Homeಮುಖಪುಟಎನ್‌ಆರ್‌ಸಿ ಗುಮ್ಮ: ಬೆಂಗಳೂರಿನಲ್ಲಿ ಭಾರತೀಯರು ಬೀದಿಗೆ - ಎನ್‌ಆರ್‌ಸಿ, ಸಿಎಎ ಅಪಾಯವನ್ನು ಸಾಬೀತುಪಡಿಸಿದ ಬೆಂಗಳೂರು ಪೊಲೀಸ್

ಎನ್‌ಆರ್‌ಸಿ ಗುಮ್ಮ: ಬೆಂಗಳೂರಿನಲ್ಲಿ ಭಾರತೀಯರು ಬೀದಿಗೆ – ಎನ್‌ಆರ್‌ಸಿ, ಸಿಎಎ ಅಪಾಯವನ್ನು ಸಾಬೀತುಪಡಿಸಿದ ಬೆಂಗಳೂರು ಪೊಲೀಸ್

ಬಾಂಗ್ಲಾದೇಶಿಯವರು ಇದ್ದಾರೆ ಎಂಬ ನೆಪವೊಡ್ಡಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಮತ್ತು ಪೂರ್ವ ಭಾರತದ ಬಡವರನ್ನು ಬೀದಿಗೆ ತಳ್ಳಿದ್ದು ಎನ್‌ಆರ್‌ಸಿ ಜಾರಿಗೆ ಬಂದರೆ ಮೊದಲ ಬಲಿಪಶುಗಳು ಯಾರು ಎಂಬುದನ್ನು ತಿಳಿಸುತ್ತಿದೆ.

- Advertisement -
- Advertisement -

ಇದುವರೆಗೆ ಪತ್ರಿಕೆಗೆ ಸಿಕ್ಕಿರುವ ಮಾಹಿತಿ ಮತ್ತು ನಮ್ಮ ತಂಡವು ನೇರವಾಗಿ ಹೋಗಿ ನೋಡಿದ್ದನ್ನೆಲ್ಲಾ ಒಟ್ಟುಗೂಡಿಸಿ ನೋಡಿದರೆ ಸ್ಪಷ್ಟವಾಗುವ ವಿಷಯ ಇಷ್ಟು.

ಬಿಜೆಪಿ ಸಂಸದರೊಬ್ಬರ ಮಾಲೀಕತ್ವದಲ್ಲಿದ್ದು ಮುಸ್ಲಿಂ ವಿರೋಧಿ ಸುದ್ದಿ ಬಿತ್ತರಿಸುವ ಚಾನೆಲ್, ಬಿಜೆಪಿಯ ಸ್ಥಳೀಯ ಶಾಸಕ ಮತ್ತು ಬಿಜೆಪಿ ಆಡಳಿತದಡಿಯ ಪೊಲೀಸ್ ಕಮೀಷನರ್ ಮೂವರೂ ಸೇರಿ ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ಸುಮಾರು 200 ಗುಡಿಸಲುಗಳನ್ನು ಧ್ವಂಸವಾಗಲು ಕಾರಣರಾಗಿದ್ದಾರೆ. ಅದಕ್ಕಾಗಿ ಅವರು ಬಳಸಿಕೊಂಡಿದ್ದು ಅಲ್ಲಿ ಬಾಂಗ್ಲಾದೇಶೀಯರು ವಾಸಿಸುತ್ತಿದ್ದರು ಎಂಬ, ಬಹುಶಃ ‘ತಾವೇ ಸೃಷ್ಟಿಸಿದ ಸುದ್ದಿ’. ಅದರ ಪರಿಣಾಮವಾಗಿ ಬೀದಿಗೆ ಬಿದ್ದದ್ದು ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಯ ಕೂಲಿ ಕಾರ್ಮಿಕರು ಮತ್ತು ಪಶ್ಚಿಮಬಂಗಾಳದ ಬಡವರು.

ಸುವರ್ಣ ನ್ಯೂಸ್ ಎಂಬ ಚಾನೆಲ್ ತನ್ನ ಸಾಧನೆಯೆಂದು ಹೇಳಿಕೊಳ್ಳುತ್ತಿರುವ ಈ ಕಾರ್ಯಾಚರಣೆಯಿಂದ ಅಲ್ಲಿ ವಾಸವಿದ್ದ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಕೂಲಿಕಾರ್ಮಿಕರು ಅಕ್ಷರಶಃ ನಡುಗಿಹೋಗಿ, ಬೀದಿಗೆ ಬಿದ್ದಿದ್ದಾರೆ. ಈ ಕುರಿತು ನ್ಯಾಯಪಥ ಪತ್ರಿಕಾ ತಂಡ ಸ್ಥಳಕ್ಕೆ ಭೇಟಿ ನೀಡಿ ಸಂಗ್ರಹಿಸಿದ ವರದಿ ಇದು…

ಮಾರತ್‌ಹಳ್ಳಿ, ವೈಟ್‌ಫೀಲ್ಡ್, ಮಹದೇವಪುರ, ಕಾಡುಗೋಡಿ, ಕೆ.ಆರ್.ಪುರ ಸೇರಿದಂತೆ ಬೆಂಗಳೂರು ನಗರದ ಹೊರವಲಯದಲ್ಲಿ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದಿಂದ ವಲಸೆ ಬಂದ ಸಾವಿರಾರು ಜನ ಕೂಲಿ ಕಾರ್ಮಿಕರು ಹಲವು ಸ್ಲಂಗಳಲ್ಲಿ ಬದುಕುತ್ತಿದ್ದಾರೆ. ಈ ‘ಸ್ಲಂ’ಗಳನ್ನು ನೆಲಬಾಡಿಗೆ ಸ್ಲಂಗಳೆಂದು ಕರೆಯುತ್ತಾರೆ. ಏಕೆಂದರೆ ಈ ಬಡವರು ಭೂಮಿಯ ಮಾಲೀಕರಿಗೆ ನೆಲಬಾಡಿಗೆ ಕೊಡುತ್ತಾ, ಅಲ್ಲಿ ಷೆಡ್ ನಿರ್ಮಿಸಿಕೊಂಡು ವಾಸಿಸುತ್ತಾರೆ.

