Homeಕರ್ನಾಟಕಮುಸ್ಲಿಮರಿಗೆ ಜಾತ್ರೆಯಲ್ಲಿ ಬಹಿಷ್ಕಾರ: ರಾಜ್ಯ ಸರ್ಕಾರ ವಿರುದ್ದ ಬಿಜೆಪಿ MLC ಹೆಚ್‌. ವಿಶ್ವನಾಥ್‌ ಆಕ್ರೋಶ

ಮುಸ್ಲಿಮರಿಗೆ ಜಾತ್ರೆಯಲ್ಲಿ ಬಹಿಷ್ಕಾರ: ರಾಜ್ಯ ಸರ್ಕಾರ ವಿರುದ್ದ ಬಿಜೆಪಿ MLC ಹೆಚ್‌. ವಿಶ್ವನಾಥ್‌ ಆಕ್ರೋಶ

ಮುಸ್ಲಿಂ ರಾಷ್ಟ್ರಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದು, ಅವರರೆಲ್ಲರನ್ನೂ ವಾಪಾಸು ಕಳುಹಿಸಿದರೆ ಅವರಿಗೆ ನೀವು ಉದ್ಯೋಗ ಕೊಡುತ್ತೀರಾ ಎಂದು ಅವರ ತಮ್ಮದೇ ಪಕ್ಷದ ಸರ್ಕಾರವನ್ನು ಪ್ರಶ್ನಿಸಿದ್ದಾರೆ

- Advertisement -
- Advertisement -

ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡುತ್ತಿರುವ ಬಿಜೆಪಿ ಪರ ಸಂಘಟನೆಗಳ ನಡೆಯನ್ನು ಬಿಜೆಪಿಯ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರವು “ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ಮೋದಿ ಅವರು ವಿಕಾಸ ಮತ್ತು ವಿಶ್ವಾದ ಬಗ್ಗೆ ಮಾತನಾಡಿಕೊಂಡು ಬಂದಿದ್ದಾರೆಯೆ ಹೊರತು ಹಿಂದುತ್ವದ ಬಗ್ಗೆ ಈ ತನಕ ಮಾತನಾಡಿಲ್ಲ. ಆದರೆ ನಾವು ದೇಶವನ್ನು ಮತ್ತು ರಾಜ್ಯವನ್ನು ಎಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾಪು ಮಾರಿಗುಡಿ ಜಾತ್ರೆ: ಸಂಘಪರಿವಾರದ ಬೆದರಿಕೆಗೆ ಸೊಪ್ಪು ಹಾಕದೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿದ ಭಕ್ತಾದಿಗಳು!

ದೇವಾಲಯದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ತೆಡೆಯುದು ಸರಿಯಲ್ಲ ಎಂದು ಹೇಳಿದ ಅವರು, “ಇದನ್ನು ಯಾರೂ ಒಪ್ಪಲ್ಲ. ಅದು ಅವರ ಬದುಕು. ದೇವಸ್ಥಾನದಲ್ಲಿ ಬಾಳೆಹಣ್ಣು, ಹೂವು, ಬಳೆ ಮಾರುವವರ ಬಂಡವಾಳವೇ ಐನೂರು ರುಪಾಯಿ ಇರುವುದಿಲ್ಲ. ಅದಕ್ಕೂ ತೊಂದರೆ ನೀಡಿ ಅವರ ಹೊಟ್ಟೆ ಮೇಲೆ ಹೊಡೆದರೆ ಅವರು ಏನು ತಿನ್ನುತ್ತಾರೆ. ಇಲ್ಲಿ ಹೊಟ್ಟೆ ಮುಖ್ಯವಾಗಿದ್ದು, ಜಾತಿ, ಧರ್ಮ, ಪಕ್ಷ ಎಲ್ಲವೂ ಆಮೇಲೆ. ಹೊಟ್ಟೆಗೆ ಇಲ್ಲವೆಂದ ಮೇಲೆ ಏನು ಮಾಡುತ್ತೀರಾ?” ಎಂದು ಅವರು ಪ್ರಶ್ನಿಸಿದ್ದಾರೆ.

“ಮುಸ್ಲಿಮರು ಈ ದೇಶ ಪ್ರಜೆಯಲ್ಲವೆ? ಈ ರೀತಿಯಾಗಿ ಹೋದರೆ ಭಾರತ ಎಲ್ಲಿ ಹೋಗುತ್ತದೆ? ಇದು ಕೂಡಾ ಅಸ್ಪೃಶ್ಯತೆಯ ಆಚರಣೆಯೆ ಆಗಿದೆ. ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಭಾರತೀಯರು, ನಮ್ಮ ದೇಶದಲ್ಲಿ ಇರಬಾರದು ಎಂದು ತೀರ್ಮಾನ ತೆಗೆದುಕೊಂಡರೆ ನಾವೆಲ್ಲಾ ಎಲ್ಲಿಗೆ ಹೋಗುತ್ತೇವೆ? ಅಲ್ಲಿಂದ ಬಂದವರಿಗೆಲ್ಲಾ ಇಲ್ಲಿ ಉದ್ಯೋಗ ಕೊಡಲು ನಮಗೆ ಸಾಧ್ಯವೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ, ವಿಶೇಷವಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಅಲ್ಲಿ ಭಾರತೀಯರು ಕೆಲಸ ಮಾಡಬಾರದು ಎಂದು ತೀರ್ಮಾನಿಸಿದರೆ, ಏನು ಮಾಡುತ್ತೇವೆ ನಾವು? ಎಲ್ಲಿ ಹೋಗೋದು?. ಏನ್‌ ಹುಚ್ಚಾಟ ಇದೆಲ್ಲಾ? ಇದೆಲ್ಲಾ ಸರಿಯಲ್ಲಾ. ಯಾವ ದೇವರು, ಧರ್ಮನೂ ಈ ರೀತಿಯಾಗಿ ಬೇಧಬಾವ ಮಾಡಲು ಹೇಳಿಲ್ಲ. ಇದೆಲ್ಲಾ ಸರಿಯಲ್ಲ, ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಯಾಕೆ ಸರ್ಕಾರ ಇದರ ಬಗ್ಗೆ ಮೌನವಹಿಸಿದೆ?” ಎಂದು ತಮ್ಮ ಸರ್ಕಾರದ ವಿರುದ್ದವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉಡುಪಿ: ಕಾಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದ ದೇವಸ್ಥಾನ ಸಮಿತಿ; ‘ಸಹಬಾಳ್ವೆ ಉಡುಪಿ’ ವಿರೋಧ

