Homeಕರ್ನಾಟಕಚಳವಳಿಗಾರರಿಗೇಕೆ ಚುನಾವಣೆಗಳನ್ನು ಗೆಲ್ಲುವುದು ಕಡುಕಷ್ಟ?

ಚಳವಳಿಗಾರರಿಗೇಕೆ ಚುನಾವಣೆಗಳನ್ನು ಗೆಲ್ಲುವುದು ಕಡುಕಷ್ಟ?

- Advertisement -
- Advertisement -

ಭಾರತದಲ್ಲಿ ಆಳುವವರು ಆರಿಸಿಕೊಂಡ ಚುನಾವಣಾ ಪದ್ಧತಿಯ ಉದ್ದೇಶವೇ ಅಂಬೇಡ್ಕರ್‌ರಂತಹವರನ್ನೂ ಸೋಲಿಗೆ ಗುರಿಮಾಡುವುದು, ನಂಜುಂಡಸ್ವಾಮಿಯಂತಹವರನ್ನೂ. ನರಗುಂದ-ನವಲಗುಂದ ರೈತ ಹೋರಾಟದ ನಾಯಕ ಹಳಕಟ್ಟಿಯವರೂ, ಕಾರ್ಮಿಕ ನಾಯಕ ಸೂರ್ಯನಾರಾಯಣರಾಯರೂ, ಹಲವು ಕಮ್ಯುನಿಸ್ಟ್ ನಾಯಕರೂ, ದಲಿತ ಚಳವಳಿಗಳ ನಾಯಕರೂ ಸೋಲೊಪ್ಪುವಂತೆ ಮಾಡುತ್ತದೆ ಆ ವ್ಯವಸ್ಥೆ. ಅಪರೂಪಕ್ಕೆ ಮಾತ್ರ ಕೆಲವೊಮ್ಮೆ ಗೆಲುವು.

ಆದರೆ ದೇಶದ ಎರಡು ಮೂರು ರಾಜ್ಯಗಳಲ್ಲಿ ಕಮ್ಯುನಿಸ್ಟ್ ಚಳವಳಿಗಳ ನಾಯಕರು ಹಲವು ಬಾರಿ ಯಶಸ್ವಿಯಾಗಿದ್ದಾರೆ. ನಿಜ, ಇತ್ತೀಚಿಗೆ ಎರಡು ರಾಜ್ಯಗಳಲ್ಲಿ ದಯನೀಯವಾಗಿ ಸೋತಿದ್ದಾರೆ.

ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಚುನಾವಣಾ ಪದ್ಧತಿಯ ರೂಪ-ವಿರೂಪ. ಅದನ್ನು ಆರಿಸಿದ ಮತ್ತು ಬಳಸಿಕೊಳ್ಳುತ್ತಿರುವ ಸಮಾಜ ರಚನೆಯ ವಿಕಾರ ರೂಪಗಳು ಒಂದೆಡೆಯಾದರೆ ಚಳವಳಿಗಾರರ ತಪ್ಪು ತಿಳಿವಳಿಕೆ ಹಾಗೂ ದೋಷಗಳೂ ಕೂಡಾ ಇದಕ್ಕೆ ಕಾರಣ.

ನಮ್ಮ ಚುನಾವಣಾ ಪದ್ಧತಿ

ನಮ್ಮ ದೇಶದ ಚುನಾವಣಾ ಪದ್ಧತಿ, ಪ್ರಜಾಪ್ರಭುತ್ವ ಎಂಬ ನೂತನ ಕಾಲಘಟ್ಟದ ಆರಂಭ ಕಾಲದಲ್ಲಿ ರೂಪಿತವಾದ ಒಂದು ಪ್ರಾಚೀನ ವ್ಯವಸ್ಥೆಯನ್ನು ಅರಸಿದೆ. ಪ್ರಾಚೀನ ಏಕೆಂದರೆ ವಿಶ್ವದ ಹಲವು ದೇಶಗಳು ಈ ಪದ್ಧತಿಯಿಂದ ಪ್ರಜೆಗಳ ನಿಜ ಅಭಿಮತ ತಿಳಿಯಲಾಗುವುದಿಲ್ಲ ಎಂದು ತಿರಸ್ಕರಿಸಿರುವ ಅಥವಾ ಗುರುತು ಸಿಗದಷ್ಟು ಸುಧಾರಣೆಗಳಿಗೆ ಒಳಪಡಿಸಿರುವ ಪದ್ಧತಿ. ಯುರೋಪಿನ ಮುಂದುವರೆದ ದೇಶಗಳಿರಲಿ ಜಗತ್ತಿನ ಅತ್ಯಂತ ಹಿಂದುಳಿದ ದೇಶಗಳೂ ಇದನ್ನು ಸುಧಾರಣೆಗಳಿಗೆ ಒಳಪಡಿಸಿವೆ. ನಮ್ಮ ನೆರೆಯ ಶ್ರೀಲಂಕಾ, ನೇಪಾಳಗಳೂ ನಮ್ಮ ದೇಶಕ್ಕಿಂತ ಉತ್ತಮ ಪದ್ಧತಿ ಅಳವಡಿಸಿಕೊಂಡಿವೆ.

