Homeಅಂಕಣಗಳುಚುನಾವಣೆಗಳಲ್ಲಿ ಚಳವಳಿಗಾರರ ಕೊರತೆಗಳು

ಚುನಾವಣೆಗಳಲ್ಲಿ ಚಳವಳಿಗಾರರ ಕೊರತೆಗಳು

- Advertisement -
- Advertisement -

ಚಳವಳಿಯ ವಿಜ್ಞಾನ ಎಂಬುದೊಂದಿದೆಯೇ?

ಚಳವಳಿಗಾರರಿಗೆ ಚುನಾವಣೆಗಳಲ್ಲಿ ಎದುರಾಗುವ ಸೋಲು, ದೊರಕುವ ಅತ್ಯಂತ ಕಡಿಮೆ ಮತಗಳು, ಚುನಾವಣಾ ಸಮಯದ ಸಮಸ್ಯೆ, ಗೊಂದಲಗಳು ಚಳವಳಿಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತವೆ. ಚಳವಳಿಗಳ ವಿಘಟನೆ, ದುರ್ಬಲತೆಗಳಿಗೆ ಕಾರಣವಾಗುತ್ತವೆ. ಇದರಿಂದಾಗಿ ಚಳವಳಿಗಳು ಮುನ್ನಡೆಸುತ್ತಿರುವ ರೈತ, ದಲಿತ, ಕಾರ್ಮಿಕ ಇತ್ಯಾದಿ ಜನ ಸಮುದಾಯಗಳ ಸಮಸ್ಯೆಗಳಿಗೆ ದನಿಯಾಗುವ, ತತ್ಕಾಲೀನ ಪರಿಹಾರಗಳನ್ನಾದರೂ ಕಂಡುಕೊಳ್ಳುವ ಅವಕಾಶದ ಮೇಲೆ ಹೊಡೆತ ಬೀಳುತ್ತವೆ. ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ನಂಜುಂಡಸ್ವಾಮಿಯವರ ಚಳವಳಿಗಳ ಬಗ್ಗೆ ಬರೆಯುವ ಸಂದರ್ಭದಲ್ಲಿ, ಚಳವಳಿಗಳು ಮತ್ತು ಚುನಾವಣೆಗಳ ಬಗೆಗಿನ ವಿಶ್ಲೇಷಣೆಯನ್ನು ಕರ್ನಾಟಕ ರಾಜ್ಯ ರೈತಸಂಘದ ಚುನಾವಣಾ ಅನುಭವದಿಂದಲೇ ಆರಂಭಿಸಿದ್ದನ್ನು ನೆನಪಿಸಿಕೊಳ್ಳಿ. ಚುನಾವಣೆಗಳಲ್ಲಿನ ಸೋಲಿನಿಂದ ಚಳವಳಿಗಳ ನಾಯಕರೇ ಸ್ವತಃ ಉತ್ಸಾಹಗುಂದುತ್ತಾರೆ. ಹಲವರು ತಮಗೆ ಮತ ಹಾಕದ ಜನರನ್ನು ದೂಷಿಸುತ್ತಾ ಭಾಗಶಃ ಅಥವಾ ಪೂರ್ತಿ ನಿಷ್ಕ್ರಿಯರೂ ಆಗಿಬಿಡುತ್ತಾರೆ. ಈ ಸಂಘಟನೆಗಳ ಸಾಮಾನ್ಯ ಕಾರ್ಯಕರ್ತರು ಸದ್ದಿಲ್ಲದೆ ಮಾಯವಾಗಿಬಿಡುತ್ತಾರೆ.

ಪ್ರೊ.ನಂಜುಂಡಸ್ವಾಮಿಯವರು ಚುನಾವಣೆಗಳ ಸೋಲುಗಳನ್ನು ಪಕ್ಕಕ್ಕಿಟ್ಟು ಚಳವಳಿಗಳನ್ನು ಎಡೆಬಿಡದೆ ಮುಂದುವರೆಸಿದರು. ಆದರೂ ಕೂಡಾ ರೈತಸಂಘವನ್ನು ಚುನಾವಣಾ ಸೋಲುಗಳು ಕಾಡಿತು ಎಂಬುದಂತೂ ಕಣ್ಣಿಗೆ ಹೊಡೆಯುವ ಸಂಗತಿ. ಹೀಗೆ ಹಲವು ರೀತಿ ಚಳವಳಿಗಳನ್ನು ಕುಂದಿಸುವುದರಿಂದ ಚುನಾವಣೆಗಳ ಸಮಯದಲ್ಲಿ ಚಳವಳಿಗಾರರ ಹೊಣೆಗಾರಿಕೆ, ವರ್ತನೆಗಳನ್ನು ಕೂಡಾ ಸ್ವವಿಮರ್ಶೆಗೆ ಒಡ್ಡಬೇಕಾಗುತ್ತದೆ.

