ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಕೋಮು ಸಾಮರಸ್ಯ ಕದಡುವ ಐಪಿಎಸ್ ನಾಗೇಶ್ವರರಾವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಪಿಐ (ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಬೃಂದಾ ಕಾರಟ್ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ದೆಹಲಿ ಪೋಲೀಸರಿಗೆ ಪತ್ರ ಬರೆದಿದ್ದಾರೆ.
ಗೃಹ ಸಚಿವಾಲಯದ ಅಡಿಯಲ್ಲಿ ಅಗ್ನಿಶಾಮಕ ಸೇವೆಗಳು, ಗೃಹರಕ್ಷಕರು ಮತ್ತು ನಾಗರಿಕ ರಕ್ಷಣಾ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಕೇಡರ್ ನಾಗೇಶ್ವರ ರಾವ್ ಟ್ವಿಟರ್‌ನಲ್ಲಿ ಅತ್ಯಂತ ಅತಿರೇಕದ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿದ್ದು ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಗೃಹಸಚಿವ ಅಮಿತ್ ಷಾಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಜಾದ್, ಶಿಕ್ಷಣಕ್ಕೆ ಗಮನಾರ್ಹ ಕೊಡುಗೆ ನೀಡಿದ್ದ ಮುಸ್ಲಿಂ ಶಿಕ್ಷಣ ತಜ್ಞರನ್ನು ಹಾಗೂ ಎಡಪಂಥೀಯರ ವಿರುದ್ದ ಅವರು ಟ್ವಿಟ್ಟರ್‌ನಲ್ಲಿ ಅವಹೇಳನಕಾರಿ ಭಾಷೆ ಬಳಸಿ ಟೀಕಿಸಿದ್ದರು.
ಅಲ್ಲದೆ ಆರೆಸ್ಸೆಸ್ ಮತ್ತು ಬಿಜೆಪಿ ಭಾರತದ ಪುನರ್ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಪ್ರಸ್ತುತ ಐಪಿಎಸ್ ಸೇವೆಯಲ್ಲಿ ಇರುವ ನಾಗೇಶ್ವರ ರಾವ್ ಹೊಗಳಿದ್ದಾರೆ.
ಇದನ್ನು ಖಂಡಿಸಿರುವ ಬೃಂದಾ ಕಾರಟ್, ಸಾಂವಿಧಾನಿಕ ಹಕ್ಕಿನ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಅಭಿಪ್ರಾಯ ಹೇಳುವುದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಆದರೆ ನಾಗರಿಕ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯಾಗಿ, ನಾಗೇಶ್ವರ ರಾವ್ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಐಪಿಸಿಯ ಸೆಕ್ಷನ್ 153 ಎ ಮತ್ತು 295 ಎ ಅಡಿಯಲ್ಲಿ ಈ ಅಪರಾಧಗಳಿಗೆ ಅವರು ತಪ್ಪಿತಸ್ಥನಾಗಿದ್ದಾರೆ ಎಂದು ಹೇಳಿದ್ದಾರೆ.
ನಾಗೇಶ್ವರ್ ರಾಮ್ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಅಥವಾ ಕೋಮು ಭಾವನೆಗಳನ್ನು ಪ್ರಚೋದಿಸುವುದು ಇದೇ ಮೊದಲಲ್ಲ ಎಂದು ಅವರು ಹಲವಾರು ಘಟನೆಗಳ ಉದಾಹಣೆ ನೀಡಿದ್ದಾರೆ.
ನಾಗೇಶ್ವರ್ ಹೇಳಿಕೆಗಳು ನೋಡಿದರೆ ಜುಲೈ 31 ರಂದು ನಿವೃತ್ತಿಯ ನಂತರ ಬಿಜೆಪಿ ಅಥವಾ ಆರೆಸ್ಸೆಸ್‌ಗೆ ಸೇರ್ಪಡೆಗೊಳ್ಳಲು ಅರ್ಹರಾಗಬಹುದು ಎಂದು ಅವರು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಬಂದಿರುವ ವರದಿಗಳನ್ನು ಉಲ್ಲೇಖಿಸಿರುವ ಬೃಂದಾ ಕಾರಟ್, ಸೇವೆ ಸಲ್ಲಿಸುವ ಅಧಿಕಾರಿಯಾಗಿ ನಾಗೇಶ್ವರ್ ರಾವ್ ಪಕ್ಷಾಪಾತಿ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ಸೇವಾ ನಿಯಮಗಳ ಉಲ್ಲಂಘನೆಗಾಗಿ ಅವರ ಮೇಲೆ ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಿ ಚಾರ್ಜ್‌ಶೀಟ್ ಹಾಕಬೇಕು ಎಂದು ಬರೆದಿದ್ದಾರೆ.
ಸೆಕ್ಷನ್ 153 ಎ ಮತ್ತು 295 ಎ ಅಡಿಯಲ್ಲಿ ಎಫ್‌ಐಆರ್ ನೋಂದಣಿ ಮಾಡುವಂತೆ ಕೋರಿ ನಾಗೇಶ್ವರ್ ರಾವ್ ವಿರುದ್ಧ ದೂರು ದಾಖಲಿಸಿರುವ ಬೃಂದಾ ಕಾರಟ್, ಅವರ ವಿಚಾರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಗೃಹಸಚಿವರಿಗೆ ವಿನಂತಿಸಿದ್ದಾರೆ.
ಇದನ್ನೂ ಓದಿ: ಡೀಸೆಲ್ ಮೇಲಿನ ವ್ಯಾಟ್ ಕಡಿತ; ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 8 ರೂ. ಇಳಿಕೆ


