Homeಕರ್ನಾಟಕನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

- Advertisement -
- Advertisement -

ಜುಲೈ 21ಕ್ಕೆ ನರಗುಂದ-ನವಲಗುಂದ ರೈತ ಬಂಡಾಯ ಘಟಿಸಿ 41 ವರ್ಷಗಳಾದವು. ಅಂದು ರೈತರು ಅನುಭವಿಸುತ್ತಿದ್ದ ಅದೇ ಸಮಸ್ಯೆಗಳೇ ಇಂದು ಮತ್ತಷ್ಟು ಬೃಹದಾಕಾರವಾಗಿ ರೈತರನ್ನು ಕಾಡುತ್ತಿವೆ. ನರಗುಂದ ರೈತ ಬಂಡಾಯ ನನ್ನ ಬದುಕಿನಲ್ಲಿ ಒಂದು ದೊಡ್ಡ ತಿರುವಿಗೆ ಕಾರಣವಾಯಿತು. ಕೃಷಿ ಇಲಾಖೆಯಲ್ಲಿ ಮೊದಲ ದರ್ಜೆ ಅಧಿಕಾರಿಯಾಗಿದ್ದು ರಾಜ್ಯ ಮಟ್ಟದ ಉನ್ನತ ಸ್ಥಾನಕ್ಕೇರಬೇಕಾಗಿದ್ದ ನಾನು ಹುದ್ದೆಗೆ ರಾಜೀನಾಮೆ ಎಸೆದು ರೈತ ಚಳವಳಿಗೆ ಧುಮುಕಲು ಪ್ರೇರೇಪಣೆ ನೀಡಿತು. ಈ ಹಿನ್ನೆಲೆಯಲ್ಲಿ ನರಗುಂದ ರೈತ ಚಳವಳಿಯ ಪ್ರತ್ಯಕ್ಷದರ್ಶಿ ಮತ್ತು ಭಾಗೀದಾರನಾದ ನನ್ನ ಅನುಭವ ಕಥನ ನಿಮ್ಮ ಮುಂದೆ.

ರೈತ ಚಳವಳಿಯ ಆರಂಭ

ಅದು ಏಪ್ರಿಲ್ 3, 1980. ನರಗುಂದಕ್ಕೆ ಮುಖ್ಯಮಂತ್ರಿ ಗುಂಡೂರಾಯರ ಭೇಟಿ. ವೇದಿಕೆ ಮೇಲೆ ಅಲ್ಲಿಯ ತಹಸೀಲ್ದಾರ್, ಬಿಡಿಒಗಳ ಜೊತೆ ನಾನು ಮುಖ್ಯಮಂತ್ರಿಯ ಹಿಂದಿನ ಕುರ್ಚಿಯಲ್ಲಿ. ಅವರು ಭಾಷಣ ಮಾಡುತ್ತಿರುವಾಗಲೇ ಅಲ್ಲಿಗೆ ರೈತರದೊಂದು ಮೆರವಣಿಗೆ ಬಂತು. ರೈತರು ಘೋಷಣೆ ಕೂಗುತ್ತಿದ್ದರು. ಅವರು ನರಗುಂದದ ನೆರೆಯ ತಾಲ್ಲೂಕಾದ ನವಲಗುಂದದವರು. ಅಲ್ಲಿ ಆಗಲೇ ರೈತ ಚಳವಳಿ ಆರಂಭವಾಗಿ ನಾಲ್ಕು ತಿಂಗಳುಗಳಾಗಿದ್ದವು. ನರಗುಂದಕ್ಕೆ ಮುಖಮಂತ್ರಿಗಳು ಭೇಟಿ ನೀಡುತ್ತಾರೆಂಬ ಸುದ್ದಿ ಕೇಳಿ ಅವರಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಹಲವು ಕಿಮೀ ದೂರದಿಂದ ಟ್ರ್ಯಾಕ್ಟರುಗಳಲ್ಲಿ ಬಂದಿದ್ದರು. ಅದರ ನೇತೃತ್ವವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿಗಾಗಿ ತತ್ವಶಾಸ್ತ್ರದಲ್ಲಿ ಸಂಶೋಧನೆ ಮಾಡುತ್ತಿದ್ದ ವಿ.ಎನ್ ಹಳಕಟ್ಟಿ ಎಂಬುವರು ವಹಿಸಿದ್ದರು.

’ನೀರಾವರಿ ಬೆಟರ್‌ಮೆಂಟ್ ಲೆವಿ ವಿಪರೀತವಾಗಿದೆ. ಅದನ್ನು ಹಿಂತೆಗೆದುಕೊಳ್ಳಿ. ಹತ್ತಿ, ಮುಸುಕಿನ ಜೋಳಕ್ಕೆ ಲಾಭದಾಯಕ ಬೆಲೆ ಕೊಡಿ. ಈ ಬೆಳೆಗಳನ್ನು ಸರ್ಕಾರವೇ ಕೊಳ್ಳಬೇಕು’ ಇತ್ಯಾದಿ ಅವರ ಒತ್ತಾಯಗಳಿಗಾಗಿ ನಡೆದಿತ್ತು ರೈತರ ಈ ಹೋರಾಟ.

“ನಾನು ಇಂತಹವಕ್ಕೆಲ್ಲ ಕೇರ್ ಮಾಡುವುದಿಲ್ಲ” ಎಂದು ಭಾಷಣದಲ್ಲಿಯೇ ಗುಡುಗಿದ ಗುಂಡೂರಾಯರು, ನಿರ್ದಾಕ್ಷಿಣ್ಯವಾಗಿ ತೆರಿಗೆ, ಬೆಟರ್‌ಮೆಂಟ್ ಲೆವಿ ಬಾಕಿ ವಸೂಲಿಗೆ ಕ್ರಮ ಕೈಗೊಳ್ಳಿ ಎಂದು ಆದೇಶವಿತ್ತರು.

