ದೇವನಹಳ್ಳಿ ರೈತರ ಭೂ ಸ್ವಾಧೀನ ಕೈ ಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಜುಲೈ 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ನಾಡ ಉಳಿಸಿ ಸಮಾವೇಶ’ ನಡೆಸಲು ನಿರ್ಧರಿಸಲಾಗಿದೆ.
ಭೂ ಸ್ವಾಧೀನ ವಿರೋಧಿಸಿ ‘ಭೂಮಿ ಸತ್ಯಾಗ್ರಹ’ ನಡೆಯುತ್ತಿರುವ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಯುಕ್ತ ಹೋರಾಟ ಕರ್ನಾಟ, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಮುಖಂಡರು,” ಸಮಾವೇಶದಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಿಂದಲೂ ಸಮಾನ ಮನಸ್ಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ತಿಳಿಸಿದರು.
ಜುಲೈ 4ರಂದು ಸರ್ಕಾರ ನಿಟ್ಟುಸಿರು ಬಿಡುವ ತೀರ್ಮಾನ ತೆಗೆದುಕೊಂಡರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರವನ್ನು ಅಭಿನಂದಿಸಿ ಇಲ್ಲಿಂದ ಹೊರಡುತ್ತೇವೆ. ಒಂದು ವೇಳೆ ಮತ್ತೊಮ್ಮೆ ನ್ಯಾಯ ನಿರಾಕರಣೆ ನಡೆದಲ್ಲಿ ಇನ್ನಷ್ಟು ಕಠಿಣ ಹೋರಾಟದ ದಿಟ್ಟ ತೀರ್ಮಾನವನ್ನು ಅಂದು ತೆಗೆದುಕೊಳ್ಳುತ್ತೇವೆ ಎಂದರು.

ರಾಜ್ಯಾದ್ಯಂತ ದೇವನಹಳ್ಳಿಯ ರೈತರ ಪರ ಧ್ವನಿ ಕೇಳಿ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಜುಲೈ 4ರಂದು ಸಮಗ್ರ ಸಭೆ ನಡೆಸುವ ಆಶ್ವಾಸನೆ ನೀಡಿದ್ದಾರೆ. ಈ ನಡುವೆ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಪತ್ರಿಕೆಯಲ್ಲಿ ಲೇಖನ ಬರೆದು ಭೂ ಸ್ವಾಧೀನದ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಜಾಹೀರಾತು ನೀಡಿ ಹಳೆ ಪ್ರಸ್ತಾಪವನ್ನೇ ಪುನರುಚ್ಚರಿಸಿದ್ದಾರೆ. ಇದನ್ನು ಗಮನಿಸಿದರೆ ಜುಲೈ4ರ ಸಭೆ ಮತ್ತೊಂದು ಮರೀಚಿಕೆಯಾಗುವ ಸಾಧ್ಯತೆ ಇದೆ ಎಂದು ಸಂಯುಕ್ತ ಹೋರಾಟದ ಮುಖಂಡರು ಹೇಳಿದರು.
ಜುಲೈ2ರಂದು ನಂದಿ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ದೇವನಹಳ್ಳಿ ಭೂ ಸಮಸ್ಯೆ ವಿಶೇಷ ಅಜೆಂಡಾ ಆಗಬೇಕು. ದೇವನಹಳ್ಳಿಯ ಮೂಲಕ ಬೆಟ್ಟಕ್ಕೆ ಹೋದವರು ಬರಿಗೈಯಲ್ಲಿ ಬಾರದಿರಲಿ ಎಂದು ಸಂಪುಟ ಸಚಿವರಲ್ಲಿ ಮನವಿ ಮಾಡಿದರು.
ದೇವನಹಳ್ಳಿ ವಿವಾದದ ನಿಜವಾದ ಚಿತ್ರಣ ಬಹುತೇಕ ಸಚಿವರು ಮತ್ತು ಶಾಸಕರುಗಳಿಗೆ ಸ್ಪಷ್ಟವಾಗಿಲ್ಲ. ಹಾಗಾಗಿ, ಹೋರಾಟಗಾರರು ಆಯಾ ಜಿಲ್ಲೆಗಳ ಸಚಿವರು ಮತ್ತು ಶಾಸಕರನ್ನು ಭೇಟಿಯಾಗಿ ಅವರಿಗೆ ಮಾಹಿತಿ ನೀಡಿ, ರೈತಪರ ನಿಲುವು ತೆಗೆದುಕೊಳ್ಳುವಂತೆ ಮನವೊಲಿಸಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪರವಾಗಿ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಎಸ್.ವರಲಕ್ಷ್ಮಿ, ನೂರ್ ಶ್ರೀಧರ್, ವಿ.ನಾಗರಾಜ್, ಡಿ.ಎಚ್ ಪೂಜಾರ್, ಕಾಮ್ರೇಡ್ ನಿರ್ಮಲ, ಶಿವಪ್ರಕಾಶ್, ಪಿ.ವಿ ಲೋಕೇಶ್, ಯು. ಬಸವರಾಜ್, ದೇವಿ ಇದ್ದರು.


