Homeಮುಖಪುಟಕಮಿಷನ್‌ಗಾಗಿ ಈಶ್ವರಪ್ಪ ಪೀಡಿಸುತ್ತಿದ್ದಾರೆಂದು ಹಿಂದುತ್ವ ಮುಖಂಡ ದೂರು; ಕಾಂಗ್ರೆಸ್ ನಾಯಕರ ವಾಗ್ದಾಳಿ

ಕಮಿಷನ್‌ಗಾಗಿ ಈಶ್ವರಪ್ಪ ಪೀಡಿಸುತ್ತಿದ್ದಾರೆಂದು ಹಿಂದುತ್ವ ಮುಖಂಡ ದೂರು; ಕಾಂಗ್ರೆಸ್ ನಾಯಕರ ವಾಗ್ದಾಳಿ

ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರ್‌ಡಿಪಿಆರ್ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದು, ಒಂದು ವರ್ಷದಿಂದ ತಮಗಾಗುತ್ತಿರುವ ಕಿರುಕುಳವನ್ನು ಹೇಳಿಕೊಂಡಿದ್ದಾರೆ.

- Advertisement -
- Advertisement -

ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಸಹಚರರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ (ಆರ್‌ಡಿಪಿಆರ್) ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಸುಮಾರು ಒಂದು ವರ್ಷದಿಂದ ಬಾಕಿ ಇರುವ ಬಿಲ್‌ಗಳನ್ನು ಪಾವತಿಸದೆ “ಕಮಿಷನ್”ಗಾಗಿ ಈಶ್ವರಪ್ಪನವರು ಪೀಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಆರೋಪಗಳನ್ನು ತಳ್ಳಿಹಾಕಿರುವ ಈಶ್ವರಪ್ಪ, ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ತಿಳಿಸಿದ್ದಾರೆ. “ನನಗೆ ಈ ವ್ಯಕ್ತಿ ಪರಿಚಯವಿಲ್ಲ” ಎಂದು ಈಶ್ವರಪ್ಪ ತಿಳಿಸಿರುವುದಾಗಿ ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ.

“ಈ ದೂರಿನ ಬಗ್ಗೆ ನನಗೆ ತಿಳಿದ ತಕ್ಷಣ, ನಾನು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಶೀಘ್ರದಲ್ಲೇ ನೋಟಿಸ್ ನೀಡಲಾಗುವುದು” ಎಂದಿದ್ದಾರೆ. ಆದರೆ ಯಾವ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ ಅಥವಾ ಯಾವ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂಬುದನ್ನು ವಿವರಿಸಲಿಲ್ಲ ಎಂದು ವರದಿ ಹೇಳಿದೆ.

ಪಾಟೀಲ್ ಅವರು ಹಿಂದೂ ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಹೌದು. ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಗಿರಿರಾಜ್ ಸಿಂಗ್ ಅವರ ಕಚೇರಿ, ದೂರನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗಿದೆ ಎಂದಿದ್ದಾರೆ. ಪಾಟೀಲ್ ಅವರು ಮಾರ್ಚ್‌ನಲ್ಲಿ ದೆಹಲಿಯ ನಿವಾಸದಲ್ಲಿ ಕೇಂದ್ರ ಸಚಿವರನ್ನು ಖುದ್ದು ಭೇಟಿ ಮಾಡಿದ್ದರು.

ಬಿಜೆಪಿ ಆಡಳಿತವಿರುವ ಹಿಂಡಲ ಗ್ರಾಮ ಪಂಚಾಯಿತಿಯಲ್ಲಿ ತಾನು ಮತ್ತು ಇತರ ಆರು ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ನಡೆಸಿದ್ದಾಗಿ ಪಾಟೀಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

“ದೇವಸ್ಥಾನದ ಜಾತ್ರೆ ಇದ್ದು, ಆ ಸಮಯದಲ್ಲಿ ಈಶ್ವರಪ್ಪ ಅವರನ್ನು ಭೇಟಿ ಮಾಡಿ ರಸ್ತೆ ಕಾಮಗಾರಿಗೆ ಅನುದಾನ ನೀಡುವಂತೆ ಕೋರಿದ್ದೆವು. ನಂತರ ಕಾಮಗಾರಿ ಆದೇಶ ನೀಡುವುದಾಗಿ ಹೇಳಿ ಕಾಮಗಾರಿ ಆರಂಭಿಸುವಂತೆ ನನಗೆ ಹಾಗೂ ಇತರೆ ಗುತ್ತಿಗೆದಾರರಿಗೆ ಸಚಿವರು ಸೂಚಿಸಿದ್ದರು” ಪತ್ರದಲ್ಲಿ ಪಾಟೀಲ್ ವಿವರಿಸಿದ್ದಾರೆ.

