ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹೋಗಲಾಡಿಸುವ ಆರ್ಟಿಕಲ್ 370 ನೇ ವಿಧಿ ರದ್ದು ಮಾಡುವ ರಾಷ್ಟ್ರಪತಿಗಳ ಆದೇಶವನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶುಕ್ರವಾರ ಅಂಗೀಕರಿಸಿದ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ಅನ್ನು ಸಹ ಅಸಂವಿಧಾನಿಕ ಎಂದು ಘೋಷಿಸುವಂತೆ ಸುಪ್ರೀಂಕೋರ್ಟ್‌ನಿಂದ ನಿರ್ದೇಶನ ನೀಡಬೇಕೆಂದು ಪಕ್ಷವು ಕೋರಿದೆ.
ಜಮ್ಮು ಮತ್ತು ಕಾಶ್ಮೀರದ ಕುರಿತು ಕೇಂದ್ರದ ನಿರ್ಧಾರಗಳ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ ನ ಮುಖಂಡರಾದ ಮೊಹಮ್ಮದ್ ಅಕ್ಬರ್ ಲೋನ್ ಮತ್ತು ಹಸ್ನೈನ್ ಮಸೂದಿ ಅವರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ವಿಭಜನೆ ಕುರಿತು ಕೇಂದ್ರವು ಎರಡು ನಿರ್ಣಯಗಳನ್ನು ಮತ್ತು ಮಸೂದೆಯನ್ನು ಮಂಡಿಸುವಾಗ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಸೋಮವಾರ ಗೃಹಬಂಧನದಲ್ಲಿರಿಸಲಾಗಿತ್ತು.
ಹಿಂಸಾಚಾರವನ್ನು ತಡೆಗಟ್ಟಲು ರಾಜ್ಯದಲ್ಲಿ ಸಾವಿರಾರು ಸೈನಿಕರನ್ನು ನಿಯೋಜಿಸಿದ್ದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಹಲವಾರು ರಾಜಕೀಯ ಮುಖಂಡರನ್ನು ಸಹ ಆಗ ಗೃಹಬಂಧನದಲ್ಲಿಡಲಾಗಿತ್ತು.
ಈ ನಡುವೆ, ಶ್ರೀನಗರದ ಜಿಲ್ಲಾಧಿಕಾರಿ ಶಾಹಿದ್ ಚೌಧರಿ ಶನಿವಾರ ನಗರದ ಹೆಚ್ಚಿನ ಭಾಗಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ಹೇಳಿದ್ದಾರೆ ಮತ್ತು ಬೀದಿಗಳಲ್ಲಿ ಜನರು ಓಡಾಡುತ್ತಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆಯ ನಂತರ ಸಾವಿರಾರು ಜನರು ಶ್ರೀನಗರದಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆಂದು ವರದಿಯಾಗಿದೆ. ಭದ್ರತಾ ಪಡೆಗಳ ಸಿಬ್ಬಂದಿಯು ಗುಂಪನ್ನು ನಿಯಂತ್ರಿಸಲು ಅಶ್ರುವಾಯು ಮತ್ತು ಹಲವು ಸುತ್ತುಗಳನ್ನು ಗಾಳಿಯಲ್ಲಿ ಹಾರಿಸಿದರು. ಶುಕ್ರವಾರದ ಪ್ರತಿಭಟನೆಯಲ್ಲಿ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿದರೆ, ಭಾರತ ಸರ್ಕಾರ ಅದನ್ನು ನಿರಾಕರಿಸಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದೆ.


