್ಲಿ ಸೇರಿಕೊಂಡವು. ಎರಡು ತಿಂಗಳಲ್ಲಿ ರೈತ ಬಾಂಧವರನ್ನು ಮಾತನಾಡಿಸಿ ತಯಾರಿಸಿದ ಬೇಡಿಕೆಗಳು ಸರಕಾರಕ್ಕೆ ತಲುಪಿದವು. ಅಗಾಗಲೇ ಎಚ್.ಎಸ್ ರುದ್ರಪ್ಪನವರು ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ, ಪ್ರೊ. ನಂಜುಂಡಸ್ವಾಮಿಯವರು ಸಂಚಾಲಕರಾಗಿದ್ದರು. ಇವರು ಎನ್.ಡಿ ಸುಂದರೇಶ್, ದಾವಣಗೆರೆ ಕೆ.ಜಿ ಮಹೇಶ್ವರಪ್ಪ ಇವರೊಂದಿಗೆ ರಾಜ್ಯ ಸುತ್ತಿ ರೈತ ಸಂಘಟನೆ ಮಾಡುವ ಜವಬ್ದಾರಿ ಹೊತ್ತುಕೊಂಡಿದ್ದಲ್ಲದೆ ಕಬ್ಬನ್ ಪಾರ್ಕಿನಲ್ಲಿ ಐತಿಹಾಸಿಕ ಸಮಾವೇಶ ನಡೆಸುವ ತಯಾರಿ ನಡೆಸಿದರು.
ಸಮಾವೇಶ ಹೇಗೆ ಜರುಗಿತೆಂದು ಈಗಾಗಲೇ ಜಿ.ಎನ್ ನಾಗರಾಜ್ ವಿವರಿಸಿದ್ದಾರೆ. ಆಗ ಶಿವಮೊಗ್ಗದಿಂದ ಹೊರಟ ರೈತರು ಉದ್ದಕ್ಕೂ ರೈತರ ಮನೆಗಳಲ್ಲಿ ಉಳಿದು ಇದ್ದದ್ದನ್ನು ಉಂಡು ಮುಂದುವರೆದು ಅಂತೂ ಬೆಂಗಳೂರು ತಲುಪಿದರು. ಈ ನಡುವೆ ಅತಿಥಿಗಳನ್ನು ಸತ್ಕರಿಸಲಾಗದಿದ್ದರೂ ರೈತರನ್ನ ಮನೆಗೆ ಆಹ್ವಾನಿಸಿದ ಬಡ ರೈತರು ತಮಗಾಗಿ ಹೋರಾಡುವವರಿಗೆ ಊಟ ಇಕ್ಕಲು ಅಕ್ಕಪಕ್ಕದ ಮನೆಗೆ ಅಲೆದು ಅಂಗಡಿಯಲ್ಲಿ ಸಾಲ ತಂದು ಅಡಿಗೆ ಮಾಡಿ ಸತ್ಕರಿಸಿದ ವಿವರಗಳು ಕಣ್ಣು ತುಂಬಿ ಬರುವ ಘಟನೆಗಳಾಗಿ ಉಳಿದಿವೆ. ಕಡಿದಾಳು ಶಾಮಣ್ಣನವರಂತೂ ಬೆಂಗಳೂರು ತಲುಪುವಷ್ಟರಲ್ಲಿ ಇಬ್ಬರು ಮೂವರಿಗೆ ಕ್ಯಾಮರಾ ಉಪಯೋಗಿಸುವುದನ್ನು ಕಲಿಸಿದ್ದರು. ಅವರೊಡನೆ ನಡೆದ ಯಾರಿಗೂ ಬೆಂಗಳೂರು ತಲುಪಿದ್ದು ಗೊತ್ತೆ ಆಗಲಿಲ್ಲ. ಬೆಂಗಳೂರು ತಲುಪಿದ ರೈತರನ್ನ ನೋಡಿದ ಬೆಂಗಳೂರಿಗರ ಹರ್ಷಕ್ಕೆ ಪಾರವೇ ಇರಲಿಲ್ಲ. ಇತಿಹಾಸದಲ್ಲಿ ಬೆಂಗಳೂರು ಅಂತಹ ಜನಸ್ತೋಮ ನೋಡಿರಲಿಲ್ಲ. ಇಡೀ ಕಬ್ಬನ್ ಪಾರ್ಕ್ ಹಸಿರುಮಯವಾಗಿತ್ತು.