ನಮ್ಮ ದೇಶದ ಚುನಾವಣಾ ಪದ್ಧತಿಗೆ First past the post system ಎಂದು ಕರೆಯಲಾಗುತ್ತದೆ. ಒಂದು ಮತ ಹೆಚ್ಚು ಬಂದವರೂ ಗೆದ್ದರೆಂಬ ಪದ್ಧತಿ ಇದು. ಇದರಲ್ಲಿ ಗೆದ್ದವರಿಗೆ ಹಾಕಿದ ಓಟುಗಳನ್ನು ಹೊರತುಪಡಿಸಿದರೆ ಉಳಿದವರಿಗೆ ಹಾಕಿದ ಮತಗಳು ಲೆಕ್ಕಕ್ಕೆ ಬರುವುದಿಲ್ಲ. ಹತ್ತಾರು ಚುನಾವಣೆಗಳಲ್ಲಿ ಹಳ್ಳಿಹಳ್ಳಿ ಸುತ್ತಿ ಪ್ರಚಾರ ಮಾಡುತ್ತಿದ್ದ ನನಗೆ ನಮ್ಮ ಸಂಘಟನೆಗಳ ಜನರೇ ಹೇಳುತ್ತಿದ್ದ ಮಾತು: “ವೇಸ್ಟಾಗಿಬಿಡುತ್ತೆ ಕಾಮ್ರೇಡ್”.

ನಮ್ಮ ಚುನಾವಣಾ ಪದ್ಧತಿಯ ಮತ್ತೊಂದು ಲಕ್ಷಣ ಕ್ಷೇತ್ರ ಕೇಂದ್ರಿತ ಚುನಾವಣೆ. ಲೋಕಸಭೆಗಾಗಲೀ ವಿಧಾನಸಭೆಗಾಗಲೀ ಎಲ್ಲ ಸ್ಥಾನಗಳೂ ಅದಕ್ಕಾಗಿ ವಿಂಗಡಿಸಿದ ಕ್ಷೇತ್ರಗಳಿಂದಲೇ ಆಯ್ಕೆ. ಈ ಚುನಾವಣಾ ಪದ್ಧತಿ ಬ್ರಿಟನ್ ಮಾದರಿ.

ಮೇಲಿನ ಸಂಗತಿಗಳನ್ನು ಕೇಳಿದವರಿಗೆ, ’ಅರೆ, ಚುನಾವಣೆ ಎಂದರೆ ಹೀಗಲ್ಲದಿದ್ದರೆ ಬೇರೆ ಹೇಗಿರಲು ಸಾಧ್ಯ’ ಎನ್ನಿಸಬಹುದು. ಕೆಲವರು ಅಮೆರಿಕದ ಅಧ್ಯಕ್ಷೀಯ ಮಾದರಿ ಚುನಾವಣೆಯ ಮಾತಾಡಬಹುದು.