ತುತ್ತು ಅನ್ನ ನೀಡುತ್ತಿರುವ ಬೆಂಗಳೂರು ಅವರಿಗೆ ಎಷ್ಟು ಅನಿವಾರ್ಯವೋ, ಬೆಂಗಳೂರಿಗೂ ಅವರು ಅಷ್ಟೇ ಅನಿವಾರ್ಯ ಎನ್ನುವುದು ಕಟು ಸತ್ಯ. ಏಕೆಂದರೆ ಮೇಲೆ ಹೆಸರಿಸಿದ ಏರಿಯಾಗಳಲ್ಲಿನ ಪೌರಕಾರ್ಮಿಕ ಕೆಲಸ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಅಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗ ಮತ್ತು ಮೇಲ್ವರ್ಗದ ಮನೆ ಚಾಕರಿ, ಕಸವಿಂಗಡಣೆ, ಚಿಂದಿ ಆಯುವುದರಿಂದ ಹಿಡಿದು ಶಾಲಾ ವಾಹನಗಳ ಡ್ರೈವರ್‌ಗಳು, ಸೆಕ್ಯುರಿಟಿ ಗಾರ್ಡ್ ಕೆಲಸ, ಹೀಗೆ ವಿವಿಧ ರೀತಿಯ ಜೀವನೋಪಾಯ ಚಟುವಟಿಕೆಗಳಲ್ಲಿ ಕಡಿಮೆ ಕೂಲಿಗೆ ಈ ಜನ ದುಡಿಯುತ್ತಿದ್ದಾರೆ.

ನಿಕೃಷ್ಟ ಬದುಕು… ಕೆಟ್ಟ ಶೋಷಣೆ

ಇಷ್ಟೆಲ್ಲಾ ಕೆಲಸ ಮಾಡುತ್ತಿರುವ ಈ ಕೂಲಿಜನರು ಬದುಕುತ್ತಿರುವುದು ಮಾತ್ರ ಅತ್ಯಂತ ನಿಕೃಷ್ಟ ಪರಿಸ್ಥಿತಿಯಲ್ಲಿ. ಒಂದೊAದು ಕಡೆಯೂ 10*10 ಅಡಿ ಅಗಲದಲ್ಲಿ ಒಂದರ ಪಕ್ಕ ಒಂದರಂತೆ ನೂರಾರು ಟೆಂಟ್‌ಗಳನ್ನು ಹಾಕಿಕೊಂಡಿರುವ ಅವರು ಅದಕ್ಕಾಗಿ ತಿಂಗಳಿಗೆ 1000-3000 ರೂ. ಬಾಡಿಗೆಯನ್ನು ಜಾಗದ ಮಾಲೀಕರಿಗೆ ನೀಡುತ್ತಿದ್ದಾರೆ. ಮಾಲೀಕರು ಅವರಿಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಟ್ಟರೆ ಈ ಜನರು ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ. ಅಷ್ಟು ಬಿಟ್ಟರೆ ಶೌಚಾಲಯ, ಕುಡಿಯುವ ನೀರು, ರೇಷನ್ ಕಾರ್ಡ್, ಶಾಲೆ, ಆಸ್ಪತ್ರೆ ಯಾವುದು ಅವರ ಪಾಲಿಗಿಲ್ಲ.

10-15 ವರ್ಷಗಳಿಗೂ ಮುಂಚೆಯೇ ವಲಸೆ ಬಂದಿರುವ ಇಲ್ಲಿನ ಬಹುತೇಕರು ಹಲವು ರೀತಿಯ ಶೋಷಣೆಗಳಿಗೆ ಒಳಗಾಗಿದ್ದಾರೆ. ತುಬರಹಳ್ಳಿಯ ಮಂಜುಗೌಡ ಲ್ಯಾಂಡ್‌ನಲ್ಲಿ ಸುಮಾರು ನೂರೈವತ್ತು ಕುಟುಂಬಗಳು ನೆಲೆಸಿವೆ. ಆರಂಭದಲ್ಲಿ ಕನ್ನಡ ಬಾರದ, ಉತ್ತರ ಭಾರತದ ಪಶ್ಚಿಮ ಬಂಗಾಳ, ಬಿಹಾರದಿಂದ ವಲಸೆ ಬಂದವರು ಇಲ್ಲಿ ನೆಲೆಸಿದ್ದಾಗ ನಡೆದ ಕೆಲವು ಘಟನೆಗಳು ದಾರುಣವಾಗಿವೆ. ಪುರುಷರು ಕೆಲಸಕ್ಕೆ ಹೋದ ವೇಳೆ ಹಲವಾರು ಪುಂಡರು ಏಕಾಏಕಿ ಸ್ಲಂಗೆ ನುಗ್ಗಿ ಕೈಗೆ ಸಿಕ್ಕವರನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದಿದೆ. ಶೌಚಕ್ಕೆ ಹೊರ ಹೋದಾಗ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಚಿಂದಿ ಆಯುವವರಿಗೆ, ಗ್ಲಾಸ್ ಬಾಟೆಲ್ ಸಂಗ್ರಹಿಸುವವರಿಗೆ ಕೂಲಿ ಕೊಡದೇ ವಂಚಿಸಿದ್ದಿದೆ. ದೂರು ಕೊಡಲು ಪೊಲೀಸರ ಬಳಿ ಹೋದರೆ ಅವರು ಪುಂಡರಿಗಿಂತಲೂ ಕ್ರೂರವಾಗಿ ವರ್ತಿಸಿದ್ದಾರೆ. ನಮ್ಮ ಬಳಿ ಅಳಿದುಳಿದಿದ್ದ ಹಣವನ್ನೆಲ್ಲ ಕಿತ್ತುಕೊಂಡು ಕಳಿಸಿದರು ಎಂದು ಅಳುತ್ತಾ ಹೇಳಿದ ಮಹಿಳೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯವರು.