ನರಗುಂದ ಮಲಪ್ರಭಾ ಅಣೆಕಟ್ಟಿನ ನೀರಾವರಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿತ್ತು. ನೆರೆಯ ನವಲಗುಂದ ಹಾಗೂ ಸವದತ್ತಿ ತಾಲ್ಲೂಕುಗಳ ಹೆಚ್ಚಿನ ಪ್ರದೇಶ, ರೋಣ, ರಾಮದುರ್ಗ ತಾಲ್ಲೂಕುಗಳ ಕೆಲವು ಗ್ರಾಮಗಳು ಇದೇ ನೀರಾವರಿ ಪ್ರದೇಶದ ಭಾಗವಾಗಿದ್ದವು. ಹೀಗಾಗಿ ಪಕ್ಕದ ನವಲಗುಂದ ತಾಲೂಕಿನಂತೆಯೇ ನರಗುಂದದ ರೈತರೂ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು ಎಂಬುದು ಹಳ್ಳಿಗಳಿಗೆ ನಾನು ಭೇಟಿ ಮಾಡಿ ರೈತರೊಂದಿಗೆ ಮಾತನಾಡುವಾಗ ಮೇಲ್ನೋಟಕ್ಕೆ ಕಂಡಿತ್ತು. ಈ ಪ್ರತಿಭಟನೆ ನೋಡಿದ ನಂತರ ಅವುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲಾರಂಭಿಸಿದೆ. ಅಂದು ಅವರ ಮುಖ್ಯವಾದ ಸಮಸ್ಯೆಗಳು ಹೀಗಿದ್ದವು: ಮತ್ತೆ ಅಧಿಕಾರಕ್ಕೆ ಬಂದಿದ್ದ ಇಂದಿರಾಗಾಂಧಿ ಸರ್ಕಾರ ರಸಗೊಬ್ಬರಗಳ ಬೆಲೆ ಏರಿಸಿತ್ತು. ಅವುಗಳಿಗೆ ಜೊತೆ ಎಂಬಂತೆ ಕೀಟನಾಶಕಗಳ ಬೆಲೆಗಳನ್ನು ಖಾಸಗಿ ಕಂಪನಿಗಳು ಏರಿಸಿದ್ದವು. ಇಲ್ಲಿಯ ರೈತರು ನೀರಾವರಿಯಲ್ಲಿ ಬೆಳೆಯುತ್ತಿದ್ದ ಪ್ರಧಾನ ಬೆಳೆ ಹೈಬ್ರಿಡ್ ಹತ್ತಿ. ವರಲಕ್ಷ್ಮಿ ಮತ್ತು ಡಿಸಿಎಚ್ 32 ಎಂಬ ತಳಿಗಳು. ಹತ್ತಿ ಬೇರೆ ಬೆಳೆಗಳಿಗಿಂತ ದೀರ್ಘಕಾಲದ ಬೆಳೆ ಹಾಗೂ ವಿಪರೀತ ಖರ್ಚಿನದು. ರಸಗೊಬ್ಬರಗಳ, ಅದಕ್ಕಿಂತ ಹೆಚ್ಚಾಗಿ ಕೀಟನಾಶಕಗಳ ವೆಚ್ಚ ಬಹಳ.

ಆ ವರ್ಷ ಹತ್ತಿಯ ಬೆಲೆ ವಿಪರೀತ ಕುಸಿದು ಹೋಗಿತ್ತು. ಹಿಂದಿನ ವರ್ಷ ಒಂದು ಕ್ವಿಂಟಾಲಿಗೆ 600-800ರೂ ಇದ್ದರೆ ಆ ವರ್ಷ ಕೇವಲ 300-400. ಇದರಿಂದ ಬೆಳೆಯ ಖರ್ಚಿನ ಅರ್ಧ ಕೂಡಾ ದಕ್ಕಲಿಲ್ಲ.

ಹೀಗೇತಕ್ಕೆ ಎಂದು ವಿಚಾರಿಸ ಹೊರಟರೆ ಒಬ್ಬೊಬ್ಬರಿಂದ ಒಂದೊಂದು ರೀತಿ ಉತ್ತರ. ರೈತರು ಎಪಿಎಂಸಿ ಮಾರುಕಟ್ಟೆಯ ದಳ್ಳಾಳಿಗಳತ್ತ ಕೈ ತೋರಿಸಿದರೆ, ದಲ್ಲಾಳಿಗಳು ಮಾರುಕಟ್ಟೆಗೆ ಬಂದು ಹತ್ತಿ ಖರೀದಿಸುತ್ತಿದ್ದ ಖರೀದಿದಾರರತ್ತ ಕೈ ತೋರಿದರು. ಹೀಗೆ ಈ ಸರಪಣಿಯನ್ನು ಹಿಡಿದು ಹುಡುಕುತ್ತಾ ಹೋದರೆ ಹತ್ತಿಯ ಬೆಲೆ ಏರುಪೇರಿನ ಮೂಲ ಬಾಂಬೆ, ಅಹಮದಾಬಾದುಗಳ ಹತ್ತಿ ಗಿರಣಿಗಳು ಮತ್ತು ಅವರಿಗೆ ಸರಬರಾಜು ಮಾಡುತ್ತಿದ್ದ ಬೃಹತ್ ಹೋಲ್‌ಸೇಲ್ ವ್ಯಾಪಾರಿಗಳ ಹತ್ತಿರ ನಿಂತಿತು.

ಅಲ್ಲಿಗೆ ನಿಂತಿತೇನೋ ಎಂದು ನೋಡಿದರೆ ಅದು ಆ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿದ್ದ ಒಂದು ಜೂಜಾಟದ ಕಡೆಗೆ ಎಳೆದೊಯ್ದಿತು. ಓಸಿ ಆಟ, ಮಟ್ಕಾ ಎಂಬ ಜೂಜಾಟದ ಬಗ್ಗೆ ಉತ್ತರ ಕರ್ನಾಟಕದ ಜನಕ್ಕೆ ಬಿಟ್ಟರೆ ಬೇರೆಯವರಿಗೆ ಗೊತ್ತಾಗಲಿಕ್ಕಿಲ್ಲ. ಪ್ರತಿ ದಿನ ಓಪನಿಂಗ್, ಕ್ಲೋಸಿಂಗ್ ಎಂಬ ಸಂಖ್ಯೆಗಳು ಎಷ್ಟಿರುತ್ತವೆ ಎಂದು ಊಹಿಸಿ ಬಾಜಿ ಕಟ್ಟಬೇಕು. ಊಹೆ ಸರಿಯಾಗಿದ್ದರೆ ಅವರಿಗೆ ಲಾಟರಿ ಹೊಡೆದಂತೆ ಹಣ.

