Homeಕರ್ನಾಟಕಪರಿಶಿಷ್ಟರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದರೆ ಶಿಕ್ಷೆ ಏನು?

ಪರಿಶಿಷ್ಟರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದರೆ ಶಿಕ್ಷೆ ಏನು?

ರಾಜ್ಯ ಸರ್ಕಾರದ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರ ಮೇಲೂ ನಕಲಿ ಜಾತಿ ಪ್ರಮಾಣ ಪತ್ರದ ಆರೋಪವಿದೆ.

- Advertisement -
- Advertisement -

ಮಾಜಿ ಸಚಿವ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿ ಎಂ.ಆರ್‌.ಚೇತನ ಅವರು ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ.

ಎಂ.ಪಿ.ರೇಣುಕಾಚಾರ್ಯ ಲಿಂಗಾಯತರು. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಕುಂದೂರು ಶಾಲೆಯಲ್ಲಿ ಅವರು ಓದುತ್ತಿದ್ದಾಗ ಪಡೆದಿರುವ ಶಾಲಾ ದಾಖಲೆಗಳಲ್ಲೂ ಜಾತಿ ಕಲಂನಲ್ಲಿ ‘ಲಿಂಗಾಯತ’ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಆದರೆ ಅವರ ಪುತ್ರಿ ಎಂ.ಆರ್‌.ಚೇತನ ಬೇಡ ಜಂಗಮ ಜಾತಿ ಎಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು 2012ರ ನ.17ರಂದು ಬೆಂಗಳೂರಿನ ಉತ್ತರ ತಾಲ್ಲೂಕು ತಹಸೀಲ್ದಾರ್‌ ಅವರಿಂದ ಪಡೆದಿದ್ದಾರೆ. ಅದನ್ನು ಜಿಲ್ಲಾ ಅಧಿಕಾರಿಗಳು ಸರಿ ಇದೆಯೇ ಎಂದು ಪರಿಶೀಲನೆಯನ್ನೂ ನಡೆಸಿಲ್ಲ ಎಂದು ‘ವಿಜಯ ಕರ್ನಾಟಕ’ ವರದಿ ಮಾಡಿದೆ.

ದಲಿತರ ಹೆಸರಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಸವರ್ಣಿಯರು ಪಡೆದು ಶೋಷಿತ ಸಮುದಾಯವನ್ನು ಅವಕಾಶಗಳಿಂದ ವಂಚಿಸುವುದು ಹೊಸ ಚರ್ಚೆಯೇನಲ್ಲ. ಆದರೆ ಜನಪ್ರತಿನಿಧಿಗಳಾದವರ ಹೆಸರುಗಳೇ ಇಂತಹ ಪ್ರಕರಣಗಳಲ್ಲಿ ಮತ್ತೆ ಮತ್ತೆ ಕೇಳಿಬರುತ್ತಿರುವುದು ಆಘಾತಕಾರಿ ಬೆಳವಣಿಗೆ.

ಪರಿಶಿಷ್ಟ ಕೋಟಾದಲ್ಲಿ ಇರಬಾರದ ಅವಕಾಶಗಳೇನೋ ಇವೆ ಎಂದು ಜನ ಭಾವಿಸುವುದು ಒಂದು ಕಡೆಯಾದರೆ, ದಿನದಿಂದ ದಿನಕ್ಕೆ ದಲಿತರ ಬಗೆಗಿನ ಕಾಳಜಿಯಿಂದ ಸರ್ಕಾರ ದೂರ ಸರಿಯುತ್ತಿರುವುದು ಮತ್ತೊಂದು ವಾಸ್ತವ. ಪರಿಸ್ಥಿತಿ ಹೀಗಿರುವ ದಲಿತರಿಗೆ ಇರುವ ಚಿಕ್ಕಪುಟ್ಟ ಅವಕಾಶಗಳನ್ನೂ ಕಿತ್ತುಕೊಂಡರೆ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಏನಾಗಬಹುದು? ಇಂತಹ ಪ್ರಕರಗಳಿಗೆ ಶಿಕ್ಷೆಯೇ ಇಲ್ಲವೇ? ಖಂಡಿತ ಇದೆ. ಆದರೆ ಕಾನೂನು ಜಾರಿಯಾಗಬೇಕಷ್ಟೇ.