ಆದರೆ ಜಗತ್ತಿನ ಬಹಳ ದೇಶಗಳು ಈ ಎರಡೂ ಮಾದರಿಗಳನ್ನು ತಿರಸ್ಕರಿಸಿವೆ ಅಥವಾ
ಬಹಳ ಮುಂದೆ ಹೋಗಿವೆ. ಈ ಎರಡು ರಾಷ್ಟ್ರಗಳನ್ನು ಆಳುವವರು ತಾವು ಸುಲಭವಾಗಿ ಅಧಿಕಾರ ಹಿಡಿಯುವುದಕ್ಕೆ ಅವಕಾಶ ಕೊಡುವ ಚುನಾವಣಾ ಪದ್ಧತಿಗಳನ್ನು ಸುಧಾರಣೆ ಮಾಡದೆ ಹಾಗೇ ಉಳಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ದೇಶಗಳನ್ನು ಕೆಳ ದರ್ಜೆಯ ಪ್ರಜಾಪ್ರಭುತ್ವವನ್ನಾಗಿಸಿದ್ದಾರೆ. ನಮ್ಮ ದೇಶದ ಆಳುವವರು ಜಗತ್ತಿನೆಲ್ಲೆಡೆ ಚುನಾವಣಾ ಪದ್ಧತಿಯಲಾಗುತ್ತಿರುವ ಬದಲಾವಣೆ, ಸುಧಾರಣೆಗಳಿಗೆ ಕಣ್ಮುಚ್ಚಿ ಕುಳಿತು ತಮ್ಮ ಹಿಡಿತಕ್ಕೆ ಬಾಧಕವಾಗಬಹುದಾದ ಬದಲಾವಣೆಗಳನ್ನು ದೂರ ಇಟ್ಟಿವೆ.

ಮೊದಲು ಕ್ಷೇತ್ರಗಳ ವಿಷಯವನ್ನೇ ತೆಗೆದುಕೊಳ್ಳೋಣ; ಇವುಗಳಿಗೂ ನಮ್ಮ ಚಳವಳಿಗಳ ಸ್ವರೂಪಕ್ಕೂ ಬಹಳ ವ್ಯತ್ಯಾಸ. ಕ್ಷೇತ್ರಗಳೆಂದರೆ ಒಂದು ನಿರ್ದಿಷ್ಟ ತಾಲ್ಲೂಕು ಅಥವಾ ಪ್ರದೇಶಕ್ಕೆ ಸಂಬಂಧಪಟ್ಟವು. ಬಹಳಷ್ಟು ಚಳವಳಿಗಳು ಕ್ಷೇತ್ರ ವ್ಯಾಪ್ತಿಯನ್ನು ಮೀರಿ ರಾಜ್ಯ ವ್ಯಾಪ್ತಿಯಲ್ಲಿ, ಕಡಿಮೆ ಎಂದರೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವಂತಹವು. ರಾಜ್ಯ ಮಟ್ಟದ ಪ್ರತಿಭಟನಾ ಸಭೆಗಳಿಗೆ ಹಲವು ಲಕ್ಷ ಜನ ಸೇರಿರಬಹುದು, ಜಿಲ್ಲಾ ಮಟ್ಟದ ಸಭೆಗಳಿಗೆ ಹತ್ತಾರು ಸಾವಿರ ಜನ ಸೇರಿರಬಹುದು. ಆದರೆ ಅವರು ಯಾವ ಕ್ಷೇತ್ರಕ್ಕೆ ಸೇರಿದವರು ಎಂದು ಬೇರ್ಪಡಿಸಲಾಗುತ್ತದೆಯೇ? ಒಂದೇ ತಾಲ್ಲೂಕಿನ ಹಳ್ಳಿಗಳು ಎರಡು ಬೇರೆಬೇರೆ ಕ್ಷೇತ್ರಗಳಿಗೆ ಸೇರಿರುವಂತಹ ಪರಿಸ್ಥಿತಿ ಕೂಡಾ ಇದೆ. ಜೊತೆಗೆ ಯಾವ ಊರುಗಳಿಂದ, ಯಾರ್‍ಯಾರು ಬಂದಿದ್ದರು ಎಂದು ಗುರುತಿಸುವುದಂತೂ ದೂರವೇ ಉಳಿಯಿತು. ಹೀಗಾಗಿ ಬಹಳ ಜನ ಬಂದಿರಬಹುದು, ಭಾಷಣಗಳನ್ನು ಕೇಳಿ ಮೆಚ್ಚಿರಬಹುದು, ರೈತ ಸಂಘಕ್ಕೆ ಓಟು ಹಾಕಬೇಕೆಂಬ ತೀರ್ಮಾನಕ್ಕೂ ಬಂದಿರಬಹುದು. ಆದರೆ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಒಟ್ಟು ಓಟುಗಳಲ್ಲಿ ಇವರ ಸಂಖ್ಯೆ ಗಣನೆಗೆ ಬಾರದೇ ಹೋಗಬಹುದು. ಕ್ಷೇತ್ರವ್ಯಾಪ್ತಿ ಮೀರಿದ ಚಳವಳಿಗಳ ಸ್ವರೂಪ ಮತ್ತು ಕ್ಷೇತ್ರ ಕೇಂದ್ರಿತವಾದ ಚುನಾವಣೆಗಳ ನಡುವೆ ದೊಡ್ಡ ಕಂದರವೇ ಇರುತ್ತದೆ.