ಹತ್ತಿ ದರದ ವಿಚಾರದಲ್ಲಿ ಈ ಓಸಿ ಕತೆಯೇಕೆ ಎಂದರೆ ಅದೇ ಮೂಲ. ಓಸಿ ಸೂಚಿಸುವ ಓಪನಿಂಗ್ ಕ್ಲೋಸಿಂಗ್ ಯಾವುದೆಂದರೆ ಪ್ರತಿದಿನ ನ್ಯೂಯಾರ್ಕ್ ಹತ್ತಿ ಮಾರುಕಟ್ಟೆ ತೆರೆದಾಗಿನ ದರ ಮತ್ತು ಕೊನೆಯ ದರ. ಇದು ಎಷ್ಟು ಏರುಪೇರಾಗುತ್ತಿತ್ತೆಂದರೆ ಯಾರಿಗೂ ಊಹಿಸಲು ಸಾಧ್ಯವೇ ಇಲ್ಲ ಎಂಬಂತೆ. ಇಂದಿನ ಸ್ಟಾಕ್ ಮಾರ್ಕೆಟ್‌ನಲ್ಲಿ ಶೇರು ದರಗಳ ಅಥವಾ ಸೂಚ್ಯಂಕಗಳ ಏರುಪೇರುಗಳಿದ್ದಂತೆ. ಹೀಗೆ ಅಂತಾರಾಷ್ಟ್ರೀಯ ಹತ್ತಿ ದರಗಳ ಏರುಪೇರು ಭಾರತದ ಹತ್ತಿ ದರಗಳನ್ನು ಬುಡಮೇಲು ಮಾಡುತ್ತಿದ್ದವು. ರೈತರ ಬದುಕಿನಲ್ಲಿ ಜೂಜಾಟವಾಡುತ್ತಿದ್ದವು. ಹತ್ತಿ ದರಗಳನ್ನು ನಿಧಾನವಾಗಿ ವರುಷದಿಂದ ವರುಷಕ್ಕೆ ಏರಿಸುತ್ತಾ ಬರುವುದು; ಒಮ್ಮೆಗೇ ಬಹಳ ಲಾಭಕಾರಿ ಎಂಬಂತೆ ಏರಿಸಿಬಿಡುವುದು; ಆಗ ಒಳ್ಳೆಯ ಆದಾಯದ ಆಸೆಯಿಂದ ಬಹಳಷ್ಟು ರೈತರು ಹತ್ತಿ ಬೆಳೆಯುವುದು; ಹೀಗೆ ಹತ್ತಿಯ ಉತ್ಪಾದನೆ ಗಣನೀಯವಾಗಿ ಹೆಚ್ಚಿದ ಕೂಡಲೇ ಹತ್ತಿಯ ಬೆಲೆ ಕುಸಿಯುವಂತೆ ಮಾಡಿ, ಹತ್ತಿ ಗಿರಣಿಗಳ ಮುಂದಿನ ಹಲವು ವರ್ಷಗಳ ಅಗತ್ಯವನ್ನು ಒಮ್ಮೆಲೆ ಖರೀದಿಸಿ ಸ್ಟಾಕ್ ಮಾಡಿಟ್ಟುಕೊಳ್ಳುವುದು; ಇದು ದೇಶದ, ವಿದೇಶಗಳ ಬೃಹತ್ ಹತ್ತಿ ಗಿರಣಿ ಮಾಲೀಕರು ರೈತರನ್ನು ತಮ್ಮ ದುರ್ಲಾಭದ ಅಗತ್ಯಕ್ಕೆ ತಕ್ಕಂತೆ ಕುಣಿಸುತ್ತಿದ್ದ ರೀತಿ.

“ಹೊಲದಾಗ ಬೆಳೆ ಭರಪೂರಾ, ದರದಾಗ ಎಲ್ಲ ಏರಪೇರಾ”

ಹೀಗೆ ವೆಚ್ಚದ ಏರಿಕೆ, ಫಸಲಿನ ದರದ ಕುಸಿತದ ಇಬ್ಬಾಯ ಅಡಕತ್ತರಿಯಲ್ಲಿ ರೈತ ಸಿಲುಕಿ ಒದ್ದಾಡುತ್ತಿದ್ದ. ಬರಗಾಲದ ಒಣ ಪ್ರದೇಶಕ್ಕೆ ನೀರು ಹರಿದಾಗ ಇಲ್ಲಿಯ ರೈತರಿಗೆ ಬಹಳ ಆನಂದವಾಗಿತ್ತು. ಆದರೆ ಈಗ?

1979-80ರ ಹತ್ತಿ ಬೆಲೆಯ ತೀವ್ರ ಕುಸಿತದಿಂದ ರೈತರು ಕಂಗಾಲಾದರು. ಹತ್ತಿ ಬೆಳೆ ಬೆಳೆಯುವುದಕ್ಕೆ ರಸಗೊಬ್ಬರ, ಕೀಟನಾಶಕಗಳನ್ನು ಕೊಳ್ಳಲು ಅಂಗಡಿಯಲ್ಲಿ ಹಾಗೂ ವಿವಿಧ ಹಬ್ಬ ಹರಿದಿನಗಳ, ಮದುವೆ ಮೊದಲಾದ ಸಮಾರಂಭಗಳ ಖರ್ಚಿಗಾಗಿ ಜವಳಿ ಮೊದಲಾದ ಅಂಗಡಿಗಳಲ್ಲಿ ರೈತರು ಸಾಲ ಮಾಡಿದ್ದರು. ಆದ್ದರಿಂದ ನರಗುಂದದ ಪೇಟೆ ಬೀದಿಯಲ್ಲಿ ಮುಖ ತೋರಿಸಲಾಗದ ಪರಿಸ್ಥಿತಿ ರೈತರದಾಗಿತ್ತು. ಮನೆಯ ತುರ್ತಿಗೆ ಬೇಕಾದ ಧವಸ, ಲವಾಜಮೆಗಳೂ ಕೂಡಾ ಹುಟ್ಟದಂತಾಗಿತ್ತು.