ಅನಕ್ಷರಸ್ಥರೇ….. ಆದರೆ ದಾಖಲೆಗಳಿವೆ

ಅಂದು ದುಡಿದದ್ದನ್ನು ಅಂದಿನ ಹೊಟ್ಟೆ ಬಟ್ಟೆಗೆ ಹಾಕಿಕೊಳ್ಳುವ ಇವರಲ್ಲಿ ಬಹುತೇಕರು ಅನಕ್ಷರಸ್ಥರು. ಅವರ ಎದೆ ಸೀಳಿದರೆ ನೋವು ಸಂಕಷ್ಟಗಳು ಕಾಣಬಹುದೇ ಹೊರತು, ಅಕ್ಷರಗಳು ಕಾಣುವುದು ಕಷ್ಟ. ಆದರೆ ಯಾರೂ ಪಂಕ್ಚರ್ ಹಾಕುವ ಕೆಲಸದಲ್ಲಿ ಇದ್ದಂತಿಲ್ಲ. ಇವರು ಶಾಲೆಯ ಮುಖವನ್ನೇ ನೋಡಿಲ್ಲ. ಹಾಗಂತ ಇವರ ಬಳಿ ದಾಖಲೆ ಇಲ್ಲವೇ ಇಲ್ಲವೆಂದಂತಲ್ಲ. ನಮ್ಮೆಲ್ಲರ ಬಳಿ ದಾಖಲೆಯಿವೆ ಎಂದು ಅವರು ತಮ್ಮ ತಮ್ಮ ಮತದಾರರ ಗುರುತಿನ ಚೀಟಿ, ಬ್ಯಾಂಕ್ ಅಕೌಂಟ್ ಪಾಸ್ ಪುಸ್ತಕ, ಕೆಲವರು ಪಾನ್ ಕಾರ್ಡ್ ತೋರಿಸುತ್ತಾರೆ.

ದುರಂತ ಎಂದರೆ ಇವರ ಮಕ್ಕಳು ಸಹ ಶಾಲೆಗೆ ಹೋಗುತ್ತಿಲ್ಲ. ತುಬರಹಳ್ಳಿ ಸ್ಲಂನಲ್ಲಿ ಮಕ್ಕಳಿಗೆ ಬೇಸಿಕ್ ಶಿಕ್ಷಣ ನೀಡಲು ಒಂದಷ್ಟು ಸ್ಥಳೀಯ ಸ್ವಯಂ ಸೇವಕರು ಮುಂದಾಗಿದ್ದಾರೆ. ಬೆಂಗಳೂರಿಗೆ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಲು ಬಂದ ರೋಸಿ಼ ಮುಖರ್ಜಿ ಅಂತಹ ಒಂದು ಶಾಲೆಯಲ್ಲಿ ಪಾಠ ಮಾಡುತ್ತಾರೆ.

ಯಾವ ಶಾಲೆಗೂ ಹೋಗದ ಈ ಜನರ ಬಳಿ ಹಲವಾರು ದಾಖಲೆಗಳಿರುವುದಂತೂ ಸತ್ಯ. ಅಂತಹ ಹಲವಾರು ದಾಖಲೆಗಳನ್ನು ಪತ್ರಿಕೆಗೆ ಅಲ್ಲಿನ ಜನರು ತೋರಿಸಿದರು.

ಸುವರ್ಣ ನ್ಯೂಸ್, ಲಿಂಬಾವಳಿ ಮತ್ತು ಪೊಲೀಸರ ಮಧ್ಯೆ ಒಬ್ಬ ಎಇಇ

ಈ ಜನರಿಗೆ ಆಗಿಂದಾಗ್ಗೆ ಬಾಂಗ್ಲಾದೇಶೀಯರು ಎಂದು ಹೇಳುವುದು ಹಣ ಕೀಳುವುದು ನಡೆಯುತ್ತಲೇ ಇತ್ತು. ಬಿಜೆಪಿ ರಾಜ್ಯಸಭಾ ಸದಸ್ಯನ ಒಡೆತನದ ಸುವರ್ಣ ನ್ಯೂಸ್ ಚಾನೆಲ್ ಜನವರಿ 17ರಂದು ಒಂದು ‘ಸ್ಟಿಂಗ್ ಆಪರೇಷನ್’ ಪ್ರಸಾರ ಮಾಡಿದೆ. ಅವರ ಪ್ರಕಾರ ಈ ಸ್ಲಂಗಳಲ್ಲಿ ಅಕ್ರಮ ಬಾಂಗ್ಲಾದೇಶೀಯರು ನೆಲೆಸಿದ್ದಾರೆ. ಅಂತಹ ಒಬ್ಬ ‘ಬಾಂಗ್ಲಾದೇಶಿ’ಯ ಹೆಸರು ಸೈಫುದ್ದೀನ್ ಶೇಖ್. ಆತನ ಜಿಲ್ಲೆ ಮುರ್ಷಿದಾಬಾದ್. ಅವರ ಎಂಪಿ ಸಂಸತ್ತಿನಲ್ಲಿ ದೇಶದ ಪ್ರಮುಖ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ. ಇದಿಷ್ಟನ್ನೂ (ಅಂದರೆ ನಿಮ್ಮ ಎಂಪಿ ಯಾರು ಎಂಬ ಪ್ರಶ್ನೆಯನ್ನೂ) ಸುವರ್ಣ ನ್ಯೂಸ್ ಸ್ಟಿಂಗ್ ಸರ್ಜನ್‌ಗಳು ಕೇಳಿದ್ದಾರೆ. ಆದರೆ, ‘ಹಮಿ ಬಾಂಗ್ಲಾ’ ಎಂದು ಹೇಳಿದ್ದನ್ನು ಫೋಕಸ್ ಮಾಡಿ ‘ನೋಡಿ ಇವರು ಬಾಂಗ್ಲಾದೇಶಿಯರು’ ಎಂದು ಪ್ರೊಜೆಕ್ಟ್ ಮಾಡಿದ್ದಾರೆ.

ಹಿಂದಿ ಮತ್ತು ಬಂಗಾಳಿ ಭಾಷೆ ಮಾತನಾಡುವ ಈ ಜನರನ್ನೇ ಬಾಂಗ್ಲಾದೇಶಿಯರು ಎಂದು ಹೇಳಲಾಗಿದೆ. ಬಹಿರಂಗವಾಗಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಏನು ಮಾಡುತ್ತಿದ್ದಾರೆ, ಸರ್ಕಾರ ಏಕೆ ಇವರನ್ನು ಹೊರಗಟ್ಟುತ್ತಿಲ್ಲ ಎಂದು ಸುದ್ದಿ ಮಾಡಿದ್ದಾರೆ. ‘ಸಿಎಎ ಎನ್‌ಆರ್‌ಸಿ ಗುಮ್ಮಿದ್ದು ಯಾರಿಗೆ?’ ಎಂದು ಆ ಕಾರ್ಯಕ್ರಮದ ಟ್ರೈಲರ್ ಹಾಕಿ ಪ್ರಚಾರವನ್ನೂ ಮಾಡಿದ್ದಾರೆ.