“ಮುಸ್ಲಿಮರು ಯಾರೂ ಕನ್ನಡಿಗರು ಅಲ್ಲವೆ? ಪಾಕಿಸ್ತಾನ-ಭಾರತ ಇಬ್ಬಾಗವಾದಾಗ ಈ ದೇಶದ ಮುಸ್ಲಿಮರು ಇಲ್ಲೇ ಉಳಿದರು. ಅವರು ಜಿನ್ನಾ ಜೊತೆಗೆ ಹೋಗಲಿಲ್ಲ. ಇದರ ಬಗ್ಗೆ ನಾವು ಯೋಚನೆ ಮಾಡಬೇಕು. ಭಾರತದಲ್ಲಿ ಉಳಿದಂತವರು ಭಾರತೀಯ ಮುಸ್ಲಿಮರು. ಅವರು ಪಾಕಿಸ್ತಾನಿಗಳಲ್ಲ, ಅವರು ಭಾರತೀಯರು. ಇದೆಲ್ಲವನ್ನೂ ಏನೂ ಯೋಚನೆ ಮಾಡದೆ, ಮುಸ್ಲಿಮರು ವ್ಯಾಪಾರ ಮಾಡಬಾರದು ಎನ್ನುವವರು ಯಾರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜನರು ಕೈಗೆತ್ತಿಕೊಳ್ಳುತ್ತಾರೆ. ಜಾತಿ ಧರ್ಮದ ಮೇಲೆ ರಾಜಕಾರಣ ಖಂಡಿತಾ ಮಾಡಬಾರದು. ಅದು ಬಹಳ ಅಪಾಯಕಾರಿ. ಇದನ್ನು ಒಂದೆರೆಡು ಚುನಾವಣೆಯವರೆಗೂ ಮಾಡಬಹದು. ಆಮೇಲೆ ಏನು ಮಾಡುತ್ತೀರಿ? ಬಿಜೆಪಿ ತನ್ನ ಪಕ್ಷದ ಸಂವಿಧಾನದಲ್ಲಿ ಮುಸ್ಲಿಮರನ್ನು ಹೊರಹಾಕುತ್ತೇವೆ ಎಂದು ಎಲ್ಲೂ ಬರೆದಿಲ್ಲ. ಇವೆಲ್ಲಾ ಎಷ್ಟರ ಮಟ್ಟಿಗೆ ನಡೆಯುತ್ತದೆ? ಇದಕ್ಕೆಲ್ಲಾ ಯಾರೂ ಹೇಳೋರು ಕೇಳೋರು ಇಲ್ಲವೆ?” ಎಂದು ಅವರು ಹೇಳಿದ್ದಾರೆ.

“ನಾಳೆ ಏನಾದರೂ ಆಗಿಬಿಟ್ಟರೆ ಏನು ಮಾಡುವುದು? ನಮ್ಮ ಮಕ್ಕಳೆಲ್ಲಾ ಬೇರೆ ಬೇರೆ ದೇಶದಲ್ಲಿ ಇದ್ದಾರೆ. ಅವರೆಲ್ಲಾ ವಾಪಾಸು ಬಂದರೆ ನೀವು ಕೆಲಸ ಕೊಡುತ್ತೀರಾ?. ಇದು ಯೋಚನೆ ಮಾಡಬೇಕು. ಕನಕದಾಸರು ಹೇಳಿದಂತೆ ಎಲ್ಲಾರು ಬಾಳುವುದು ಗೇಣು ಹೊಟ್ಟೆಗಾಗಿ. ಹೊಟ್ಟೆಗೆ ಇಲ್ಲವೆಂದರೆ ಪ್ರಜಾಪ್ರಭುತ್ವ, ಧರ್ಮ, ಜಾತಿಯನ್ನು ತೆಗೆದುಕೊಂಡು ಹೋಗಿ ಬಿಸಾಕಿ. ಹೊಟ್ಟೆಗೆ ಇಲ್ಲವೆಂದರೆ ಏನು ಹುಡುಕುತ್ತೀರಿ ಇಲ್ಲಿ” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಮಿಷನ್‌ಗಾಗಿ ಈಶ್ವರಪ್ಪ ಪೀಡಿಸುತ್ತಿದ್ದಾರೆಂದು ಹಿಂದುತ್ವ ಮುಖಂಡ ದೂರು; ಕಾಂಗ್ರೆಸ್ ನಾಯಕರ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...