ಇಂತಹ ದುಸ್ಥಿತಿಯಲ್ಲಿ ಗುಂಡೂರಾವ್ ಬೆಟರ್‌ಮೆಂಟ್ ಲೆವಿ, ನೀರಿನ ದರ ಮೊದಲಾದವುಗಳನ್ನು ಕಠಿಣವಾಗಿ ವಸೂಲಿ ಮಾಡಲೇಬೇಕೆಂಬ ಕಟ್ಟಾಜ್ಞೆ ವಿಧಿಸಿ ಹೊರಟರು.

ಈ ಬೆಟರ್‌ಮೆಂಟ್ ಲೆವಿ ಎಂದರೆ ನೀರಾವರಿ ಅಣೆಕಟ್ಟು ಕಟ್ಟುವುದಕ್ಕೆ ಆದ ಖರ್ಚನ್ನು ರೈತರಿಂದ ಪಡೆದುಕೊಳ್ಳುವ ತೆರಿಗೆ. ಇದು ಎಷ್ಟು ದುಬಾರಿ ಎಂದರೆ ಅಲ್ಲಿ ಆಗ ಭೂಮಿಯ ಬೆಲೆ ಎಷ್ಟಿದೆಯೋ ಅಷ್ಟಿತ್ತು. ಅಂದರೆ ರೈತರು ತಮ್ಮ ಸ್ವಂತ ಭೂಮಿಯನ್ನು ಸರ್ಕಾರದಿಂದ ಮತ್ತೆ ಕೊಂಡಂತೆ.

ಮುಖ್ಯಮಂತ್ರಿಯ ಆದೇಶದ ಮೇರೆಗೆ ಅದನ್ನು ವಸೂಲಿ ಮಾಡಿ ಸರ್ಕಾರವನ್ನು ಮೆಚ್ಚಿಸಲು ಜಿಲ್ಲಾಧಿಕಾರಿ ರೇಣುಕಾ ವಿಶ್ವನಾಥನ್ ಕಠಿಣ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದರು. ಅಲ್ಲಿಯ ತಹಸೀಲ್ದಾರ್ ಬೆಕ್ಕಿನಾಳ್ಕರ್ ಡಂಗೂರ ಹೊಡೆಸಿ ಹಳ್ಳಿಗಳಲ್ಲಿ ರೈತರ ಮನೆಗಳಿಗೆ ನುಗ್ಗಿ ಅವರ ಚರಾಸ್ತಿಗಳನ್ನು ಹರಾಜು ಹಾಕತೊಡಗಿದರು. ಮೊದಲೇ ಕಷ್ಟದಲ್ಲಿದ್ದ ರೈತರಲ್ಲಿ ಈ ದೌರ್ಜನ್ಯ ಅಪರಿಮಿತ ಸಿಟ್ಟನ್ನು ಉಕ್ಕಿಸಿತು.
ನವಲಗುಂದ ತಾಲೂಕಿನಲ್ಲಿ ಆರಂಭವಾದ ಹೋರಾಟ ಅದೇ ಮಲಪ್ರಭಾ ನೀರಾವರಿ ಅಚ್ಚುಕಟ್ಟಿಗೆ ಸೇರಿದ ನೆರೆಯ ನರಗುಂದ, ಸೌದತ್ತಿ ತಾಲ್ಲೂಕುಗಳಿಗೂ ಹಬ್ಬಿತು. ನರಗುಂದದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ನಿತ್ಯ ಸತ್ಯಾಗ್ರಹ ಆರಂಭವಾಯಿತು. ಮೂರು ತಿಂಗಳಿಗೂ ಹೆಚ್ಚು ಕಾಲ ಸತ್ಯಾಗ್ರಹ ನಡೆದರೂ ಸರ್ಕಾರ ಗಮನ ಹರಿಸಲಿಲ್ಲ. ಕರ್ನಾಟಕ ವಿವಿಯಲ್ಲಿ ಪಿ.ಎಚ್.ಡಿಗಾಗಿ ಅಧ್ಯಯನ ನಡೆಸುತ್ತಿದ್ದ ವಿ.ಎನ್ ಹಳಕಟ್ಟಿಯವರು 1957ರಲ್ಲಿ ಸ್ಥಾಪಿತವಾಗಿದ್ದ ಕರ್ನಾಟಕ ಪ್ರಾಂತ ರೈತ ಸಂಘ ಸೇರ್ಪಡೆಯಾಗಿದ್ದ ರಾಷ್ಟ್ರ ಮಟ್ಟದ ಸಂಘಟನೆ ಅಖಿಲ ಭಾರತ ಕಿಸಾನ್ ಸಭಾದ ಹೋರಾಟ ಮತ್ತು ಕಣ್ಣೋಟಗಳಿಂದ ಸ್ಫೂರ್ತಿ ಪಡೆದಿದ್ದರು. ಮಲಪ್ರಭಾ ರೈತರ ಸಮಸ್ಯೆಗಳನ್ನು ಕಂಡಮೇಲೆ, ದೇಶದ ಸ್ವಾತಂತ್ರ್ಯಾನಂತರ ನಿರ್ಮಿಸಲ್ಪಟ್ಟ ಮೊತ್ತಮೊದಲ ಮತ್ತು ಬೃಹತ್ ನೀರಾವರಿ ಯೋಜನೆಯಾದ ಭಾಕ್ರಾ ನಂಗಲ್ ನೀರಾವರಿ ಪ್ರದೇಶದಲ್ಲಿ ಇದೇ ಬೆಟರ್‌ಮೆಂಟ್ ಲೆವಿ ಹಾಗೂ ಕೃಷಿ ಲಸಗುವಾಡುಗಳ ಬೆಲೆ ಏರಿಕೆ ವಿರುದ್ಧ ಅಖಿಲ ಭಾರತ ರೈತ ನಾಯಕರಾದ ಹರ್ಕಿಷನ್ ಸಿಂಗ್ ಸುರ್ಜಿತ್‌ರವರು ಸಂಘಟಿಸಿದ್ದ ಹೋರಾಟದ ಬಗ್ಗೆ, ಕೃಷಿ ಸಮಸ್ಯೆಗಳ ಬಗ್ಗೆ ಕಿಸಾನ್ ಸಭಾದ ವಿಶ್ಲೇಷಣೆಯನ್ನು ಅವರು ಅಧ್ಯಯನ ಮಾಡಿದರು. ಇದರ ಆಧಾರದ ಮೇಲೆ ಈ ಪ್ರದೇಶದ ಹಳ್ಳಿಗಳಲ್ಲಿ ರೈತರ ಸಭೆಗಳನ್ನು ಸಂಘಟಿಸಿ ಅವರು ಮಂಡಿಸುತ್ತಿದ್ದ ವಿಶ್ಲೇಷಣೆ ರೈತರನ್ನು ಸೆಳೆದವು.

