ಓಟು ಸಿಕ್ಕಷ್ಟು ಸೀಟು ಅಥವಾ ಗಳಿಸಿದ ಒಟ್ಟು ಓಟಿನ ಪ್ರಮಾಣಕ್ಕೆ ಅನುಗುಣವಾಗಿ ಸೀಟು ಎಂಬ proportional representation ಪದ್ಧತಿಯಲ್ಲಿ ಅಭ್ಯರ್ಥಿಗಳೇ ಇರುವುದಿಲ್ಲ. ಬದಲಾಗಿ ಪಕ್ಷಗಳೇ ಅಭ್ಯರ್ಥಿ. ವ್ಯಕ್ತಿಗಳ ಹೆಸರು ಬ್ಯಾಲಟ್ ಪೇಪರಿನಲ್ಲಿ ಕಾಣುವುದಿಲ್ಲ. ಪಕ್ಷದ ಹೆಸರು, ಗುರುತುಗಳು ಮಾತ್ರ ಇರುತ್ತವೆ. ಮತದಾರರು ತಮಗೆ ಒಳ್ಳೆಯದೆನಿಸಿದ ಪಕ್ಷಗಳನ್ನು ಆಯ್ಕೆ ಮಾಡುತ್ತಾರೆ. ಅದರಿಂದಾಗಿ ಚುನಾವಣೆಯಲ್ಲಿ ಪಕ್ಷದ ಧೋರಣೆ, ನೀತಿಗಳು, ಅದರ ಚುನಾವಣಾ ಪ್ರಣಾಳಿಕೆ, ಅದರಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಿಟ್ಟ ಕಾರ್ಯಕ್ರಮ, ಘೋಷಿತವಾದ ಯೋಜನೆ, ನೀಡಲಾಗುವ ಭರವಸೆಗಳಿಗೆ ಬಹಳ ಪ್ರಾಮುಖ್ಯತೆ ಬರುತ್ತದೆ. ಯಾವುದೇ ವ್ಯಕ್ತಿಗಳಿಗಲ್ಲ. ಎಣಿಕೆಯ ನಂತರ ಆಯಾ ಪಕ್ಷಗಳು ಪಡೆದ ಒಟ್ಟು ಓಟು ಎಷ್ಟು ಎಂದು ಲೆಕ್ಕಿಸಿ ಅದರ ಶೇಕಡಾ ಗಳಿಕೆಯಂತೆ ಪಕ್ಷಕ್ಕೆ ಸೀಟುಗಳನ್ನು ಹಂಚಲಾಗುತ್ತದೆ. ಉದಾಹರಣೆಗೆ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಎಂದರೆ ಅದರ 224 ಸ್ಥಾನಗಳನ್ನು ಇಡೀ ರಾಜ್ಯದಲ್ಲಿ ವಿವಿಧ ಪಕ್ಷಗಳು ಗಳಿಸಿದ ಮತಗಳಿಗೆ ಅನುಗುಣವಾಗಿ ಹಂಚಲಾಗುತ್ತದೆ.
ಆ ಮೂಲಕ ಚಲಾಯಿಸಲ್ಪಟ್ಟ ಪ್ರತಿ ಓಟಿಗೂ ಮಾನ್ಯತೆ ದೊರಕುವುದು ಈ ಪದ್ಧತಿಯ ವಿಶೇಷ.
ಪಕ್ಷಗಳಿಗೆ ಸ್ಥಾನ ಹಂಚಿಕೆ ಆಗುತ್ತದೆ ಸರಿ. ಆದರೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವಯ್ಯರು? ಚರ್ಚೆ, ಮಸೂದೆ, ಬಜೆಟ್‌ಗಳ ಮೇಲೆ ವಿಧಾನಸಭೆಯೊಳಗೆ ಮತದಾನ ಮಾಡುವರು ಯಾರು? ಯಾರಾದರೂ ವ್ಯಕ್ತಿಗಳೇ ಇರಬೇಕಲ್ಲ!
ಈ ಪದ್ಧತಿಯಲ್ಲಿ ಪ್ರತಿ ಪಕ್ಷವೂ ವಿಧಾನಸಭೆಯಲ್ಲಿ ಪಕ್ಷದ ಸ್ಥಾನಗಳಲ್ಲಿ ಕುಳಿತುಕೊಳ್ಳುವ ತನ್ನ ಸದಸ್ಯರ ಹೆಸರನ್ನು ಚುನಾವಣೆಗೆ ಮೊದಲೇ ಚುನಾವಣಾ ಆಯೋಗಕ್ಕೆ ನೀಡಬೇಕು ಮತ್ತು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಎಲ್ಲ ಮತದಾನ ಕೇಂದ್ರದ ಮುಂದೆ ವಿವಿಧ ಪಕ್ಷಗಳ ಪಟ್ಟಿಗಳನ್ನು ಪ್ರದರ್ಶಿಸಲಾಗುತ್ತದೆ.