ಚಳವಳಿಗಾರರು ಚುನಾವಣೆಗಳಲ್ಲಿ ಯಶಸ್ವಿಯಾಗದಿರಲು ಕಾರಣವಾದ ಚುನಾವಣಾ ಪದ್ಧತಿ ಮತ್ತು ಸಾಮಾಜಿಕ ವ್ಯವಸ್ಥೆ ಪ್ರಧಾನ ಸಮಸ್ಯೆ ಎಂಬ ಬಗ್ಗೆ ಈ ಮಾಲೆಯ ಎರಡು ಲೇಖನಗಳಲ್ಲಿ ವಿಶ್ಲೇಷಿಸಿದ್ದೇನೆ. ಆದರೆ
ಚಳವಳಿಗಾರರ ಉತ್ಪ್ರೇಕ್ಷೆಗಳು, ದುಡುಕುಗಳು, ತಿಳಿವಳಿಕೆಯ ಕೊರತೆಗಳು ಚುನಾವಣಾ ಸೋಲುಗಳ ಮತ್ತೊಂದು ಮುಖ.

ಚಳವಳಿಗಾರರ ಉತ್ಪ್ರೇಕ್ಷಿತ ಕಲ್ಪನೆಗಳು

ಚಳವಳಿಗಳಲ್ಲಿ ಜನರು ಬೃಹತ್ ಪ್ರಮಾಣದಲ್ಲಿ ಭಾಗವಹಿಸಿದಾಗ ಯಾವುದೇ ಚಳವಳಿಗಾರರಿಗೆ ಸಂತೋಷವಾಗುವುದು, ಹೆಮ್ಮೆಯುಂಟಾಗುವುದೂ ಸಹಜ. ಅದಕ್ಕು ಒಂದು ಹೆಜ್ಜೆ ಮುಂದೆಹೋಗಿ ಚಳವಳಿಯ ನಾಯಕರು ಉಬ್ಬಿಹೋಗಬಹುದು. ಅದರಲ್ಲೂ ಸರ್ಕಾರಗಳಿಗೆ ಸವಾಲೆಸೆದು, ಅವರು ಮಣಿಯಲೇಬೇಕಾದ ಪ್ರಸಂಗಗಳು ಉದ್ಭವಿಸಿದಾಗ ಇದು ಇನ್ನಷ್ಟು ತೀವ್ರವಾಗಿರತ್ತೆ.

ಜೊತೆಗೆ ಪತ್ರಿಕೆ, ಮಾಧ್ಯಮಗಳು ನೀಡುವ ಪ್ರಚಾರ, ಚಳವಳಿಯ ನಂತರ ಸಮಾಜದ ಬೇರೆಬೇರೆ ಜನ ವರ್ಗಗಳ ಶ್ಲಾಘನೆ ಯಾವುದೇ ನಾಯಕರನ್ನು ಮತ್ತಷ್ಟು ಉಬ್ಬಿಸುತ್ತವೆ. ಈ ಎಲ್ಲ ಸಂಗತಿಗಳು ನಾಯಕರುಗಳು ತಮ್ಮ ಹಾಗೂ ತಮ್ಮ ಸಂಘಟನೆಯ ಸಾಮರ್ಥ್ಯವನ್ನು ಉತ್ಪ್ರೇಕ್ಷಿಸಿಕೊಳ್ಳುವಂತಹ ಮಾನಸಿಕ ವಾತಾವರಣವನ್ನು ಸೃಷ್ಟಿಸುತ್ತವೆ.

ಇಂತಹ ಸಂದರ್ಭದಲ್ಲಿಯೇ ನಾಯಕರ ವಿಶ್ಲೇಷಣಾ ಸಾಮರ್ಥ್ಯ ಮತ್ತು ವಿವೇಚನೆ ಬಹಳ ಮುಖ್ಯವಾಗುವುದು.

