Homeಮುಖಪುಟಆರೋಪಿಯ ಜೈವಿಕ ವಿವರ ಸಂಗ್ರಹಿಸುವ ಮಸೂದೆ ಮಂಡಿಸಿದ ಕೇಂದ್ರ; ಸಂವಿಧಾನ ಉಲ್ಲಂಘನೆ ಎಂದ ಪ್ರತಿಪಕ್ಷಗಳು

ಆರೋಪಿಯ ಜೈವಿಕ ವಿವರ ಸಂಗ್ರಹಿಸುವ ಮಸೂದೆ ಮಂಡಿಸಿದ ಕೇಂದ್ರ; ಸಂವಿಧಾನ ಉಲ್ಲಂಘನೆ ಎಂದ ಪ್ರತಿಪಕ್ಷಗಳು

- Advertisement -
- Advertisement -

ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ, 2022 ಪರಿಚಯಿಸಿದೆ. ಈ ಮಸೂದೆ ಸಂವಿಧಾನದ ಎಲ್ಲೆಗಳನ್ನು ಮೀರಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಅಪರಾಧಿ, ಬಂಧಿತ ಅಥವಾ ಬಂಧನಕ್ಕೊಳಗಾದವರ ಬೆರಳಚ್ಚುಗಳು, ಹೆಜ್ಜೆಗುರುತುಗಳು, ತಾಳೆ ಗುರುತು, ಫೋಟೋಗಳು, ಕಣ್ಣಿನ ಸ್ಕ್ಯಾನ್‌, ದೈಹಿಕ ಮತ್ತು ಜೈವಿಕ ಮಾದರಿಗಳು, ವರ್ತನೆಯ ಗುಣಲಕ್ಷಣಗಳು, ಸಹಿ ಮತ್ತು ಕೈಬರಹ ಸೇರಿದಂತೆ ಹಲವು ಸಂಗತಿಗಳ ‘ಅಳತೆಗಳನ್ನು’ (measurements) ಸಂಗ್ರಹಿಸಿಕೊಳ್ಳಲು ಪೊಲೀಸರಿಗೆ ಅಧಿಕಾರವನ್ನು ಈ ಮಸೂದೆ ನೀಡುತ್ತಿದೆ.

ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ಪಟ್ಟಿ ಮಾಡಲಾದ ಈ ಮಸೂದೆಯನ್ನು ಅಂತಿಮವಾಗಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಮಂಡಿಸಿದ್ದಾರೆ.

ಸ್ವಯಂ ದೋಷಾರೋಪಣೆಗೆ ಸಂಬಂಧಿಸಿದಂತೆ ಸಂವಿಧಾನದ ವಿಧಿ 20(3), ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆಗೆ ಸಂಬಂಧಿಸಿದ 21ನೇ ವಿಧಿ ಮತ್ತು ಸುಪ್ರೀಂ ಕೋರ್ಟ್‌ನಿಂದ ವಿಧಿಸಲ್ಪಟ್ಟ ಸುರಕ್ಷತೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳಿಗೆ ವಿರುದ್ಧವಾಗಿ ಈ ಮಸೂದೆ ಇದೆ ಎಂದು ವಿರೋಧ ಪಕ್ಷದ ಸಂಸದರು ಧ್ವನಿ ಎತ್ತಿದ್ದಾರೆ.

ಅಸ್ತಿತ್ವದಲ್ಲಿರುವ ಕಾನೂನಿನ ವ್ಯಾಪ್ತಿಯನ್ನು ವಿಸ್ತರಿಸಲು ಈ ಮಸೂದೆ ಪ್ರಯತ್ನಿಸುತ್ತದೆ. ಕೈದಿಗಳ ಗುರುತಿಸುವಿಕೆ ಕಾಯಿದೆ, 1920ರ ಅಡಿಯಲ್ಲಿ ಕೇವಲ ಬೆರಳಿನ ಗುರುತು, ಹೆಜ್ಜೆ ಗುರುತು ಇತ್ಯಾದಿಗಳ ‘ಅಳತೆಗಳನ್ನು’ ಪಡೆದುಕೊಳ್ಳಲು ಅವಕಾಶವಿದೆ. ಆದರೆ ಇವುಗಳನ್ನು ತೆಗೆದುಕೊಳ್ಳಬೇಕಾದರೆ ಕನಿಷ್ಠ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಆರೋಪಿ ಒಳಪಟ್ಟಿರಬೇಕು.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕಾಗಿ ಅಥವಾ ಏಳು ವರ್ಷಗಳ ಕನಿಷ್ಠ ಶಿಕ್ಷೆಯನ್ನು ಹೊಂದಿರುವ ಅಪರಾಧಕ್ಕಾಗಿ ಆರೋಪಿಯನ್ನು ಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ, “ಜೈವಿಕ ಮಾದರಿಗಳಿಗೆ” ಕಡ್ಡಾಯ ಒಪ್ಪಿಗೆಯ ರೂಪದಲ್ಲಿ ಮಾತ್ರ ಕಾನೂನಿನಲ್ಲಿ ವಿನಾಯಿತಿ ನೀಡಲಾಗಿದೆ.

