ಬಿಹಾರದ ದಾನಾಪುರ ವಸತಿ ಶಾಲೆಯಲ್ಲಿ ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ-ಎನ್ನಾರ್ಸಿ ಬಗ್ಗೆ ‘ಪ್ರಚೋದನಕಾರಿ ಮತ್ತು ದೇಶ ವಿರೋಧಿ’ ಪಾಠ ಮಾಡಿದ್ದಾರೆ ಎಂದು ಆರೋಪಿಸಿ ಎರಡು ಸ್ವಯಂಸೇವಕ ಗುಂಪುಗಳ ವಿರುದ್ದ ಪಾಟ್ನಾ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಈ ವಿಷಯದ ಬಗ್ಗೆ ಸುಮೊ ಮೋಟು ಕಾಗ್ನಿಜೆನ್ಸ್ ತೆಗೆದುಕೊಂಡ ನಂತರ ಈ ಪ್ರಕರಣವನ್ನು ದಾಖಲಿಸಲಾಗಿದೆ. ಮಕ್ಕಳ ಹಕ್ಕುಗಳ ಆಯೋಗವು ಫೆಬ್ರವರಿ 15 ಮತ್ತು 25 ರಂದು ದಾನಾಪುರ ವಸತಿ ಶಾಲೆಯಲ್ಲಿ ತಪಾಸಣೆ ನಡೆಸಿತ್ತು.
ಶಿಕ್ಷಣ ಹಕ್ಕು ಕಾಯ್ದೆಯಡಿ ಬಿಹಾರ ಸರ್ಕಾರವು ಈ ಜಾಗವನ್ನು ವ್ಯವಸ್ಥೆಗೊಳಿಸಿದ್ದು, ಎರಡು ಸ್ವಯಂಸೇವಕ ಗುಂಪುಗಳಿಗೆ 6 ರಿಂದ 18 ವರ್ಷದೊಳಗಿನ ಸುಮಾರು 60 ಬೀದಿಬದಿ ವಾಸಿಸುವ ಬಾಲಕಿಯರಿಗೆ ತರಗತಿಗಳನ್ನು ನಡೆಸಲು ಅವಕಾಶ ನೀಡಿತ್ತು.
ಇದನ್ನೂ ಓದಿ: ಎನ್‌ಆರ್‌ಸಿ: ಮೋದಿ ಸರಕಾರವನ್ನು ಮಣಿಸಲು ರಾಜ್ಯಗಳಿಗಿರುವ ಮೂರು ಸುಲಭ ಹೆಜ್ಜೆಗಳು
ಬಿಹಾರದ ಡಿಜಿಪಿ ಎಸ್‌ಕೆ ಸಿಂಘಾಲ್‌ಗೆ ಮಕ್ಕಳ ಹಕ್ಕುಗಳ ಆಯೋಗ ಬರೆದಿದ್ದ ಪತ್ರವೊಂದನ್ನು ಅನುಸರಿಸಿ, ಪೊಲೀಸರು ಕಳೆದ ವಾರ ದಾನಾಪುರ ಪೊಲೀಸ್ ಠಾಣೆಯಲ್ಲಿ ಅಂಬ್ರೆಲ್ಲಾ ಫೌಂಡೇಶನ್ ಮತ್ತು ಕೆಡಿಡಿಸಿ ವಿರುದ್ಧ ಐಪಿಸಿ ನಿಬಂಧನೆಗಳಾದ 124 ಎ (ದೇಶದ್ರೋಹ) ಮತ್ತು 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಮತ್ತು ಜುವೆನೈಲ್ ಜಸ್ಟೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಯಾರನ್ನೂ ಬಂಧಿಸಿಲ್ಲ ಎಂದು ದಾನಾಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದಾನಾಪುರ ಶಾಲೆಯಲ್ಲಿ ನಡೆದ ತರಗತಿಗಳೊಂದಿಗೆ ಸಂಬಂಧ ಹೊಂದಿರುವ ಸಂತೋಷ್ ಮಹ್ತೋ ಅವರು ಅಂಬ್ರೆಲ್ಲಾ ಫೌಂಡೇಶನ್ ಮತ್ತು ಕೆಡಿಡಿಸಿ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. “ಬೀದಿಬದಿ ವಾಸಿಸುವ ಬಾಲಕಿಯರಿಗೆ ಯಾವ ಸಂಸ್ಥೆಗಳು ತರಬೇತಿ ನೀಡುತ್ತವೆ ಎಂಬುದನ್ನು ನಾವು ನಿರ್ಧರಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿಎಎ, ಎನ್‌ಆರ್‌ಸಿ ಅಸಂವಿಧಾನಿಕ: ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ
ಬಿಹಾರ ಸರ್ಕಾರವು ಕಟ್ಟಡದ ರೂಪದಲ್ಲಿ ಮೂಲಸೌಕರ್ಯ ಬೆಂಬಲವನ್ನು ಒದಗಿಸಿದರೆ, ಶಾಲೆ ನಡೆಸಲು ನಾಗರಿಕರು ಹಣವನ್ನು ನೀಡುತ್ತಾರೆ. ಎರಡು ಗುಂಪುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಹಕ್ಕುಗಳ ಆಯೋಗವು ತನ್ನ ಪರಿಶೀಲನೆಯ ಸಮಯದಲ್ಲಿ ಕೆಲವು ವಿದ್ಯಾರ್ಥಿನಿಗಳ ಹೋಮ್‌ವರ್ಕ್ ದಾಖಲೆಗಳನ್ನು ಪರಿಶೀಲಿಸಿದ್ದು, ಅವರು ಸಿಎಎ ಮತ್ತು ಎನ್‌ಆರ್‌ಸಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