ಚಳವಳಿಯ ಸಾಮಾಜಿಕ ವಿಜ್ಞಾನ

ಸಣ್ಣ ಸಂಖ್ಯೆಯಲ್ಲಾಗಲಿ, ಬೃಹತ್ ಪ್ರಮಾಣದಲ್ಲಾಗಲಿ ಜನರು-ರೈತರಾಗಲೀ, ಬೇರೆ ಜನ ವರ್ಗಗಳಾಗಲೀ ಹೋರಾಟಗಳಲ್ಲಿ ಭಾಗವಹಿಸುವುದು ತೀವ್ರಗೊಂಡಿರುವ ತತ್‌ಕ್ಷಣದ ಕೆಲವು ತುರ್ತು ಸಮಸ್ಯೆಗಳ ಪರಿಹಾರಕ್ಕಾಗಿ. ಈ ಸಮಸ್ಯೆಗಳು ಬೇರೆಬೇರೆ ಪ್ರದೇಶಗಳಿಗೆ ವಿವಿಧ ರೀತಿಯಲ್ಲಿ ಕಾಡುತ್ತಿರುತ್ತವೆ. ಕೆಲವೊಮ್ಮೆ ಒಂದೇ ಜಿಲ್ಲೆ ಮಾತ್ರವಲ್ಲ ಒಂದೇ ತಾಲ್ಲೂಕಿನ ಬೇರೆಬೇರೆ ಪ್ರದೇಶಗಳ ನಡುವೆಯೂ ವ್ಯತ್ಯಾಸಗಳಿರುತ್ತವೆ. ಸಂಘಟನೆ ಈ ಬಾಧಿತ ಜನರ ನಡುವೆ ಯಾವ ರೀತಿ ಸಮಸ್ಯೆಗಳ ಬಗ್ಗೆ ತಿಳಿವಳಿಕೆ ಮೂಡಿಸಿದೆ, ಆ ಸಂಘಟನೆಯನ್ನು ಜನರು ಎಷ್ಟರಮಟ್ಟಿಗೆ ನೆಚ್ಚುತ್ತಾರೆ ಎಂಬುದೂ ನಿರ್ಣಾಯಕ. ರಾಜ್ಯಮಟ್ಟದ ಒಂದು ಬೃಹತ್ ಸಮಾವೇಶದಲ್ಲಿ ರಾಜ್ಯಮಟ್ಟದ ನಾಯಕರಿಗೆ ಎಲ್ಲಿಂದ ಎಷ್ಟು ಜನ ಬಂದಿದ್ದಾರೆ ಎಂಬ ಬಗ್ಗೆ ಒಂದು ಸ್ಥೂಲ ಅಂದಾಜು
ಸಿಗಬಹುದಷ್ಟೇ ಹೊರತು ನಿಖರ ಮಾಹಿತಿ ಸಿಗುವುದಿಲ್ಲ. ಇದು ತಳಮಟ್ಟದ ಕಾರ್ಯಕರ್ತರಿಗಷ್ಟೇ ಗೊತ್ತಿರುತ್ತದೆ. ಈ ಮಾಹಿತಿಯನ್ನು ಪಡೆದುಕೊಳ್ಳಲು ರಾಜ್ಯಮಟ್ಟದ ನಾಯಕತ್ವ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದರೆ ಮಾತ್ರ ಅದನ್ನು ಸಂಗ್ರಹಿಸಬಹುದು. ಜೊತೆಗೆ ತಳಮಟ್ಟದ ಕಾರ್ಯಕರ್ತರೊಂದಿಗೆ ನಿಕಟ ಸಂಬಂಧವಿರುವ ಒಂದು ಸಂಘಟನಾ ವ್ಯವಸ್ಥೆಯೂ ಬೇಕು. ಕೇವಲ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಸಮಿತಿಗಳು ಕ್ರಿಯಾಶೀಲವಾಗಿದ್ದರೆ ಅರೆಬರೆ ಮಾಹಿತಿ ಮಾತ್ರ ಸಿಗುತ್ತದೆ.

ಹೋರಾಟಗಳಲ್ಲಿ ಭಾಗವಹಿಸಿರುವ ಜನರಲ್ಲೂ ಸಮಸ್ಯೆಗಳು ತೀವ್ರವಾಗಿ ಬಾಧಿಸಿರುವ ಜನರ ಜೊತೆಗೆ, ಅದು ಅಷ್ಟೇನೂ ತೀವ್ರವಾಗಿ ಬಾಧಿಸದ ಜನರೂ ಇರುತ್ತಾರೆ. ಸಮಸ್ಯೆ ಇಲ್ಲದವರೂ ಕೂಡಾ ಸಮಸ್ಯೆ ಬಾಧಿಸುವ ಜನರ ಒತ್ತಾಯ, ಮುಲಾಜುಗಳಿಗೆ, ಮತ್ತಿತರ ಕಾರಣಗಳಿಗೆ ಬಂದಿರುತ್ತಾರೆ. ಆದ್ದರಿಂದ ಭಾಗವಹಿಸಿದ ಜನರೆಲ್ಲ ಒಂದೇ ರೀತಿಯ ಹೋರಾಟದ ಬದ್ಧತೆಯನ್ನು ಹೊಂದಿರುವುದಿಲ್ಲ.

ಮತ್ತೊಂದು ಮುಖ್ಯ ಅಂಶವೆಂದರೆ ಯಾವ ಸಮಸ್ಯೆಗಳಿಗಾಗಿ ಹೋರಾಟ, ಪ್ರತಿಭಟನಾ ಸಭೆ ಸಂಘಟಿಸಲಾಗಿದೆಯೋ ಆ ಸಮಸ್ಯೆಗಳು ತೀವ್ರವಾಗಿ ಬಾಧಿಸುತ್ತಿರುವ ಜನರಿಗೂ ಕೂಡಾ ಇವಷ್ಟೇ ಸಮಸ್ಯೆಗಳಿರುವುದಿಲ್ಲ. ಹೋರಾಟ ರೂಪಿಸಿರುವ ಸಮಸ್ಯೆಗಳು ಅವರ ಬದುಕಿನ ಸಮಸ್ಯೆಗಳ ಒಂದು ಭಾಗ ಮಾತ್ರ. ಈ ಸಮಸ್ಯೆಗಳು ಪೂರ್ಣವಾಗಿ ಬಗೆಹರಿಯಿತು (ಆಳುವ ಜನರು ಸಮಸ್ಯೆಗಳನ್ನು ಪೂರ್ಣವಾಗಿ ಎಂದಾದರೂ ಬಗೆಹರಿಸುತ್ತಾರೆಯೇ?) ಎನ್ನುವ ಪರಿಸ್ಥಿತಿಯಲ್ಲೂ ಅವರ ಬದುಕಿನ ಇನ್ನಿತರ ಮುಖ್ಯ ಸಮಸ್ಯೆಗಳು ಪರಿಹಾರ ಕಂಡಂತಾಗುವುದಿಲ್ಲ.