ಪಕ್ಷವೊಂದು ಪಡೆದ ಮತ ಪ್ರಮಾಣಕ್ಕೆ ತಕ್ಕಂತೆ ಪಟ್ಟಿಯಲ್ಲಿ ನೀಡಲ್ಪಟ್ಟ ಆದ್ಯತೆ, ಕ್ರಮಸಂಖ್ಯೆಗಳಿಗೆ ಅನುಸಾರವಾಗಿ ವಿಧಾನಸಭಾ ಸದಸ್ಯರು ಆಯಾ ಪಕ್ಷವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಾರೆಂದು ಚುನಾವಣಾ ಆಯೋಗ ಘೋಷಿಸುತ್ತದೆ. ಅಂದರೆ ಒಂದು ಪಕ್ಷ ಶೇ.10ರಷ್ಟು ಮತಗಳನ್ನು ಗಳಿಸಿದೆ ಎಂದರೆ ಆ ಪಕ್ಷದ ಪಟ್ಟಿಯ ಮೊದಲ 22 ಜನರು ಕರ್ನಾಟಕ ವಿಧಾನಸಭೆಯಲ್ಲಿ ಸದಸ್ಯರಾಗುತ್ತಾರೆ. ಹಾಗಾಗಿ ಈ ಚುನಾವಣಾ ಪದ್ಧತಿಗೆ list system ಅಥವಾ ಪಟ್ಟಿ ಪದ್ಧತಿ ಎಂದೂ ಹೆಸರಿದೆ.
ಪಟ್ಟಿ ಪದ್ಧತಿಯ ಪ್ರಯೋಜನಗಳು
ಕ್ಷೇತ್ರ ಆಧಾರಿತ ಚುನಾವಣಾ ಪದ್ಧತಿಯಲ್ಲಿ ವಿಶೇಷ ತಜ್ಞರು- ಆರ್ಥಿಕ, ಇಂಜನಿಯರಿಂಗ್,
ವೈದ್ಯಕೀಯ, ಶಿಕ್ಷಣ ತಜ್ಞರು, ಇತರ ಮೇಧಾವಿಗಳು, ಸಾಮಾಜಿಕ ಸೇವೆಯಲ್ಲಿ ತೊಡಗಿರುವವರು ಗೆಲ್ಲುವುದು ಬಹಳ ಅಪರೂಪದ ಸಂಗತಿ. ಆದರೆ ಇಂತಹ ಪಟ್ಟಿಯಲ್ಲಿ ಅವರು ಸ್ಥಾನ ಪಡೆದು ವಿಧಾನಸಭಾ/ ಲೋಕಸಭಾ ಸದಸ್ಯರಾಗಿ, ಮಂತ್ರಿಗಳಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸುತ್ತದೆ.
ಚಳವಳಿಗಳು ಚುನಾವಣಾ ಯಶಸ್ಸು ಸಾಧಿಸಲು ಇಂತಹ ಪದ್ಧತಿ ಹೆಚ್ಚು ಅವಕಾಶ ಒದಗಿಸುತ್ತದೆ. ಚಳವಳಿಗಳ ಪ್ರಭಾವ ಒಂದು ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರೀಕೃತವಾಗದೆ ಇಡೀ ರಾಜ್ಯದಲ್ಲಿ ಹಂಚಿಹೋಗುವುದರಿಂದ ಇಡೀ ರಾಜ್ಯದಲ್ಲಿ ಈ ಚಳವಳಿಗಳು ಪಡೆದ ಒಟ್ಟು ಮತ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿನಿಧಿ ಸ್ಥಾನ ದಕ್ಕುತ್ತದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಒಂದು ಓಟು ನೀಡಿದರೂ ಅದು ಆ ಚಳವಳಿಯ ಮತಗಳಿಕೆ ಲೆಕ್ಕಕ್ಕೆ ಸೇರಲ್ಪಡುವುದರಿಂದ, ಮತದಾರರು ತಮಗೆ ರೈತ ಯಾ ದಲಿತ ಯಾ ಕಾರ್ಮಿಕ ಚಳವಳಿ ಪ್ರಭಾವ ಬೀರಿದ್ದರೂ, ಓಟು ಹಾಕಿದರೆ ನಮ್ಮ ಓಟು ವ್ಯರ್ಥವಾಗುತ್ತದೆ, ಆದ್ದರಿಂದ ಗೆಲ್ಲುವ ಸಾಧ್ಯತೆ ಇರುವ ಪಕ್ಷಗಳಿಗೆ ಓಟು ಹಾಕುತ್ತೇವೆ ಎಂಬ ಅನಿವಾರ್ಯತೆ ಇರುವುದಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಪದ್ಧತಿಯ ಮತ್ತೊಂದು ಮುಖ್ಯ ಅಂಶವೆಂದರೆ ಸದಸ್ಯರುಗಳು ಪಕ್ಷಾಂತರ ಮಾಡುವುದಕ್ಕೆ ಅವಕಾಶವೇ ಇಲ್ಲ. ಇಡೀ ಪಕ್ಷದ ನಿಲುವು ಬದಲಾಗಬಹುದೇ ಹೊರತು ಕೆಲ ಸದಸ್ಯರು ಕೂಡಿಕೊಂಡು ಸರ್ಕಾರವನ್ನು ಬೀಳಿಸುವುದಕ್ಕೆ ಅವಕಾಶ ಇಲ್ಲ. ಏಕೆಂದರೆ ಪಕ್ಷದ ತೀರ್ಮಾನಕ್ಕೆ ಎಲ್ಲ ಸದಸ್ಯರೂ ಬದ್ಧರಾಗಿರಬೇಕು. ಒಂದು ಪಕ್ಷದ ಸದಸ್ಯರಲ್ಲಿ ಭ್ರಷ್ಟಾಚಾರ ಅಥವಾ ಮತ್ತೇನಾದರೂ ಅನೈತಿಕತೆ ಕಂಡುಬಂದರೆ ಅಂತಹ ಸದಸ್ಯರನ್ನು ವಾಪಸ್ ಪಡೆದು ಬೇರೆ ಸದಸ್ಯರನ್ನು ಅವರ ಬದಲಿಗೆ ನೇಮಿಸಲು ಪಕ್ಷಗಳಿಗೆ ಅಧಿಕಾರವಿರುತ್ತದೆ. ಆದ್ದರಿಂದ ಶಾಸಕ, ಸಂಸದರ ವೈಯುಕ್ತಿಕ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲ. ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸಿ ಭ್ರಷ್ಟ ಶಾಸಕರು ಗೆದ್ದು ಬರಲೂ ಅವಕಾಶವಿಲ್ಲ.