ನಾನು ಸರ್ಕಾರಿ ಅಧಿಕಾರಿಯಾಗಿದ್ದರೂ ನಮ್ಮದೇ ಇಲಾಖೆಯ ಕಾರ್ಯಕ್ರಮಗಳಲ್ಲಿ, ಹಳ್ಳಿಗಳ ಮಟ್ಟದ ಹಲವು ಸಭೆಗಳಲ್ಲಿ ಹಾಗೂ ರೈತರೊಂದಿಗಿನ ಅನೌಪಚಾರಿಕ ಮಾತುಕತೆಗಳಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮೇಲೆ ವಿವರಿಸಿದ ನನ್ನ ಅಧ್ಯಯನದ ಮೂಲಕ ಕಂಡುಕೊಂಡ ಕಾರಣಗಳನ್ನು ವಿವರಿಸುತ್ತಿದ್ದೆ.

ಹಳಕಟ್ಟಿಯವರ ನೇತೃತ್ವದಲ್ಲಿ ಮಲಪ್ರಭಾ ಅಚ್ಚುಕಟ್ಟಿನ ಮೂರು ತಾಲ್ಲೂಕುಮಟ್ಟದ ರೈತ ಸಮಾವೇಶಗಳು ಜರುಗಿದವು. ಬೃಹತ್ ಪ್ರಮಾಣದಲ್ಲಿ ರೈತರು ಈ ಸಮಾವೇಶಗಳಲ್ಲಿ ಭಾಗಿಯಾದರು. ಈ ಸಮಾವೇಶಗಳಲ್ಲಿ ತಾಲ್ಲೂಕು ಮಟ್ಟದ ರೈತ ಹೋರಾಟ ಸಮನ್ವಯ ಸಮಿತಿಗಳನ್ನು ಆರಿಸಲಾಯಿತು. ನರಗುಂದ ತಾಲೂಕಿನ ಸಮಾವೇಶ ಜೂನ್ 30ರಂದು ಜರುಗಿತು. ಅಂದು ಹಳಕಟ್ಟಿಯವರು ನನ್ನನ್ನು ಹುಡುಕಿಕೊಂಡು ಬಂದರು. ನನ್ನ ಅಧ್ಯಯನದ ಬಗ್ಗೆ ಹಾಗೂ ನಾನು ಮಾತನಾಡುತ್ತಿದ್ದ ವಿಷಯಗಳು ಅವರ ಕಿವಿಗೆ ಮುಟ್ಟಿದ್ದವು. ಅಂದು ನಾಲ್ಕು ಗಂಟೆಗಳ ಕಾಲ ನಾನೂ ಅವರೂ ರೈತರ ಸಮಸ್ಯೆಗಳ ಬಗ್ಗೆ ನಮ್ಮ ಅಧ್ಯಯನ ಹಾಗೂ ಹಳ್ಳಿಗಳ ಅನುಭವವನ್ನು ಪರಸ್ಪರ ಹಂಚಿಕೊಂಡೆವು.

ತಾಲೂಕು ಸಮನ್ವಯ ಸಮಿತಿಗಳನ್ನು ಆಧರಿಸಿ ಒಟ್ಟು ಮಲಪ್ರಭಾ ಅಚ್ಚುಕಟ್ಟು ರೈತ ಹೋರಾಟ ಸಮನ್ವಯ ಸಮಿತಿ ರಚಿಸಿಕೊಂಡರು. ಹಳಕಟ್ಟಿಯವರೂ ಸೇರಿದಂತೆ ಅದರ ಏಳು ಜನ ಸಂಚಾಲಕರು ಈ ಪ್ರದೇಶದಲ್ಲಿ ಮನೆಮಾತಾದರು. ಮೂರೂ ತಾಲ್ಲೂಕುಗಳಲ್ಲಿ ನಡೆಯುತ್ತಿದ್ದ ದೀರ್ಘಕಾಲದ ಧರಣಿ ಸತ್ಯಾಗ್ರಹಗಳು, ಅಧಿಕಾರಿಗಳು-ಚುನಾಯಿತ ಪ್ರತಿನಿಧಿಗಳಿಗೆ ಮನವಿಗಳು, ತಾಲ್ಲೂಕು ಸಮಾವೇಶಗಳಿಗೆ ಯಾವ ಪ್ರತಿಕ್ರಿಯೆ ಬಾರದ ಕಾರಣ, ಈ ಸಮನ್ವಯ ಸಮಿತಿ 1980ರ ಜುಲೈ 21ರಂದು ಮೂರು ತಾಲ್ಲೂಕುಗಳಲ್ಲಿ ಏಕಕಾಲಕ್ಕೆ ಬಂದ್ ಕರೆ ನೀಡಿತು.

ಈ ಬಂದ್ ದಿನವೇ ಗದಗ್ ತಾಲೂಕಿನಲ್ಲಿ ಬೆಲೆಏರಿಕೆ ವಿರುದ್ಧವಾಗಿ ಅಲ್ಲಿನ ಕೆಲವು ಸಂಘಗಳು ಬಂದ್ ಕರೆ ನೀಡಿದವು. ಚಳವಳಿಯ ಕಾವು ಬಹು ವೇಗವಾಗಿ ಏರತೊಡಗಿತು. ಮೂರು ತಾಲೂಕುಗಳ ಬಂದ್ ದಿನದ ಘಟನೆಗಳು ರಾಜ್ಯದ ಇತಿಹಾಸದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು.