ಕ್ಷೇತ್ರ ಕೇಂದ್ರಿತ ಚುನಾವಣೆಗಳ ಮತ್ತೊಂದು ಅಂಶವೆಂದರೆ ನೀವು ಬಹು ದೊಡ್ಡ ನಾಯಕರೇ ಇರಬಹುದು, ಜನ ಮೆಚ್ಚಿದವರೂ ಆಗಿರಬಹುದು, ಬಹಳ ತಿಳಿವಳಿಕಸ್ತರೂ ಆಗಿರಬಹುದು, ಆದರೆ ನೀವು ನಮ್ಮ ಹಳ್ಳಿ, ಪ್ರದೇಶಗಳ ಜನರ ಕೈಗೆ ಸಿಗುವುದಿಲ್ಲ, ಅಲ್ಲಿಯ ಸಮಸ್ಯೆಗಳಿಗೆ ಗಮನ ಕೊಡುವ ಸಾಧ್ಯತೆ ಕಡಿಮೆ ಎಂದಾದರೆ ಓಟು ನೀಡದಿರುವ ಸಂಭವ ಕ್ಷೀಣಿಸುತ್ತದೆ. ವಿಧಾನಸಭೆಯಲ್ಲಿ ರಾಜ್ಯದ, ದೇಶದ ಜನರ ಸಮಸ್ಯೆಗಳನ್ನು ಎತ್ತುವ ಸಾಮರ್ಥ್ಯ ಲೆಕ್ಕಕ್ಕೆ ಬರುವುದಿಲ್ಲ. ಅಂತಹವರಿಗೂ ಓಟು ಸಿಗಬೇಕೆಂದರೆ ಅವರು ಮಂತ್ರಿಯೋ, ಮುಖ್ಯಮಂತ್ರಿಯೋ ಆಗಿ ಕ್ಷೇತ್ರಕ್ಕೆ ಅತಿಹೆಚ್ಚು ಯೋಜನೆ ತರುವಂತಹವರಾಗಿದ್ದರೆ ಮಾತ್ರ ವಿನಾಯತಿ. ಆಗಲೂ ಕ್ಷೇತ್ರದ ದೃಷ್ಟಿಯಿಂದಲೇ ಹೊರತು ಅಭ್ಯರ್ಥಿಯ ತಿಳಿವಳಿಕೆ ಕೆಲಸ ಮಾಡುವುದಿಲ್ಲ.

ಕ್ಷೇತ್ರ ಕೇಂದ್ರಿತವೆಂದರೆ ಜಾತಿ ಕೇಂದ್ರಿತ

ನಮ್ಮ ದೇಶದ ಜಾತಿಬದ್ಧ ಸಾಮಾಜಿಕ ವ್ಯವಸ್ಥೆ ಕ್ಷೇತ್ರವಾರು ಚುನಾವಣಾ ಪದ್ಧತಿಯ ಮೇಲೆ ಹಲವು ಹಾನಿಕರ ಪರಿಣಾಮಗಳನ್ನು ಬೀರುತ್ತದೆ. ನನ್ನ ’ಜಾತಿ ಬಂತು ಹೇಗೆ?’ (ಕರ್ನಾಟಕದ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ) ಕೃತಿಯಲ್ಲಿ ವಾದಿಸಿರುವಂತೆ ಕೃಷಿಯ ಆರಂಭ ಕಾಲದಲ್ಲಿ ಒಂದೊಂದು ಬುಡಕಟ್ಟು ಮತ್ತು ಕುಲಗಳು ಒಂದೊಂದು ಪ್ರದೇಶದಲ್ಲಿ ಭೂಮಿ ಹಿಡಿದು ವ್ಯವಸಾಯ ಮಾಡಲಾರಂಭಿಸಿದವು. ಆದ್ದರಿಂದ ಒಂದೊಂದು ಪ್ರದೇಶದಲ್ಲಿ ಒಂದೊಂದು ಜಾತಿಯ ಕುಲದ ಪ್ರಾಧಾನ್ಯತೆಯಿತ್ತು. ನಂತರ ಅಲ್ಲಿಗೆ ಬಂದವರು ಈ ಕುಲದ ಪ್ರಾಧಾನ್ಯತೆಯನ್ನು ಮನ್ನಣೆ ಮಾಡಿ, ಅವರಿಗೆ ಅಧೀನರಾಗಿ ಬದುಕು ಕಟ್ಟಿಕೊಳ್ಳಬೇಕು. ಇಂತಹ ಪರಿಸ್ಥಿತಿ ಒಂದೆರಡು ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿದೆ. ಇನ್ನೂ ಪ್ರಬಲವಾಗಿದೆ.

