ಇಂಡಿಯಾ ಎಂಬುದನ್ನು ಭಾರತ ಎಂದು ಬದಲಾಯಿಸುವ ಸಂಬಂಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಹೆಸರು ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ನಾವು ಅದನ್ನು ಮಾಡಲು ಆಗುವುದಿಲ್ಲ. ಇಂಡಿಯಾವನ್ನು ಈಗಾಗಲೇ ಭಾರತವೆಂದು ಕರೆಯಲಾಗುತ್ತಿದೆ. ಸಂವಿಧಾನದ ಆರ್ಟಿಕಲ್‌ಗಳಲ್ಲಿಯೂ ಉಲ್ಲೇಖಿಸಲಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ತಿಳಿಸಿದ್ದಾರೆ.
ಅರ್ಜಿದಾರ ನಮಹ ಎಂಬುವವರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ನ್ಯಾಯವಾದಿ ಆಶ್ವಿನ್ ವೈಶ್ ಇಂಡಿಯಾ ಎಂಬುದರ ಮೂಲ ಗ್ರೀಕ್ ಪದವಾಗಿದೆ. ಇಂಡಿಕಾದಿಂದ ಇಂಡಿಯಾ ಬಂದಿದೆ ಎಂದು ವಾದಿಸಿದರು. ಇದಕ್ಕೆ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುವುದನ್ನು ಉದಾಹರಿಸಿದರು. ಆದರೆ ಇದಕ್ಕೆ ಧನಾತ್ಮಕವಾಗಿ ನಿರ್ದೇಶನಗಳನ್ನು ಪಾಸು ಮಾಡಲು ನ್ಯಾಯಲಯ ಒಲವು ತೋರಲಿಲ್ಲ.
ಇದೇ ರೀತಿಯ ಅರ್ಜಿಯನ್ನು 2016ರಲ್ಲಿ ಸಲ್ಲಿಸಲಾಗಿತ್ತು. ಆಗ ಸುಪ್ರೀಂಕೋರ್ಟ್ ಆ ಅರ್ಜಿಯನ್ನು ಸಹ ತಿರಸ್ಕರಿಸಿತ್ತು.
ಈಗಿನ ಅರ್ಜಿಯಲ್ಲಿ ಇಂಡಿಯಾ ಎಂಬುದು ಸಾಮ್ರಾಜ್ಯಶಾಹಿ ಭಾಗವಾಗಿದೆ. ಹಾಗಾಗಿ ಇದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವುದಿಲ್ಲ ವಾದಿಸಿದೆ.
ಈ ಅರ್ಜಿಯ ಸಂಬಂಧ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು. ನಾವು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಇದನ್ನೂ ಓದಿ:20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರೂ 35% ಸಣ್ಣ ಉದ್ಯಮ ಸ್ಥಗಿತದತ್ತ: ಸಮೀಕ್ಷೆ