ಆ ಬಂದ್‌ಗೆ ಮೂರು ನಾಲ್ಕು ದಿನಗಳ ಹಿಂದೆಯೇ ರೈತರು ಗುಂಪುಗುಂಪಾಗಿ ಸರ್ಕಾರಿ ಕಚೇರಿಗಳಿಗೆ, ಬ್ಯಾಂಕುಗಳಿಗೆ ಭೇಟಿ ನೀಡಿ ಅಂದು ಸರ್ಕಾರಿ ಕಚೇರಿ, ಬ್ಯಾಂಕುಗಳನ್ನೆಲ್ಲಾ ಮುಚ್ಚಲು ತಾಕೀತು ಮಾಡಿದರು. ಬಂದ್ ಸಿದ್ಧತೆಯ ಬಿರುಸನ್ನು ನೋಡಿ ನರಗುಂದದಲ್ಲಿದ್ದ ಅಧಿಕಾರಿಗಳಿಗೆ ಬಹಳ ಹೆದರಿಕೆ ಉಂಟಾಯಿತು. ಅತ್ಯಂತ ಹೆಚ್ಚು ಹೆದರಿದವರು ಅತ್ಯಂತ ಹೆಚ್ಚು ಭ್ರಷ್ಟಾಚಾರ ಮಾಡಿದ್ದ ನೀರಾವರಿ ಇಲಾಖೆಯವರು. ನೀರನ್ನೇ ಹರಿಸದ, ಹರಿಸಲೇ ಆಗದ ಹೊಲಗಳಿಗೂ ನೀರು ಹರಿಸಲಾಗಿದೆಯೆಂದು ಸುಳ್ಳು ಲೆಕ್ಕ ನೀಡಿ ಬಜೆಟ್ ಖರ್ಚು ಹಾಕಿದ್ದರು. ಕಾಲುವೆಗಳ ನಿರ್ಮಾಣದ ಗುಣಮಟ್ಟದಲ್ಲಿ ಬಹಳ ಖೋತಾ ಆಗಿತ್ತು. ಈ ಅಧಿಕಾರಿಗಳು ತಮ್ಮ ಕುಟುಂಬಗಳನ್ನು ಮೂರು ನಾಲ್ಕು ದಿನಗಳ ಹಿಂದೆಯೇ ತಮ್ಮ ಊರುಗಳಿಗೆ ರವಾನಿಸಿ, ಬಂದ್ ಹಿಂದಿನ ದಿನ ತಾವೂ ನರಗುಂದ ಬಿಟ್ಟರು. ಹಾಗೆಯೇ ಬೇರೆ ಇಲಾಖೆಗಳ ಅಧಿಕಾರಿಗಳು ಕೂಡಾ ಇದನ್ನು ಹಿಂಬಾಲಿಸಿದರು. ರೈತರು ಯಾರ ಮೇಲೂ ಕೈ ಮಾಡದೆ ಶಾಂತಿಯುತವಾಗಿಯೇ ತಮ್ಮ ಹೋರಾಟ ಮಾಡಿದ್ದರೂ ಕೂಡಾ ರೈತರ ಕೋಪದ ಬಿಸಿ ಹಾಗಿತ್ತು. ಅಂದು ನರಗುಂದದಲ್ಲಿದ್ದ ಅಧಿಕಾರಿಗಳೆಂದರೆ ತಹಸೀಲ್ದಾರ್ ಮತ್ತು ಕೃಷಿ ಸಹಾಯಕ ನಿರ್ದೇಶಕನಾಗಿದ್ದ ನಾನು ಮಾತ್ರ.

ಜುಲೈ 21ರ ಬೆಳಗ್ಗೆಯೇ ರೈತರು ನರಗುಂದದಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರಿದರು. ಒಂದು ದೊಡ್ಡ ಗ್ರಾಮ ಮಾತ್ರವೇ ಆಗಿದ್ದ ನರಗುಂದದಲ್ಲಿ ಅದು ಬಹು ದೊಡ್ಡ ಸಂಖ್ಯೆ. ಬೆಳಗ್ಗೆ ಒಂಬತ್ತು ಗಂಟೆಗೇ ರೈತರು ಮತ್ತೆ ಸುತ್ತಿಬಂದು ಕಚೇರಿಗಳಿಗೆ ಬೀಗ ಹಾಕಿಸಿದರು. ನಮ್ಮ ಕಚೇರಿಯೊಂದೇ ಅಂದು ತೆರೆದಿಟ್ಟದ್ದು. ರೈತರು ನನ್ನನ್ನು ಕಚೇರಿಯ ಬಾಗಿಲಲ್ಲಿ ನೋಡಿ ಕೈಬೀಸಿ ನಮಿಸಿ ಹೊರಟುಹೋದರು. ನಾನು ಊರೊಳಗಿನ ಪರಿಸ್ಥಿತಿ ತಿಳಿದುಕೊಳ್ಳಲು ಜೀಪು ತರಹೇಳಿ, ಎಷ್ಟು ಧೈರ್ಯ ಹೇಳಿದರೂ ನಮ್ಮ ಡ್ರೈವರ್ ಜೀಪು ತೆಗೆಯಲೊಪ್ಪಲಿಲ್ಲ. ಅವನು ಅದೇ ಊರಿನವನಾದ ಕಾರಣ ಚಳವಳಿಯ ಶಾಖದ ಅಳತೆ ಅವನಿಗೆ ಚೆನ್ನಾಗಿ ಗೊತ್ತಾಗಿತ್ತು. ಅವನು ಬೇಡಬೇಡವೆಂದರೂ ಅವನ ಸೈಕಲ್‌ಅನ್ನೇ ತೆಗೆದುಕೊಂಡು ನಗರದಲ್ಲಿ ಸುತ್ತಾಡುತ್ತಾ ರೈತರ ಮೆರವಣಿಗೆಯನ್ನು ನೋಡಿ ತಹಸೀಲ್ದಾರ್ ಕಚೇರಿಯ ಕಡೆಗೆ ಬಂದೆ.

ಅಂದು ಬೆಳಗ್ಗೆ ಎಂಟು ಗಂಟೆಗೆ ತಹಸೀಲ್ದಾರ್ ಕಚೇರಿಯ ಸುತ್ತ ರೈತರು ಕೈಕೈ ಹಿಡಿದುಕೊಂಡು ನಿಂತು ಸಿಬ್ಬಂದಿಯನ್ನು ಒಳಗೆ ಬಿಡಲಿಲ್ಲ. ಅವರೆಲ್ಲಾ ದೂರ ನಿಂತಿದ್ದರು. ತಹಸೀಲ್ದಾರ್‌ರವರನ್ನೂ ಒಳಗೆ ಬಿಡಲಿಲ್ಲ. ತಹಸೀಲ್ದಾರ್ ಡಿಸಿಗೆ ಹೊರಗಿನಿಂದ ಫೋನ್ ಮಾಡಿ ವರದಿ ಮಾಡಿದರು. ಡಿಸಿಯವರಿಂದ ಪೊಲೀಸರ ಸಹಾಯ ಪಡೆದು ಒಳಗೆ ಹೋಗಲೇಬೇಕು. ಏನೇ ಆದರೂ ತಾಲೂಕು ಕಚೇರಿ ಮುಚ್ಚುವಂತಿಲ್ಲ ಎಂದು ಖಡಕ್ ಆದೇಶವಾಯಿತು.

