Homeಕರ್ನಾಟಕಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣ ಯಾರ ಉದ್ಧಾರಕ್ಕಾಗಿ? : ಡಾ.ಬಿ.ಪಿ ಮಹೇಶ ಚಂದ್ರ ಗುರು

ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣ ಯಾರ ಉದ್ಧಾರಕ್ಕಾಗಿ? : ಡಾ.ಬಿ.ಪಿ ಮಹೇಶ ಚಂದ್ರ ಗುರು

- Advertisement -
- Advertisement -

ಸ್ವಾಮಿ ವಿವೇಕಾನಂದರು ದೀನ ದುರ್ಬಲರ ಶಿಕ್ಷಣ, ಪರಿವರ್ತನೆ, ಸುರಕ್ಷತೆ ಮತ್ತು ಪ್ರಗತಿಗಳಿಗಾಗಿ ಶ್ರೀರಾಮಕೃಷ್ಣರ ದಿವ್ಯ ಮಾರ್ಗದರ್ಶನದಲ್ಲಿ ಬದುಕಿನುದ್ದಕ್ಕೂ ದುಡಿದು ವಿಶ್ವಮಾನ್ಯರಾಗಿದ್ದಾರೆ. ‘ಬಡವರಲ್ಲೇ ದೇವರನ್ನು ಕಾಣಿ, ಬಡವರ ಉದ್ಧಾರಕ್ಕೆ ಶ್ರಮಿಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳಿ’ ಎಂಬುದೇ ವಿವೇಕಾನಂದರ ಜೀವನ ದರ್ಶನವಾಗಿದೆ. ಭಾರತೀಯ ಪರಂಪರೆಗೆ ಜಗತ್ತಿನಲ್ಲಿ ಮಹತ್ವದ ಸ್ಥಾನವನ್ನು ವಿವೇಕಾನಂದರು ದೊರಕಿಸಿಕೊಟ್ಟರು. ಚಿಕಾಗೋ ಧಾರ್ಮಿಕ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಚಾರಿತ್ರಿಕ ಮಹತ್ವ ಹೊಂದಿದೆ. ವಿವೇಕಾನಂದರು ಮೈಸೂರಿನ ರಾಜ ಚಾಮರಾಜ ಒಡೆಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 1920ರ ದಶಕದಲ್ಲಿ ‘ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳನ್ನು ತೆರೆಯಿರಿ ಮತ್ತು ಬಡವರ ಕೇರಿಗಳತ್ತ ಶಿಕ್ಷಣ ಸಂಸ್ಥೆಗಳನ್ನು ಕೊಂಡೊಯ್ಯಿರಿ’ ಎಂದು ವಿವೇಕಾನಂದರು ಚಾಮರಾಜ ಒಡೆಯರಿಗೆ ಪತ್ರ ಬರೆದಿದ್ದರು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವಿವೇಕಾನಂದರ ಮಾತುಗಳಿಗೆ ಬೆಲೆ ನೀಡಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಪ್ರಗತಿಗಾಗಿ ಎನ್‍ಟಿಎಂ ಶಾಲೆಯನ್ನು ಮೈಸೂರು ನಗರದಲ್ಲಿ ತೆರೆದಿದ್ದರು.