ಈ ಚುನಾವಣಾ ಪದ್ಧತಿಯ ಪ್ರಕಾರ ಭಾರತದಲ್ಲಿ ಒಂದೆರಡು ಬಾರಿ ಬಿಟ್ಟರೆ ಯಾವಾಗಲೂ ಯಾರಿಗೂ ಬಹುಮತ ಸಿಕ್ಕುತ್ತಿರಲಿಲ್ಲ. ರಾಜ್ಯಗಳಲ್ಲಿ ಕೂಡಾ ಅಪರೂಪವೇ.
ಬಿಜೆಪಿ 2014ರಲ್ಲಿ ಗಳಿಸಿದ ಮತಗಳು ಕೇವಲ ಶೇ.30, ಎನ್‌ಡಿಎ ಕೂಟಕ್ಕೆ ಶೇ. 38. ಓಟಿಗೆ ತಕ್ಕಂತೆ ಸೀಟು ಪದ್ಧತಿಯ ಪ್ರಕಾರ ಬಿಜೆಪಿಗೆ 163, ಎನ್‌ಡಿಎಗೆ 207 ಮಾತ್ರ. ಬಹುಮತಕ್ಕೆ ಬೇಕಾದ 272ಕ್ಕಿಂತ ಬಹಳ ಕಡಿಮೆ ಸ್ಥಾನಗಳು. 2019ರಲ್ಲಿ ಇನ್ನೂ ಹೆಚ್ಚಿನ ಮತಗಳಿಕೆಯಾದರೂ (ಶೇ.45) ಬಹುಮತಕ್ಕೆ ಅದು ಸಾಕಾಗುವುದಿಲ್ಲ. ವಾಜಪೇಯಿ ಪ್ರಧಾನಮಂತ್ರಿಯಾಗಿ ಬಿಜೆಪಿ ಮೊದಲ ಸರ್ಕಾರ ರಚಿಸಿದಾಗ ಸಿಕ್ಕಿದ್ದು ಕೇವಲ ಶೇ.23.4 ಓಟುಗಳು. ಸ್ವಾತಂತ್ರ್ಯ ಹೋರಾಟದ ಬಿಸಿ ಇನ್ನೂ ಉಳಿದಿರುವಾಗಲೇ 1952ರ ಮೊದಲ ಚುನಾವಣೆಯಲ್ಲಿಯೇ ಕಾಂಗ್ರೆಸ್ ಗಳಿಸಿದ್ದು ಕೇವಲ ಶೇ.45 ಓಟುಗಳು. ವಾಜಪೇಯಿ ಸರ್ಕಾರವನ್ನು ಸೋಲಿಸಿ 2004ರ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗಳಿಸಿದ್ದ ಮತ ಕೇವಲ ಶೇ. 26.4. 2009ರ ಮರುಚುನಾಯಿತರಾಗಿ ಅಧಿಕಾರಕ್ಕೆ ಬಂದಾಗ ಶೇ.28.7.
ಹೀಗೆ ಕಾಲುಭಾಗಕ್ಕಿಂತ ಕಡಿಮೆ ಮತ ಗಳಿಸಿದರೂ, ಶೇ.75 ಭಾಗ ನಿಮ್ಮ ಪಕ್ಷ ನಮಗೆ ಬೇಕಿಲ್ಲ ಎಂದರೂ ಸರ್ಕಾರ ರಚಿಸಲು ಅವಕಾಶ ಕೊಡುತ್ತದೆ ಈಗಿನ ಪದ್ಧತಿ. ಇದನ್ನೇ ಹಿಂದಿನ ಸಂಚಿಕೆಯಲ್ಲಿ ಕೃತಕ ಬಹುಮತ ಸೃಷ್ಟಿ ಎಂದು ಹೇಳಿರುವುದು.
ಹೀಗೆ ರಾಷ್ಟ್ರಮಟ್ಟದ ದೊಡ್ಡ ಕಾರ್ಪೊರೆಟ್ ಪಕ್ಷಗಳಿಗೆ ಅವರ ನಿಜವಾದ ಸ್ಥಾನ ಎಲ್ಲಿ ಎಂದು ತೋರಿಸುವುದು ಮಾತ್ರವಲ್ಲ, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲೂ ಸಣ್ಣ ಮತ್ತು ಹೊಸ ಪಕ್ಷಗಳಿಗೆ ನ್ಯಾಯ ಒದಗಿಸುವುದು ಓಟಿಗೆ ತಕ್ಕ ಸೀಟು ಪದ್ಧತಿ.
ಪಟ್ಟಿ ಪದ್ಧತಿಯ ಬಗ್ಗೆ ಆಕ್ಷೇಪಗಳು
ಈ ಪದ್ಧತಿ ರಾಜಕೀಯ ಅಸ್ಥಿರತೆ ಉಂಟುಮಾಡುತ್ತದೆ. ಬಹುತೇಕವಾಗಿ ಯಾವ ಪಕ್ಷಕ್ಕೂ ಬಹುಮತ ಸಿಗುವುದೇ ಇಲ್ಲ. ಆದ್ದರಿಂದ ಮೈತ್ರಿ ಸರ್ಕಾರಗಳೇ ಸರ್ಕಾರ ನಡೆಸುವುದು ದೇಶದ ಹಿತಕ್ಕೆ ಹಾನಿಕರ ಎಂಬ ವಾದವನ್ನು ಆಳುವವರು ಹೂಡುತ್ತಾ ಬಂದಿದ್ದಾರೆ. ಆದರೆ ಅಸ್ಥಿರತೆ ಎಂದರೇನು, ಅಸ್ಥಿರತೆ ಯಾರಿಗೆ? ಕಾರ್ಪೊರೆಟ್ ಪಕ್ಷಗಳಿಗೆ ಮನಬಂದಂತೆ ಕಾರ್ಪೊರೆಟ್‌ಗಳ ಪರ ಸರ್ಕಾರ ನಡೆಸುತ್ತಾ ಜನರನ್ನು ಸಂಕಟಕ್ಕೆ ದೂಡುವ ಅವಕಾಶಕ್ಕೆ ಸ್ಥಿರತೆ ಎನ್ನಬೇಕೆ?
