Homeಮುಖಪುಟನರಗುಂದ ಬಂಡಾಯದ ನಂತರ

ನರಗುಂದ ಬಂಡಾಯದ ನಂತರ

- Advertisement -
- Advertisement -

ಸಿಪಿಎಂ ನಾಯಕರಾದ ಜಿ.ಎನ್ ನಾಗರಾಜ್‌ರವರು 80ರ ದಶಕದ ರೈತ ಚಳವಳಿ ಕುರಿತು ದಾಖಲಿಸಿದ್ದಾರೆ. ಇದು ಪ್ರಾಮಾಣಿಕವಾದ ಐತಿಹಾಸಿಕ ವಿವರಗಳನ್ನೊಳಗೊಂಡ ಬರಹ. ನರಗುಂದ ರೈತ ಬಂಡಾಯದ ಸಮಯದಲ್ಲಿ ನಾಗರಾಜ್ ಕೃಷಿ ಇಲಾಖೆಯ ಅಧಿಕಾರಿಯಾಗಿದ್ದರು, ಜೊತೆಗೆ ರೈತರು, ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯ ನಡುವೆ ವ್ಯವಹರಿಸುವ ಜವಾಬ್ದಾರಿ ಹೊತ್ತವರಾಗಿದ್ದರು. ಎಲ್ಲವೂ ಕೈಮೀರುವ ಹಂತ ತಲುಪಿದಾಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದಕ್ಕೆ ಕಾರಣ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಅವರಿಗಿದ್ದ ಕಾಳಜಿ. ಕೃಷಿ ಅಧಿಕಾರಿಯೊಬ್ಬ ಆಗ ಹಠಾತ್ತನೆ ರಾಜೀನಾಮೆ ಬರೆದು ಸಂಘಟಕರಾಗಿ ಬದಲಾಗುವುದು ಒಂದು ಸಾಹಸ. ಇಂತಹ ತೀರ್ಮಾನಕ್ಕೆ ಧೈರ್ಯಬೇಕು. ಅದನ್ನು ತಮ್ಮ ಬದುಕಿನಲ್ಲಿ ತೋರಿಸಿದವರು ನಾಗರಾಜ್.

ಕರ್ನಾಟಕದ ಇತಿಹಾಸದಲ್ಲಿ ರೈತ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಬಲಿಷ್ಠ ಎತ್ತುಗಳೊಂದಿಗೆ ಹೊಲ ಉತ್ತು ಬೇಸಾಯ ಮಾಡಿದ್ದ ದೇವರಾಜ ಅರಸರಿಂದ ಅಧಿಕಾರವನ್ನು ಕಿತ್ತು ಗುಂಡೂರಾಯರಿಗೆ ಕೊಟ್ಟ ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಆ ಕಾರಣಕ್ಕೆ ಅಂದು ರಾಜಕೀಯವಾಗಿ ಕರ್ನಾಟಕವನ್ನು ಕಳೆದುಕೊಂಡರು. ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದ ಅರಸು ಆಡಳಿತದ ಫಲವಾಗಿ ಕರ್ನಾಟಕದಲ್ಲಿ ಕಾಂಗೈಯನ್ನ ಅಲುಗಾಡಿಸುವುದು ಕಷ್ಟವಿತ್ತು. ಆದರೆ ಜನಾಭಿಪ್ರಾಯವಿಲ್ಲದೆ ನೇಮಕಗೊಂಡಿದ್ದ ಗುಂಡೂರಾವ್ ಆಡಳಿತ ವೈಖರಿಯಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಕರ್ನಾಟಕದ ಜನ ಸಮೂಹದ ಪ್ರತಿಭಟನೆಗಳು ತನ್ನ ವಿರುದ್ಧವಾಗಿವೆ ಎಂದು ಭಾವಿಸಿದ್ದ ಗುಂಡೂರಾಯರ ಮಾತಿನಲ್ಲಿ ಪ್ರತೀಕಾರದ ಮಾತು ಬರುತ್ತಿದ್ದವು. ನಾಯಕನಾದವನ ಬಾಯಲ್ಲಿ ಹಿಂಸೆಯ ಮಾತುಗಳು ಬರಬಾರದು, ಬಂದರೆ ಅದರ ಪರಿಣಾಮ ಘೋರ. ನಾಯಕನ ಬಾಯಿಂದ ಪ್ರತಿಹಿಂಸೆ ಮಾತು ಬಂದರೆ ಪೊಲೀಸರಿಗೆ ಎಲ್ಲಿಲ್ಲದ ಶಕ್ತಿ ಬರುತ್ತದೆ. ಗುಂಡೂರಾಯರ ಕಾಲದ ಪೊಲೀಸರು ರಕ್ಕಸರಂತಾಗಿದ್ದರು. ಇದರ ಪರಿಣಾಮ ನರಗುಂದದಲ್ಲಿ ರೈತರ ದಂಗೆಯಾಗಿ ಗೋಲಿಬಾರಿಗೆ ಎರಡು ಜೀವ ಬಲಿಯಾಗಿದ್ದವು. ಪೊಲೀಸ್ ಇನ್‌ಸ್ಪೆಕ್ಟರ್ ಹತನಾಗಿದ್ದ.