ಅದಕ್ಕಿಂತಲೂ ಮುಂಚಿನಿಂದಲೂ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಈ ಕುರಿತು ಮಾತನಾಡಲು ಶುರು ಮಾಡಿದ್ದರಲ್ಲದೇ, ಜನವರಿ 12ರಂದು ಲಿಂಬಾವಳಿ ಟ್ವೀಟ್ ಮಾಡಿ ತನ್ನ ಕ್ಷೇತ್ರದಲ್ಲಿ ಅಕ್ರಮ ವಲಸಿಗರಾದ ಬಾಂಗ್ಲಾದೇಶೀಯರು ಇದ್ದಾರೆ ಎಂದು ಒಂದು ವಿಡಿಯೋವನ್ನೂ ಹಾಕಿದ್ದರು. ಭಾನುವಾರ ಪೊಲೀಸರು ಹಿಂದು ಮುಂದು ನೋಡದೆ, ಮುನೆಕೊಳಲು ಎಂಬ ಜಾಗಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ. ಅದೇ ರೀತಿ ಕರಿಯಮ್ಮನ ಅಗ್ರಹಾರ, ಕಾಡುಬಿಸನಹಳ್ಳಿ, ತುಬರಹಳ್ಳಿಗಳ ಸುಮಾರು 200ಕ್ಕೂ ಹೆಚ್ಚು ಟೆಂಟ್ ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ.

ಜನವರಿ 11ರಂದೇ ಮಾರತ್ತಹಳ್ಳಿ ಪೊಲೀಸ್ ಠಾಣೆಯಿಂದ ಚೇತನ್ (ಬಾಬು) ಎಂಬ ಲ್ಯಾಂಡ್‌ಓನರ್‌ಗೆ ನೋಟೀಸ್ ನೀಡಿ (ಇದರ ಪ್ರತಿಯನ್ನು ಡಿಸಿಪಿಯವರಿಗೂ ಕಳಿಸಿದ್ದಾರೆ) ಅವರ ಜಾಗದಲ್ಲಿ ಅಕ್ರಮ ಬಾಂಗ್ಲಾದೇಶೀಯರಿದ್ದಾರೆಂದೂ, ಅದನ್ನು ತೆರವುಗೊಳಿಸದೇ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು. ಜನವರಿ 18ರಂದು ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಇದೇ ಮಾರತಹಳ್ಳಿ ಪೊಲೀಸ್ ಠಾಣೆಗೆ ಪತ್ರ ಬರೆದು ಬಾಂಗ್ಲಾ ದೇಶದ ನಿವಾಸಿಗಳ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಬೇಕಿದೆ. ಹಾಗಾಗಿ ಬಿಗಿ ಪೊಲೀಸ್ ಬಂದೋಬಸ್ತು ನೀಡಬೇಕೆಂದು ಕೋರಿದ್ದಾರೆ.

ಆ ನಂತರ ನಡೆದದ್ದೇ ಮೇಲೆ ಹೇಳಲಾದ ಕಾರ್ಯಾಚರಣೆ. ಆದರೆ, ಈ ಕಾರ್ಯಾಚರಣೆ ನಡೆಯುವಾಗ ಅಲ್ಲಿ ಯಾವುದೇ ಬಿಬಿಎಂಪಿ ಅಧಿಕಾರಿಗಳು ಅಥವಾ ಸಿಬ್ಬಂದಿ ಇದ್ದುದನ್ನು ಸ್ಥಳೀಯರು ನೋಡಿಲ್ಲ. ಕಾರ್ಯಾಚರಣೆಯ ಮಾಹಿತಿ ಸಿಕ್ಕು ಸ್ಥಳಕ್ಕೆ ಹೋಗಿದ್ದ ವಕೀಲ ವಿನಯ್ ಶ್ರೀನಿವಾಸ್, ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲಾ ಅವರಿಗೂ ಬಿಬಿಎಂಪಿ ಅಧಿಕಾರಿಗಳು ಸಿಕ್ಕಿಲ್ಲ. ನಂತರ ಇದು ದೊಡ್ಡ ಸುದ್ದಿಯಾದ ನಂತರ (ಪತ್ರಿಕೆಯು ಇದನ್ನು ವಲಯ ಆಯುಕ್ತರಾದ ರಂದೀಪ್ ಅವರನ್ನು ಮಾತನಾಡಿಸಿ ಖಚಿತಪಡಿಸಿಕೊಂಡಿತು) ಸದರಿ ಬಿಬಿಎಂಪಿ ಎಇಇಯನ್ನು ಅಮಾನತು ಸಹಾ ಮಾಡಲು ಶಿಫಾರಸ್ಸು ಮಾಡಲಾಗಿದೆ. ಏಕೆಂದರೆ ಈ ಅಧಿಕಾರಿಯು ಇಂತಹ ಸೂಕ್ಷ್ಮ ಮಾಹಿತಿಯನ್ನು ತನ್ನ ಯಾವುದೇ ಮೇಲಧಿಕಾರಿಗೆ ತಿಳಿಸಿಲ್ಲ.

ಎಷ್ಟು ಜನ ಬಾಂಗ್ಲಾದೇಶೀಯರು ಪತ್ತೆಯಾದರು?

