ಬೆಂಗಳೂರು: ಪರಿಶಿಷ್ಟ ಜಾತಿಗಳ ಮೀಸಲಾತಿ ಕುರಿತು ರಚಿಸಲಾದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಅಂತಿಮ ವರದಿಯು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳಗ್ಗೆ 11 ಗಂಟೆಗೆ ಸಲ್ಲಿಕೆಯಾಗಲಿದೆ. ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿ ಕುರಿತು ಶಿಫಾರಸು ಮಾಡಲು ಈ ಆಯೋಗವನ್ನು ರಚಿಸಲಾಗಿತ್ತು.
ಆಯೋಗದ ಮೂಲಗಳ ಪ್ರಕಾರ, ಅಂತಿಮ ವರದಿ ಸಿದ್ಧವಾಗಿದೆ. ಇಂದು ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಒಳ ಮೀಸಲಾತಿ ವಿಷಯದಿಂದಾಗಿ ಸಾರ್ವಜನಿಕ ಸೇವೆಗಳ ನೇಮಕಾತಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ವರದಿ ಸಲ್ಲಿಕೆಯಾದ ನಂತರ ಮತ್ತು ಶಿಫಾರಸುಗಳು ಅಂಗೀಕಾರಗೊಂಡ ನಂತರ ನೇಮಕಾತಿ ಪ್ರಕ್ರಿಯೆ ಪುನರಾರಂಭವಾಗಲಿದೆ.
ಆಯೋಗವು ಮೇ 5 ರಿಂದ 3 ತಿಂಗಳ ಸಮೀಕ್ಷೆ ನಡೆಸಿದ್ದು, ರಾಜ್ಯದಲ್ಲಿನ 1.16 ಕೋಟಿ ಪರಿಶಿಷ್ಟ ಜಾತಿ ಜನಸಂಖ್ಯೆಯ ಪೈಕಿ ಶೇ. 93 ರಷ್ಟು ಜನರನ್ನು ಗುರುತಿಸಿದೆ. ಆದರೆ, ಬೆಂಗಳೂರು ನಗರದಲ್ಲಿ ಮಾತ್ರ ಸಮೀಕ್ಷೆ ನಿಧಾನವಾಗಿದ್ದು, ಇಲ್ಲಿನ 13.62 ಲಕ್ಷ ಅಂದಾಜು ಪರಿಶಿಷ್ಟ ಜಾತಿ ಜನಸಂಖ್ಯೆಯ ಪೈಕಿ ಶೇ. 53 ರಷ್ಟು ಜನರನ್ನು ಮಾತ್ರ ಗುರುತಿಸಲಾಗಿದೆ.
ಸುಪ್ರೀಂ ಕೋರ್ಟ್ ಆಗಸ್ಟ್ 2024 ರಲ್ಲಿ ನೀಡಿದ ತೀರ್ಪಿನ ನಂತರ ರಾಜ್ಯ ಸರ್ಕಾರ ಈ ಆಯೋಗವನ್ನು ರಚಿಸಿತ್ತು. ಈ ತೀರ್ಪು ರಾಜ್ಯದಲ್ಲಿನ 101 ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಲು ಅವಕಾಶ ಮಾಡಿಕೊಟ್ಟಿತ್ತು. ದಲಿತ ಎಡ (ಮಾದಿಗ) ಸಮುದಾಯಗಳು ಒಳ ಮೀಸಲಾತಿಗೆ ಪ್ರಮುಖ ಬೇಡಿಕೆ ಇಟ್ಟಿದ್ದು, ಮೀಸಲಾತಿ ಸೌಲಭ್ಯಗಳು ಇದುವರೆಗೆ ದಲಿತ ಬಲ (ಹೊಲೆಯ), ಭೋವಿ ಮತ್ತು ಲಂಬಾಣಿ ಸಮುದಾಯಗಳಿಗೆ ಮಾತ್ರ ದೊರೆತಿವೆ ಎಂದು ಆರೋಪಿಸಿವೆ.

ಒಳಮೀಸಲಾತಿ ಸಮೀಕ್ಷಾ ಅಂತಿಮ ವರದಿಯನ್ನು ಇಂದು ಸಲ್ಲಿಕೆಯಾಗಲಿದೆ. ಕೂಡಲೇ ಮುಂದಿನ ಸಚಿವ ಸಂಪುಟದಲ್ಲಿ ಮಂಡನೆಯಾಗಿ ಮುಂದಿನ ಅಧಿವೇಶನದಲ್ಲಿ ಚರ್ಚೆಯಾಗಿ ಜಾರಿಯಾಗಲೇಬೇಕು.