ವಿವೇಕಾನಂದರು ಮೈಸೂರಿನ ಎನ್‍ಟಿಎಂ ಶಾಲೆಯಲ್ಲಿ ತಂಗಿದ್ದರು ಎಂಬ ಕಾರಣಕ್ಕೆ ಅಲ್ಲಿ ವಿವೇಕ ಸ್ಮಾರಕ ನಿರ್ಮಿಸಬೇಕು ಎನ್ನುವುದು ಅರ್ಥಹೀನ ವಾದವಾಗಿದೆ. ಮಹಾಪುರುಷರು ನೀಡಿದ ಸಂದೇಶಗಳನ್ನು ಜಾರಿಗೆ ತಂದು ಸಮಸಮಾಜವನ್ನು ನಿರ್ಮಿಸುವುದು ಇಂದು ಅತ್ಯವಶ್ಯಕವಾಗಿ ಆಗಲೇಬೇಕಾದ ಕೆಲಸವಾಗಿದೆ. ಮಹಾಪುರುಷರಿಗೆ ಯಾವುದೇ ಅಬ್ಬರ, ವೈಭವ, ಸ್ಮಾರಕ, ಪ್ರಚಾರ ಇವುಗಳು ನಿಜಕ್ಕೂ ಬೇಕಿಲ್ಲ. ಅತ್ಯಂತ ಬೆಲೆಬಾಳುವ ಮೈಸೂರು ನಗರದ ಹೃದಯ ಭಾಗದಲ್ಲಿರುವ ಬಡವರ ಮಕ್ಕಳಿಗೆ ಜ್ಞಾನದಾಸೋಹ ಒದಗಿಸುವ ವಿವೇಕಾನಂದರು ಮತ್ತು ನಾಲ್ವಡಿಯವರು ಪ್ರತಿಪಾದಿಸಿದ ಮಾನವೀಯತೆಯ ಸಂಕೇತವೇ ಆಗಿರುವ ಎನ್‍ಟಿಎಂ ಶಾಲೆಯನ್ನು ಮತ್ತೊಂದು ದೇವರಾಜ ಶಾಲೆಯಲ್ಲಿ ವಿಲೀನಗೊಳಿಸಿ ಎಂದು ಸಾಮ್ರಾಜ್ಯಶಾಹಿಯ ವಕ್ತಾರರಾಗಿರುವ ವಿವೇಕ ಹೀನರಾದ ಪಟ್ಟಭದ್ರ ಹಿತಾಸಕ್ತಿಗಳು ನಡೆಸಿರುವ ಸಂಚು ಅಮಾನವೀಯವಾದುದು.

70ರ ದಶಕದಲ್ಲಿ ಕುವೆಂಪುರವರ ಶಿಷ್ಯನೆಂದು ಹೇಳಿಕೊಂಡು ಅವರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ ದೇಜಗೌ, ಕುವೆಂಪುರವರ ಶಿಷ್ಯನೆಂದೇ ಅವರು ನುಡಿದ ಹಾಗೇ ನಡೆಯದೇ ಸಾಹಿತ್ಯ ವಲಯದಲ್ಲಿ ಮುಂದುವರೆದಿರುವ ಸಿಪಿಕೆ, ಮನೆ ಮಾದೇಗೌಡರೆಂದು ಹೆಸರು ಮಾಡಿ ಬದುಕಿನ ಮುಸ್ಸಂಜೆಯಲ್ಲಿ ಮೂಲಭೂತವಾದಿಗಳ ಸಹವಾಸ ಮಾಡಿ ಕೆಟ್ಟಿರುವ ಡಿ.ಮಾದೇಗೌಡ ಎಂಬ ತ್ರಿಮೂರ್ತಿಗಳು ಎನ್‍ಟಿಎಂ ಶಾಲೆಯಲ್ಲಿ ವಿವೇಕ ಸ್ಮಾರಕ ನಿರ್ಮಿಸುವ ಸಂಚಿನ ರೂವಾರಿಗಳು ಎಂದು ಹೇಳಲು ನೋವುಂಟಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಸಾಮ್ರಾಜ್ಯಶಾಹಿಗಳು ಭಾರತೀಯರ ಕಣ್ಣಿಗೆ ಮಂಕುಬೂದಿ ಎರಚಿ ಭಾರತದ ಮೂಲನಿವಾಸಿಗಳನ್ನು ದೇವರು, ಧರ್ಮ, ಮೌಢ್ಯ, ಸಂಪ್ರದಾಯ ಮೊದಲಾದವುಗಳ ಹೆಸರಿನಲ್ಲಿ ವಿಭಜಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ. ಯಾವ ಗದ್ದುಗೆಯೂ ಶಾಶ್ವತವಲ್ಲವೆಂದು ಜ್ಞಾನಿಗಳು ಬಲ್ಲವರಾಗಿದ್ದಾರೆ. ಬಹುದೊಡ್ಡ ಸಾಮ್ರಾಜ್ಯಗಳು ಈಗಾಗಲೇ ಮುಳುಗಿ ಹೋಗಿವೆ. ಹಿಟ್ಲರ್‌ನಂತಹ ಕೆಟ್ಟ ಸರ್ವಾಧಿಕಾರಿ ಆತ್ಮಹತ್ಯೆ ಮಾಡಿಕೊಂಡು ಜಗತ್ತಿನಿಂದ ಕಣ್ಮರೆಯಾಗಿರುವ ಸಂಗತಿ ನಮ್ಮ ಮುಂದಿದೆ. ಮಹಾಪುರುಷರು ತಮ್ಮ ತ್ಯಾಗ, ಬಲಿದಾನ ಮತ್ತು ಕೊಡುಗೆಗಳಿಂದ ಕೋಟ್ಯಾಂತರ ಜನರ ಹೃದಯಗಳಲ್ಲಿ ಸಾವನ್ನು ಗೆದ್ದು ವಿಜೃಂಭಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶರಣರ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಮಾತು ಮಹತ್ವಪೂರ್ಣವಾಗಿದೆ.