ಈ ಕಾರ್ಯಾಚರಣೆಯಿಂದ ಪೊಲೀಸರಿಗೆ ಒಬ್ಬರೇ ಒಬ್ಬರು ಬಾಂಗ್ಲಾದೇಶಿಯರು ಪತ್ತೆಯಾಗಿಲ್ಲ. ಇದನ್ನು ವೈಟ್‌ಫೀಲ್ಡ್ ಡಿಸಿಪಿಯವರೂ ಖಚಿತಪಡಿಸಿದರು. ಪತ್ರಿಕೆಗಳಲ್ಲಿ ವರದಿಯಾದ ಪ್ರಕಾರ ವಿವಿಧ ಪೊಲೀಸ್ ಅಧಿಕಾರಿಗಳೂ ಅದನ್ನೇ ಹೇಳಿದ್ದಾರೆ. ಆದರೆ ನಗರದ ಪೊಲೀಸ್ ಕಮೀಷನರ್ ಭಾಸ್ಕರ್‌ರಾವ್ ಮಾತ್ರ ‘ಬಾಂಗ್ಲಾದೇಶೀಯರು ಅಲ್ಲಿದ್ದರು. ಅವರನ್ನು ತೆರವುಗೊಳಿಸಲು ಕೆಲಸ ಮಾಡಿದ್ದೇವೆ ಅಷ್ಟೇ. ನಮ್ಮ ಕೆಲಸ ನಮ್ಮ ಮಾಡಲು ಬಿಡಿ’ ಎಂದು ಪತ್ರಿಕೆಗೆ ಹೇಳಿದ್ದು ವರದಿಯಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಅವರನ್ನು ಸಂಪರ್ಕ ಮಾಡಲು ಪತ್ರಿಕೆ ಪ್ರಯತ್ನಿಸಿತು. ಅವರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಮೆಸೇಜ್‌ಗೆ ಉತ್ತರಿಸಿಲ್ಲ.

ಬಾಂಗ್ಲಾದೇಶಿಯರು ಎಂದು ಆರೋಪಿಸಿ ಬೆಂಗಳೂರಿನ ಮಾರತ್ತಳ್ಳಿ ಬಳಿಯ ಬೆಳ್ಳಂದೂರು, ಕರಿಯಮ್ಮನ ಅಗ್ರಹಾರ, ಕಾಡುಬಿಸರಹಳ್ಳಿಯ ಕೊಳಗೇರಿಗಳಲ್ಲಿ ವಾಸವಿದ್ದ ಉತ್ತರ ಕರ್ನಾಟಕದ ಜನರನ್ನು ಬೀದಿಗೆ ತಳ್ಳಿದ ಪೊಲೀಸರು.. ಅವರ ಸಣ್ಣ ಗುಡಿಸಲುಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿದ್ದಾರೆ. ಆದರೆ ಇದುವರೆಗೂ ಒಬ್ಬನೇ ಒಬ್ಬ ಬಾಂಗ್ಲಾದೇಶಿಯರು ಸಿಕ್ಕಿಲ್ಲ…ಬಿಜೆಪಿ ಶಾಸಕ ಅರವಿಂದ ಲಿಂಬವಳಿ, ನಗರ ಕಮಿಷನರ್ ಭಾಸ್ಕರ್ ರಾವ್ ಆದೇಶದಿಂದ ಪೊಲೀಸರ ಆರ್ಭಟಕ್ಕೆ ಬದುಕು ಕಳೆದುಕೊಂಡ ಬಡಜನರ ಆಕ್ರೋಶ ಕೇಳಿ..

Posted by Naanu Gauri on Tuesday, January 21, 2020

ಅಷ್ಟಕ್ಕೂ ಪೊಲೀಸರಿಗೆ ಇಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿರುವುದು, ಅವರು ಈ ದೇಶದವರೆ ಎನ್ನುವುದು ಗೊತ್ತಿರದ ಸಂಗತಿಯಲ್ಲ. ಆದರೆ ‘ಮೇಲಿನ’ ಒತ್ತಡಕ್ಕೆ ಮಣಿದು ಅವರು ಹಾಗೆ ಮಾಡುತ್ತಿದ್ದಾರೆ. ಯಾವಾಗ ಒಂದಷ್ಟು ಮುದ್ರಣ ಮಾಧ್ಯಮಗಳು ಅಲ್ಲಿನ ವಾಸ್ತವ ವರದಿ ಮಾಡಿದರೋ ಆಗ ಪೊಲೀಸರಿಗೆ ಪೀಕಲಾಟ ಶುರುವಾಗಿದೆ. ಅಂತಿಮವಾಗಿ ಎಲ್ಲವೂ ಬಿಬಿಎಂಪಿ ಎಇಇಯ ಪತ್ರದಿಂದ ಶುರುವಾಯಿತು ಎಂದು ಹೇಳಲಾಗುತ್ತಿದೆ.

ಈ ಜನರ ಪಾಲಿನ ಆಪತ್ಬಾಂಧವ ಸ್ವರಾಜ್ ಇಂಡಿಯಾ ಕಾರ್ಯಕರ್ತ ಕಲೀಂಉಲ್ಲಾರವರಿಗೆ ಅಲ್ಲಿನ ಬಹುತೇಕರ ಹೆಸರುಗಳು ಪರಿಚಯ. ಅಷ್ಟು ಒಡನಾಟ ಆ ಜನರೊಂದಿಗೆ ಅವರಿಗಿದೆ. ಅವರ ಪ್ರಕಾರ ‘ಇಲ್ಲಿ ಎರಡು ವರ್ಷಗಳ ಹಿಂದೆ ಒಂದಷ್ಟು ಬಾಂಗ್ಲಾದೇಶಿಯರು ಇದ್ದಿದ್ದು ನಿಜ. ಆದರೆ ಅವರಿಗೂ ಇಲ್ಲಿನ ಭಾರತದ ಜನರಿಗೂ ಸದಾ ತಿಕ್ಕಾಟವಿದ್ದ ಕಾರಣ ವರ್ಷಕ್ಕೂ ಮುಂಚೆಯೇ ಅವರು ಇಲ್ಲಿಂದ ತೆರಳಿದ್ದಾರೆ. ಈಗಲೂ ನಮ್ಮ ಕಣ್ಣು ತಪ್ಪಿಸಿ ಇಲ್ಲಿ ಬಾಂಗ್ಲಾದೇಶಿಯರು ಇದ್ದರೆ ಅವರನ್ನು ಹುಡುಕಿ ಹೊರಹಾಕುವುದಕ್ಕೆ ನಮ್ಮದೂ ಬೆಂಬಲವಿದೆ. ಆದರೆ ಆ ನೆಪದಲ್ಲಿ ಈ ಅಮಾಯಕ ಜನರಿಗೆ ಹಿಂಸೆ ಕೊಡುವುದನ್ನು ಒಪ್ಪಲಾಗುವುದಿಲ್ಲ. ಇವರಿಂದ ಬೆಂಗಳೂರಿನ ಸ್ವಚ್ಚತೆಗೆ ಮತ್ತು ಆರ್ಥಿಕತೆಗೆ ಒಳ್ಳೆಯದಾಗುತ್ತಿದೆಯೇ ಹೊರತು ಕೆಟ್ಟದಾಗುತ್ತಿಲ್ಲ’.