ಒಂದು ವೇಳೆ ಉಪ ಸಮಿತಿನೋ ಮತ್ತೊಂದೊ ಮಾಡುವ ಪ್ರಯತ್ನವನ್ನೇನಾದರೂ ಸರ್ಕಾರ ಮಾಡುವ ಪ್ರಯತ್ನ ಮಾಡಿದರೆ ನಿಜಕ್ಕೂ ಮೀಸಲಾತಿ ವಿರೋಧಿ ಬಿಜೆಪಿ ಸಂಘಪರಿವಾರದ ಖೂಳರು ಇದರ ಎಲ್ಲಾ ಲಾಭವನ್ನು ಪಡೆದೇ ಪಡೆಯುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಮತ್ತೆ ಬಿಜೆಪಿಯ ಸಂಘಪರಿವಾರದ ಖೂಳರು ಇದರ ಲಾಭ ಪಡೆಯುತ್ತಾರೆಂದ ಒಳಮೀಸಲಾತಿ ಮಾಡಬೇಕಿಲ್ಲ. 35 ವರ್ಷಗಳ ನ್ಯಾಯದ ಬೇಡಿಕೆ ಇದು. ಇದನ್ನು ಜಾರಿ ಮಾಡಬೇಕಿರುವುದು ಕಾಂಗ್ರೆಸ್ ನ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಒಳಮೀಸಲಾತಿ ಪರ ಹೋರಾಟಗಾರ ಚಂದ್ರು ತರಹುಣಸೆ ತಿಳಿಸಿದ್ದಾರೆ.
ಒಳಮಿಸಲಾತಿ ವರದಿ ಸಲ್ಲಿಸಲು ಇಂದಿಗೆ (ಜು.4) ಸಮಯ ನಿಗದಿಯಾಗಿದೆ. ಹಾಗಂತ ಇದಕ್ಕಾಗಿ ಸಂಭ್ರಮಿಸಬೇಕಿಲ್ಲ ಮತ್ತು ಮೈ ಮರೆಯಬೇಕಿಲ್ಲ. ವರದಿ ಜಾರಿ ಆಗಿ ಸರ್ಕಾರದ ಆದೇಶದ ಪ್ರತಿ ಕೈ ಸೇರುವವರೆಗೂ ಸರ್ಕಾರದ ಮೇಲೆ ಒತ್ತಡ ನಿರಂತರವಾಗಿರಲಿ ಮತ್ತು ಒಳಮೀಸಲಾತಿ ಜಾರಿ ಪ್ರಮಾಣದಲ್ಲಿ ಅಂದರೇ ಪರ್ಸಂಟೇಜ್ ಹಂಚಿಕೆ ವಿಚಾರದಲ್ಲಿ ಯಾವ ಮೋಸ, ಅನ್ಯಾಯ ಆಗದಂತೆ ಹಕ್ಕೊತ್ತಾಯ ನಿರಂತರವಾಗಿರಲಿ. ಕಳೆದ ಮುವ್ವತೈದು ವರ್ಷಗಳಲ್ಲಿ ಆದ ಅದೆಷ್ಟೋ ನಂಬಿಕೆ ದ್ರೋಹಗಳು ಇನ್ನೂ ನಮ್ಮ ಕಣ್ಣಿಗೆ ಕಟ್ಟಿದಂತಿರುವಾಗ ಮತ್ತೊಂದು ನಂಬಿಕೆ ದ್ರೋಹ ಆಗದಂತೆ ಜಾಗ್ರತೆ ವಹಿಸೋಣ. ಸಂಭ್ರಮ ಅಂತ ಮೈ ಮರೆತು ಬಿಡೋದು ಬೇಡ. ಸದಾಶಿವ ಆಯೋಗದ ವರದಿ ಸಲ್ಲಿಕೆಯಾದಾಗ ಮತ್ತು ಮಾದುಸ್ವಾಮಿ ವರದಿ ಸಲ್ಲಿಕೆಯಾದಾಗಲೂ ಹೀಗೆಯೇ ಸಂಭ್ರಮ ಪಟ್ಟಿದ್ದು. ಕೊನೆಗೆ ಏನಾಯಿತೆಂಬ ಉದಾಹರಣೆಗೆ ನಾವೆ ಜೀವಂತ ಸಾಕ್ಷಿಗಳು ಇದ್ದೇವೆಯಲ್ಲ ಎಂದು ಹೋರಾಟಗಾರ ಬಿ ಆರ್ ಭಾಸ್ಕರ್ ಪ್ರಸಾದ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಭಿಪ್ರಾಯಿಸಿದ್ದಾರೆ.