ಜನಪರ ಚಳವಳಿ ನಡೆಸಿ ಜನರ ಸಂಕಟಗಳಿಗೆ, ಪರಿಹಾರಕ್ಕಾಗಿ ಒತ್ತಾಯಿಸುವ ಚಳವಳಿಗಾರ ಪಕ್ಷಗಳಿಗೆ ಈ ಕಾರ್ಪೊರೆಟ್ ಅಡಿಯಾಳು ನೀತಿಗಳಿಗೆ ಮೂಗುದಾರ ಹಾಕುವ ಅವಕಾಶ ನೀಡಬಾರದೆನ್ನುವ ಈ ವಾದವನ್ನು ಒಪ್ಪಿಕೊಳ್ಳಬೇಕೆ?
1989ರ ನಂತರ ದೇಶದಲ್ಲಿ, ಹಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬಂದಾಗ ಪದೇಪದೇ ಈ ವಾದಗಳನ್ನು ಒಡ್ಡಲಾಯಿತು.
ಓಟಿಗೆ ತಕ್ಕಂತೆ ಸೀಟು ಪದ್ಧತಿಯ ಮೇಲಿನ ಮುಖ್ಯ ಆಕ್ಷೇಪಣೆಗಳಲ್ಲಿ ಮತ್ತೊಂದು, ಕ್ಷೇತ್ರಗಳ, ಪ್ರದೇಶಗಳ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆಂಬುದು. ಇದರಿಂದಾಗಿ ಪ್ರಾದೇಶಿಕ ಅಸಮತೋಲನ ಉಂಟಾಗುತ್ತದೆ ಎಂಬುದು. ಮತ್ತೊಂದು ಈ ಪದ್ಧತಿಯಲ್ಲಿ ಶಾಸಕರು, ಸಂಸದರು ಪಕ್ಷದ ಪ್ರಬಲ ನಾಯಕರ ಹಿಡಿತದಲ್ಲಿ ಸಿಲುಕಿಕೊಳ್ಳುತ್ತಾರೆ. ಅವರು ಏಳೆಂದರೆ ಏಳಬೇಕು, ಕೂರೆಂದರೆ ಕೂರಬೇಕು ಎಂಬ ಸ್ಥಿತಿ ಉಂಟಾಗುತ್ತದೆ. ಶಾಸಕರಿಗೂ ಜನತೆಗೂ ಸಂಪರ್ಕವೇ ತಪ್ಪಿಹೋಗುವಂತಾಗುತ್ತದೆ. ಭಾರತದಲ್ಲಿ ಅನೇಕ ಪಕ್ಷಗಳಲ್ಲಿನ ಪರಿಸ್ಥಿತಿ ನೋಡಿದಾಗ ಮತ್ತು ಹೈಕಮಾಂಡ್ ಸಂಸ್ಕೃತಿಯನ್ನು ಅವಲೋಕಿಸಿದಾಗ ಇಂತಹ ಅಪಾಯ ಹೆಚ್ಚು ಎಂಬುದು.
ಪಟ್ಟಿ ಪದ್ಧತಿಯ ಪರವಾಗಿರುವವರು ವಿಧಾನ ಸಭೆ, ಲೋಕಸಭೆಯಂತಹವು ಅವುಗಳಿಗೆ ಸಂವಿಧಾನ ವಿಧಿಸಿರುವ ಕರ್ತವ್ಯಗಳ ಹೊಣೆಯನ್ನು ತಿಳಿದಿರಬೇಕು. ಇಡೀ ರಾಜ್ಯದ ಜನತೆಗೆ ಮತ್ತು ರಾಜ್ಯದ ಅಭಿವೃದ್ಧಿಗೆ ಬೇಕಾದ ನೀತಿ ನಿರೂಪಣೆ, ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುವುದು, ಅವಶ್ಯ ಕಾನೂನುಗಳನ್ನು ಅಂಗೀಕರಿಸುವುದೇ ಹೊರತು ಒಂದು ಪ್ರದೇಶ, ಕ್ಷೇತ್ರದ ಅಭಿವೃದ್ಧಿಯಷ್ಟೇ ಅವರ ಮಾನದಂಡವಾಗಿರುವುದಿಲ್ಲ. ಈ ಸದನಗಳ ಸದಸ್ಯರು ಈ ಗುರಿಯನ್ನು ಸಾಧಿಸುವುದಕ್ಕೆ ಬೇಕಾದ ಅಧ್ಯಯನ, ಶಾಸಕಾಂಗಗಳ ಒಳಗೆ ಮತ್ತು ಹೊರಗೆ ಇವುಗಳ ಬಗ್ಗೆ ಚರ್ಚೆಗೆ ತಮ್ಮ ಸಮಯ ವಿನಿಯೋಗಿಸಬೇಕೇ ಹೊರತು ಕೇವಲ ಕೆಲವು ಕ್ಷೇತ್ರಗಳ, ಪ್ರದೇಶಗಳ ಅಭಿವೃದ್ಧಿಗಲ್ಲ. ಸೂಕ್ತ ನೀತಿ, ಯೋಜನೆಗಳನ್ನು ರೂಪಿಸಿದರೆ ಅಭಿವೃದ್ಧಿ ಜರುಗುತ್ತದೆ ಮತ್ತು ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕುತ್ತದೆ.