“ನಾನು ಎನ್‌ಆರ್‌ಸಿಗೆ ವಿರುದ್ಧ. ನನಗೆ ಮನೆ ಇಲ್ಲದಿದ್ದರೆ, ನಾನು ಎಲ್ಲಿ ದಾಖಲೆಗಳನ್ನು ಇಡಬಹುದು” ಎಂದು ಒಬ್ಬ ವಿದ್ಯಾರ್ಥಿನಿ ಬರೆದಿದ್ದಳು ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನುಂಗೊ ಪಾಟ್ನಾ ಪೊಲೀಸರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅವರು ಎಲ್ಲಾ ಸಂಬಂಧಿತ ಪತ್ರಿಕೆಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದು, ಇಂತಹ ಪಾಠಗಳು ವಿದ್ಯಾರ್ಥಿನಿಯರನ್ನು ನೆಲದ ಕಾನೂನುಗಳಿಗೆ ವಿರುದ್ಧವಾಗಿ ತಿರುಗಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಣ್ಮರೆಯಾದ ಅಸ್ಸಾಂ ಎನ್‌ಆರ್‌ಸಿ ಡೇಟಾ! : ತಾಂತ್ರಿಕ ತೊಂದರೆಯೆಂದ ಗೃಹ ಸಚಿವಾಲಯ
ಎನ್‌ಸಿಪಿಸಿಆರ್ ಮೊದಲ ಬಾರಿಗೆ ಮಾರ್ಚ್ 2 ರಂದು ಪಾಟ್ನಾ ಎಸ್‌ಎಸ್‌ಪಿ ಗರಿಮಾ ಮಲಿಕ್ ಅವರಿಗೆ ಪತ್ರ ಬರೆದು, ‘‘… ಆಯೋಗದ ತಂಡವು ಒಂದು ರಿಜಿಸ್ಟರ್ ಅನ್ನು ಕಂಡುಕೊಂಡಿದ್ದು, ಅದರಲ್ಲಿ ‘ಎನ್‌ಆರ್‌ಸಿ, ಸಿಎಎ, ನಿಧಿಸಂಗ್ರಹ ತರಬೇತಿ’ ಅನ್ನು ಕೆಡಿಡಿಸಿ ಮತ್ತು ಅಂಬ್ರೆಲಾ ಫೌಂಡೇಶನ್ ಅವರಿಂದ 20 ಡಿಸೆಂಬರ್ 2019 ರಂದು ನಡೆಸಲಾಯಿತು ಎಂದು ಬರೆಯಲಾಗಿದೆ…2019 ರ ಡಿಸೆಂಬರ್ 26 ರಂದು ಹಿಂದಿಯಲ್ಲಿನ ವಿದ್ಯಾರ್ಥಿಗಳಿಗೆ ಪಾಠವೊಂದು ಹೀಗೆ ಹೇಳಿದೆ: ‘…ಪ್ರತಿವರ್ಷ ಪ್ರವಾಹ ಅಥವಾ ಇತರ ಕಾರಣಗಳಿಂದಾಗಿ ಹಾನಿಗೊಳಗಾಗುವ ಕೊಳೆಗೇರಿಗಳಲ್ಲಿ ವಾಸಿಸುವವರ ಮೇಲೆ ಸಿಎಎ, ಎನ್ನಾರ್ಸಿ ಪರಿಣಾಮ ಬೀರುತ್ತದೆ. … ಸರ್ಕಾರವು ಸಿಎಎ ತಂದರೆ, ನಾವೆಲ್ಲರೂ ಅದನ್ನು ವಿರೋಧಿಸಬೇಕು’ ಎಂದು ಬರೆಯಲಾಗಿದೆ” ಎಂದು ತಿಳಿಸಿದ್ದಾರೆ.
ಇದರ ನಂತರ ಮಕ್ಕಳ ಹಕ್ಕುಗಳ ಆಯೋಗವು ಬಿಹಾರ ಡಿಜಿಪಿಗೆ ಪತ್ರ ಬರೆದು, ತರಗತಿಗಳನ್ನು ನಡೆಸಿದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದೆ.
ತರಗತಿಗಳೊಂದಿಗೆ ಸಂಬಂಧ ಹೊಂದಿರುವ ಸಂತೋಷ್ ಮಹ್ತೋ ಅವರು, “ಎಫ್‌ಐಆರ್‌ನಲ್ಲಿ ಯಾವುದೇ ವ್ಯಕ್ತಿಯನ್ನು ಹೆಸರಿಸಲಾಗಿಲ್ಲ. ಪೊಲೀಸ್ ತಂಡಗಳು ಬಂದು ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಚಿಂತಿತರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಎನ್‌ಆರ್‌ಸಿ ಗುಮ್ಮ: ಬೆಂಗಳೂರಿನಲ್ಲಿ ಭಾರತೀಯರು ಬೀದಿಗೆ – ಎನ್‌ಆರ್‌ಸಿ, ಸಿಎಎ ಅಪಾಯವನ್ನು ಸಾಬೀತುಪಡಿಸಿದ ಬೆಂಗಳೂರು ಪೊಲೀಸ್