ಇದನ್ನೂ ಓದಿ: ಪಟ್ಟಭದ್ರರ ವಿರುದ್ಧ ದಿಟ್ಟ ಹೋರಾಟಕ್ಕೆ ಉಳಿದ ಮೈಸೂರಿನ ಸರ್ಕಾರಿ ಶಾಲೆ!

ಶ್ರೀರಾಮಕೃಷ್ಣ ಆಶ್ರಮ ಪರಮಹಂಸರು, ಶಾರದಾಮಾತೆ, ವಿವೇಕಾನಂದರು ಮೊದಲಾದ ಅನುಭಾವಿಗಳ ಮಾರ್ಗದರ್ಶನದಲ್ಲಿ ಭಾರತದಲ್ಲಿ ಅಸ್ಪೃಶ್ಯತೆ, ಲಿಂಗ ತಾರತಮ್ಯ, ವರ್ಗ ತಾರತಮ್ಯ, ಜಾತಿ ತಾರತಮ್ಯ, ಮೌಢ್ಯ ಮೊದಲಾದವುಗಳ ವಿರುದ್ಧ ಹೋರಾಟ ನಡೆಸಿ ಪ್ರಬುದ್ಧ ಭಾರತ ನಿರ್ಮಿಸಬೇಕೆಂಬ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಹಳಷ್ಟು ಒಳ್ಳೆಯ ಕೆಲಸ ಮಾಡಿರುವುದನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ರಾಮಕೃಷ್ಣ ಮಠ ಮತ್ತು ಪರಂಪರೆ ಹಿಂದೂ ಧರ್ಮದ ಭಾಗವೇ ಅಲ್ಲ ಎಂದು ದಿಟ್ಟತನದಿಂದ ಅವರು ಘೋಷಿಸಿ ಪರ್ಯಾಯ ಮಾನವ ಧರ್ಮ ಮತ್ತು ಕಲ್ಯಾಣ ರಾಜ್ಯವನ್ನು ಸ್ಥಾಪಿಸಬೇಕೆಂದು ಸ್ಥಾಪಕರು ದಿಟ್ಟತನದಿಂದ ಪ್ರತಿಪಾದಿಸಿದರು. ಆದರೆ ವಿವೇಕಾನಂದರ ನಂತರದಲ್ಲಿ ಶ್ರೀ ರಾಮಕೃಷ್ಣ ಆಶ್ರಮವನ್ನು ಮುನ್ನಡೆಸಿದ ಧಾರ್ಮಿಕ ಮುಖಂಡರು ನಿಜವಾದ ಅರ್ಥದಲ್ಲಿ ಸಂತರು-ಶರಣರು-ಯೋಗಿಗಳು-ಸಮಾಜ ಸೇವಕರು ಮೊದಲಾದ ಮಹತ್ವದ ಹೊಣೆಗಾರಿಕೆಗಳನ್ನು ನಿರ್ವಹಿಸದೇ ಭೋಗ ಜೀವನಕ್ಕೆ ಶರಣಾಗಿ ಶಿಕ್ಷಣ ಮತ್ತು ಆಧ್ಯಾತ್ಮಗಳ ವ್ಯಾಪಾರೀಕರಣಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ ಸಂಗತಿಯಾಗಿದೆ. ಒಂದು ವೇಳೆ ಇಂದು ವಿವೇಕಾನಂದರು ಬದುಕಿದ್ದರೆ ಇಂತಹ ಹೀನಾಯ ಪ್ರವೃತ್ತಿಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು.

ಭಾರತದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಶ್ರೀ ರಾಮಕೃಷ್ಣ ಆಶ್ರಮ ಶಾಖೆಗಳು ಇಂದು ಮೇಲ್ವರ್ಗದವರ ಶಿಕ್ಷಣಕ್ಕೆ ಮೀಸಲಾಗಿರುವುದು ಅನುಭವ ವೇದ್ಯವಾಗಿದೆ. ರೈತರು, ಕಾರ್ಮಿಕರು, ಕುಶಲಕರ್ಮಿಗಳು, ಮನೆಗೆಲಸದ ಹೆಂಗಸರು, ಆಟೋ ಚಾಲಕರು, ಅಸಂಘಟಿತ ವಲಯದ ಶ್ರಮ ಜೀವಿಗಳು ಮೊದಲಾದ ಅಲಕ್ಷಿತ ಜನರ ಮಕ್ಕಳಿಗೆ ಶ್ರೀ ರಾಮಕೃಷ್ಣ ಆಶ್ರಮ ಜ್ಞಾನ ದಾಸೋಹ ತಾಣಗಳಾಗಿ ಉಳಿದಿಲ್ಲ. ರಾಜಕಾರಣಿಗಳು, ವಾಣಿಜ್ಯೋದ್ಯಮಿಗಳು, ಅಧಿಕಾರಿಗಳು ಮತ್ತು ಇತರ ಹೊಟ್ಟೆ ತುಂಬಿದವರ ಮಕ್ಕಳನ್ನು ಉದ್ಧರಿಸಿ ಕೋಟಿಗಟ್ಟಲೆ ಹಣವನ್ನು ಶಿಕ್ಷಣ ಮತ್ತು ಆಧ್ಯಾತ್ಮಗಳ ಹೆಸರಿನಲ್ಲಿ ಲೂಟಿ ಮಾಡುತ್ತಿರುವುದನ್ನು ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ. ಎನ್‍ಟಿಎಂ ಶಾಲೆಯನ್ನು ವಿವೇಕ ಸ್ಮಾರಕವನ್ನಾಗಿ ಪರಿವರ್ತಿಸುವುದರ ಹಿಂದೆ ಶ್ರೀ ರಾಮಕೃಷ್ಣ ಆಶ್ರಮ ನಿರ್ವಾಹಕರ ಆರ್ಥಿಕ ಲೆಕ್ಕಾಚಾರಗಳು ಪ್ರಧಾನವಾಗಿ ಕಂಡುಬಂದಿವೆಯೇ ವಿನಹ ಬೇರೆ ಯಾವ ಸದುದ್ದೇಶವೂ ಇವರಿಗಿಲ್ಲ. ಇವರು ಸೋನಿಯಾಗಾಂಧಿ, ನರೇಂದ್ರಮೋದಿ, ಮೋಹನ್ ಭಾಗವತ್ ಮೊದಲಾದ ಧುರೀಣರನ್ನು ನಂಬಿಸಿ ದಾರಿ ತಪ್ಪಿಸುವಷ್ಟು ಪ್ರಭಾವಶಾಲಿಗಳಾಗಿ ಬೆಳೆದಿರುವುದು ದುರ್ದೈವದ ಸಂಗತಿಯಾಗಿದೆ.

ಕಳೆದ ಎರಡು ದಶಕಗಳಿಂದ ಮೈಸೂರಿನ ವಿವೇಕಿಗಳು, ಹೃದಯವಂತರು, ಕನ್ನಡಪರ ಮನಸ್ಸುಗಳು ಮತ್ತು ಧರ್ಮ ನಿರಪೇಕ್ಷತೆಗೆ ಶರಣಾದ ಮಹನೀಯರು ಎನ್‍ಟಿಎಂ ಶಾಲೆಯನ್ನು ಬಡವರ ಮಕ್ಕಳ ಕಲಿಕಾ ಕೇಂದ್ರವನ್ನಾಗಿ ಉಳಿಸಿಕೊಂಡು ಹೋಗುವ ದಿಟ್ಟ ಪ್ರಯತ್ನ ಮತ್ತು ಹೋರಾಟಗಳನ್ನು ಹಲವಾರು ಪ್ರತಿರೋಧಗಳ ನಡುವೆಯೂ ಸುಸ್ಥಿರಗೊಳಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇತ್ತೀಚೆಗೆ ಕರ್ನಾಟಕದ ಮನುವಾದಿಗಳು ತಮಗೆ ಸಿಕ್ಕಿರುವ ರಾಜ್ಯಾಧಿಕಾರವನ್ನು ದುರುಪಯೋಗಪಡಿಸಿಕೊಂಡು ಎನ್‍ಟಿಎಂ ಶಾಲೆಯನ್ನು ದೇವರಾಜ ಶಾಲೆಯೊಂದಿಗೆ ವಿಲೀನಗೊಳಿಸಿ ಇಲ್ಲಿನ ಆಯಕಟ್ಟಿನ ಜಾಗವನ್ನು ಕಬಳಿಸಿ ವಿವೇಕಾನಂದರ ಸ್ಮಾರಕ ಹೆಸರಿನಲ್ಲಿ ಲೂಟಿ ಹೊಡೆಯಲು ನಡೆಸಿದ ಪ್ರಯತ್ನವನ್ನು ಪ್ರಬಲವಾಗಿ ಸಾಮಾಜಿಕ ನ್ಯಾಯಪರ ಬುದ್ಧಿಜೀವಿಗಳು ಮತ್ತು ಹೋರಾಟಗಾರರು ವಿರೋಧಿಸಿದರು.