ಆದ್ದರಿಂದ ಚಳವಳಿಯ ವಿಜ್ಞಾನದ ಭಾಷೆಯಲ್ಲಿ ಈ ಸಮಸ್ಯೆಗಳನ್ನು ಆಂಶಿಕ ಸಮಸ್ಯೆಗಳು (partial demands) ಎನ್ನುತ್ತಾರೆ. ಒಬ್ಬ ವ್ಯಕ್ತಿಯ, ಒಂದು ಕುಟುಂಬ ಅಥವಾ ಕುಟುಂಬಗಳ ಬದುಕನ್ನೇ ಬದಲಾಯಿಸಿಬಿಡುವಂತಹ, ಸಮಾಜದ ಬದಲಾವಣೆಗೇ ಸಾಧಕವಾಗುವ ಸಮಸ್ಯೆಗಳಿಗೆ ಮೂಲಭೂತ ಸಮಸ್ಯೆಗಳು (basic or fundamental problems) ಎನ್ನುತ್ತಾರೆ.

ಒಬ್ಬ ವ್ಯಕ್ತಿ ಮತ್ತವನ ಕುಟುಂಬಕ್ಕೆ ಇಂತಹ ಹಲವಾರು ಆಂಶಿಕ ಸಮಸ್ಯೆಗಳಿರುತ್ತವೆ. ಅವನ/ಳ, ಮತ್ತವರ ಕುಟುಂಬದ ಆರೋಗ್ಯದ ಸಮಸ್ಯೆ ಒಂದು ಸಮಯದಲ್ಲಿ ತೀವ್ರವಾದ ಸಮಸ್ಯೆಯಾಗಿರಬಹುದಲ್ಲಾ. ಹಾಗೆಯೇ ಮಕ್ಕಳ ಶಿಕ್ಷಣದ ಸಮಸ್ಯೆ, ಆಸ್ತಿ ಭಾಗವಾಗುವ ಸಮಸ್ಯೆ, ಮನೆಯ, ಭೂಮಿಯ ದಾಖಲೆಗಳ ಸಮಸ್ಯೆ, ಕೆಲವೊಮ್ಮೆ ತನ್ನದೋ, ತನಗೆ ಹತ್ತಿರದವರದೋ ಪೊಲೀಸ್ ಠಾಣೆಯ ಸಮಸ್ಯೆ, ಹಣದ ಕೊರತೆ ಮತ್ತು ಸಾಲದ ಸಮಸ್ಯೆ, ಮಕ್ಕಳ ಮದುವೆ ಸಮಸ್ಯೆ, ಕುಟುಂಬಗಳ ಒಳಗಿನ ಸಮಸ್ಯೆಗಳು ಹೀಗೆ ಹತ್ತು ಹಲವು ಸಮಸ್ಯೆಗಳು. ಇವುಗಳ ಜೊತೆಗೆ ರೈತರಾದರೆ ಅವನ/ಳ ಜೀವನಾಧಾರವಾದ ಕೃಷಿಯ ಸಮಸ್ಯೆಗಳೂ ಹಲವಾರು ಇರುತ್ತವೆ. ಈ ಎಲ್ಲವುಗಳ ಜೊತೆಯಲ್ಲಿ ಹೋರಾಟ ಮಾಡಲಾಗುತ್ತಿರುವ ಸಮಸ್ಯೆಗಳು ಒಂದು ಭಾಗ ಮಾತ್ರ. ಆದ್ದರಿಂದ ಹೋರಾಟಕ್ಕೆ ಕೈಗೆತ್ತಿಕೊಂಡಿರುವ ಸಮಸ್ಯೆಗಳು ಬಗೆಹರಿದರೂ ಅವನ ಬದುಕಿನ ಒಂದು ಅಂಶ ಮಾತ್ರ ಆ ಕ್ಷಣಕ್ಕೆ ಸುಧಾರಿಸಿದೆ ಎಂದರ್ಥ. ಇಷ್ಟು ಮಾತ್ರಕ್ಕೇ ಅವನು ಸಂಘಟನೆಗೆ ಋಣಿಯಾಗಿರಬೇಕು, ಅವರು ಬಯಸಿದಂತೆ ಮತದಾನ ಮಾಡಬೇಕು ಎಂದು ನಿರೀಕ್ಷಿಸುವುದು ಚಳವಳಿಗಾರರು ಮಾಡುವ ಬಹು ದೊಡ್ಡ ತಪ್ಪು.