“ನಾನು ಮತ್ತು ಇತರೆ ಗುತ್ತಿಗೆದಾರರು ಸೇರಿ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಬಹುತೇಕ ರಸ್ತೆಗಳ ಕಾಮಗಾರಿಗೆ 4 ಕೋಟಿ ರೂ. ಈ ಹಣವನ್ನು ಬಡ್ಡಿಯ ಮೇಲೆ ಪಡೆಯಲಾಗಿದೆ. ಸಾಲಗಾರರು ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ” ಎಂದು ಅಳಲು ತೋಡಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನೋಳ್ಕರ್ ಮಾತನಾಡಿ, “ಕಾಮಗಾರಿ ತ್ವರಿತವಾಗಿ ನಡೆದಿದ್ದರೂ ಸರಕಾರದಿಂದ ಹಣ ಪಾವತಿಯಾಗಿಲ್ಲ” ಎಂದು ದೂರಿದ್ದಾರೆ.

ಗುತ್ತಿಗೆದಾರರು ಬಡ್ಡಿಗೆ ಸಾಲ ಮಾಡಿ ಇದೀಗ ದಿವಾಳಿಯ ಅಂಚಿಗೆ ಬಂದಿದ್ದು, ಗುತ್ತಿಗೆದಾರರಿಗೆ ಹಣ ನೀಡುವುದು ಸರಕಾರದ ಕರ್ತವ್ಯವಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ. 2021ರ ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಬಿಲ್‌ಗಳನ್ನು ತೆರವುಗೊಳಿಸುವಂತೆ ಈಶ್ವರಪ್ಪ ಅವರನ್ನು ಹಲವು ಬಾರಿ ಭೇಟಿ ಮಾಡಿ ಒತ್ತಾಯಿಸಲಾಗಿದೆ. ಆದರೆ, ಕಾಲಾಂತರದಲ್ಲಿ 15 ಲಕ್ಷ ರೂಪಾಯಿ ಕಮಿಷನ್ ನೀಡುವಂತೆ ಬೇಡಿಕೆ ಇಡಲಾಗಿದೆ. ಈಶ್ವರಪ್ಪ ಅವರ ಸಂಗಡಿಗರು ಕೂಡ ಒಟ್ಟು ಬಿಲ್ ನ ಶೇ.40ರಷ್ಟು ಮೊತ್ತವನ್ನು ಒಂದೇ ಬಾರಿ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

“ನಾನು ಸಚಿವರನ್ನು ಕನಿಷ್ಠ 80 ಬಾರಿ ಭೇಟಿ ಮಾಡಿದ್ದೇನೆ” ಎಂದು ಪಾಟೀಲ್ ತಿಳಿಸಿದ್ದಾರೆ. “ಬಿಲ್ಗಳನ್ನು ತೆರವುಗೊಳಿಸಲಾಗುವುದು ಎಂದು ಅವರು ಯಾವಾಗಲೂ ಹೇಳುತ್ತಿದ್ದರು, ಆದರೆ ಅವರ ಸಹಚರರು ಹೆಚ್ಚಿನ ಹಣವನ್ನು ಕೇಳುತ್ತಿದ್ದರು” ಎಂದಿದ್ದಾರೆ.

ಪಾಟೀಲ್ ಅವರು ಕರ್ನಾಟಕದ ಪ್ರಭಾರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರನ್ನು ಭೇಟಿಯಾಗಿ ಸಹಾಯ ಮಾಡುವ ಭರವಸೆ ಪಡೆದಿದ್ದಾರೆ. ಪಾಟೀಲ್ ಈಗ ಪ್ರಧಾನಿ ಕಚೇರಿಯ ಪ್ರತಿಕ್ರಿಯೆಗೆ ಕಾಯುತ್ತಾ ಕುಳಿತ್ತಿದ್ದಾರೆ.