ಕಲೀಂಉಲ್ಲಾ

ಇಲ್ಲಿ ಬಾಂಗ್ಲಾದೇಶೀಯರು ಇದ್ದರು ಎಂಬುದು ಪೊಲೀಸ್ ಅಧಿಕಾರಿಗಳು ಸೇರಿ ಹಲವರ ಅಭಿಪ್ರಾಯ. ಇದೇ ಕ್ಯಾಂಪ್‌ನಿಂದ ಒಂದಷ್ಟು ಜನರನ್ನು ಗುರುತಿಸಿ ಬಾಂಗ್ಲಾದೇಶಕ್ಕೆ ಕಳಿಸಿದ್ದೂ ಇದೆ. ಭಾರೀ ಕಾರ್ಯಾಚರಣೆ ನಡೆಸಿದಾಗಲೂ ಅಂತಹವರ ಸಂಖ್ಯೆ ನೂರನ್ನೂ ಮುಟ್ಟಲಿಲ್ಲ. ಆದರೆ ಇಲ್ಲಿ ನೆಲೆಸಿರುವ 20,000ಕ್ಕೂ ಹೆಚ್ಚು ಜನರನ್ನು ಬೆದರಿಸಲು ಮಾತ್ರ ಅದು ಬಳಕೆಯಾಗುತ್ತಿದೆ.

ಜನರ ಪರ ನಿಲ್ಲುತ್ತೇನೆ: ಭೂಮಿ ಮಾಲೀಕ ಮಂಜುಗೌಡ

ವರ್ತೂರು ಸಮೀಪದ ಸಿದ್ಧಾಪುರ ನಿವಾಸಿಯಾದ ಮಂಜುಗೌಡ ಎಂಬುವವರು ತುಬರಹಳ್ಳಿಯಲ್ಲಿ 10 ಎಕರೆ ಭೂಮಿ ಹೊಂದಿದ್ದಾರೆ. ಇಲ್ಲಿಯೇ 150ಕ್ಕೂ ಹೆಚ್ಚು ಜನ ಟೆಂಟ್‌ಗಳನ್ನು ಹಾಕಿಕೊಂಡು ವಾಸಿಸುತ್ತಿರುವುದು. ಆ ಜಾಗಕ್ಕೆ ಮಂಜುಗೌಡ ಲ್ಯಾಂಡ್ ಎಂದು ಕರೆಯಲಾಗುತ್ತದೆ. ಬಹುತೇಕ ಚಿಂದಿ ಆಯುವವರು ತಮ್ಮ ಭೂಮಿಯ ಮಾಲೀಕರಾದ ಮಂಜುಗೌಡರಿಗೇ ಅದನ್ನು ಮಾರುತ್ತಾರೆ. ಅವರು ಸಮಯಕ್ಕೆ ಸರಿಯಾಗಿ ನ್ಯಾಯಯುತವಾಗಿ ಹಣ ಕೊಡುತ್ತಾರೆ ಎಂಬುದು ಅದಕ್ಕೆ ಕಾರಣ ಎಂಬುದು ಅವರ ಅನಿಸಿಕೆ. ಆ ಮಂಜುಗೌಡರನ್ನು ಪತ್ರಿಕೆ ಖುದ್ದು ಮಾತಾಡಿಸಿತು.

 

“ನಾನು 15 ವರ್ಷಗಳಿಂದ ಈ ಜನರನ್ನು ನೋಡುತ್ತಿದ್ದೇನೆ. ಇವರೆಲ್ಲ ಒಂದು ಹೊತ್ತಿನ ಊಟಕ್ಕೂ ಕಡುಕಷ್ಟಪಡುವ ಬಡವರು. ಹಾಗಾಗಿಯೇ ನಾನು ಪ್ರತಿಯೊಂದು ಕುಟುಂಬದಿAದ ಒಂದು ಸಾವಿರಕ್ಕಿಂತ ಹೆಚ್ಚು ಬಾಡಿಗೆ ತೆಗೆದುಕೊಳ್ಳುವುದಿಲ್ಲ. ಇಂತಹ ಅಮಾಯಕ ಜನರನ್ನು ಒಕ್ಕಲೆಬ್ಬಿಸಲು ಪೊಲೀಸರು ನನ್ನ ಮೇಲೆ ಒತ್ತಡ ತಂದಿದ್ದಾರೆ. ಆದರೆ ನಾನು ಅಂತಹ ದುಷ್ಟ ಕೆಲಸಕ್ಕೆ ಕೈ ಹಾಕುವುದಿಲ್ಲ. ಪೊಲೀಸರು ಯಾರನ್ನು ಬೇಕಾದರೂ ಕರೆದುಕೊಂಡ ಬರಲಿ. ಇಲ್ಲಿ ನಿಜವಾಗಿಯೂ ಬಾಂಗ್ಲಾದೇಶದವರ ಇದ್ದಾರೆಯೇ ಪರಿಶೀಲಿಸಲು. ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲ್ಲಿ. ಆದರೆ ಅದಕ್ಕಾಗಿ ಈ ನಮ್ಮ ದೇಶದವರೆ ಆದ ಈ ಎಲ್ಲಾ ಬಡಜನರನ್ನು ತೆರೆವುಗೊಳಿಸಲು ನಾನು ಬಿಡುವುದಿಲ್ಲ. ಪೊಲೀಸ್ ಒತ್ತಡ ಹೆಚ್ಚಾದರೆ ನ್ಯಾಯಾಲಯಕ್ಕೆ ಹೋಗುತ್ತೇನೆ” ಎನ್ನುತ್ತಾರೆ.