ಸರಿ, ಡಿವೈಎಸ್ಪಿ, ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ತಹಸೀಲ್ದಾರ್‌ರವರನ್ನು ಕಚೇರಿಯೊಳಕ್ಕೆ ಕರೆದುತರಲು ಇನ್ನಿಲ್ಲದ ಪ್ರಯತ್ನ ಮಾಡಿದರು. ರೈತರು ಜಗ್ಗಲಿಲ್ಲ. ಅವರು ಬಾಗಿಲ ಮುಂದೆ ಒತ್ತಾಗಿ ಮಲಗಿ ಹೋಗುವುದಾದರೆ ನಮ್ಮನ್ನು ತುಳಿದುಹೋಗಿ ಎಂದು ಸವಾಲೆಸೆದರು. ಅಧಿಕಾರಿಗಳು ಮೂವರೂ ರೈತರನ್ನು ತುಳಿಯುತ್ತಲೇ ಕಚೇರಿ ಹೊಕ್ಕು ಆಸನಗಳಲ್ಲಿ ವಿರಾಜಮಾನರಾದರು.

ಇತ್ತ ಊರಿನ ಒಳಗಿನಿಂದ ಹತ್ತಾರು ಸಾವಿರ ರೈತರ ಮೆರವಣಿಗೆ ಹೊರಟಿತ್ತು. 1857ರ ಸಿಪಾಯಿ ದಂಗೆಯ ಕಾಲದ ಪ್ರಸಿದ್ಧಿಯ ನರಗುಂದ ಬಂಡಾಯದ ಪಾಳೆಯಗಾರ ಬಾಬಾ ಸಾಹೇಬನ ಮೂರ್ತಿಗೆ ಹಾರ ಹಾಕಿದರು. ಅವನ ಸೈನ್ಯ ಬ್ರಿಟಿಷ್ ಅಧಿಕಾರಿಯ ಶಿರಚ್ಛೇದ ಮಾಡಿ ಅವರ ತಲೆಗಳನ್ನು ತೂಗು ಹಾಕಿದ್ದ ದೊಡ್ಡ ದಿಡ್ಡಿ ಬಾಗಿಲು ಕೆಂಪಗಸಿ ಎಂದು ಹೆಸರಾಗಿತ್ತು. ಅಲ್ಲಿಗೆ ಬಂದು, ಅಂದಿನ ಆ ಹೋರಾಟ ನೆನೆದು ಸ್ಫೂರ್ತಿ ಪಡೆದರು. ಅಲ್ಲಿಂದಲೇ ಆರಂಭವಾದ ಮೆರವಣಿಗೆ ನಂತರ ದಾರಿಯಲ್ಲಿ ತೆರೆದಿದ್ದ ಬ್ಯಾಂಕುಗಳನ್ನು ಮುಚ್ಚಿಸುತ್ತಾ ತಹಸೀಲ್ದಾರ್ ಕಚೇರಿಯ ಕಡೆ ಬರುತ್ತಿತ್ತು.

ನರಗುಂದ ತಹಸೀಲ್ದಾರ್ ಕಚೇರಿ ಸುಟ್ಟು ಬೂದಿಯಾಯ್ತು

ರೈತರ ಮೆರವಣಿಗೆ ಘೋಷಣೆಗಳನ್ನು ಕೂಗುತ್ತಾ ತಹಸೀಲ್ದಾರ್ ಕಚೇರಿಯ ಕಡೆಗೆ ಬಂದಿತು. ರೈತರನ್ನು ತುಳಿದುಕೊಂಡು ಅಧಿಕಾರಿಗಳು ಕಚೇರಿಯ ಒಳಹೊಕ್ಕ ಸುದ್ದಿ ದಾರಿಯಲ್ಲಿಯೇ ಅವರಿಗೆ ಮುಟ್ಟಿತು. ಬಹಳ ಶಿಸ್ತಿನಿಂದ ಎರಡು ಸಾಲಾಗಿ ಘೋಷಣೆ ಹಾಕುತ್ತಾ ಮೆರವಣಿಗೆಯಲ್ಲಿ ನಡೆದುಬರುತ್ತಿದ್ದ ರೈತರು ಸಾಲು ಒಡೆದು ಸಿಟ್ಟಿನಿಂದ ತಹಸೀಲ್ದಾರ್ ಕಚೇರಿಯ ಕಡೆಗೆ ನುಗ್ಗಿದರು. ಅದರ ಮುಂದೆ ಇದ್ದ ಪೊಲೀಸರ ರಕ್ಷಣೆಯನ್ನು ತಳ್ಳಿಕೊಂಡು ರಭಸದಿಂದ ಒಳ ನುಗ್ಗಿದರು. ಒಳಗೆ ತಮ್ಮ ಆಸನದಲ್ಲಿ ಕುಳಿತಿದ್ದ ತಹಸೀಲ್ದಾರ್, ಸುತ್ತ ಇದ್ದ ಡಿ.ವೈ.ಎಸ್.ಪಿ, ಸರ್ಕಲ್ ಇನ್ಸ್‌ಪೆಕ್ಟರ್‌ರವರಿಗೆ ಮುಖ ಮೂತಿ ನೋಡದೆ ಬಾರಿಸಿದರು. ತಹಸೀಲ್ದಾರ್‌ರವರ ಕಿವಿ ಕಿತ್ತು ಹೋಯಿತು. ಡಿ.ವೈ.ಎಸ್.ಪಿ, ಇನ್ಸ್‌ಪೆಕ್ಟರ್‌ರವರುಗಳ ತಲೆ ಒಡೆಯಿತು.

