ಜಯಪುರ: ದಲಿತರಿಗೆ ಪ್ರವೇಶವನ್ನು ನಿರಾಕರಿಸಿ, ಕಳೆದ 11 ವರ್ಷಗಳಿಂದ ಬೀಗ ಹಾಕಿದ್ದ, ಮೈಸೂರು ತಾಲ್ಲೂಕಿನ ಮಾರ್ಬಳ್ಳಿಯಲ್ಲಿ ಶುಕ್ರವಾರ ಮತ್ತೆ ಮಾರಮ್ಮ ದೇವಾಲಯದ ಬಾಗಿಲನ್ನು ಅಧಿಕಾರಿಗಳ ಮಧ್ಯೆಪ್ರವೇಶದಿಂದ ಬಾಗಿಲನ್ನು ತೆರೆಯಲಾಗಿದೆ.
ಊರಿನ ದಲಿತರು ದೇವಾಲಯವನ್ನು ಪ್ರವೇಶ ಮಾಡಿದರೆಂದು, ಮಾರ್ಬಳ್ಳಿಯ ವಾಲ್ಮೀಕಿ ನಾಯಕ ಜನಾಂಗದವರು ವಿರೋಧ ವ್ಯಕ್ತಪಡಿಸಿ, ದೇಗುಲಕ್ಕೆ ಬೀಗ ಹಾಕಲಾಗಿತ್ತು. ಈ ಸಂಬಂಧ ಸರಕಾರಿ ಅಧಿಕಾರಿಗಳು ಎರಡು ಸಮುದಾಯದವರ ಮಧ್ಯೆ ಮಾತುಕತೆ ನಡೆಸಿದ ನಂತರ ಈ ದೇಗುಲದ ಬಾಗಿಲನ್ನು ತೆರೆಯಲಾಗಿದೆ.
ಈಚೆಗೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮದ ಮುಖಂಡರ ಸಭೆ ನಡೆಸಲಾಗಿತ್ತು. ಇದು ಈಗ ಯಶಸ್ಸು ಕಂಡಿದೆ.
‘ಭಾರತೀಯ ಪ್ರಜೆಯಾದ ಯಾರಿಗೂ ಯಾವುದೇ ದೇವಾಲಯವನ್ನು ಪ್ರವೇಶಿಸುವ ಹಕ್ಕು ಇದೆ. ಎಲ್ಲರೂ ಗ್ರಾಮದಲ್ಲಿ ಅನ್ಯೋನ್ಯತೆಯಿಂದ ಶಾಂತಿಯಿಂದ ಇರಬೇಕು. ಎಲ್ಲಾ ಜಾತಿ ಜನಾಂಗದವರಿಗೂ ದೇಗುಲಕ್ಕೆ ಮುಕ್ತ ಪ್ರವೇಶ ಮಾಡಿಕೊಡಬೇಕೆಂದು ಈ ಸಭೆಯಲ್ಲಿ ಸೂಚಿಸಲಾಗಿತ್ತು. ಇದಕ್ಕೆ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದ್ದರು.
ಗ್ರಾಮ ಪಂಚಾಯಿತಿಯಲ್ಲಿ ತಹಶೀಲ್ದಾರ್ ಕೆ.ಎಂ. ಮಹೇಶ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ಶಾಂತಿ ಸಭೆ ನಡೆಸಲಾಗಿತ್ತು. ಇದಾದ ನಂತರ ದೇಗುಲದ ಬೀಗ ತೆಗೆದು ಎರಡು ಸಮುದಾಯಗಳ ಜನರಿಗೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು. ದೀರ್ಘ ಕಾಲದ ನಂತರ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎ.ಎನ್.ಜನಾರ್ಧನ್, ಜಯಪುರ ನಾಡ ಕಚೇರಿ ಉಪತಹಶೀಲ್ದಾರ್ ಕೆ.ಎಸ್ ಕುಬೇರ್, ಕಂದಾಯ ಅಧಿಕಾರಿ ಸಿ.ವಿ.ಲೋಹಿತ್, ಗ್ರಾಮ ಲೆಕ್ಕಿಗ ಭಾಸ್ಕರ್, ಪಿಎಸ್ಐ ಹೇಮಲತಾ, ದಲಿತ ಮುಖಂಡರಾದ ಪರಮೇಶ್, ಕುಮಾರ್ ಹಾಗೂ ವಾಲ್ಮೀಕಿ ನಾಯಕ ಸಮುದಾಯ ಮುಖಂಡರಾದ ಶಿವಣ್ಣ ನಾಯಕ, ರಾಜಶೇಖರ ಮೂರ್ತಿ, ರಾಜ ನಾಯಕ, ರಾಜಣ್ಣ ಪಾಲ್ಗೊಂಡಿದ್ದರು.
ಇದನ್ನೂ ಓದಿ….ಕಲಬುರಗಿ | ಸಿಗರೇಟ್ ಬಾಕ್ಸ್ ಕದ್ದ ಆರೋಪ : ದಲಿತ ಯುವಕನ ಹತ್ಯೆ


