ಹೆತ್ತೊಡಲು
——————
ಅದೆಷ್ಟು ಸಂಜೆಗಳು ಕರಗಿ
ವರುಷಗಳೊಡನೆ ಲೀನವಾದವು
ಅವನೆಲ್ಲಿ ಹೋದ?
ಅವಳು ಕಾಯುತ್ತಲೇ ಇದ್ದಾಳೆ
ಜತನದಿ ಜೋಡಿಸಿಟ್ಟ ಪುಸ್ತಕ
ಒಪ್ಪವಾಗಿ ಮಡಿಚಿಟ್ಟ ಬಟ್ಟೆ
ಎಲ್ಲೆಲ್ಲೂ ಅವನ ಚಹರೆ
ಅವಳ ಕಾಡುತ್ತವೆ
ಗೆಳೆಯರ ವದನದಲಿ ಅವನ ಕಂಡು
ಭಾವಚಿತ್ರವ ಎದೆಗಪ್ಪಿ
ಬಿಕ್ಕಿ ಬಿಕ್ಕಿ ಅಳುತ್ತಾಳೆ
ಬಂಡೆಯೂ ಕರಗುವಂತೆ
ಒಬ್ಬಂಟಿಯಾಗಿ ಮರಳುವ ಪ್ರತಿ ಸಂಜೆ
ಅಮವಾಸ್ಯೆಯ ರಾತ್ರಿಗಳೊಡನೆ
ಜಗಳವಾಡುತ್ತಾಳೆ
ಎಲ್ಲಿ, ನನ್ನ ಮಗನೆಲ್ಲಿ?
ಕದ ಮುಚ್ಚಲೊಲ್ಲದ ಕಂಗಳು
ಇರುಳು ಉಗುಳುವ ಕರಿಗತ್ತಲ
ಸೀಳಿ ತರುವ ಅವನ ರೂಪಕೆ
ಹೆತ್ತೊಡಲು ಹೊತ್ತಿ ಉರಿಯತೊಡಗುತ್ತದೆ
ಒಂದರೆಕ್ಷಣ ಕಣ್ಣೆವೆ ಸೇರಲು
ಮೆಲ್ಲನೆ ಬಾಗಿಲ ಬಡಿದಂತೆ
‘ಅಮ್ಮಿ’ ಎಂದು ಕೂಗಿ ಕರೆದಂತಾಗಿ
ದಿಗ್ಗನೆ ಎದ್ದು ಕೂರುತ್ತಾಳೆ
ಹಸಿವಲಿ ವಿಲವಿಲನೆ ಒದ್ದಾಡುತ್ತಿರುವನೇ?
‘ಅಮ್ಮಿ’ ಎಂದು ಕನವರಿಸುತ್ತಿರುವನೇ?
ಮಗ್ಗುಲು ಬದಲಾಯಿಸುತ್ತಲೇ
ಪ್ರಶ್ನೆಗಳ ಪೋಣಿಸತೊಡಗುತ್ತಾಳೆ
ಪಂಜರದ ಪ್ರಾಣಿಗೆ ಆಹಾರವಾದನೇ?
ನನ್ನ ಮಗ ಇತಿಹಾಸವಾದನೇ?
ತೀರದ ಸಂಕಟ ಕರುಳ ಬಳ್ಳಿಯ
ಬಿಗಿಯಾಗಿ ಸುತ್ತಿಕೊಳ್ಳುತ್ತದೆ
ನನ್ನ ಮಗ ನಜೀಬನೆಲ್ಲಿ?
ಎಂದೋ ಸತ್ತ ವ್ಯವಸ್ಥೆಯೆದೆರು
ಭರವಸೆಯ ಸಾಯಲು ಬಿಡದೆ
ಪ್ರಶ್ನಿಸುತ್ತಲೇ ಇದ್ದಾಳೆ.
ಮಿಸ್ರಿಯಾ. ಐ.ಪಜೀರ್
ಇದನ್ನೂ ಓದಿ: ಜೆಎನ್‌ಯು ವಿದ್ಯಾಥಿ೯ ನಜೀಬ್ ನಾಪತ್ತೆಯಾಗಿ 3 ವರ್ಷ: ಆತನ ತಾಯಿಯಿಂದ ಅಮಿತ್ ಶಾ ಮನೆಗೆ ಪ್ರತಿಭಟನಾ ಮೆರವಣಿಗೆ