ತಮ್ಮತಮ್ಮ ಕ್ಷೇತ್ರಗಳಿಗೆ ಮಾತ್ರ ಗಮನ ನೀಡಿ ಅವಶ್ಯವಾದ ಅಧ್ಯಯನ, ವಿಚಾರವಿನಿಮಯಗಳಿಗೆ ಗಮನ ನೀಡದಿದ್ದರೆ ಕ್ಷೇತ್ರಗಳ, ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೂ ತೊಡಕಾಗುತ್ತದೆ. ರೂಪಿಸಿದ ನೀತಿ, ಯೋಜನೆಗಳ ಸಮರ್ಪಕ ಜಾರಿ, ಆ ಮೂಲಕ ಪ್ರದೇಶಗಳ ಅಭಿವೃದ್ಧಿಗೆ ಗಮನ ಕೊಡಬೇಕಾಗಿರುವುದು ಪಂಚಾಯತ್ ವ್ಯವಸ್ಥೆ ಮತ್ತು ನಗರಸಭೆಗಳು. ಶಾಸಕ, ಸಂಸದರುಗಳ ಕೈಯಲ್ಲಿ ಅಧಿಕಾರದ ಕೇಂದ್ರೀಕರಣದಿಂದ ಅಭಿವೃದ್ಧಿಯಾಗುವುದಿಲ್ಲ. ಗರಿಷ್ಠ ಮಟ್ಟದ ವಿಕೇಂದ್ರೀಕರಣವೇ ಅದಕ್ಕೆ ಉತ್ತಮ ವಿಧಾನ. ಗ್ರಾಮ ಪಂಚಾಯತ್‌ಗಳಿಗೆ ಅತಿ ಹೆಚ್ಚು ಅಧಿಕಾರ ಇರಬೇಕು ಎಂಬ ತಾತ್ವಿಕ ತಿಳಿವಳಿಕೆಯನ್ನು ಈ ವಿಧಾನ ಮುಂದಿಡುತ್ತದೆ.
ಸುಧಾರಿತ ಪಟ್ಟಿ ಪದ್ಧತಿ
ಪ್ರದೇಶಾಭಿವೃದ್ಧಿಯ ಸಮಸ್ಯೆಗೆ ಮಾತ್ರವಲ್ಲ ಪಕ್ಷದ ಕಮ್ಯಾಂಡ್‌ಗಳ ಹಿಡಿತಗಳಿಗೆ ಪರಿಹಾರವಾಗಿ ಕ್ಷೇತ್ರ ಕೇಂದ್ರಿತ ಪದ್ಧತಿ ಮತ್ತು ಪಟ್ಟಿ ಪದ್ಧತಿ ಎರಡರ ಸಂಗಮದ ಮೂಲಕ ರೂಪಿಸಿದ ಒಂದು ಸುಧಾರಿತ ಪದ್ಧತಿ ಇಂದು ವಿಶ್ವದ ಹಲವು ದೇಶಗಳಲ್ಲಿ ಪ್ರಚಲಿತವಾಗಿದೆ. ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರು, ಸಂಸದರು ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ. ಅದೇ ಸಮಯದಲ್ಲಿ ಇಡೀ ದೇಶ ಯಾ ರಾಜ್ಯದಲ್ಲಿ ಒಂದು ಪಕ್ಷ ಗಳಿಸಿದ ಮತಗಳ ಪ್ರಮಾಣಕ್ಕೆ ಅನುಗುಣವಾಗಿ ವಿಧಾನಸಭೆ ಯಾ ಲೋಕಸಭೆಯ ಸ್ಥಾನಗಳ ಒಂದು ಭಾಗವನ್ನು ಹಂಚಲಾಗುತ್ತದೆ. ಈಗ ನಮ್ಮ ನೆರೆಯ ನೇಪಾಳ, ಶ್ರೀಲಂಕಾ ದೇಶಗಳಲ್ಲಿ, ಯುರೋಪಿನ ಹಲವು ದೇಶಗಳಲ್ಲಿ, ಅಭಿವೃದ್ಧಿಶೀಲ ದೇಶಗಳಲ್ಲಿಯೂ ಈ ಸಂಗಮ ಪದ್ಧತಿ ಜಾರಿಯಲ್ಲಿದ್ದು, ವಿಶ್ವದಲ್ಲಿ ಈ ಪದ್ಧತಿಯೇ ಹೆಚ್ಚು ಪ್ರಚಲಿತವಾದ ಚುನಾವಣಾ ಪದ್ಧತಿ.
ಇಂದು ಮೀಸಲಾತಿ ಕ್ಷೇತ್ರಗಳಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಯಾವ ಅಭ್ಯರ್ಥಿ ಮೇಲ್ಜಾತಿಗಳ ಕೈಯ್ಯಾಳಾಗಿರುತ್ತಾರೋ ಅಂತಹ ದಲಿತ ಅಭ್ಯರ್ಥಿಯನ್ನು ಮಾತ್ರ ಮೀಸಲಾತಿ ಕ್ಷೇತ್ರಗಳ ದಲಿತೇತರರು ಗೆಲ್ಲಿಸುವುದು. ಆದರೆ ಓಟಿಗೆ ತಕ್ಕ ಸೀಟು ಪದ್ಧತಿ ಇಂತಹ ಅಸಂಬದ್ಧ ಪರಿಸ್ಥಿತಿಗೆ ಕೊನೆ ಹಾಡುತ್ತದೆ.