ಉದಾಹರಣೆಗೆ ತೀವ್ರ ಕಾಯಿಲೆಯಿಂದ ತಾನಾಗಲೀ, ಕುಟುಂಬದವರಾಗಲೀ ಬಾಧಿತರಾದಾಗ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಗುಣವಾದ ಮೇಲೆ ವೈದ್ಯರ ಬಗ್ಗೆ ಗೌರವ, ಕೃತಜ್ಞತೆಯೆಲ್ಲಾ ಇರುತ್ತದೆ. ದೇವರಂತೆ ಕಾಪಾಡಿದಿರಿ ಎಂದು ಕಾಲಿಗೂ ಬೀಳಬಹುದು. ಆದರೆ ಆ ವೈದ್ಯರು ಅವರ ಬದುಕಿನ ಬೇರೆ ಅಂಶಗಳ ಬಗ್ಗೆ ಸಲಹೆ ನೀಡಿದರೆ ಪುರಸ್ಕರಿಸಬೇಕೆಂದು ಎಲ್ಲ ಸಮಯದಲ್ಲೂ ನಿರೀಕ್ಷಿಸಲಾಗುವುದಿಲ್ಲ. ಇದು ಚಳವಳಿಯ ಸಂಘಟನೆ ಅಥವಾ ನಾಯಕರ ಬಗೆಗೂ ಅನ್ವಯಿಸುತ್ತದೆ. ಹೀಗಾಗಿ ಹೋರಾಟಗಳಲ್ಲಿ ಭಾಗವಹಿಸಿದ, ಅದರ ಪ್ರಯೋಜನ ಪಡೆದ ಮಾತ್ರಕ್ಕೆ ಅವರು ಸಂಘಟನೆಯ ಅಭ್ಯರ್ಥಿಗಳಿಗೆ ಮತ ಹಾಕುವರೆಂಬ ನಿರೀಕ್ಷೆಯೇ ದೋಷಪೂರಿತವಾದದ್ದು.

ಆಳುವವವರ ದುರ್ನೀತಿ, ಕುತಂತ್ರ, ಅಪಪ್ರಚಾರಗಳು

ಯಾವುದೇ ಹೋರಾಟಗಳಿಗೆ ಜನ ನೆರೆಯುವುದಕ್ಕೆ ಕಾರಣವಾದ ಸಮಸ್ಯೆಗಳನ್ನು ಬಹುತೇಕ ಸೃಷ್ಟಿ ಮಾಡಿರುವುದೇ ಆಳುವ ವರ್ಗಗಳು. ಆಳುವವರ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳು ಕೆಲವಿರುತ್ತವೆ. ಕೊರೊನಾ, ಬರಗಾಲ, ಪ್ರವಾಹ ಇತ್ಯಾದಿ. ಈ ಸಂದರ್ಭಗಳಲ್ಲೂ ಉಂಟಾದ ಸಮಸ್ಯೆಗಳ ಪರಿಹಾರಕ್ಕೆ ಏನೆಲ್ಲಾ ಮಾಡಬೇಕೋ ಆ ಕ್ರಮಗಳನ್ನು ಕೈಗೊಳ್ಳದಿರುವುದು ಸಮಸ್ಯೆಗಳ ಉಲ್ಬಣಗೊಳ್ಳುವುದಕ್ಕೆ ಕಾರಣವಾಗಿರುತ್ತದೆ. ಹೀಗೆ ಜನರನ್ನು ಹೋರಾಟಕ್ಕೆ ದೂಡಿರುವುದೇ ಆಳುವ ವರ್ಗಗಳು. ಆದ್ದರಿಂದ ಹೋರಾಟಗಳನ್ನು ಎದುರಾಳಿ ಎಂದು ಬಗೆಯುವ ಆಳುವ ವರ್ಗಗಳು ಹೋರಾಟಗಳು, ಹೋರಾಟಗಾರ ಸಂಘಟನೆಗಳು, ಹೋರಾಟಗಾರರುಗಳ ವಿರುದ್ಧ ಅಪಪ್ರಚಾರ ಹರಿಯಬಿಡುತ್ತಾರೆ. ಅವ್ಯಾವುವೂ ನೀಗದಾಗ ಈ ಆಂಶಿಕ ಸಮಸ್ಯೆಗಳನ್ನು ಆಂಶಿಕವಾಗಿ ಬಗೆಹರಿಸುತ್ತಾರೆ. ತತ್ಕಾಲಕ್ಕೆ ಒಂದಷ್ಟು ಸಮಾಧಾನವಾಗುತ್ತದೆ. ಇವೆಲ್ಲವೂ ಚಳವಳಿಗಾರರ ಅನುಭವಕ್ಕೆ ಬರುವ ಸರ್ವೇಸಾಮಾನ್ಯ ವಿಷಯಗಳು.