ಇನ್ನೊಂದಷ್ಟು ಜನ ತಮ್ಮ ಭೂಮಿ, ಬೆಟರ್‌ಮೆಂಟ್ ಲೆವಿ ಕಂದಾಯದ ಲೆಕ್ಕಗಳನ್ನು ಒಳಗೊಂಡ ದಾಖಲೆಗಳತ್ತ ತಮ್ಮ ಸಿಟ್ಟನ್ನು ಹರಿಸಿದರು. ಎಲ್ಲ ದಾಖಲೆ, ಕಡತಗಳಿಗೆ ಬೆಂಕಿ ಇಟ್ಟರು. ಇಡೀ ತಹಸೀಲ್ದಾರ್ ಕಚೇರಿ ಧಗಧಗ ಬೆಂಕಿಹತ್ತಿ ಉರಿಯಿತು.

ಇತ್ತ ರೈತರನ್ನು ಚದುರಿಸಲು ಹೊರಗಿದ್ದ ಏಕಮಾತ್ರ ಪೊಲಿಸ್ ಅಧಿಕಾರಿಯಾದ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ. ಆಗ ಚಿಕ್ಕ ನರಗುಂದ ಗ್ರಾಮದ ಒಬ್ಬ ರೈತ ನೆಲಕ್ಕುರುಳಿದ. ಇದರಿಂದ ರೈತರು ಮತ್ತಷ್ಟು ಉದ್ರಿಕ್ತರಾಗಿ ಅಲ್ಲಿದ್ದ ಪೊಲೀಸು ಜೀಪನ್ನು ಅದರಲ್ಲಿದ್ದ ಗುಂಡುಗಳ ಪೆಟ್ಟಿಗೆ ಸಮೇತ ಬೆಂಕಿಯಿಟ್ಟರು. ರಿಸರ್ವ್ ವ್ಯಾನಿನಲ್ಲಿದ್ದ ಮತ್ತು ಹೊರಗಿದ್ದ ಪೊಲೀಸರನ್ನು ಅಟ್ಟಿಸಿಕೊಂಡು ಹೋದರು. ಅವರುಗಳೆಲ್ಲ ಸತ್ತೆನೋ ಕೆಟ್ಟೆನೋ ಎಂದು ದಿಕ್ಕಾಪಾಲಾಗಿ ಓಡಿದರು. ಅಟ್ಟಿಸಿಕೊಂಡು ಬರುತ್ತಿದ್ದ ರೈತರಿಂದ ತಪ್ಪಿಸಿಕೊಳ್ಳಲು ತಮ್ಮ ಸಮವಸ್ತ್ರವನ್ನು ಕಿತ್ತು ಬಿಸಾಡುತ್ತಾ ಓಡಿದರು. ಹೊಳೆಗೆ, ತೊರೆಗೆ ಹಾರಿ ಬಚಾವಾದರು.

ಹೀಗೆ ಬಚಾವಾದವನು ಗುಂಡು ಹಾರಿಸಿದ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಟೇಲ್. ಅವನನ್ನು ರೈತರು ಅಟ್ಟಿಸಿಕೊಂಡು ಹೋದಾಗ, ಅವನು ಪಕ್ಕದಲ್ಲಿದ್ದ ಆಸ್ಪತ್ರೆಯ ಒಳಹೊಕ್ಕ. ಅಲ್ಲಿ ಬಿಳಿ ಬೆಡ್‌ಶೀಟ್‌ಗಳ ಅಡಿಯಲ್ಲಿ ನರ್ಸ್‌ಗಳು ಆತನನ್ನು ಮುಚ್ಚಿಟ್ಟರು. ಈತ ಹೊಸತಾಗಿ ನರಗುಂದಕ್ಕೆ ಬಂದಿದ್ದ ಪ್ರಾಮಾಣಿಕ ಅಧಿಕಾರಿ. ಅಲ್ಲಿ ಅಂದು ವ್ಯಾಪಕವಾಗಿದ್ದ ಮಟ್ಕಾ ದಂಧೆಯಿಂದ ಬಡವರು ಕಷ್ಟಕ್ಕೊಳಗಾಗಿದ್ದನ್ನು ನೋಡಿದ್ದ. ಬಹಳ ಶ್ರಮವಹಿಸಿ ಅದನ್ನು ನಿಯಂತ್ರಿಸಿ ಮಟ್ಕಾ ದಂಧೆಯ ಮಾಫಿಯಾದ ಸಿಟ್ಟಿಗೊಳಗಾಗಿದ್ದ.

ರೈತ ಹೋರಾಟದ ಸಂದರ್ಭ ಬಳಸಿ ಮೆರವಣಿಗೆಯಲ್ಲಿ ಹೊಕ್ಕಿದ್ದ ಆ ಊರಿನ ಮಟ್ಕಾ ಜೂಜಾಟದ ಮಾಫಿಯಾ ದೊರೆಯ ಕೈಯ್ಯಾಳುಗಳು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಹುಡುಕಾಡಿ ಅವನ ಪೊಲೀಸ್ ಶೂಗಳ ಗುರುತು ಹಿಡಿದು ಪತ್ತೆ ಹಚ್ಚಿದರು. ಸಬ್ ಇನ್ಸ್‌ಪೆಕ್ಟರ್ ಸಿಕ್ಕಾಗ ಅವನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ನಡು ಹಗಲಲ್ಲೇ ಊರ ಮುಂದಣ ಬಯಲಲ್ಲಿ ಕೊಲೆ ಮಾಡಿದರು.

(ಕೃಷಿ ಕಾರ್ಪೊರೆಟೀಕರಣದ ಬಗ್ಗೆ ಲೇಖಕರು ಬರೆಯುತ್ತಿರುವ ಸರಣಿ ಲೇಖನದ ಭಾಗವಾದ ಈ ಬರಹ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮುಂದಿನ ಭಾಗದಲ್ಲಿ: ನರಗುಂದದಲ್ಲಿ ರೈತರ ಬೇಟೆ, ರಾಜ್ಯದೆಲ್ಲೆಡೆ ಕಾಡುಕಿಚ್ಚಿನಂತೆ ಹಬ್ಬಿದ ರೈತ ಚಳವಳಿ)

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: 2021ರ ಕರ್ನಾಟಕ ರಾಜಕೀಯ ಹಿನ್ನೋಟ; ನಾಯಕತ್ವ ಬದಲಾವಣೆಯೆ ಬಿಜೆಪಿ ಸರ್ಕಾರದ ಸಾಧನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...