ಆದರೆ ಆಳುವವರು ತಮಗೆ ಅನಾಯಾಸವಾಗಿ ಕೃತಕ ಬಹುಮತವನ್ನು ಸೃಷ್ಟಿಸಿಕೊಡುವ ಕುದುರೆ ರೇಸ್ ಪದ್ಧತಿಯನ್ನು ಬಿಟ್ಟುಕೊಡಲು ತಯಾರಿಲ್ಲ. ಕಾಂಗ್ರೆಸ್ ದಶಕಗಟ್ಟಲೆ ನಿರಂತರವಾಗಿ ಈಗಿನ ಪದ್ಧತಿಯ ಪ್ರಕಾರ ಬಹುಮತ ಪಡೆಯುತ್ತಾ ಬರುವಾಗ, ತನಗೆ ಸಿಕ್ಕ ಒಟ್ಟು ಮತಗಳಿಗೆ ತಕ್ಕಷ್ಟು ಸೀಟು ಸಿಗದ ಸಂದರ್ಭದಲ್ಲಿ, ಬಿಜೆಪಿ ಈ ಪದ್ಧತಿಯನ್ನು ಬದಲಾಯಿಸಿ ಓಟಿಗೆ ತಕ್ಕಂತೆ ಸೀಟು ಪದ್ಧತಿ ಜಾರಿಗೆ ತನ್ನಿ ಎಂದು ಒತ್ತಾಯಿಸುತ್ತಿತ್ತು. ಆದರೆ ಈಗ ಬಿಜೆಪಿಗೇ ಈ ಪದ್ಧತಿಯ ಅತಿ ಹೆಚ್ಚು ಲಾಭ ದೊರಕಿಸುತ್ತಿರುವಾಗ ಅದರ ಸೊಲ್ಲೇ ಇಲ್ಲ. ಅವರೇಕೆ ಬದಲಾಯಿಸುವ ಯೋಚನೆ ಮಾಡುತ್ತಾರೆ?
ಜಾತಿವ್ಯವಸ್ಥೆಯಲ್ಲಿ ಪಟ್ಟಿ ಪದ್ಧತಿ
ಭಾರತದ ಜಾತಿಪದ್ಧತಿಯ ಸಮಾಜ ರಚನೆಯ ಸ್ಥಿತಿಯಲ್ಲಿ ಓಟಿಗೆ ತಕ್ಕಂತೆ ಸೀಟು ಪದ್ಧತಿ ಹಾನಿಕರ ಎಂಬ ಒಂದು ವಾದವಿದೆ. ಈ ಪದ್ಧತಿಯಲ್ಲಿ ಆಯಾ ಜಾತಿಯವರು ಒಟ್ಟಾಗಿ ತಮ್ಮ ಜಾತಿಯವರಿಗೇ ಓಟು ಹಾಕಿಕೊಳ್ಳುವ ಅನುಕೂಲ ಇರುವುದರಿಂದ ಜಾತಿವಾರು ಪಕ್ಷಗಳು ಹುಟ್ಟುವುದಕ್ಕೆ ಉತ್ತೇಜನ ದೊರಕುತ್ತದೆ, ಜಾತಿವಾದ ಹೆಚ್ಚಾಗುತ್ತದೆ ಎನ್ನುವವರ ವಾದ. ಆದರೆ ಈಗೇನು ಜಾತಿವಾದ ಕಡಿಮೆಯಾಗಿದೆಯೇ? ನಾವು ಭಾರತ ವ್ಯಾಪಿ, ಎಲ್ಲ ಜಾತಿ, ಧರ್ಮಗಳನ್ನು ಪ್ರತಿನಿಧಿಸುವವರು ಎಂಬ ಕಾಂಗ್ರೆಸ್ಸೂ, ಹಿಂದೂ ನಾವೆಲ್ಲ ಒಂದು ಎನ್ನುವ ಬಿಜೆಪಿಯೂ ಪ್ರತಿ ಚುನಾವಣೆಯಲ್ಲಿ, ಪ್ರತಿ ಕ್ಷೇತ್ರದಲ್ಲಿಯೂ ಧರ್ಮ, ಜಾತಿ ವಿಭಜನೆಯ ಮೂಲಕವೇ ಮತ ಪಡೆಯುತ್ತಿರುವುದು. ಇನ್ನು ಹಲವು ಪ್ರಾದೇಶಿಕ ಪಕ್ಷಗಳು ಜಾತಿಗೆ ಸೀಮಿತವಾಗಿಬಿಟ್ಟಿವೆ.