ಮಂಜು ಗೌಡ

ಆದರೆ ಈ ರೀತಿ ಶೆಡ್ಡುಗಳನ್ನು ನಿರ್ಮಿಸುವುದು, ಅದಕ್ಕೆ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯದಿರುವುದು ಕಾನೂನಿಗೆ ವಿರುದ್ಧವೇ ಆಗಿದೆ. ಕಾನೂನಿಗೆ ವಿರುದ್ಧವಾದ ಈ ನಿರ್ಮಾಣಗಳನ್ನು ತೆಗೆಯಬೇಕೆಂದರೂ ಅದಕ್ಕೂ ನಿಯಮಗಳಿವೆ. ಈ ಮಾಲೀಕರೂ ನಿಯಮ ಪಾಲಿಸುತ್ತಿಲ್ಲ; ಬಿಬಿಎಂಪಿಯೂ ಪಾಲಿಸುತ್ತಿಲ್ಲ ಎಂಬುದು ನಿಚ್ಚಳವಾಗಿದೆ.

ವಾಗ್ದೇವಿ ಸ್ಕೂಲ್, ವಿಬ್‌ಗಯಾರ್ ಸ್ಕೂಲ್‌ಗೆ ಶಾಲಾ ವಾಹನ ಚಾಲಕರಾಗಿ ಈ ಶೆಡ್‌ಗಳ ಸುಮಾರು 50 ಜನ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳು ಖಾಸಗಿ ಶಾಲೆಗಳಿಗೂ ಸೇರಿ ಇಂಗ್ಲಿಷ್ ಕಲಿಯುತ್ತಿದ್ದಾರೆ. ಕೂಲಿ ಮಾಡಿ ಗಳಿಸಿದ ಹಣದಿಂದ ಒಂದಷ್ಟು ಜನ ಅಂಗಡಿ ಇಡುವಂತಹ ಸಣ್ಣ ಉದ್ಯಮಗಳನ್ನು ಆರಂಭಿಸಿದ್ದಾರೆ. ಅಂದರೆ ಹೊಸ ಬದುಕಿನ ಕನಸು ಕಾಣಲು ಒಂದಷ್ಟು ಜನ ಮುಂದಾಗಿದ್ದಾರೆ.. ಆದರೆ ಅಷ್ಟರಲ್ಲಿ ಬಾಂಗ್ಲಾದೇಶಿಯರೆಂಬ ಹೆಸರಿನಲ್ಲಿ ಇವರನ್ನು ಒಕ್ಕಲೆಬ್ಬಿಸುವ ಭಯವಂತೂ ನಿತ್ಯ ಕಾಡತೊಡಗಿದೆ.

ಈಗ ಏನು ನಡೆಯುತ್ತಿದೆ?

ಕಾರ್ಯಾಚರಣೆ ನಡೆಯುವಾಗಲೇ ಕಲೀಂಉಲ್ಲಾ ಮತ್ತು ಬೆಂಗಳೂರಿನ ಬಡವರ ಆಪತ್ಬಾಂಧವರಾದ ಆಲ್ಟರ್‌ನೇಟಿವ್ ಲಾ ಫೋರಂನ ಒಂದಷ್ಟು ವಕೀಲರು ಅಲ್ಲಿಗೆ ಹೋಗಿ ಡಿಮಾಲಿಷನ್ ಮ್ಯಾನ್‌ಗಳನ್ನು ಪ್ರಶ್ನಿಸಿದ್ದಾರೆ. ಬಿಬಿಎಂಪಿ ನೋಟಿಸ್ ಇಲ್ಲದೇ ಈ ಜನರನ್ನು ಅದು ಹೇಗೆ ಒಕ್ಕಲೆಬ್ಬಿಸುತ್ತಿದ್ದೀರಿ? ಪೊಲೀಸರಿಗೆ ಈ ಅಧಿಕಾರ ಕೊಟ್ಟರ‍್ಯಾರು? ಬಿಬಿಎಂಪಿ ಅಧಿಕಾರಿಗಳೇಕೆ ಸ್ಥಳಕ್ಕೆ ಬಂದಿಲ್ಲ, ಮೂರು ತಿಂಗಳು ಮೊದಲೇ ನೋಟಿಸ್ ಕೊಡಬೇಕೆಂಬ ನಿಯಮದ ಅರಿವು ನಿಮಗಿಲ್ಲವೇ? ಹೋಗಲಿ ಬಾಂಗ್ಲಾದೇಶಿಯರು ಎಲ್ಲಿದ್ದಾರೆ ತೋರಿಸಿ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದ್ಯಾವುದಕ್ಕೂ ಉತ್ತರವಿಲ್ಲದೇ, ತಾವು ಸಿಕ್ಕಿ ಹಾಕಿಕೊಳ್ಳುತ್ತಿದ್ದೇವೆ ಎಂದು ಅರಿವಾದ ಕೂಡಲೇ ಪೊಲೀಸರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ನಂತರ ಹಲವು ನಿವಾಸಿಗಳನ್ನು ಪೊಲೀಸರು ಕರೆದೊಯ್ಯುತ್ತಿದ್ದಾರೆ ಎಂಬ ವರ್ತಮಾನಗಳಿವೆ.

ಉತ್ತರ ಕರ್ನಾಟಕದ ಜನರನ್ನು ಬೀದಿಪಾಲು ಮಾಡಿದ ಬಿಜೆಪಿ ಸರ್ಕಾರ.. ಬಾಂಗ್ಲಾ ದೇಶಿಯರ ನೆಪ ಬಡವರ ನಿರ್ಮೂಲನೆ.. ಇದಕ್ಕಾಗಿಯೇ NRC ಬೇಡ ಎಂಬ ಕೂಗುಗಳು ಕೇಳಿಬಂದಿವೆ..

Posted by Naanu Gauri on Tuesday, January 21, 2020

ಸ್ವಂತ ನೆಲದ ಜನರ ಬದುಕಿಗಿಂತ ಸ್ವಂತ ಹಿತಾಸಕ್ತಿಯೇ ಮುಖ್ಯವಾಯಿತೇ?

ಜನವರಿ 12ರಂದು ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯವರು ಟ್ವೀಟ್ ಮಾಡಿ ನನ್ನ ಕ್ಷೇತ್ರದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ಹಾಕಿಕೊಳ್ಳಲಾಗಿದೆ. ಅಲ್ಲಿ ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿವೆ. ಇದರಿಂದ ಅಲ್ಲಿನ ನೈರ್ಮಲ್ಯ ಹಾಳಾಗಿದೆ. ಶಂಕಿತ ಬಾಂಗ್ಲಾದೇಶಿಯರಿದ್ದಾರೆ, ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಹೇಳಿದ್ದರು.