ಇತ್ತ ಶಿವಮೊಗ್ಗದಲ್ಲಿ ಅದಾಗಲೇ ರೈತನಾಯಕ ಹೆಚ್.ಎಸ್ ರುದ್ರಪ್ಪನವರ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಂಘ ಹುಟ್ಟಿಕೊಂಡು ಸರಕಾರದ ವಿರುದ್ಧ ಹೋರಾಡುತ್ತಿತ್ತು. ಅಂತಹ ಸಮಯದಲ್ಲಿ ಮುಲಾಜಿಲ್ಲದೆ ರೈತರನ್ನು ಗೋಲಿಬಾರ್ ಮುಖಾಂತರ ಉಡಾಯಿಸಿದ ಸರಕಾರದ ವಿರುದ್ಧ ರುದ್ರಪ್ಪನವರ ಟೀಮು ಸಿಡಿಗೆದ್ದಿತು. ತಮ್ಮ ಮುಂದಿನ ಚಳವಳಿಯ ನಾಯಕತ್ವಕ್ಕಾಗಿ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರನ್ನ ಕರೆಸಿಕೊಂಡರು. ಸುಂದರೇಶ್, ಕಡಿದಾಳು ಶಾಮಣ್ಣ, ಕೆ.ಟಿ ಗಂಗಾಧರ, ಬಸವರಾಜಪ್ಪ ಇವರೆಲ್ಲಾ ನರಗುಂದಕ್ಕೆ ಹೋದರು. ಅಲ್ಲಿ ಪೊಲೀಸರು ರೈತರನ್ನು ಬೇಟೆಯಾಡಿ ತಂದು ಜೈಲಿಗೆ ದಬ್ಬುತ್ತಿದ್ದುದನ್ನ ನೋಡಿದ ರೈತ ನಾಯಕರಿಗೆ ಸಿಟ್ಟು ಕಟ್ಟಯೊಡೆಯಿತು. ಗುಂಡೂರಾಯರು ಎಲ್ಲ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿದಂತೆ ಕಂಡಿತು.

ಪ್ರೊ. ನಂಜುಂಡಸ್ವಾಮಿಯವರ ಟೀಮು ಮಡಿದ ರೈತರ ನೆನಪಿಗೆ ನೆಡಲು ವೀರಗಲ್ಲುಗಳ ಸಮೇತ ನರಗುಂದಕ್ಕೆ ಹೋಗಿದ್ದರು. IB ಬಳಿ ಹೋದಾಗ ಅಲ್ಲಿನ ಪೊಲೀಸರು IBಯಲ್ಲಿ ರೂಮಿಲ್ಲ, ಅದಾಗಲೆ ಎಸ್‌ಪಿಗೆ ಅಲಾಟ್ ಮಾಡಲಾಗಿದೆ ಎಂದರು. ಪ್ರೊ. ನಂಜುಂಡಸ್ವಾಮಿಯವರು ಕೆ.ಟಿ ಗಂಗಾದರ್ ಕಡೆ ನೋಡಿ “ಬಾಗಿಲು ಓಪನ್ ಮಾಡಿ” ಎಂದರು. ಕೂಡಲೇ ಗಂಗಾಧರ್ ಕಲ್ಲುತೆಗೆದುಕೊಂಡು ಬೀಗ ಹೊಡೆದರು. ಬಾಗಿಲು ತೆಗೆಯಿತು. ಆ ನಂತರ ಯಾವ ಪೊಲೀಸರು ಇವರ ಸನಿಹ ಸುಳಿಯಲಿಲ್ಲ. ಇಲ್ಲೊಂದು ಮಹತ್ವದ ವಿಷಯವಿದೆ; ನರಗುಂದ ನವಲಗುಂದದ ಬಂಡಾಯಕ್ಕೆ ಓಗೊಟ್ಟು ಬಂದಿದ್ದ ಈ ನಾಯಕರು ಅಸಾಮಾನ್ಯ ವ್ಯಕ್ತಿಗಳಾಗಿದ್ದರು. ಪ್ರೊ. ನಂಜುಂಡಸ್ವಾಮಿ ದೊಡ್ಡ ಜಮೀನ್ದಾರರ ಮಗ. ವಿದೇಶದಲ್ಲಿ ಲಾ ಓದಿಕೊಂಡು ಬಂದವರು. ನಮ್ಮ ಸಂವಿಧಾನ, ಕಾನೂನು, ಲೋಹಿಯಾರನ್ನೆಲ್ಲ ಅರೆದು ಕುಡಿದವರು. ಇನ್ನ ರುದ್ರಪ್ಪ ಗಾಂಧಿವಾದಿ, ರಾಜಕಾರಣಿ, ವಿಧಾನಸಭೆ ಸ್ಪೀಕರ್‌ರಾಗಿದ್ದವರು. ಎನ್.ಡಿ ಸುಂದರೇಶ್ ಕೂಡ ಜಮೀನ್ದಾರರ ಮಗ ಹಾಗೂ ಹೈಕೋರ್ಟ್ ಜಡ್ಜು ಎನ್.ಡಿ ವೆಂಕಟೇಶರ ತಮ್ಮ. ಇನ್ನ ಕಡಿದಾಳು ಶಾಮಣ್ಣ ಕಡಿದಾಳ ಮಂಜಪ್ಪನವರ ಅಣ್ಣನ ಮಗ. ಗಂಗಾಧರ ಸಮಾಜವಾದಿ ಚಿಂತನೆಯ ಹೋರಾಟಗಾರ. ಇಂತವರ ದಂಡು ನರಗುಂದಕ್ಕೆ ಬಂದಾಗ ಸರಕಾರ ಮತ್ತು ಪೊಲೀಸರ ಪುಂಗಿ ಬಂದಾದವು.