ಈ ಹಸಿರು ಟವಲ್‌ದೊಂದು ಕತೆಯಿದೆ. ನೋಡಿದ ಕೂಡಲೇ ರೈತ ಎಂದು ಗೊತ್ತಾಗಬೇಕಾದರೆ ಏನಾದರು ಒಂದು ಗುರುತು ಇರಬೇಕು ಎಂದು ಚಿಂತಿಸಿದ ಕಡಿದಾಳು ಶಾಮಣ್ಣನವರು ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ಲಿನ ಅಂಗಡಿಗೆ ಹೋಗಿ ತಮಗೆ ಮತ್ತು ರೈತ ನಾಯಕರಿಗೆ ಐದಾರು ಹಸಿರು ಬಟ್ಟೆ ಹರಿಸಿಕೊಂಡು ಬಂದರು. ಕೆಲವರ ಭುಜದ ಮೇಲೆ ಹಾಕಿ, ’ಯಾರಾದರೂ ನೋಡಿದ ಕೂಡಲೆ ಕುಲಗೋತ್ರ ಪ್ರದೇಶವನ್ನು ಮರೆತು ರೈತನೆಂದು ಗುರುತಿಸಿಬೇಕಾದರೆ, ನಿನ್ನ ಹೆಗಲ ಮೇಲೆ ಈ ಹಸಿರು ಟವಲ್ ಇರಬೇಕು ಇದು ನಿನ್ನ ಜಮೀನಿನ ಖಾತೆ ಪಟ್ಟಿಯಿದ್ದಂತೆ’ ಎಂದು ಉಪದೇಶ ಕೊಟ್ಟರು. ಕೇಳಿಸಿಕೊಂಡವರು ’ಇದೆಲ್ಲಿ ಸಿಗುತ್ತೆ ಸ್ವಾಮಿ’ ಎಂದರು. ಶಾಮಣ್ಣ ಅಂಗಡಿ ಹೆಸರು ಹೇಳಿದರು. ಕೂಡಲೇ ಸುಮಾರು ಜನ ರೈತರು ಅಂಗಡಿಗೆ ಹೋಗಿ ಶಾಮಣ್ಣನ ಹೆಸರೇಳಿ ಹಸಿರು ಟವಲ್ ತಂದರು. ಅಂಗಡಿಯವನು ಸಾವಿರಾರು ರೂಪಾಯಿಗಳ ಬಿಲ್ಲನ್ನು ಶಾಮಣ್ಣನವರಿಗೆ ತಲುಪಿಸಿದರು. ದಂಗುಬಡಿದ ಶಾಮಣ್ಣನವರಿಗೆ ತಮ್ಮ ಉಪದೇಶಕ್ಕೆ ತಾವೇ ಬಲಿಬಿದ್ದಿರುವುದು ಅರಿವಿಗೆ ಬಂತು. ಆದರೆ ಹಸಿರು ಟವಲ್ ರೈತ ಸಂಘದ ಲಾಂಛನವಾದುದಕ್ಕೆ ಹೆಮ್ಮೆಪಟ್ಟರು.
ಬೆಂಗಳೂರಲ್ಲಿ ಜರುಗಿದ ರೈತ ಸಭೆ ನಿಜಕ್ಕೂ ಅಭೂತಪೂರ್ವ. ಇದುವರೆಗೆ ಪಾಂಡವರಾಗಿ ಅಲೆದ ರೈತನಾಯಕರು ಈಗ ಕೌರವನ ಸಭೆಯನ್ನ ನೆನಪಿಗೆ ತಂದರು. ದುರ್ಯೋಧನನ ಠೀವಿಯಲ್ಲಿ ಕುಳಿತಿದ್ದ ಪ್ರೊ. ಎಂ.ಡಿ ನಂಜುಂಡಸ್ವಾಮಿ ಪಕ್ಕದಲ್ಲಿ ಪಿತಾಮಹ ಭೀಷ್ಮನಂತಿದ್ದ ಎಚ್.ಎಸ್ ರುದ್ರಪ್ಪನವರು, ಕರ್ಣನಂತಿದ್ದ ಎನ್.ಡಿ ಸುಂದರೇಶ್, ದುಶ್ಯಾಸನನ ಜಾಗಕ್ಕೆ ಸ್ಪರ್ಧಿಗಳಂತಿದ್ದ ಕೆ.ಟಿ ಗಂಗಾಧರ್ ಮತ್ತು ಬಸವರಾಜಪ್ಪ, ವೈರಿಗಳಿಗೂ ಒಳ್ಳೆ ಬುದ್ದಿ ಬರಲಿ ಎಂದು ಆಶಿಸುವ ವಿಧುರ ಕಡಿದಾಳು ಶಾಮಣ್ಣನವರು, ಕಾಡಿನಿಂದ ಎಳೆದು ತಂದಂತಿದ್ದ ಒಂಟಿ ಸಲಗ ತೇಜಸ್ವಿ ಇವರನ್ನೆಲ್ಲಾ ನೋಡುತ್ತಿದ್ದವರಿಗೆ ಗುಂಡೂರಾಯರ ಸರಕಾರದ ಕತೆ ಮುಗಿಯಿತು ಎನ್ನಿಸಿದ್ದರೆ ಆಶ್ಚರ್ಯವಿಲ್ಲ. ಅದಾಗಲೇ ಸುಂದರೇಶ್ ಮಾಜಿ ಮುಖ್ಯಮಂತ್ರಿ ಗುಂಡೂರಾಯರು ಎನ್ನುತ್ತಿದ್ದರು.