ರಾಜ್ಯ ವಿಧಾನಸಭೆಗೆ 2013ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್‌ ಮೇಲೆ ಇಂಥದ್ದೇ ಆರೋಪ ಕೇಳಿಬಂದಿತ್ತು. ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ಎನ್‌.ಮುನಿಅಂಜಿನಪ್ಪ ಕೋರ್ಟ್ ಮೆಟ್ಟಿಲೇರಿದ್ದರು.

ಬುಡಗ ಜಂಗಮ ಜಾತಿಗೆ ಸೇರಿದವರೆಂದು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಆಯ್ಕೆಯಾಗಿರುವುದು ಹೈಕೋರ್ಟ್‌ನಲ್ಲಿ ಸಾಬೀತಾಗಿತ್ತು. ಮಂಜುನಾಥ್‌ ಹಿಂದುಳಿದ ವರ್ಗ-1ಕ್ಕೆ ಸೇರುವ ‘ಭೈರಾಗಿ’ ಸಮುದಾಯದವರಾಗಿದ್ದರು. ಸುಳ್ಳು ಜಾತಿಪ್ರಮಾಣ ಪತ್ರ ಸಲ್ಲಿಸಿದ್ದಕ್ಕೆ  ಪ್ರಜಾಪ್ರತಿನಿಧಿ ಕಾಯದೆ ನಿಯಮ 125-ಎ ಅನ್ವಯ ಮಂಜುನಾಥ್‌ಗೆ 25 ಸಾವಿರ ದಂಡ ವಿಧಿಸಲಾಗಿತ್ತು. ಜೊತೆಗೆ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಲಾಗಿತ್ತು.

ಇದನ್ನೂ ಓದಿರಿ: ದಲಿತ್‌ ಫೈಲ್ಸ್‌: ತಮಿಳುನಾಡಿನ ಬ್ರಾಹ್ಮಣೇತರ ಅರ್ಚಕರ ನೋವಿನ ಕಥನ (ಭಾಗ 2)

ಈಗಿನ ರಾಜ್ಯ ಸರ್ಕಾರದ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರ ಮೇಲೂ ನಕಲಿ ಜಾತಿ ಪ್ರಮಾಣ ಪತ್ರದ ಆರೋಪವಿದೆ. ಚೌವ್ಹಾಣ್‌ ಲಂಬಾಣಿಯವರಾಗಿದ್ದರೂ ಅವರು ಕರ್ನಾಟಕದ ಲಂಬಾಣಿ ಜಾತಿಯವರಲ್ಲ. ಅವರು ಮಹಾರಾಷ್ಟ್ರದ ಲಂಬಾಣಿ ಜಾತಿಗೆ ಸೇರಿದ್ದಾರೆ. ಮಹಾರಾಷ್ಟ್ರದಲ್ಲಿ ಲಂಬಾಣಿ ಜಾತಿಯು ಹಿಂದುಳಿದ ವರ್ಗಕ್ಕೆ ಸೇರಿದ್ದರೆ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸೇರಿದೆ.

ಕಾನೂನು ತಜ್ಞರು ಏನು ಹೇಳುತ್ತಾರೆ?

ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪರ್ಯಾಯ ಕಾನೂನು ವೇದಿಕೆಯ ಸಲಹೆಗಾರರಾದ ಶಿವಮಣಿ, “ನಕಲಿ ಜಾತಿ ಪ್ರಮಾಣ ಪತ್ರ ಪಡೆದರೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬಹುದು. ನಕಲಿ ಪ್ರಮಾಣ ಪತ್ರ ಬರೆದು ಮೀಸಲಾಯಿಯನ್ನು ಪಡೆದರೆ ನಿಜವಾದ ಫಲಾನುಭವಿಗೆ ತೊಂದರೆ ನೀಡಿದಂತಾಗುತ್ತದೆ. ಮೀಸಲಾತಿಯ ಅವಕಾಶ ಪಡೆದು ಸರ್ಕಾರಿ ಸೇವೆಯಲ್ಲಿದ್ದರೆ ಕೆಲಸದಿಂದ ವಜಾಗೊಳಿಸಬಹುದು. ಜನಪ್ರತಿನಿಧಿಯಾಗಿದ್ದರೆ ಸ್ಥಾನವನ್ನು ಅಸಿಂಧುಗೊಳಿಸಬಹುದು” ಎಂದರು.