ಇನ್ಯಾರೆ ಆ ಸಮಯದಲ್ಲಿ ನರಗುಂದಕ್ಕೆ ಹೋಗಿದ್ದರೆ, ಹೊಡೆದು ಓಡಿಸುತ್ತಿದ್ದರು. ಗುಂಡೂರಾಯರು ಕೂಡ ಉಸಿರೆತ್ತಲಿಲ್ಲ. ಅಂದು ನರಗುಂದ ನವಲಗುಂದದಲ್ಲಿ ನಡೆದ ಬಂಡಾಯವನ್ನು ಈ ರೈತನಾಯಕರು ಅವಲೋಕಿಸಿದಾಗ ಅಲ್ಲಿ ನಾಯಕತ್ವದ ಕೊರತೆ ಇದೆಯೆಂದು ಭಾವಿಸಿದರು. ಅಲ್ಲಿನ ಬಂಡಾಯವನ್ನು ಜವಾಬ್ದಾರಿಯುತ ನಾಯಕರು ನಿಭಾಯಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂಬುದು ರೈತನಾಯಕರ ಅರಿವಿಗೆ ಬಂತು. ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ರೈತರು ಮತ್ತವರ ಕುಟುಂಬದವರನ್ನ ಭೇಟಿ ಮಾಡಿ ಧೈರ್ಯ ತುಂಬಲು ಕಡಿದಾಳು ಶಾಮಣ್ಣ ಮತ್ತು ಕೆ.ಟಿ ಗಂಗಾಧರ್‌ರನ್ನು ನೇಮಿಸಿದ ಪ್ರೊಫೆಸರ್ ಟೀಮು ಶಿವಮೊಗ್ಗಕ್ಕೆ ಬಂದು ನಿರಾಯುಧರಾದ ರೈತರನ್ನು ಕೊಂದ ಸರಕಾರದ ವಿರುದ್ಧ ಚಳವಳಿ ಆರಂಭಿಸಿದರು. ಡಿ.ಸಿ ಕಚೆರಿ ಎದುರು ಪೆಂಡಾಲ್ ಹಾಕಿ ಪ್ರತಿಭಟನೆ ಆರಂಭಿಸಿದ ನಾಯಕರ ಬೆಂಬಲಕ್ಕೆ ಇಡೀ ಶಿವಮೊಗ್ಗ ಜಿಲ್ಲೆಯ ರೈತರು ಹರಿದು ಬರತೊಡಗಿದರು. ಆಗ ಅಗಸ್ಟ್ 15 ಬಂತು, ಆ ದಿನವನ್ನು ಕರಾಳ ದಿನವಾಗಿ ಆಚರಿಸಿದ ರೈತನಾಯಕರು ಮುಂದೆ ಅಕ್ಟೋಬರ್ 2ರವರೆಗೂ ಧರಣಿ ಕುಳಿತರು. 45 ದಿನ ನಡೆದಂತಹ ಈ ಧರಣಿಗೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಯ್ತು. ಜನ ಸಾಗರವನ್ನು ಹತ್ತಿಕ್ಕಲೋಸ್ಕರ ಪೊಲೀಸರು ರೈತರನ್ನು ಅರೆಸ್ಟು ಮಾಡಿ ಜೈಲಿಗೆ ತೆಗೆದುಕೊಂಡು ಹೋದರೆ, ಜೈಲೆ ಭರ್ತಿಯಾಗಿ ಅಲ್ಲಿ ಜಾಗವೇ ಇಲ್ಲ ಎಂಬಂತಾಯಿತು. ಕಡೆಗೆ ಪೊಲೀಸರು ಅವರನ್ನೆಲ್ಲಾ ಶಿವಮೊಗ್ಗದಿಂದ ದೂರ ಕರೆದುಕೊಂಡು ಹೋಗಿ ಬಿಟ್ಟು ಬರತೊಡಗಿದರು.