ಆಗ ತೇಜಸ್ವಿಯವರ ಒಂದು ಮಾತು ಎಲ್ಲರಿಗೂ ತಾಕಿತು. ನಾವು ರೈತರು, ವೀರಗಲ್ಲು ಸ್ಥಾಪಿಸುವುದರ ಬದಲು ಈ ಸರಕಾರವನ್ನು ಹೇಗೆ ನಿಭಾಯಿಸಿಬೇಕೆಂದು ಚಿಂತಿಸೋಣ ಎಂದರು. ಆ ನಂತರ ಅಹಿಂಸಾತ್ಮಕವಾಗಿ ಜೈಲ್‌ಭರೊ ಚಳುವಳಿ ಆರಂಭವಾದವು. ಸರಕಾರವೇನೂ ಹೆದರಲಿಲ್ಲ. ಪ್ರೊ. ನಂಜುಂಡಸ್ವಾಮಿಯವರು ಕರನಿರಾಕರಣೆ ಚಳುವಳಿಗೆ ಕರೆಕೊಟ್ಟರು. ಪ್ರೊಫೆಸರ್ ತೀವ್ರಗಾಮಿಯಾಗಿದ್ದು ಅವರನ್ನ ನಿಯಂತ್ರಿಸುತ್ತಿದ್ದ ಎಚ್.ಎಸ್ ರುದ್ರಪ್ಪನವರು ಹೇಳಿಕೇಳಿ ಗಾಂಧಿವಾದಿ ಮತ್ತು ಕಾಂಗ್ರೆಸ್ಸಿಗರಾಗಿದ್ದರು. ಅವರ ಮಾತಿನಂತೆ ನಡೆಯಿತು. ಗಾಂಧಿಯವರ ಉಪ್ಪಿನ ಸತ್ಯಾಗ್ರಹದಿಂದ ಪ್ರೇರಣೆ ಪಡೆದು, ಕರನಿರಾಕಣೆ ಚಳುವಳಿ ಆರಂಭಿಸಿದರು. ನೋ ಟ್ಯಾಕ್ಸ್ ಚಳುವಳಿಯಿಂದ ರೈತ ಸಮೂಹ ರೋಮಾಂಚನಗೊಂಡಿತು. ಆದರೆ ಸರಕಾರ, ’ಸಾಲ ಕಟ್ಟಬೇಡಿ ಮತ್ತು ತೆರಿಗೆ ಕಟ್ಟಬೇಡಿ ಎಂಬುವರ ಮಾತು ಕೇಳಬೇಡಿ, ಹಾಗೇನಾದರೂ ಕೇಳಿದರೆ ಸರಕಾರದ ಕಾನೂನುಗಳನ್ನು ಎದುರಿಸಬೇಕಾಗುತ್ತದೆ’ ಎಂಬ ಹ್ಯಾಂಡ್ ಬಿಲ್ ಬಿಡುಗಡೆ ಮಾಡಿತು.