ಆದರೆ ಇದರಲ್ಲಿ ಚಳವಳಿಗಾರರು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶಗಳೆಂದರೆ ಆಳುವ ವರ್ಗಗಳು, ಅವರ ಸರ್ಕಾರಗಳು ಸಮಸ್ಯೆಗಳ ಯಾವ ಅಂಶಗಳನ್ನು ಬಗೆಹರಿಸುತ್ತಾವೆಂದರೆ ತಮ ವರ್ಗಕ್ಕೆ ಬಹಳ ನಷ್ಟವಾಗಬಾರದು, ಆದರೆ ಚಳವಳಿಯ ಬೆನ್ನು ಮುರಿಯಬೇಕು, ಹಾಗೆ. ಚಳವಳಿಗಳಿಗೆ ಜನರನ್ನು ನೆರೆಸುವುದರಲ್ಲಿ ಯಾರು ಬಹಳ ಆಸಕ್ತಿಯಿಂದ ತೊಡಗಿರುತ್ತಾರೋ ಆ ಒಂದು ಸಣ್ಣ ವಿಭಾಗಕ್ಕೆ ತೃಪ್ತಿಪಡಿಸುವಂತೆ ಸಮಸ್ಯೆಯನ್ನು ಭಾಗಶಃ ಬಗೆಹರಿಸಿದರೆ ಮುಂದಿನ ಹೋರಾಟಗಳಲ್ಲಿ ಅವರು ಆಸಕ್ತಿ ತೋರಿಸುವುದಿಲ್ಲ. ಈ ಮೂಲಕ ಚಳವಳಿಯನ್ನು ಒಡೆಯುತ್ತಾರೆ.

ಹಲವೊಮ್ಮೆ ಉದ್ದೇಶಪೂರ್ವಕವಾಗಿ ಸರಳ ಸಮಸ್ಯೆಗಳನ್ನೂ ಬಗೆಹರಿಸದೆ ಪದೇಪದೇ ಹೋರಾಟಕ್ಕಿಳಿಯುವಂತೆ ಮಾಡಿ ಜನರನ್ನು ಸುಸ್ತಾಗಿಸುತ್ತಾರೆ. ಅಥವಾ ಒಂದು ಕೊಟ್ಟಂತೆ ಮಾಡಿ ಇನ್ಯಾವುದೋ ಸಮಸ್ಯೆಯನ್ನು ಉಂಟುಮಾಡುತ್ತಾರೆ. ಅದರಿಂದಲೂ ಜನರ ಭಾಗವಹಿಸುವಿಕೆ ಕುಗ್ಗುತ್ತದೆ.

ಆಳುವ ವರ್ಗವೆಂದರೆ ಕೇವಲ ಅಂದಿನ ಸರ್ಕಾರವಲ್ಲ, ಕೇವಲ ರಾಜ್ಯ ಸರ್ಕಾರವೂ ಅಲ್ಲ. ಅದು ರಾಷ್ಟ್ರವ್ಯಾಪಿ ವರ್ಗ. ಅದು ಒಕ್ಕೂಟ ಸರ್ಕಾರಗಳ ಮೇಲೆ ಭದ್ರ ಹಿಡಿತ ಹೊಂದಿರುತ್ತವೆ. ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಆಳುವಿಕೆಯ ಕೀಲಿಕೈಯನ್ನು ತನ್ನ ಬಳಿ ಇಟ್ಟುಕೊಂಡು ಎಲ್ಲ ಆಳುವ ರಾಜಕೀಯ ಪಕ್ಷಗಳನ್ನೂ ನಿಯಂತ್ರಿಸುವ ವರ್ಗ. ಈ ಆಳುವ ವರ್ಗ ಎಂದರೆ ಸರ್ಕಾರಗಳನ್ನು ನಡೆಸುವ ಮಂತ್ರಿ ಮಾನ್ಯರು, ಕೇವಲ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಮಾತ್ರ ಅಲ್ಲ. ಸಮಾಜದ ಮೇಲೆ ಆ ವರ್ಗದ ಹಿಡಿತ ಸರ್ವವ್ಯಾಪಿ. ಜನರ ಮೇಲೆ ವ್ಯಾಪಕ ಪ್ರಭಾವ ಬೀರುವ, ಅವರನ್ನು ತಮ್ಮತ್ತ ಸೆಳೆದುಕೊಳ್ಳುವ ವಿಚಾರ ಸರಣಿಯನ್ನು ಅವರು ಸೃಷ್ಟಿಸುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಬದಲಾಯಿಸುತ್ತಾರೆ. ಅದು ಗರೀಬಿ ಹಠಾವೋ ಇರಬಹುದು, ಜೈಕಿಸಾನ್ ಇರಬಹುದು, ಸಾರ್ವಜನಿಕ ರಂಗ, ಸರ್ಕಾರದ ಆಸ್ಪತ್ರೆ, ಸರ್ಕಾರಿ ಶಾಲೆಗಳೆಂದರೆ ಅವು ಅದಕ್ಷ, ಭ್ರಷ್ಟಾಚಾರ ತಾಂಡವವಾಡುವ ವ್ಯವಸ್ಥೆ ಹೀಗೆ ಹತ್ತು ಹಲವು ವಿಚಾರಗಳನ್ನು ಆಗಿಂದಾಗ್ಗೆ ಸೃಷ್ಟಿಸುತ್ತಿರುತ್ತಾರೆ. ಮಾಧ್ಯಮಗಳು, ಪತ್ರಿಕೆಗಳು, ಅಕಾಡೆಮಿಕ್ ವಲಯ, ಬುದ್ಧಿಜೀವಿಗಳು ಇತ್ಯಾದಿ ದೇಶವ್ಯಾಪಿ ಜನಾಭಿಪ್ರಾಯ ರೂಪಿಸುವವರಷ್ಟೇ ಅಲ್ಲದೆ ಹಳ್ಳಿ, ಪಟ್ಟಣ, ನಗರಗಳಲ್ಲೂ ಅಭಿಪ್ರಾಯ ರೂಪಿಸುವವರ ಮೇಲೆ ಹಲವು ರೀತಿಯ ಹಿಡಿತ ಹೊಂದಿರುತ್ತಾರೆ.