ಕ್ಷೇತ್ರ ಕೇಂದ್ರಿತ ಹಾಗೂ ಕುದುರೆ ರೇಸ್ ಚುನಾವಣಾ ಪದ್ಧತಿಯಲ್ಲಿ ಆಯಾ ಪ್ರದೇಶದ ಪ್ರಬಲ ಜಾತಿಗಳವರಿಗೇ ಹಣ ಚೆಲ್ಲಿ, ಇತರ ಜಾತಿಗಳವರ ದುರ್ಬಲ ಸ್ಥಿತಿಯನ್ನು, ಅವರ ಕಡಿಮೆ ಜನಸಂಖ್ಯೆಯನ್ನು ಬಳಸಿಕೊಂಡು ಗೆಲ್ಲುವ ಅವಕಾಶ ಹೆಚ್ಚು. ಇದು ಪ್ರತಿ ಚುನಾವಣೆಯ ಸಂದರ್ಭದಲ್ಲೂ ಮತ್ತೆಮತ್ತೆ ಸಾಬೀತಾಗುತ್ತಿದೆ. ಆದರೆ ಓಟಿಗೆ ತಕ್ಕ ಸೀಟು ಪದ್ಧತಿಯಲ್ಲಿ ದುರ್ಬಲ ಸಮುದಾಯಗಳೂ ವಿಧಾನಸಭೆ, ಲೋಕಸಭೆಗಳಲ್ಲಿ ಒಂದಿಷ್ಟು ಪ್ರಾತಿನಿಧ್ಯ ಪಡೆಯುವ ಅವಕಾಶ ದಕ್ಕುತ್ತದೆ. ಅಷ್ಟೇ ಅಲ್ಲ ಒಂದು ಜಾತಿಗೆ ಸೀಮಿತವಾದ ಪಕ್ಷಗಳೂ ತನಗೆ ಮತ ನೀಡುವ ಸಮುದಾಯದ ಸಮಸ್ಯೆಗಳನ್ನು, ಯಾವ ರೀತಿ ಪರಿಹರಿಸುತ್ತದೆ ಎಂಬುದನ್ನು ಆಯಾ ಜನ ಸಮುದಾಯದ ಮುಂದಿಡಬೇಕಾಗುತ್ತದೆ. ಅಂತಹ ನೀತಿ, ಯೋಜನೆಗಳ ಮೂಲಕ ಆಯಾ ಸಮುದಾಯವನ್ನು ಒಲಿಸಿಕೊಳ್ಳುವುದು ಮುಖ್ಯವಾಗುವುದರಿಂದ ಆಯಾ ಸಮುಯದಾಯದಲ್ಲಿ ನೀತಿ, ಧೋರಣೆಗಳ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಇದು ಒಟ್ಟಾರೆ ಸರ್ಕಾರಗಳ ನೀತಿ, ಧೋರಣೆಗಳನ್ನು ರೂಪಿಸುವಲ್ಲಿ ಸಹಾಯಕವಾಗುತ್ತದೆ. ತಮ್ಮ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗದವರೂ ಇಂತಹುದೇ ಸಮಸ್ಯೆಗಳಿಂದ ಬಾಧಿತರಾದ ಇತರ ಸಮುದಾಯಗಳೊಡನೆ ಸೇರಬೇಕಾಗುತ್ತದೆ. ಇದು ಜನರ ರಾಜಕೀಯ ಪ್ರಜ್ಞೆ ಬೆಳೆಯಲು ಅವಕಾಶವಾಗುತ್ತದೆ.
ಒಟ್ಟಿನಲ್ಲಿ ಪಟ್ಟಿ ಅಥವಾ ಓಟಿಗೆ ತಕ್ಕಂತೆ ಸೀಟು ಪದ್ಧತಿ ಜನರ ಮತ ಯಾ ಅಭಿಪ್ರಾಯವನ್ನು ಪ್ರತಿನಿಧಿಸಲು ಅತ್ಯಂತ ಸೂಕ್ತ. ದೇಶದ ಪ್ರಜಾಪ್ರಭುತ್ವ ಹೆಚ್ಚು ಪ್ರಜಾಸತ್ತಾತ್ಮಕವಾಗುವುದಕ್ಕೆ ಇದು ಅವಕಾಶ ಕೊಡುತ್ತದೆ. ಅಂದ ಮಾತ್ರಕ್ಕೆ ಚುನಾವಣಾ ಪದ್ಧತಿಯ ಬದಲಾವಣೆ ಸಮಾಜದಲ್ಲಿ ಮೂಲಭೂತ ಬದಲಾವಣೆಯನ್ನು ಉಂಟು ಮಾಡುತ್ತದೆ ಎಂಬ ಭ್ರಮೆ ಇಟ್ಟುಕೊಳ್ಳಬಾರದು. ಪ್ರಜಾಪ್ರಭುತ್ವವನ್ನು ವಿರೂಪಗೊಳಿಸಿರುವ, ವಿರೂಪಗೊಳಿಸುತ್ತಿರುವ ಹಲವು ಅಂಶಗಳಲ್ಲಿ ಚುನಾವಣಾ ಪದ್ಧತಿ ಎಂಬುದು ಒಂದು ಅಂಶ ಮಾತ್ರ ಎಂಬುದನ್ನು ಮರೆಯಬಾರದು.
ಪಟ್ಟಿ ಪದ್ಧತಿಯೊಂದಿಗೆ ಇನ್ನೂ ಕೆಲವು ಚುನಾವಣಾ ಪದ್ಧತಿಗಳನ್ನು ವಿಶ್ವದ ಕೆಲ ದೇಶಗಳು ಅಳವಡಿಸಿಕೊಂಡಿವೆ. run off ಪದ್ಧತಿ, right to recall ಪದ್ಧತಿ. ಒಂದು ಕ್ಷೇತ್ರದಲ್ಲಿ ಹಲವು ಅಭ್ಯರ್ಥಿಗಳು ನಿಂತು ಯಾರಿಗೂ ಶೇ.50ರಷ್ಟು ಮತಗಳು ದೊರಕದ ಪರಿಸ್ಥಿತಿಯಲ್ಲಿ ಹೆಚ್ಚು ಮತ ಗಳಿಸಿದ ಮೊದಲ ಎರಡು ಅಭ್ಯರ್ಥಿಗಳ ನಡುವೆ ಮತ್ತೆ ಚುನಾವಣೆ ನಡೆಯುವುದು, ಅವರಲ್ಲಿ ಒಬ್ಬರು ಶೇ.50ಕ್ಕಿಂತ ಹೆಚ್ಚು ಮತ ಗಳಿಸುವ ಮೂಲಕ ಕ್ಷೇತ್ರವನ್ನು ಪ್ರತಿನಿಧಿಸಲು ಹೆಚ್ಚು ಅರ್ಹರಾಗುತ್ತಾರೆ ಎಂಬುದು run off ಪದ್ಧತಿ. ಇದು ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ಇರುವ ಕಡೆ ಹೆಚ್ಚು ಪ್ರಚಲಿತವಾಗಿದೆ. ಆದರೂ ಕ್ಷೇತ್ರ ಕೇಂದ್ರಿತ ಪ್ರತಿನಿಧಿಗಳ ಚುನಾವಣೆ ಇರುವ ಕೆಲ ದೇಶಗಳಲ್ಲಿ ವಿಧಾನಸಭಾ ಯಾ ಲೋಕಸಭಾ ಸದಸ್ಯರ ಚುನಾವಣೆಗಳಿಗೂ ಅನ್ವಯಗೊಳಿಸಲಾಗಿದೆ.