ಜಿ.ಹೆಚ್.ನಾಯಕ, ಮೀರಾನಾಯಕ, ನಂಜರಾಜೇ ಅರಸ್, ಪುಟ್ಟಸಿದ್ದಶೆಟ್ಟಿ, ಪ.ಮಲ್ಲೇಶ್, ದೇವನೂರು ಮಹಾದೇವ, ಪಂಡಿತಾರಾಧ್ಯ, ಸಾರಾ ಮಹೇಶ್, ಶಾಂತರಾಜು, ಜ್ಞಾನಪ್ರಕಾಶ್ ಸ್ವಾಮೀಜಿ, ಸ.ರ.ಸುದರ್ಶನ, ಎಂ.ಬಿ.ವಿಶ್ವನಾಥ್, ಮೂಗೂರು ನಂಜುಂಡಸ್ವಾಮಿ, ಹೊರೆಯಾಲ ದೊರೆಸ್ವಾಮಿ ಮೊದಲಾದವರ ನೇತೃತ್ವದಲ್ಲಿ ಶಾಲೆಯನ್ನು ಕೆಡವಿ ಸ್ಮಾರಕ ನಿರ್ಮಿಸುವ ಪ್ರಯತ್ನಕ್ಕೆ ಹೆಚ್ಚಿನ ಪ್ರತಿರೋಧ ಉಂಟಾಯಿತು. ಅಂದು ಸರ್ವಜನರ ಹಿತೈಷಿ ರಾಜಶೇಖರ ಕೋಟಿಯವರು ಎನ್‍ಟಿಎಂ ಶಾಲೆ ಉಳಿಸಿ ಆಂದೋಲನಕ್ಕೆ ಮುನ್ನುಡಿ ಬರೆದಿದ್ದರೆ, ಇಂದು ಅವರ ಪುತ್ರ ರವಿಕೋಟಿ ಎಲ್ಲ ಪ್ರಜ್ಞಾವಂತರನ್ನು ಒಂದುಗೂಡಿಸಿ ಹೋರಾಟಕ್ಕೆ ಚಾಲನೆ ನೀಡಿರುವುದು ವಿಶೇಷವಾಗಿದೆ. ನನ್ನ ಪ್ರೀತಿಯ ಶಿಷ್ಯ ದಿಲೀಪ್‍ಕುಮಾರ್ ಹೇಳಿರುವ ಹಾಗೆ ‘ಈ ಹೋರಾಟ ಹೃದಯವಂತರು ಮತ್ತು ಹೃದಯಹೀನರ ನಡುವಣ ಸಂಘರ್ಷವಾಗಿದೆ’. ಹೃದಯವಂತರಿಗೆ ಈ ಹೋರಾಟದಲ್ಲಿ ಗೆಲುವಾಗಲಿ ಎಂದು ಆಶಿಸುತ್ತೇನೆ.