ನಮ್ಮ ದೇಶದಲ್ಲಿ ತೀವ್ರ ಭೂಸುಧಾರಣೆಯ ಮೂಲಕ ಇಂತಹ ಸಾಮಾಜಿಕ ವ್ಯವಸ್ಥೆಯ ಬುಡವನ್ನು ಅಲುಗಾಡಿಸಿ ಪ್ರಜಾಪ್ರಭುತ್ವ ಬೆಳೆಸಬೇಕಾಗಿತ್ತು. ಆದರೆ ಹಿಂದಿನ ಸಂಚಿಕೆಗಳಲ್ಲಿ ಸೂಚಿಸಿದಂತೆ ನಮ್ಮ ಆಳುವವರು ಅಂತಹ ಧೈರ್ಯವನ್ನು ತೋರಿಸಲಿಲ್ಲ. ಅದರ ಫಲವಾಗಿ ಈಗ ಚುನಾವಣೆಗಳೆಂದರೆ ರಾಜಕೀಯ ಪಕ್ಷಗಳು ಜಾತಿಯನ್ನು ಮೊದಲು ನೋಡಬೇಕಾಗಿದೆ. ಆಯಾ ಪ್ರದೇಶದಲ್ಲಿ ಪ್ರಬಲವಾದ ಜಾತಿಗಳನ್ನು ಅಥವಾ ಅದಕ್ಕೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಜಾತಿಗಳಲ್ಲಿ ಒಬ್ಬರನ್ನು ಆರಿಸಿ ಅಭ್ಯರ್ಥಿಯನ್ನಾಗಿಸಬೇಕು. ಆಗ ಆಯಾ ಕ್ಷೇತ್ರದಲ್ಲಿ ಒಂದು ರೀತಿ ಪಕ್ಷಗಳನ್ನೂ ಪರಿಗಣಿಸದೆ ತಮ್ಮ ಜಾತಿಯ ಅಭ್ಯರ್ಥಿಯ ಸುತ್ತಾ ನೆರೆದುಬಿಡುವ ಸಂಭವ ಬಹಳ. ರೈತ ಚಳವಳಿಯೆಂದರೆ ಅದು ಜಾತಿ, ಮತ, ಧರ್ಮಗಳನ್ನು ಮೀರಿದ, ಕೇವಲ ಬದುಕಿನ ಸಮಸ್ಯೆಗಳಿಗೆ ಗಮನ
ಹರಿಸುವಂತಹುದು. ಆದ್ದರಿಂದ ಜಾತಿಪರ ದೃಷ್ಟಿಯಿಂದ ನೋಡುವಾಗ ಆ ಅಭ್ಯರ್ಥಿ ರೈತನೋ ಅಲ್ಲವೋ, ರೈತಪರ ಅಭಿಪ್ರಾಯ ಉಳ್ಳವನೋ ಅಲ್ಲವೋ ಅವ್ಯಾವೂ ಲೆಕ್ಕಕ್ಕೆ ಬರುವುದಿಲ್ಲ.