ಜೊತೆಗೆ ಸಮಾಜದ ಮೇಲೆ ಹಿಡಿತ ಹೊಂದಿರುವ ಬಡ್ಡಿ ಸಾಹುಕಾರ, ದಲ್ಲಾಳಿ, ಭೂಮಿ ಗೇಣಿಗೆ ನೀಡುವ ಭೂಮಾಲಿಕ, ಹೆಚ್ಚು ಜನರಿಗೆ ಕೂಲಿ ನೀಡುವ ಜಮೀನುದಾರ ಇವರುಗಳ ಮೂಲಕ ಹಿಡಿತ ಹೊಂದಿರುತ್ತಾರೆ. ಸಾವಿರಾರು ವರ್ಷಗಳಿಂದ ಜನರನ್ನು ನಿಯಂತ್ರಿಸುತ್ತಿರುವ ಜಾತಿ ವ್ಯವಸ್ಥೆಯನ್ನು, ಹಣವನ್ನು ಆಳುವ ವರ್ಗಗಳು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಈಗಾಗಲೇ ಹಿಂದಿನ ಲೇಖನಗಳಲ್ಲಿ ವಿವರಿಸಿದ್ದೇನೆ.

ಆದರೆ ಬಹಳಷ್ಟು ಬಾರಿ ಚಳವಳಿಗಳು ಅಂದಂದಿನ ಸರ್ಕಾರಗಳು ಮತ್ತು ಸರ್ಕಾರದ ಮುಖ್ಯಮಂತ್ರಿ, ಇತರ ಮಂತ್ರಿಗಳನ್ನಷ್ಟೇ ಗುರಿ ಮಾಡುತ್ತವೆ. ಕೆಲವೊಮ್ಮೆ ಈ ಸಂಕುಚಿತತೆಯನ್ನು ಮೀರಿದರೂ ಕೂಡಾ ಅದು ಕೇವಲ ತಾತ್ಕಾಲಿಕ. ಆದ್ದರಿಂದ ಇಡೀ ಆಳುವ ವರ್ಗದ ಒಟ್ಟಾರೆ ಸ್ವರೂಪ ಮತ್ತು ಅವರ ಬಲವಾದ ಹಿಡಿತದ ಬಗ್ಗೆ ಚಳವಳಿಗಾರರಿಗೆ ಆಳವಾದ ಅಧ್ಯಯನ ಅವಶ್ಯ.

ಚಳವಳಿಗಳ ಸೀಮಿತತೆ ಮತ್ತು ಅವಶ್ಯವಾದ ರಾಕೀಯ ಪ್ರಜ್ಞೆ

ಸಾಮಾನ್ಯವಾಗಿ ಹೋರಾಟಗಳಲ್ಲಿ ತಮ್ಮ ತಕ್ಷಣದ ತುರ್ತುಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವ ಜನಸಮೂಹ ಸಮಾಜ ರಚನೆ ಮತ್ತು ಆಳುವ ವರ್ಗಗಳ ಮೂಲಭೂತ ಪ್ರಶ್ನೆಗಳ ಬಗ್ಗೆ ಆಸಕ್ತಿ ಹೊಂದಿರುವುದಿಲ್ಲ. ಆ ಬಗ್ಗೆ ಕೇಳಿದ ಕೆಲವು ಮಾತುಗಳು ಅವರ ಮನಸ್ಸಿನ ಆಳಕ್ಕೆ ಇಳಿಯುವುದಿಲ್ಲ. ಆದ್ದರಿಂದ ಆಯಾ ಜನ ವಿಭಾಗದ ತುರ್ತು ಸಮಸ್ಯೆಗಳಿಗಾಗಿ ಮಾಡುವ ಚಳವಳಿಗಳು ಒಂದು ಪ್ರಾಥಮಿಕ ಎಚ್ಚರವನ್ನಷ್ಟೇ ಮೂಡಿಸಲು ಶಕ್ತವಾಗುತ್ತವೆ.