ಮಸೂದೆಯು ಪೊಲೀಸ್ ಠಾಣೆಗಳ ಉಸ್ತುವಾರಿ ಅಥವಾ ಹೆಡ್ ಕಾನ್‌ಸ್ಟೇಬಲ್‌ ಶ್ರೇಣಿಗಿಂತ ಕೆಳಗಿಲ್ಲದ ಅಧಿಕಾರಿಗಳಿಗೆ “ಮೆಜರ್‌ಮೆಂಟ್ಸ್‌‌” ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. ತೆಗೆದುಕೊಂಡ ಅಳತೆಗಳ ದಾಖಲೆಗಳನ್ನು ಸಂಗ್ರಹಣೆಯ ದಿನಾಂಕದಿಂದ 75 ವರ್ಷಗಳವರೆಗೆ ಉಳಿಸಿಕೊಳ್ಳಲಾಗುತ್ತದೆ.

ಪ್ರಸ್ತುತ ಕಾನೂನು ಠಾಣೆಗಳ ಉಸ್ತುವಾರಿ ಅಧಿಕಾರಿಗಳು, ತನಿಖೆ ನಡೆಸುವವರು ಅಥವಾ ಸಬ್-ಇನ್ಸ್‌ಪೆಕ್ಟರ್ ಶ್ರೇಣಿಗಿಂತ ಕಡಿಮೆಯಿಲ್ಲದ ಇತರರನ್ನು ಒಳಗೊಂಡಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ರ ವಿಭಾಗ 53 ಅಥವಾ ವಿಭಾಗ 53Aರ ಪ್ರಕಾರ “ಅಳತೆಗಳು” ಎಂಬ ಪದವು- ಬೆರಳಿನ ಗುರುತು, ಪಾದ-ಮುದ್ರಿತ ಗುರುತು, ಛಾಯಾಚಿತ್ರಗಳು, ಕಣ್ಣಿನ ಗುರುತು, ಭೌತಿಕ, ಜೈವಿಕ ಮಾದರಿಗಳು ಮತ್ತು ಅವುಗಳ ವಿಶ್ಲೇಷಣೆ, ಸಹಿಗಳು, ಕೈಬರಹ ಅಥವಾ ಉಲ್ಲೇಖಿಸಲಾದ ಯಾವುದೇ ಇತರ ಪರೀಕ್ಷೆಯನ್ನು ಸೂಚಿಸುತ್ತದೆ.

ವಿರೋಧ ಪಕ್ಷದ ನಾಯಕತ್ವ ವಹಿಸಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಮಸೂದೆಯು ಸಂವಿಧಾನದ 20(3) ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ. ಸದನದ ಶಾಸಕಾಂಗ ವ್ಯಾಪ್ತಿಯನ್ನು ಮೀರಿದೆ ಎಂದು ದೂರಿದ್ದಾರೆ.

ಮಸೂದೆಯ ಷರತ್ತು 2 (i) (b) ನಲ್ಲಿರುವ ‘ಜೈವಿಕ ಮಾದರಿಗಳು ಮತ್ತು ಅವುಗಳ ವಿಶ್ಲೇಷಣೆ’ ಎಂಬ ಪದಗಳು ನಾರ್ಕೋ ವಿಶ್ಲೇಷಣೆ ಮತ್ತು ಬ್ರೈನ್ ಮ್ಯಾಪಿಂಗ್‌ಗೆ ವಿಸ್ತರಿಸಬಹುದು. ಅದನ್ನು ಬಲವಂತವಾಗಿ ಮಾಡಿದಾಗ ಸಂವಿಧಾನದ 20 (3)ನೇ ವಿಧಿಯನ್ನು ಉಲ್ಲಂಘಿಸಿದಂತಾಗುತ್ತದೆ” ಎಂದು ವಿರೋಧಿಸಿದರು.