ಜಾತಿ ಸಾವಿರಾರು ವರ್ಷಗಳಿಂದ ತಲೆಯಲ್ಲಿ ಕೂತಿರುವಂತಹದು. ರೈತ ಸಂಘ ಎಂಬುದು ಕೆಲ ವರ್ಷಗಳ ಹಿಂದೆ ಮಾತ್ರ ಕಂಡಿದ್ದು. ರೈತ ಸಂಘದ ಹಲವು ಸಭೆಗಳಲ್ಲಿ, ಹೋರಾಟಗಳಲ್ಲಿ ಭಾಗವಹಿಸಿದರೂ ತಮ್ಮ ಹಳ್ಳಿಗಳಿಗೆ ಹಿಂದಿರುಗಿದ ಮೇಲೆ ಅವರು ಅವರವರ ಜಾತಿಯ, ಕುಲದ ಸಂಬಂಧಗಳಿಗೆ ಕಟ್ಟುಬಿದ್ದವರೇ ಆಗಿರುತ್ತಿದ್ದರು.

ಅಷ್ಟೇ ಅಲ್ಲದೆ ಮತ್ತೊಂದು ಮುಖ್ಯ ಅಂಶವೆಂದರೆ ಹೋರಾಟದ ಸಭೆಗಳಿಗೆ ಬರುವವರು ಯಾರೆಂಬುದು. ಆಯಾ ಕುಟುಂಬದ ಮುಖ್ಯಸ್ಥರು ಅಥವಾ ಅವನ ಮಗ. ಮಹಿಳೆಯರು ಹೆಚ್ಚಾಗಿ ಬರುವುದಿಲ್ಲ. ಎಲ್ಲ ಪುರುಷರೂ ಬರುವುದಿಲ್ಲ. ಹೀಗಾಗಿ ಬಂದವರಲ್ಲಿ ಮೂಡಿದ ರೈತ ಪ್ರಜ್ಞೆ ಕೆಲವು ಕುಟುಂಬಗಳಲ್ಲಿ ಹೊರತುಪಡಿಸಿದರೆ, ಕುಟುಂಬಗಳ ಇತರ ಸದಸ್ಯರಿಗೆ ಅಲ್ಪಸ್ವಲ್ಪ ತಾಗಬಹುದಷ್ಟೇ. ಹಲವೊಮ್ಮೆ ರೈತ ಚಳವಳಿಯ ಕಾರ್ಯಕರ್ತರ ಬಗ್ಗೆ ಆಯಾ ಮನೆಗಳು, ಬಂಧುಬಾಂಧವರಲ್ಲಿ ವಿರೋಧ ಭಾವ ಬೆಳೆದಿರುವ ಸಂಭವ ಗಣನೀಯವಾಗಿದೆ.

ಹೀಗೆ ಜಾತಿ ಮನಸ್ಥಿತಿ ತೊಲಗಿಸಿ ಎಲ್ಲ ಜಾತಿಗಳ ರೈತರೂ ಒಂದಾಗಿ ಓಟು ಹಾಕುವಂತಹ ರೈತ ಪ್ರಜ್ಞೆ ಮೂಡಿಸಬೇಕಾದರೆ ತಳಮಟ್ಟದಲ್ಲಿ ಬಹಳ ಕೆಲಸ ಆಗಬೇಕು. ಅಲ್ಲಲ್ಲಿಯ ಸಾಮಾಜಿಕ ವ್ಯವಸ್ಥೆಯ ಬುಡ ಅಲುಗಾಡಿಸಬೇಕು. ಉತ್ತರಪ್ರದೇಶದಲ್ಲಿ ಜಾಟ್ ಕುಲ ಪಂಚಾಯತಿಗಳೇ ರೈತ ಚಳವಳಿಯಲ್ಲಿ ಮುಖ್ಯ ಪಾತ್ರ ವಹಿಸಿತೆಂಬುದನ್ನು ಗಮನಿಸೋಣ. ಅದರಿಂದ ರೈತ ಚಳವಳಿಗೆ ಪ್ರಯೋಜನವಾಗಿರಬಹುದಾದರೂ ಕೂಡಾ ಅವರಲ್ಲಿ ರೈತ ಪ್ರಜ್ಞೆಗಿಂತ ಜಾತಿ ಪ್ರಜ್ಞೆಯೇ ಮೇಲುಗೈಯಾಗಿರುವ ಸಂಭವ ಹೆಚ್ಚಲ್ಲವೇ.