ಪ್ರಭು ಚೌವ್ಹಾಣ್‌ ಪ್ರಕರಣದ ಕುರಿತು ಮಾತನಾಡಿದ ಅವರು, “ಚೌವ್ಹಾಣ್‌ ಅವರು ಎಸ್‌ಸಿ ಪ್ರಮಾಣಪತ್ರ ಬರೆದು ಎರಡು ಸಲ ಗೆದ್ದಿದ್ದಾರೆ. ಇವರ ವಿರುದ್ಧ ಪ್ರಕರಣ ನಡೆಯುತ್ತಿದೆ. ಅಂತಾರಾಜ್ಯ ಜಾತಿ ಪ್ರಮಾಣ ಪತ್ರ ಪಡೆದಿರುವುದು ಶಿಕ್ಷಾರ್ಹ ಅಪರಾಧ” ಎಂದು ತಿಳಿಸಿದರು.

“ಕರ್ನಾಟಕದಲ್ಲಿ ಸಿವಿಲ್ ರೈಟ್ಸ್‌ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ ಎಂದಿದೆ. ಯಾರ್‍ಯಾರು ಸರ್ಕಾರಿ ಅಧಿಕಾರಿಗಳು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸುವುದೇ ಅದರ ಕೆಲಸ. ಪ್ರಭು ಚೌವ್ಹಾಣ್ ನಕಲಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಸದರಿ ಸಂಸ್ಥೆ ಹೇಳಿದೆ. ಆದರೆ ಜಿ‌ಲ್ಲಾಧಿಕಾರಿಯವರು ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿಲ್ಲ. ಚೌವ್ಹಾಣ್ ಸಚಿವರಾಗಿ ಮುಂದುವರಿಯುತ್ತಲೇ ಇದ್ದಾರೆ” ಎಂದು ವಿಷಾದಿಸಿದರು.

“ಇತ್ತೀಚಿನ ದಿನಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ ಗಂಭೀರವಾಗಿ ತನಿಖೆಗಳೂ ನಡೆಯಬೇಕಿದೆ. ಬೆಂಗಳೂರಿನ ಡಿಆರ್‌ಡಿಒನಲ್ಲಿ ಏಳುನೂರು ಜನರು ನಕಲಿ ಜಾತಿ ಪ್ರಮಾಣಪತ್ರ ಬರೆದಿದ್ದಾರೆಂಬ ವರದಿಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ವಲಸಮ್ಮ ವರ್ಸಸ್ ಸ್ಟೇಟ್ ಆಫ್ ಕೇರಳ ಪ್ರಕರಣವನ್ನು ಉಲ್ಲೇಖಿಸಿದ ಅವರು, “ಗಂಡ ಪರಿಶಿಷ್ಟ ಜಾತಿಯಾಗಿದ್ದಾರೆಂದು ಹೆಂಡತಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು ಕೆಲಸ ಪಡೆದಿರುತ್ತಾರೆ. ಆದರೆ ಹೆಂಡತಿ ಸವರ್ಣೀಯ ಜಾತಿಗೆ ಸೇರಿರುತ್ತಾರೆ. ಸುಪ್ರೀಂ ಈ ಕುರಿತು ವಿಚಾರಣೆ ನಡೆಸಿ, ಜಾತಿ ಎಂಬುದು ಹುಟ್ಟಿನಿಂದ ಬರುತ್ತದೆ. ಮದುವೆಯಾಗುವುದರಿಂದ ಬದಲಾಗುವುದಿಲ್ಲ ಎಂದಿದೆ” ಎಂದು ವಿವರಿಸಿದರು.


ಇದನ್ನೂ ಓದಿರಿ: ದಲಿತ್‌ ಫೈಲ್ಸ್‌: ತಮಿಳುನಾಡಿನಲ್ಲಿ ಅರ್ಚಕರಾಗಿ ನೇಮಕವಾದ ಅಬ್ರಾಹ್ಮಣರಿಗೆ ಬ್ರಾಹ್ಮಣರಿಂದ ಕಿರುಕುಳ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...