ಸಂಸದ ಅಧೀರ್ ರಂಜನ್ ಚೌಧರಿ ಅವರು ಮಸೂದೆಯನ್ನು ಕಟುವಾಗಿ ವಿರೋಧಿಸಿದರು. “ಪ್ರಸ್ತುತ ಮಸೂದೆಯು…ವಿಚಾರಣೆಯಲ್ಲಿರುವ ಅಥವಾ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳ ಅಳತೆಗಳನ್ನು ತೆಗೆದುಕೊಳ್ಳಲು ಪೋಲೀಸ್ ಮತ್ತು ನ್ಯಾಯಾಲಯಕ್ಕೆ ಅಧಿಕಾರ ನೀಡಲು ಬಯಸುತ್ತದೆ” ಎಂದು ಟೀಕಿಸಿದ್ದಾರೆ.

ಆರ್‌ಎಸ್‌ಪಿ ಸದಸ್ಯ ಎನ್‌ಕೆ ಪ್ರೇಮಚಂದ್ರನ್ ಅವರು ವಾಗ್ದಾಳಿ ನಡೆಸಿದ್ದು, “ಇದು ಕಠಿಣ ಕಾನೂನು ಹಾಗೂ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆ” ಎಂದು ಬಣ್ಣಿಸಿದರು. “ಯಾವುದೇ ನಿಜವಾದ ಬೇಡಿಕೆಗಾಗಿ ನಾಗರಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಿದಾಗ ನನ್ನನ್ನು ಬಂಧಿಸಿದರೆ ಮತ್ತು ನನ್ನ ವಿರುದ್ಧ ಎಫ್‌ಐಆರ್ ಅನ್ನು ದಾಖಲಿಸಲು ಮುಂದಾದರೆ, ನಂತರ ಡಿಎನ್‌ಎ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದು ಏನು? ಇದು ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಈ ಮಸೂದೆಯ ಉದ್ದೇಶವೇನು?” ಎಂದು ಕೇಳಿದರು.

ಟಿಎಂಸಿ ಸಂಸದರಾದ ಸೌಗತಾ ರೇ ಮಾತನಾಡಿ, “ಜೈವಿಕ ಮಾದರಿಗಳನ್ನು ತೆಗೆದುಕೊಳ್ಳಲು, ಐರಿಸ್ ಸ್ಕ್ಯಾನ್ ತೆಗೆದುಕೊಳ್ಳಲು ಅವಕಾಶ ನೀಡುವ, ನಾರ್ಕೋ ವಿಶ್ಲೇಷಣೆಗೆ ಅನುಮತಿ ನೀಡುವ ಈ ಕಾನೂನು ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ” ಎಂದು ಪ್ರತಿಪಾದಿಸಿದರು. “ಕೇಂದ್ರ ಗೃಹ ಸಚಿವರು ಸದನಕ್ಕೆ ಬಂದು ವಿಧೇಯಕದ ನಿಬಂಧನೆಗಳನ್ನು ವಿವರಿಸಬೇಕು” ಎಂದು ಮನವಿ ಮಾಡಿದರು.

ಪ್ರತಿಪಕ್ಷಗಳ ಆತಂಕವನ್ನು ನಿವಾರಿಸಲು ಪ್ರಯತ್ನಿಸುತ್ತಿರುವ ಸಚಿವ ಅಜಯ್‌ ಮಿಶ್ರಾ, “ಈಗಿರುವ ಕಾನೂನು 102 ವರ್ಷಗಳಷ್ಟು ಹಳೆಯದಾಗಿದೆ. ಬೆರಳಚ್ಚು ಮತ್ತು ಹೆಜ್ಜೆಗುರುತುಗಳನ್ನು ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಿದೆ. ಈ ಎಲ್ಲಾ ವರ್ಷಗಳಲ್ಲಿ ಜಗತ್ತಿನಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ತಂತ್ರಜ್ಞಾನವು ಅಪ್‌ಗ್ರೇಡ್ ಆಗಿದೆ. ವೈಜ್ಞಾನಿಕ ಪ್ರಕ್ರಿಯೆಗಳು ಹೆಚ್ಚಿವೆ. ಅಪರಾಧಗಳ ಪ್ರವೃತ್ತಿಯೂ ಹೆಚ್ಚಾಗಿದೆ. ಹೀಗಾಗಿ ಪ್ರಸ್ತುತ ಕಾನೂನಿನ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿದೆ” ಎಂದು ಸಮರ್ಥಿಸಿದರು.


ಇದನ್ನೂ ಓದಿರಿ: ಪರಿಶಿಷ್ಟರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದರೆ ಶಿಕ್ಷೆ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮೂಲಬೂತ ಹಕ್ಕುಗಳನ್ನು ಕಸಿಯುವ ಈ ಮಸೂದೆಯನ್ನು ಒಕ್ಕೂಟ ಸರ್ಕಾರವು ಕೂಡಲೇ ವಾಪಸು ಪಡೆಯಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...