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ಪ್ರಜ್ಞಾವಂತರ ಮಾತುಗಳು ಮತ್ತು ಹೋರಾಟಕ್ಕೆ ಬೆಲೆ ಕೊಟ್ಟು ಎನ್‍ಟಿಎಂ ಶಾಲೆ ಉಳಿಯಲಿ ಮತ್ತು ಖಾಲಿ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣವಾಗಲಿ ಎಂಬ ಸಮತೋಲನ ಹೊಂದಿದ ಮಾನವೀಯ ನಿರ್ಧಾರವನ್ನು ಕೈಗೊಂಡಿರುವುದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಬುದ್ಧಪ್ರಜ್ಞೆ, ಬಸವಪ್ರಜ್ಞೆ, ವಿವೇಕಾನಂದ ಪ್ರಜ್ಞೆ, ನಾಲ್ವಡಿ ಪ್ರಜ್ಞೆ ಮತ್ತು ಸಾಮಾಜಿಕ ನ್ಯಾಯ ಪ್ರಜ್ಞೆಗೆ ಶರಣಾಗಿ ಮುಖ್ಯಮಂತ್ರಿಗಳು ಬಡವರ ಮಕ್ಕಳ ಎದೆಯ ಮೇಲೆ ವಿವೇಕ ಸ್ಮಾರಕ ನಿರ್ಮಾಣವಾಗಬಾರದೆಂಬ ಖಚಿತ ನಿಲುವನ್ನು ಕೈಗೊಂಡಿರುವುದನ್ನು ಅಖಂಡವಾಗಿ ಬೆಂಬಲಿಸುತ್ತೇವೆ.

ಆದಷ್ಟು ಬೇಗನೇ ಕ್ಯಾಬಿನೆಟ್‍ನಲ್ಲಿ ಪೂರಕ ತೀರ್ಮಾನವನ್ನು ಕೈಗೊಂಡು ಕರ್ನಾಟಕ ಗೆಜೆಟ್‍ನಲ್ಲಿ ಪ್ರಕಟಿಸಿ ಈ ಪ್ರಕರಣಕ್ಕೆ ಸುಖಾಂತ್ಯ ನೀಡಬೇಕೆಂದು ಒತ್ತಾಯಿಸುತ್ತೇವೆ. ತಮ್ಮನ್ನು ಸುತ್ತುವರೆದಿರುವ ಸಂಘ ಪರಿವಾರದವರ ಬಗ್ಗೆ ವಿಶೇಷ ಎಚ್ಚರ ವಹಿಸಿ ಶ್ರೀ ಸಾಮಾನ್ಯರ ಹಿತಕಾಯುವ ಕೆಲಸಕ್ಕೆ ಮಹತ್ವ ನೀಡಬೇಕೆಂಬುದೇ ಆದರಣೀಯ ಮುಖ್ಯಮಂತ್ರಿಗಳಲ್ಲಿ ನಮ್ಮ ಮನವಿ. ರಾಜ್ಯದ ಎಲ್ಲ ಕನ್ನಡ ಶಾಲೆಗಳ ಪ್ರಧಾನ ಪೋಷಕರಾಗಿ ನಾಡಿನ ಇತಿಹಾಸದಲ್ಲಿ ಶ್ರೀ ಯಡಿಯೂರಪ್ಪನವರು ಮನ್ನಣೆ ಗಳಿಸಲಿ. ಕನ್ನಡ ಶಾಲೆಗಳಲ್ಲಿ ಸಂವಹನಾತ್ಮಕ ಆಂಗ್ಲಭಾಷೆ ಮತ್ತು ಕ್ರಿಯಾತ್ಮಕ ಆಂಗ್ಲಭಾಷೆಗಳನ್ನು ಕಲಿಸುವುದರ ಮೂಲಕ ಬಡವರ ಮಕ್ಕಳು ಜಾಗತೀಕರಣ ಯುಗದಲ್ಲಿ ಹೊಸ ಅವಕಾಶಗಳನ್ನು ಪಡೆಯಲು ಘನ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿ. ಇನ್ನು ಮೇಲಾದರೂ ಬಡವರ ಹಿತ ಮತ್ತು ನಾಡಿನ ಶ್ರೇಯಸ್ಸಿಗಾಗಿ ಕ್ಯಾತೆ ತೆಗೆದು ಪ್ರಚಾರಕ್ಕಾಗಿ ಹಪಹಪಿಸುವ ಸಾಹಿತಿಗಳು, ಲಾಭಕೋರ ಸ್ವಾಮೀಜಿಗಳು ಮತ್ತು ವ್ಯವಸ್ಥೆಯ ಗುಲಾಮರು ಬಾಯಿ ಮುಚ್ಚಿಕೊಂಡು ಸುಮ್ಮನಿರಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...