ಇದು ಎಲ್ಲ ಸರ್ಕಾರಿ ಕರ್ಮಚಾರಿಗಳ ಕೈಸೇರಿತು. ಹಾಗೆಯೇ ಪ್ರೊಫೆಸರ್ ನಂಜುಂಡಸ್ವಾಮಿಯವರ ಕೈಗೂ ಬಂತು! ಅದನ್ನ ಹಿಡಿದುಕೊಂಡು ಪ್ರೊಫೆಸರ್ “ಇದನ್ನು ನಾವು ಸುಡೋಣ, ಎಲ್ಲಿ ಸುಡೋದು” ಎಂದಾಗ. ಸುಂದರೇಶ್ “ತೀರ್ಥಹಳ್ಳಿಲಿ ಸುಡೋಣ ಸಾರ್” ಎಂದರು. ಇದು ಎಲ್ಲರಿಗೂ ಒಪ್ಪಿಗೆಯಾಗಿ ರೈತ ನಾಯಕರು, ತೀರ್ಥಹಳ್ಳಿ ಐ.ಬಿಗೆ ಬಂದರು. ಅಲ್ಲಿನ ಉಸ್ತುವಾರಿ “ರೂಮಿಲ್ಲ ಸಾರ್ ಎಲ್ಲಾ ಬುಕ್ಕಾಗಿದೆ” ಎಂದಾಗ, ಪ್ರೊಫೆಸರ್ ಎಲ್ಲಾ ರಿಜಿಸ್ಟರ್ ಕೊಡು ಎಂದು ಐ.ಬಿ ರಿಜಿಸ್ಟರ್ ನೋಡಿದರು. ಯಾವ ರೂಮು ಬುಕ್ಕಾಗಿರಲಿಲ್ಲ. ಕೂಡಲೇ ಪ್ರೊಫೆಸರ್ ಕೈಮಾಡಲು ಮುಂದಾದರು. ಸುಂದರೇಶ್ ಹೆದರಿ ಹೋದರು. ಅವರು ಧೀರೋಧಾತ್ತವಾಗಿ ಮಾತನಾಡುತ್ತಿದ್ದರೇ ಹೊರತು ಯಾರಿಗೂ ಹೊಡೆದವರಲ್ಲ. ಆದ್ದರಿಂದ, ಇತ್ತ ಪ್ರೊಫೆಸರನ್ನು ಸಮಾಧಾನ ಮಾಡಿ, ಹೊಡೆತ ತಿಂದವನಿಗೂ ಕ್ಷಮಿಸುವಂತೆ ವಿನಂತಿಸುತ್ತ ಹೇಗೋ ಸಮಾಧಾನ ಮಾಡಿದರು. ಆತ ಕೊನೆಗೆ ರೂಮು ಕೊಟ್ಟಾಗ, ಪ್ರೊಫೆಸರ್ “ನಾವು ಹಿಂಸಾವಾದಿಗಳಲ, ಸತ್ಯ ಹೇಳಿ ಗೊತ್ತಾಯ್ತಾ” ಎಂದರು.
ಸರಕಾರದ ಕರಪತ್ರವನ್ನು ಅಲ್ಲಿನ ಪಿ.ಎಲ್.ಡಿ ಬ್ಯಾಂಕಿನ ಎದುರು ಸುಡುವುದೆಂದು ತೀರ್ಮಾನವಾಯ್ತು. ಅಲ್ಲಿಗೆ ಹೋದರೆ ಸುಂದರೇಶ್ ಅಣ್ಣ ಎನ್.ಡಿ ಶ್ರೀನಿವಾಸ್ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ. ಅವರು ಬಂದು ಬ್ಯಾಂಕಿನ ಎದುರು ಕುರ್ಚಿ ಹಾಕಿ ಕುಳಿತರು. ರೈತ ನಾಯಕರನ್ನು ಬಿಟ್ಟರೆ ಇನ್ಯಾರು ಅಲ್ಲಿಲ್ಲ, ಆ ನಿರ್ಜನ ಪ್ರದೇಶದಲ್ಲಿ ಭಾಷಣ ಮಾಡುವುದು ಹೇಗೆಂದು ಪ್ರೊಫೆಸರ್ ಯೋಚಿಸುವಾಗ, ಶಾಮಣ್ಣ “ಇಲ್ಲಿ ಜನರ್‍ಯಾರು ಸಭೆಗೆ ಬರಲ್ಲ, ಬದಲಿಗೆ ತಮ್ಮ ಮನೆ ಅಂಗಡಿ ಮುಂಗಟ್ಟಿನಲ್ಲಿದ್ದೇ ಕೇಳಿಸಿಕೊಳ್ಳುತ್ತಾರೆ, ಮಾತನಾಡಿ” ಎಂದು ಪುಸಲಾಯಿಸಿದರು. ಸಭೆ ಮುಗಿದ ಮೇಲೆ ಎನ್.