ಇಡೀ ವ್ಯವಸ್ಥೆಯನ್ನು ಧಿಕ್ಕರಿಸುವ, ಆ ಮೂಲಕ ಜಾತಿ, ಹಣ, ಇತರನೇಕ ಸಾಮಾಜಿಕ, ಆರ್ಥಿಕ ಹಿಡಿತಗಳನ್ನು ಮೀರಿ ಚಳವಳಿಗಾರರಿಗೆ ಮತ ನೀಡುವಷ್ಟು ಎತ್ತರದ ರಾಜಕೀಯ ಪ್ರಜ್ಞೆ ಮೂಡಿಸುವುದು ಅಗತ್ಯ. ಈ ರೀತಿಯ ಪ್ರಜ್ಞೆ ಒಂದು ವಿಭಾಗದ ಆಂಶಿಕ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುವ ರೈತ, ದಲಿತ, ಕಾರ್ಮಿಕ ಸಂಘಗಳು, ಮತ್ತಿತರ ಸಂಘಗಳ ವ್ಯಾಪ್ತಿಗೆ ಮೀರಿದ್ದು. ಇಂತಹ ಚಳವಳಿಗಳಲ್ಲಿ ತಮ್ಮ ತುರ್ತು ಸಮಸ್ಯೆಗಳ ಪರಿಹಾರಕ್ಕಾಗಿ ಭಾಗವಹಿಸಿದ ಜನರು ವಿವಿಧ ಪಕ್ಷಗಳಿಗೆ ಸೇರಿರಬಹುದು ಅಥವಾ ಅದರ ನಿರಂತರ ಮತದಾರರಿರಬಹುದು. ಅವರುಗಳು ಕೆಲ ಹೋರಾಟಗಳಲ್ಲಿ ತಮ್ಮ ಒಂದೆರಡು ಸಮಸ್ಯೆಗಳ ಪರಿಹಾರ ಪಡೆಯಲು ತಮ್ಮ ಇಲ್ಲಿಯವರೆಗಿನ ರಾಜಕೀಯ ಸಂಬಂಧಗಳನ್ನು ಒಮ್ಮೆಲೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಹಾಗೆ ಮಾಡಲೋಸ್ಕರ, ಚಳವಳಿಗಾರ ಸಂಘಟನೆಗಳನ್ನೇ ರಾಜಕೀಯ ಪಕ್ಷವಾಗಿಸಲು ಪ್ರಯತ್ನ ಮಾಡಿದ ಕೂಡಲೆ ಭಾಗವಹಿಸಿದ ಜನರು ತಮ್ಮ ಹಿಂದಿನ ರಾಜಕೀಯ ಪಕ್ಷಗಳಿಗೆ ಮರಳುತ್ತಾರೆ, ಆಗ ಆ ಚಳವಳಿಗಾರ ಸಂಘಟನೆ ಒಡೆಯುತ್ತದೆ. ಶಕ್ತಿ ಕುಗ್ಗುತ್ತದೆ. ಆದ್ದರಿಂದ ಅಂಶಿಕ ಸಮಸ್ಯೆಗಳ ಪರಿಹಾರಕ್ಕಾಗಿ ರೂಪಿಸಿದ ಚಳವಳಿ ಮತ್ತು ಚಳವಳಿಗಾರ ಸಂಘಟನೆಗಳು ಮೂಡಿಸಿದ ಪ್ರಾಥಮಿಕ ಎಚ್ಚರವನ್ನು ಇಡೀ ವ್ಯವಸ್ಥೆಯ ವಿರುದ್ಧದ, ರಾಜಕೀಯ ಪ್ರಜ್ಞೆಯನ್ನಾಗಿಸಲು ಬೇರೆಯೇ ಸ್ವರೂಪದ ಕೆಲಸ ಮತ್ತು ಸಂಘಟನೆ ಅಗತ್ಯ.

ಚಳವಳಿಗಾರರು ಚುನಾವಣೆಗಳಲ್ಲಿ ಯಶಸ್ಸು ಪಡೆದೇ ಇಲ್ಲವೇ? ಕಮ್ಯುನಿಸ್ಟ್ ಚಳವಳಿಗಳ ಗೆಲುವು, ಸೋಲುಗಳ ದೀರ್ಘ ಅನುಭವ ಏನು ಹೇಳುತ್ತದೆ?

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ.ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಚಳವಳಿಗಾರರು ಚುನಾವಣೆ ಗೆಲ್ಲಬೇಕಾದರೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...