ಮತ್ತೊಂದು ವಿಷಯವೆಂದರೆ ರೈತ ಸಂಘದ ಅಭ್ಯರ್ಥಿ ಅಲ್ಲಿಯವರೇ ಆಗಿ, ಅಲ್ಲಿಯ ಪ್ರಧಾನ ಜಾತಿಗೆ ಸೇರಿದವನಾಗಿದ್ದರೂ ಕೂಡ ಅವರ ಜಾತಿಯವರು ಅವರನ್ನು ಬಿಟ್ಟು ಅದೇ ಜಾತಿಯ ಬೇರೊಂದು ರಾಜಕೀಯ ಪಕ್ಷದ ಅಭ್ಯರ್ಥಿಗೆ ಓಟು ಹಾಕುವ ಸಂಭವವೇ ಹೆಚ್ಚು. ಏಕೆಂದರೆ ಅಂತಹ ಅಭ್ಯರ್ಥಿ ಅಥವಾ ಚುನಾವಣೆಯಲ್ಲಿ ಅವರ ಸಲುವಾಗಿ ದುಡಿಯುತ್ತಿರುವವರು ಹಲವಾರು ವರ್ಷಗಳಿಂದ ಅಲ್ಲಿಯ ತಮ್ಮ ಜಾತಿಯ ಕುಟುಂಬಗಳೊಂದಿಗೆ ಸಂಬಂಧ ಇರುವಂತಹ ಸ್ಥಾಪಿತ ಮುಖಂಡರು. ಅವರಿಂದ ಮದುವೆ ನೆಂಟಸ್ತಿಕೆ, ಆಸ್ತಿ ವಿಭಾಗ, ಇತರ ವ್ಯಾಜ್ಯಗಳೂ ಸೇರಿದಂತೆ ಹಲವು ರೀತಿ ಪ್ರಯೋಜನ ಪಡೆಯುತ್ತಿರುವವರು. ಆದ್ದರಿಂದ
ಅವರನ್ನು ಬಿಟ್ಟು ಓಟು ಹಾಕಲಾರರು. ಇಂತಹ ಪರಿಸ್ಥಿತಿ ಸಡಿಲವಾಗುತ್ತಿದ್ದರೂ ಅದಿನ್ನೂ ಪ್ರಭಾವಶಾಲಿಯಾಗಿಯೇ ಇದೆ.

ಇನ್ನು ಪ್ರಧಾನವಲ್ಲದ ಇತರ ಜಾತಿಗಳು, ಕೂಲಿಕಾರರು, ದಲಿತರು, ಕುಶಲಕರ್ಮಿಗಳ ಹಿಂದುಳಿದ ಜಾತಿಗಳವರು ಪ್ರಧಾನ ಜಾತಿಯ ಮೇಲ್ವರ್ಗಗಳಿಂದ ಹಲವು ರೀತಿಯ ಶೋಷಣೆಗಳಿಗೆ ಒಳಗಾಗಿದ್ದರೂ ಅವರ ಹಿಡಿತದಿಂದ ಹೊರಬರುವ ಸಂಭವ ಕಡಿಮೆಯಿದೆ.

ಇಂತಹ ಜಾತಿವ್ಯವಸ್ಥೆಯ ಬಿಗಿ ಹಿಡಿತ ಸಡಿಲವಾಗಿರುವ ಕಡೆಗಳಲ್ಲಿ ಜಾತಿಗೆ ಬದಲಾಗಿ ಕಾಂಚಾಣದ ಎರಚಾಟ ಆ ಜಾಗವನ್ನು ಆಕ್ರಮಿಸಿಕೊಂಡಿದೆಯಷ್ಟೇ. ರೈತ ಚಳವಳಿಯ ಮುಖಂಡರು ಭ್ರಷ್ಟರಾಗಿ ಹಣ ಮಾಡಿಕೊಂಡಿದ್ದರೆ ಅಥವಾ ಭ್ರಷ್ಟರಿಂದ ಹಣ ಪಡೆದು ಅವರ ಇಚ್ಛೆಯಂತೆ ಕೆಲಸ ಮಾಡಿದರೆ ಮಾತ್ರ ಈ ಭ್ರಷ್ಟ ಸ್ಫರ್ಧೆಯಲ್ಲಿ ಗೆಲ್ಲಬಹುದು. ಇತ್ತೀಚೆಗಂತೂ ಒಂದು ಕ್ಷೇತ್ರಕ್ಕೆ ಹಲವು ಹತ್ತು ಕೋಟಿಗಳಷ್ಟು ಹಣ ಚೆಲ್ಲಬೇಕಾಗಿದೆ. ದೊಡ್ಡ ಬಂಡವಾಳಶಾಹಿಗಳ ಬೆಂಬಲ ಹೊಂದಿದ್ದ ಕಾಂಗ್ರೆಸ್‌ನಂತಹ ಪಕ್ಷ, ಹಲವು ಬಾರಿ ರಾಜ್ಯದಲ್ಲಿ ಸರ್ಕಾರ ನಡೆಸಿ ಭ್ರಷ್ಟಾಚಾರಗಳ ಆರೋಪ ಹೊತ್ತಿರುವ ಜನತಾ ದಳದಿಂದ ಒಡೆದುಹೋದ ಹಲವು ಪ್ರಾದೇಶಿಕ ಪಕ್ಷಗಳೇ ಬಿಜೆಪಿ ಹರಿಸುವ ಹಣದ ಹೊಳೆಯನ್ನು ಎದುರಿಸಲು ಏದುಸಿರು ಬಿಡುತ್ತಿರುವಾಗ ರೈತ ಚಳವಳಿಯ ಅಭ್ಯರ್ಥಿಗಳ ಕತೆಯೇನು?