ಡಿ ಶ್ರೀನಿವಾಸ್ “ಏ, ಸುಂದರೇಶ್ ಅದೇನೂ ನಿಂದು” ಎಂದರು. ಅಣ್ಣನಿಗೆ ವಿಧೇಯರಾಗಿದ್ದ ಸುಂದರೇಶ್, “ಏನಿಲ್ಲ ಅಣ್ಣ ಅಮ್ಮನ್ನ ನೋಡಬೇಕು, ಅದ್ಕೆ ಮನೆಗೆ ಬರ್ತೀನಿ” ಎಂದರು. ಆಗ ತಮ್ಮತಮ್ಮ ಮನೆಯವರ ವಿರುದ್ಧವೇ ಹೋರಾಡುವ ಸ್ಥಿತಿಯುಂಟಾಗಿತ್ತು. ರೈತ ಸಂಘದ ಲೀಡರುಗಳು ತೋಟ ತುಡಿಗೆ ಇದ್ದವರು ಅದನ್ನೆಲ್ಲಾ ಬಿಟ್ಟುಬಂದು ಹೋರಾಟ ಮಾಡುತ್ತಿದ್ದರು. ಅವರಿಗೆಲ್ಲಾ ಪ್ರೊಫೆಸರ್ ಕಾನೂನು ಹೇಳುತ್ತಿದ್ದರು. ಅದನ್ನು ಮುರಿದಾಗ ಪರಿಣಾಮವನ್ನು ಹೇಳುತ್ತಿದ್ದರು. ಅವರ ಹೋರಾಟದ ಸುದ್ದಿಗಳನ್ನ ಕನ್ನಡಪ್ರಭದ ಖಾದ್ರಿ ಶಾಮಣ್ಣ ದೊಡ್ಡ ಸುದ್ದಿ ಮಾಡಿ ಸಂಪಾದಕೀಯವನ್ನು ಬರೆಯುತ್ತಿದ್ದರು.
ಪ್ರೊಫೆಸರ್ ಕಡೆಯಿಂದ ಇನ್ನೊಂದು ಕಾರ್ಯಕ್ರಮ ಬಿತ್ತರಗೊಂಡಿತು. ಸರಕಾರ ರೈತರನ್ನ ಜಪ್ತಿ ಮಾಡಿದರೆ, ಮರುಜಪ್ತಿ ಮಾಡುತ್ತೇವೆ ಎಂಬ ಸವಾಲು. ಅಧಿಕಾರಿಗಳು ಮಾಡಿಕೊಂಡಿರುವ ಅಕ್ರಮ ಆಸ್ತಿಯನ್ನ ಮಾತ್ರ ಜಪ್ತಿ ಮಾಡ್ತಿವಿ ಎಂದು ಮೊದಲೇ ನೋಟಿಸ್ ಕೊಟ್ಟು ಭದ್ರವಾತಿ ತಹಸೀಲ್ದಾರನ ಮನೆಯನ್ನ ಜಪ್ತಿ ಮಾಡಿದರು. ಸರಕಾರವೇನಾದರೂ ಡಕಾಯಿತಿ ಕೇಸ್ ಹಾಕಿದರೆ ಏನು ಮಾಡಬೇಕೆಂಬುದನ್ನ ಕಾನೂನು ಪಂಡಿತರಾದ ಪ್ರೊಫೆಸರ್ ರೈತರಿಗೆ ಮನದಟ್ಟು ಮಾಡುತ್ತಿದ್ದರು. ಮರುಜಪ್ತಿ ಕಾರ್ಯಕ್ರಮದಿಂದ ಭ್ರಷ್ಟ ಅಧಿಕಾರಿಗಳು ಹೆದರಿಹೋಗಿದ್ದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಪೊಲೀಸ್ ಮತ್ತು ಸರಕಾರಿ ಜನರಿಂದಲೂ ಮುಕ್ತಿ ಸಿಗಬೇಕಿತ್ತು. ಅದು ಆಗದೇ ಹೋಗಿ, ಅಧಿಕಾರಿಗಳು ಮತ್ತು ಪೊಲೀಸರು ಬ್ರಿಟಿಷರು ಆಡಳಿತವನ್ನು ಮತ್ತೆಮತ್ತೆ ನೆನಪು ಮಾಡಿಕೊಡುತ್ತಲೇ ಇದ್ದರು.