ಅಕ್ಟೋಬರ್ 2ರಂದು ಒಂದು ಬೃಹತ್ ಸಭೆ ಶಿವಮೊಗ್ಗದಲ್ಲಿ ನಡೆಯಿತು. ಆ ಸಭೆಗೆ ಲಂಕೇಶ್, ತೇಜಸ್ವಿಯವರೂ ಬಂದರು. ಐಬಿಯಲ್ಲಿದ್ದ ಜಾರ್ಜ್ ಫರ್ನಾಂಡಿಸ್ ತಾನು ಬಂದು ರೈತರನ್ನು ಕುರಿತು ಭಾಷಣ ಮಾಡುವುದಾಗಿ ಹೇಳಿ ಕಳುಹಿಸಿದರು. ಆಗ ಪ್ರೊಫೆಸರ್ ಅವರು ಹೇಳಿದ್ದು ಹೀಗೆ: ಫರ್ನಾಂಡಿಸ್ ಒಂದು ಪಾರ್ಟಿಯಲ್ಲಿರುವುದರಿಂದ ಇಲ್ಲಿ ಬಂದು ಭಾಷಣ ಮಾಡುವ ಅಗತ್ಯವಿಲ್ಲ ಎಂದು. ಅಂತು ಒಂದು ಐತಿಹಾಸಿಕ ಸಭೆ ಜರುಗಿತು. ನರಗುಂದ ನವಲುಗುಂದದ ಬಂಡಾಯದ ಫಲವಾಗಿ ಕರ್ನಾಟಕ ರೈತ ಸಂಘ ಉದಯವಾಯ್ತು. ರೈತನಾಯಕರು ಇಡೀ ನಾಡನ್ನು ತಿರುಗಿ, ರೈತರನ್ನ ಸಂಘಟಿಸಿದರು. ಎಲ್ಲೆಲ್ಲಿ ಕಬ್ಬು ಬೆಳೆಗಾರರ ಸಂಘವಿತ್ತೋ ಅವರೆಲ್ಲಾ ರೈತ ಸಂಘದಲ್ಲಿ ಗುರುತಿಸಿಕೊಂಡರು. ಸರಕಾರದ ಬದಲಾವಣೆಯಲ್ಲಿ ಹಲವು ಜೀವಗಳನ್ನ ಕಳೆದುಕೊಂಡ ಏಕೈಕ ಸಂಘ ರೈತ ಸಂಘವಾಗಿತ್ತು.

ಇವತ್ತೇನು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ರೈತರ ಕೂಗಿಗೆ ಕಿವುಡಾಗಿ ಹಠ ಸಾಧಿಸಿತೋ ಅದೇ ರೀತಿ ಅಂದಿನ ಕಾಂಗ್ರೆಸ್ ರಾಜ್ಯ ಸರಕಾರ ರೈತರನ್ನು ತಮ್ಮ ವೈರಿಗಳೆಂದು ಭಾವಿಸಿ ನಡೆದುಕೊಂಡಿತ್ತು. ರೈತರ ಮೇಲೆ ಮುಲಾಜಿಲ್ಲದೆ ಗೋಲಿಬಾರು ಮಾಡಿದರು. ಇದರ ಫಲವಾಗಿ ಆಳವಾಗಿ ಬೇರೂರಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿತು. ಮುಂದೆ ನಡೆದ ರೈತ ಸಂಘದ ಸಾಧನೆಗಳು ಮೆಲುಕು ಹಾಕಿ ಮರುಗುವಂತಹವು!

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...