ಹೀಗೆ ಜಾತಿ, ಹಣದ ಬಲವನ್ನು ಗೆಲ್ಲುವುದಕ್ಕೆ ಒಂದೇ ಮಾರ್ಗ. ರೈತ ಪ್ರಜ್ಞೆಯ ಬೆಳವಣಿಗೆ. ಹಳ್ಳಿಹಳ್ಳಿಗಳ ಮನೆಮನಗಳಲ್ಲಿ ಈ ಪ್ರಜ್ಞೆ ಮೂಡುವುದು ಮಾತ್ರವಲ್ಲ ಅದೇ ಪ್ರಧಾನ ಮನಸ್ಥಿತಿಯಾಗಬೇಕು. ಮೇಲೆ ಹೇಳಿದಂತೆ ಅದು ಬಹಳ ಶ್ರಮ, ತಾಳ್ಮೆ ಬೇಡುವ ಕೆಲಸ. ರೈತ ಚಳವಳಿ ಬಹಳ ದೊಡ್ಡದಾಗಿ ಬೆಳೆದು ಮನೆಮನೆಗಳನ್ನೂ, ಮನೆಗಳ ಮಹಿಳೆಯರು, ಮುದುಕರು, ಮಕ್ಕಳನ್ನೂ ವ್ಯಾಪಿಸಿದಾಗ ಮಾತ್ರ ಇದು ಸಾಧ್ಯ.

ನಿಮಗೆ ಓಟು ಕೊಟ್ಟರೆ ಅದು ವೇಸ್ಟಾಗಿಬಿಡುತ್ತೆ ಎಂಬ ಅಂಶ, ರಾಜಕೀಯ ಪಕ್ಷ ವ್ಯವಸ್ಥೆಯ ಸಮಸ್ಯೆ, ರಾಷ್ಟ್ರೀಯ ವ್ಯಾಪ್ತಿಯ ಪಕ್ಷಗಳ ಪ್ರಾಬಲ್ಯ, ಇಂತಹ ವ್ಯವಸ್ಥೆಯಲ್ಲೂ ಚಳವಳಿಗಳು ಕೆಲವು ಪ್ರದೇಶಗಳಲ್ಲಿ ಯಶಸ್ಸು ಕಂಡದ್ದು ಹೇಗೆ? ಇಂದಿನ ಚುನಾವಣಾ ಪದ್ಧತಿಗೆ ಪರ್ಯಾಯ ವ್ಯವಸ್ಥೆ ಏನು? ಜಾತಿ, ಮತ, ಪಕ್ಷಗಳನ್ನು ಮೀರಿ ಚಳವಳಿಗಳು ಚುನಾವಣೆಗಳಲ್ಲಿ ಯಶಸ್ವಿಯಾಗುವ ಚುನಾವಣಾ ಪದ್ಧತಿಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ರೈತ ಹೋರಾಟಗಳ ಹಿನ್ನೆಲೆಯಲ್ಲಿ ಚಳವಳಿಗಳು ಮತ್ತು ಚುನಾವಣೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...