 ಕಾಂಗ್ರೆಸ್ ನಾಯಕರು ತಿರುಗೇಟು

ಸಚಿವ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಸಂಬಂಧ ಹಲವು ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿಯಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿದ್ದು, ಬಿಜೆಪಿ ಕಾರ್ಯಕರ್ತರಿಗೆ ಭ್ರಷ್ಟಾಚಾರದ ಬಿಸಿ ಈಗ ತಟ್ಟಿದೆ. ಭ್ರಷ್ಟಾಚಾರಕ್ಕೆ ಬಿಜೆಪಿಯವರಿಗೆ ರಾಷ್ಟ್ರೀಯ ಪರವಾನಗಿ ಸಿಕ್ಕಿದೆಯಾ? ಇಡಿ, ಸಿಬಿಐ, ಐಟಿ ಬಿಜೆಪಿ ನಾಯಕರಿಗೆ ಸಂಬಂಧಿಸುವುದಿಲ್ಲ. ಒಬ್ಬ ಶಾಸಕನ ಮಗಳು ಸುಳ್ಳು ಎಸ್‌ಸಿ, ಎಸ್‌ಟಿ ಪ್ರಮಾಣ ಪತ್ರ ಮಾಡಿಸಿದ್ದಾರೆ. ಪ್ರಮಾಣ ಪತ್ರದ ಮೇಲೆ 80 ಲಕ್ಷ ರೂ. ಸಾಲ ಪಡೆದಿದ್ದಾರೆ. ಇದನ್ನು ಸಾಮಾನ್ಯ ಜನರು ಮಾಡಿದ್ದರೆ ಜೈಲು ಸೇರುತ್ತಿದ್ದರು ಎಂದಿದ್ದಾರೆ.

ಸಂಸದ ಡಿ.ಕೆ.ಸುರೇಶ್‌ ಪ್ರತಿಕ್ರಿಯಿಸಿ, “ಸಚಿವ ಈಶ್ವರಪ್ಪ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬೂತ್ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರದ ಭ್ರಷ್ಟಾಚಾರ ನೋಡಿಯೂ ಮೋದಿ ಸುಮ್ಮನಿದ್ದಾರೆ” ಎಂದು ಕುಟುಕಿದ್ದಾರೆ.

ಮಾಜಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯೆ ನೀಡಿದ್ದು, “ಈ‌ ಹಿಂದೆ ಈಶ್ವರಪ್ಪನವರೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಗುತ್ತಿಗೆದಾರರು ಕೂಡ ಶೇ 40ರ ಕಮಿಷನ್ ಬಗ್ಗೆ ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕೇವಲ ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಮಾತ್ರವಲ್ಲ, ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ” ಎಂದು ಆರೋಪಿಸಿದ್ದಾರೆ.

ವಿಧಾನ ಪರಿಷತ್​ನ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿದ್ದು, “ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಆರೋಪಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಸಚಿವ ಕೆ.ಎಸ್.ಈಶ್ವರಪ್ಪ ತಕ್ಷಣ ರಾಜೀನಾಮೆ ಕೊಡಬೇಕು. ಆರೋಪ ಮುಕ್ತರಾಗುವ ತನಕ ಸಂಪುಟದಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿದ್ದಾರೆ.

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ‌ಅವರು ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡಿದ್ದು, “ಹಿಂದುತ್ವದ ಬಗ್ಗೆ ಹಗಲಿರುಳೂ ಪುಂಖಾನುಪುಂಕವಾಗಿ ಮಾತನಾಡಿ ಕೊನೆಯಲ್ಲಿ ಆ ಹಿಂದೂ ಸಂಘಟನೆಯ ಮುಖಂಡರ ಬಳಿಯೇ 40% ಕಮಿಷನ್ ಕೇಳುವ ಈಶ್ವರಪ್ಪ ಹಿಂದೂವಾದಿಯಲ್ಲ, ಆತನೋರ್ವ ಹಿಂದೂ ವ್ಯಾಧಿ” ಎಂದು  ಟೀಕಿಸಿದ್ದಾರೆ.

“ರಾಷ್ಟ್ರಧ್ವಜವನ್ನೇ ಅವಮಾನಿಸಿದ ಈತ ಹಿಂದೂಗಳ ಹಿತ ಕಾಯುತ್ತಾನೆ ಎಂಬುದು ಶತಮಾನದ ಜೋಕುಗಳಲ್ಲಿ ಒಂದು. 40% ಗಿರಾಕಿ ಈಶ್ವರಪ್ಪ ಕೂಡಲೇ ರಾಜೀನಾಮೆ ನೀಡಲಿ ಮತ್ತು ಆತನ ಮೇಲೆ ಸೂಕ್ತ ತನಿಖೆಯಾಗಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿರಿ: ರಾಜ್ಯ ಬಿಜೆಪಿಯದ್ದು 40 ಪರ್ಸೆಂಟ್ ಕಮಿಷನ್‌ ಸರ್ಕಾರ: ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...