ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯನ್ನು ರಾಷ್ಟ್ರವ್ಯಾಪಿಯಾಗಿ ಸಿದ್ಧಪಡಿಸಲು ಸರ್ಕಾರವು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮತ್ತೇ ಒಕ್ಕೂಟ ಸರ್ಕಾರ ಲೋಕಸಭೆಗೆ ಮಂಗಳವಾರ ತಿಳಿಸಿದೆ.
ಪೌರತ್ವ (ತಿದ್ದುಪಡಿ) ಕಾಯಿದೆ-2019 (CAA) ಯನ್ನು 2019 ರ ಡಿಸೆಂಬರ್ 12 ರಂದು ಘೋಷಿಸಲಾಗಿದ್ದು, 2020 ರ ಜನವರಿ 10, ರಂದು ಜಾರಿಗೆ ಬಂದಿದೆ. CAA ವ್ಯಾಪ್ತಿಗೆ ಒಳಪಡುವ ಜನರು ನಿಯಮಗಳನ್ನು ರಚಿಸಿದ ನಂತರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಒಕ್ಕೂಟ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.
ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!
ಇಲ್ಲಿಯವರೆಗೆ, ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಐಸಿ) ಸಿದ್ಧಪಡಿಸಲು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಾಲಾ ರಾಯ್ ಅವರು ಎತ್ತಿರುವ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ.
ಅಸ್ಸಾಂಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ, ಎನ್‌ಆರ್‌ಸಿಯಲ್ಲಿ ಸೇರ್ಪಡೆಗಳ ಪೂರಕ ಪಟ್ಟಿ ಮತ್ತು ಆನ್‌ಲೈನ್ ಕುಟುಂಬವಾರು ಹೊರಗಿಡುವ ಪಟ್ಟಿಯ ಹಾರ್ಡ್ ಕಾಪಿಗಳನ್ನು ಆಗಸ್ಟ್ 31, 2019 ರಂದು ಪ್ರಕಟಿಸಲಾಗಿದೆ ಎಂದು ನಿತ್ಯಾನಂದ ರೈ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಚಿವ ನಿತ್ಯಾನಂದ ರೈ ಅವರು ಕಳೆದ ಮಾರ್ಚ್‌ನಲ್ಲಿ ಕೂಡಾ ಎನ್‌ಆರ್‌ಸಿಯನ್ನು ರಾಷ್ಟ್ರವ್ಯಾಪಿ ನಡೆಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ದೇಶಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೆ ತರಲು ಒಕ್ಕೂಟ ಸರ್ಕಾರಕ್ಕೆ ಯಾವುದೇ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಅಂದು ಅವರು ಉತ್ತರಿಸಿದ್ದರು.
ಇದನ್ನೂ ಓದಿ:ಸರಿಪಡಿಸಿದ ಎನ್‌ಆರ್‌ಸಿ ಜಾರಿ: ಅಸ್ಸಾಂ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ!