ಶಿವಮೊಗ್ಗದ ಸವಳಂಗದ ಹತ್ತಿರವಿರುವ ನಿಡುಗಾಲದ ಒಂದು ಮನೆಗೆ ಜಪ್ತಿಗೆ ಬಂದ ರೆವಿನ್ಯೂ ಇನ್ಸ್‌ಪೆಕ್ಟರ್ ಆ ಮನೆಯಲ್ಲಿದ್ದ 25ಕೆಜಿ ಅಕ್ಕಿ ಮತ್ತು ಪಾತ್ರೆ ಪಗಡೆಯನ್ನು ಜಪ್ತಿ ಮಾಡಿದ್ದ. ಆ ಮನೆಯಲ್ಲಿ ಬಾಣಂತಿ ಇದ್ದಳು. ಗಂಡ ಕೂಲಿಗೆ ಹೋಗಿದ್ದ. ಅವಳು ಉಣ್ಣಲೆಂದು ಮಾಡಿಕೊಂಡಿದ್ದ ಅನ್ನದ ಪಾತ್ರೆ ಸಮೇತ ಜಪ್ತಿ ಕಾರ್ಯ ನಡೆದಿತ್ತು. ಬಾಣಂತಿ ಕೋಣೆಯೊಳಕ್ಕೆ ಬೂಟು ಕಾಲಿನಲ್ಲಿ ಹೋಗಿದ್ದ ಅಧಿಕಾರಿ ತುಂಬ ಅಮಾನುಷವಾಗಿ ನಡೆದುಕೊಂಡಿದ್ದ. ಇದು ರೈತ ಸಂಘಕ್ಕೆ ತಿಳಿಯಿತು. ಕೆ.ಟಿ ಗಂಗಾಧರ್ ಓಡಿ ಹೋಗಿ ರೆವಿನ್ಯೂ ಇನ್ಸ್‌ಪೆಕ್ಟರ್‌ನ ಸುಪರ್ದಿಯಲ್ಲಿದ್ದ 25ಕೆಜಿ ಅಕ್ಕಿ ಮತ್ತು ಅನ್ನದ ಪಾತ್ರೆಯನ್ನ ಆತನ ತಲೆ ಮೇಲೆ ಹೊರಿಸಿಕೊಂಡು ಬಂದು ಬಾಣಂತಿ ಮನೆ ಎದುರು ಇಳಿಸಿದರು. ಜೊತೆಗೆ ದಲಿತ ಸಮುದಾಯದ ಬಡವನೊಬ್ಬ ಕಟ್ಟಿಕೊಂಡಿದ್ದ ಆಡನ್ನ ಜಪ್ತಿ ಮಾಡಿದ್ದರು. ಅದನ್ನ ವಾಪಸ್ಸು ಕೊಡಿಸಿದರು. ಇಂತೆಲ್ಲಾ ಅಮಾನುಷ ಕೆಲಸಗಳು ಜರುಗುತ್ತಿದ್ದಾಗ ವಿರೋಧಪಕ್ಷವಾಗಿದ್ದ ಜನತಾಪಕ್ಷ ತುಟಿ ಬಿಚ್ಚದೆ ಮೂಕವಾಗಿತ್ತು. ನಾಗರಾಜ್ ಅವರು ಹೇಳಿದಂತೆ ರೈತರ ತ್ಯಾಗ ಬಲಿದಾನದಿಂದ ಅನಾಯಾಸವಾಗಿ ಒದಗಿ ಬಂದ ಅಧಿಕಾರವನ್ನ ಅನುಭವಿಸತೊಡಗಿದ ಜನತಾ ಪಕ್ಷದ ಆಡಳಿತದ ಅವಧಿಯಲ್ಲೂ ರೈತ ಹೋರಾಟಗಳು ಹಾಗೇ ಮುಂದುವರಿದವು. ಅಂದಿನ ಮಾಧ್ಯಮಗಳು ರೈತ ಸಂಘವನ್ನ ಹೀಗಳೆಯುತ್ತ ರಾಮಕೃಷ್ಣ ಹೆಗಡೆಯವರನ್ನು ಹೊಗಳುತ್ತ ಜನ ಸಮೂಹವನ್ನ ರೈತರಿಂದ ಬೇರ್ಪಡಿಸಿದವು.

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..
ಇದನ್ನೂ ಓದಿ: ನರಗುಂದ ಬಂಡಾಯದ ನಂತರ



kannada daravahi