Right to recall ಅಥವಾ ವಾಪಸ್ ಕರೆಸಿಕೊಳ್ಳುವ ಪದ್ಧತಿ ಎಂದರೆ ಒಬ್ಬ ಚುನಾಯಿತ ಪ್ರತಿನಿಧಿ ಭ್ರಷ್ಟನಾದರೆ, ತಾನು ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೇ ಹೋದರೆ ಆಯಾ ಕ್ಷೇತ್ರದ ಜನತೆ ಚುನಾವಣಾ ಆಯೋಗಕ್ಕೆ ತಮ್ಮ ಪ್ರತಿನಿಧಿಯನ್ನು ವಾಪಸ್ ಕರೆಸಿಕೊಳ್ಳಬಯಸುತ್ತೇವೆ ಎಂದು ಅರ್ಜಿ ಸಲ್ಲಿಸುವುದು. ಚುನಾವಣಾ ಆಯೋಗ ಸಂಬಂಧಿಸಿದ ಕಾನೂನುಗಳು ನಿರ್ದೇಶಿಸಿದ ಸಂಖ್ಯೆಯ ಜನರು ಈ ಅರ್ಜಿ ಸಲ್ಲಿಸಿದ್ದಾರೆಯೇ ಎಂದು ಪರಿಶೀಲಿಸಿ ಆ ಕ್ಷೇತ್ರದಲ್ಲಿ ಮತ್ತೆ ಚುನಾವಣೆ ನಡೆಸುವುದು. ಪಟ್ಟಿ ಪದ್ಧತಿಯ ಜೊತೆಗೆ ಈ ಪದ್ಧತಿ ಚುನಾವಣಾ ಭ್ರಷ್ಟಾಚಾರವನ್ನು, ಪ್ರತಿನಿಧಿಗಳ ಹಾಗೂ ಪಕ್ಷಗಳ ಬೇಜವಾಬ್ದಾರಿ ವರ್ತನೆಯನ್ನು ತಡೆಯಲು ಹೆಚ್ಚು ಸಹಾಯಕ.
ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಲು, ಜನಪರ ಚಳವಳಿಗಳು, ದುರ್ಬಲ ಸಮುದಾಯಗಳು ಹೆಚ್ಚು ಪ್ರಾತಿನಿಧ್ಯ ಪಡೆಯಲು ಪ್ರಯೋಜನಕಾರಿಯಾದ ಓಟಿಗೆ ತಕ್ಕಂತೆ ಸೀಟು ಅಥವಾ ಪಟ್ಟಿ ಪದ್ಧತಿ, ವಾಪಸ್ ಕರೆಸಿಕೊಳ್ಳುವ ಪದ್ಧತಿಗಾಗಿ ಕಮ್ಯುನಿಸ್ಟ್ ಪಕ್ಷಗಳು, ಸಮಾಜವಾದಿ ಪಕ್ಷಗಳು ಒತ್ತಾಯಿಸುತ್ತಾ ಬಂದಿವೆ. ಆದರೆ ಆಳುವವರಿಗೆ ಮುಖ್ಯವಾಗಿ ಕಾರ್ಪೊರೆಟ್ ಅಡಿಯಾಳು ಪಕ್ಷಗಳಿಗೆ ಬಾಧಕವಾಗುವಂತಹ ಇಂತಹ ಮುಖ್ಯ ಬದಲಾವಣೆಗಳು ಬರಬೇಕಾದರೆ ಒಂದು ಬೃಹತ್ ಜನ ಚಳವಳಿಯಿಂದ ಮಾತ್ರ ಸಾಧ್ಯ. ಅದ್ದರಿಂದ ಯಾವುದೇ ಚಳವಳಿ ತನ್ನೆಲ್ಲಾ ಒತ್ತಾಯಗಳು, ಹೋರಾಟಗಳ ಜೊತೆಗೆ ಈ ಮುಖ್ಯ ಒತ್ತಾಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದು ಅಗತ್ಯ.
ಇಂದು ಪ್ರಜಾಪ್ರಭುತ್ವವನ್ನೇ ನಾಶ ಮಾಡುವಂತಹ ಪ್ರವೃತ್ತಿಗಳು ಮೇರೆ ಮೀರುತ್ತಿರುವಾಗ ಈ ಸುಧಾರಣೆಗಳ ಬಗ್ಗೆ ಜನರನ್ನು ಅಣಿನೆರಸುವುದು ಅಗತ್ಯವಾಗಿದೆ.

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ.ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕೃತಕ ಬಹುಮತವನ್ನು ಸೃಷ್ಟಿ ಮಾಡುವ ಚುನಾವಣಾ ಪದ್ಧತಿ