ನಮ್ಮ ಮೆಟ್ರೋ ಪ್ರಯಾಣ ದರ, ವಿಶೇಷವಾಗಿ 6 ರಿಂದ 25 ಕಿ.ಮೀ. ನಡುವಿನ ದೂರಕ್ಕೆ, ‘ಅಸಹಜ’ ಅಥವಾ ಭಾರೀ ಏರಿಕೆ ಕಂಡು ಬಂದಿರುವುದು ‘ತಾಂತ್ರಿಕ ದೋಷಗಳಿಂದ’ ಆಗಿರಬಹುದು. ಈ ಬಗ್ಗೆ ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಅಥವಾ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಫೆಬ್ರವರಿ 9ರಂದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ರಿಯಾಯಿತಿ ರಹಿತ ದರಗಳನ್ನು ಸರಾಸರಿ ಶೇ. 51.55 ರಷ್ಟು ಮತ್ತು ರಿಯಾಯಿತಿ ಸಹಿತ ದರಗಳನ್ನು ಶೇ. 45-46 ರಷ್ಟು ಹೆಚ್ಚಿಸಿದೆ. ಜೂನ್ 2017ರ ನಂತರ ಇದೇ ಮೊದಲ ಬಾರಿಗೆ ದರ ಹೆಚ್ಚಳವಾಗಿದೆ.
ಆದಾಗ್ಯೂ, ಹಲವಾರು ಮಾರ್ಗಗಳಲ್ಲಿ ಪ್ರಯಾಣ ದರಗಳು ಶೇಕಡ 100ರಷ್ಟು ಏರಿಕೆಯಾಗಿವೆ ಎಂದು ಅನೇಕ ಪ್ರಯಾಣಿಕರು ದೂರಿದ್ದಾರೆ. ನಿಯಮಿತ ಪ್ರಯಾಣಿಕರು, ವಿಶೇಷವಾಗಿ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉದಾಹರಣೆಗೆ : ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿ ನಡುವಿನ 6.7 ಕಿ.ಮೀ ಪ್ರಯಾಣ ದರ ಪ್ರಸ್ತುತ 40 ರೂಪಾಯಿ ಆಗಿದ್ದು, ಹಿಂದಿನ ದರಕ್ಕಿಂತ 20 ರೂಪಾಯಿ ಹೆಚ್ಚಾಗಿದೆ. ಇತರ ಹಲವು ಮಾರ್ಗಗಳಲ್ಲಿ ಇದೇ ರೀತಿಯ ಹೆಚ್ಚಳ ಕಂಡು ಬಂದಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ವಿವರಿಸಿದೆ.
ಭಾರೀ ದರ ಹೆಚ್ಚಳದ ಸಂಬಂಧ ಪ್ರಯಾಣಿಕರಿಗೆ ತಕ್ಷಣಕ್ಕೆ ಯಾವುದೇ ಪರಿಹಾರ ಸಿಗುವ ಸಾಧ್ಯತೆ ಕಡಿಮೆ. ಬಿಎಂಆರ್‌ಸಿಎಲ್ ಈ ಸಮಸ್ಯೆಯನ್ನು ಇನ್ನೂ ಪರಿಶೀಲಿಸುತ್ತಿರುವುದಾಗಿ ಹೇಳಿದೆ.
ದರ ಏರಿಕೆ ಮಾತ್ರವಲ್ಲದೆ, ಸ್ಮಾರ್ಟ್ ಕಾರ್ಡ್‌ಗಳಲ್ಲಿನ ಕನಿಷ್ಠ ಉಳಿತಾಯ ಮಿತಿಯನ್ನು 50 ರೂಪಾಯಿಯಿಂದ 90 ರೂಪಾಯಿಗೆ ಏರಿಸಿರುವ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿವೆ.
ಒಂದು ಬಾರಿಯ ಪ್ರಯಾಣಕ್ಕೆ ಬೇಕಾಗುವ ಗರಿಷ್ಠ ದರದಷ್ಟು ಮೊತ್ತ ಕಾರ್ಡ್‌ನಲ್ಲಿ ಇರಬೇಕು ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಯಾಣಿಕರೊಬ್ಬರು, ಈ ಹಿಂದೆ ಗರಿಷ್ಠ ಮೊತ್ತ 60 ರೂಪಾಯಿ ಇದ್ದಾಗ ಕಾರ್ಡ್‌ನ ಉಳಿತಾಯ ಮಿತಿ 50 ರೂಪಾಯಿ ಇದ್ದದ್ದು ಏಕೆ? ಎಂಬುವುದಾಗಿ ಪ್ರಶ್ನಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.
ಕನಿಷ್ಠ ಮೊತ್ತವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಬಿಎಂಆರ್‌ಸಿಎಲ್ ಅಧಿಕಾರಿ ತಳ್ಳಿಹಾಕಿದ್ದಾರೆ. ಅದೇ ರೀತಿ, ಕ್ಯೂಆರ್ ಕೋಡ್ ಟಿಕೆಟ್‌ಗಳ ಮೇಲಿನ ಶೇಕಡ 5 ರಷ್ಟು ರಿಯಾಯಿತಿಯನ್ನು ಕೂಡ ಮರುಸ್ಥಾಪಿಸಲಾಗುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಯಾಣ ದರ ಹೆಚ್ಚಳವು ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತಿರುವಂತೆ ತೋರುತ್ತಿದೆ ಎಂದು ವರದಿ ಹೇಳಿದೆ.
ದರ ಏರಿಕೆ ಜಾರಿಗೆ ಬಂದ ನಂತರದ ವಾರದ ಮೊದಲ ದಿನವಾದ ಸೋಮವಾರ, ಒಟ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆ 8,28,149 ರಷ್ಟಿತ್ತು. ಈ ವರ್ಷದ ನಾಲ್ಕು ಸೋಮವಾರಗಳಲ್ಲಿ (ಜನವರಿ 13, ಮಕರ ಸಂಕ್ರಾಂತಿಯ ಮುನ್ನಾದಿನ ಹೊರತುಪಡಿಸಿ) ದಾಖಲಾದ 8.8 ಲಕ್ಷ ಪ್ರಯಾಣಿಕರ ಸಂಖ್ಯೆಗಿಂತ ಇದು ಶೇಕಡಾ 6 ರಷ್ಟು ಕಡಿಮೆಯಾಗಿದೆ.
ಪ್ರಯಾಣ ದರ ಏರಿಕೆಯ ನಂತರ ದಿನಕ್ಕೆ ಹೆಚ್ಚುವರಿಯಾಗಿ 55-60 ಲಕ್ಷ ರೂಪಾಯಿ ಗಳಿಸುವ ಅಂದಾಜು ಮಾಡಿರುವ ಬಿಎಂಆರ್‌ಸಿಎಲ್, ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 1-2 ರಷ್ಟು ಇಳಿಕೆ ನಿರೀಕ್ಷಿಸಿದೆ.
2025ರ ನಂತರ ಪ್ರತಿ ಸೋಮವಾರ ಪ್ರಯಾಣಿಸಿದವರ ಸಂಖ್ಯೆ
ಜನವರಿ 6: 8,61,593
ಜನವರಿ 13: 7,84,539 (ಸಂಕ್ರಾಂತಿ ರಜಾ ದಿನ)
ಜನವರಿ 20: 8,79,537
ಜನವರಿ 27: 9,09,756
ಫೆಬ್ರವರಿ 3: 8,70,147
ಫೆಬ್ರವರಿ 10: 8,28,149
ಫೆಬ್ರವರಿ 11: 7,78,774 (ಮಂಗಳವಾರ)