ಇದೀಗ ಅಲ್ಲಿನ ಗುಡಿಸಲುಗಳಲ್ಲಿ ಪೂರ್ವಭಾರತದ ಬಡವರ ಜೊತೆಗೆ, ವಿಜಯಪುರ, ಬೆಳಗಾವಿ, ಯಾದಗಿರಿ, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಕೂಲಿ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವುದು ಕಂಡುಬಂದಿದೆ. ‘ಎಂಟತ್ತು ದಿನದಿಂದ ಪೊಲೀಸರು ಬಂದು ತೊಂದರೆ ಕೊಡುತ್ತಿದ್ದಾರೆ. ನಾವು ರೈತರು, ನಮ್ಮ ಕಡೆ ನೀರಿಲ್ಲ ಎಂದು ಇಲ್ಲಿಗೆ ವಲಸೆ ಬಂದಿದ್ದೇವೆ. ಕಷ್ಟಪಟ್ಟು ದುಡಿದು ಬದುಕುತ್ತಿದ್ದೇವೆಯೇ ಹೊರತು ಯಾರು ಶೋಕಿ ಮಾಡಲು ಇಲ್ಲಿಗೆ ಬಂದಿಲ್ಲ. ನಾವು ಯಾರ ದುಡ್ಡು ಕಳುವು ಮಾಡಿಲ್ಲ, ಯಾರ ತಲೆ ಹೊಡೆದಿಲ್ಲ ಕಷ್ಟಪಟ್ಟ ದುಡಿದು ನಾವು ಬದುಕುತ್ತಿದ್ದೇವೆ.

ಅರವಿಂದ ಲಿಂಬಾವಳಿ

ನಮ್ಮ ಬಳಿ ಪಾನ್ ಕಾರ್ಡ್, ಆಧಾರ್ ಕಾರ್ಡ್, ಡಿಎಲ್ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಅವರು ಬೇಕಾದ್ದು ಕೇಳಲಿ ಕೊಡುತ್ತೇವೆ. ಅದು ಬಿಟ್ಟು ನಮ್ಮ ಗುಡಿಸಲು ಧ್ವಂಸಗೊಳಿಸಿ, ನೀರು, ವಿದ್ಯುತ್ ಇಲ್ಲದೇ ತೊಂದರೆ ಕೊಡುತ್ತಿದ್ದಾರೆ. ಹೊರಗಡೆ ಬಾಡಿಗೆಗೆ ಪ್ರತಿ ತಿಂಗಳಿಗೆ ಎಂಟತ್ತು ಸಾವಿರ ಕೇಳುತ್ತಾರೆ. 50000 ಅಡ್ವಾನ್ಸ್ ಕೇಳುತ್ತಾರೆ. ಬಡಜನರು ನಾವು ಎಲ್ಲಿಂದ ತಂದುಕೊಡುವುದು? ಇಲ್ಲಿ ಹೇಗೆ ದುಡಿದು ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುತ್ತಿರುವ ನಮ್ಮ ಮೇಲೆ ದೌರ್ಜನ್ಯ ನಡೆಸಲು ಇವರಿಗೆ ಅಧಿಕಾರ ಕೊಟ್ಟರ‍್ಯಾರು ಎಂದು’ ಉತ್ತರ ಕರ್ನಾಟಕದ ಜನರು ಕೇಳುತ್ತಿರುವ ವಿಡಿಯೋಗಳು ಪತ್ರಿಕೆಯ ಬಳಿ ಲಭ್ಯವಿವೆ.

ಇದೇ ಉತ್ತರ ಕರ್ನಾಟಕದಿಂದ ಬಂದ ಅರವಿಂದ ಲಿಂಬಾವಳಿಯವರಿಗೆ ಈ ಸದ್ಯ ಸಚಿವಗಿರಿ ಪಡೆಯುವುದೇ ಮುಖ್ಯವಾಗಿದೆ. ಅವರು ಗೆಲ್ಲುತ್ತಾ ಬಂದಿರುವುದು ಬೆಂಗಳೂರಿನ ಮಹದೇವಪುರ ಮೀಸಲು ಕ್ಷೇತ್ರದಿಂದ. ಮೊದಲ ಬಾರಿ ಅವರು ಗೆದ್ದಾಗ ‘ಬಾಂಗ್ಲಾದೇಶೀಯರು ವಾಸವಿದ್ದ ಈ ಜೋಪಡಿಗಳಿಂದಲೂ ಮತ ಪಡೆದಿದ್ದರು. ಇಲ್ಲಿ ಹಲವಾರು ಬಿಜೆಪಿ ಏಜೆಂಟರಿದ್ದು ಅವರೇ ಇವರಿಗೆ ವೋಟರ್‌ಐಡಿಯನ್ನೂ ಕೊಡಿಸಿದ್ದರು. ನಂತರ ಅವರಿಗೆ ಇಲ್ಲಿಂದ ಮತವೂ ಬೀಳಲಿಲ್ಲ. ಬಾಂಗ್ಲಾದೇಶೀಯರ ಕಥೆಯೂ ಶುರುವಾಯಿತು’ ಎನ್ನುತ್ತಾರೆ ಸ್ಥಳೀಯ ಕಾರ್ಯಕರ್ತರು. ಅಂತಹ ಬಿಜೆಪಿ ಏಜೆಂಟರ ಹೆಸರುಗಳನ್ನು ಪತ್ರಿಕೆಯ ಜೊತೆ ಹಂಚಿಕೊಂಡವರು ನಂತರ ತಮ್ಮ ಹೆಸರು ಹಾಗೂ ಈ ಮಾಹಿತಿ ಎರಡನ್ನೂ ಪ್ರಕಟಿಸದಿರಲು ಕೇಳಿಕೊಂಡರು.

ಈಶಾನ್ಯ ಮತ್ತು ಪೂರ್ವಭಾರತದ ದುರಂತ ಕಥೆ

ಮನುಷ್ಯ ಮಾತ್ರರು ಘನತೆಯಿಂದ ವಾಸಿಸಲಾಗದ ಈ ಶೆಡ್ಡುಗಳಲ್ಲಿ ಪಶ್ಚಿಮ ಬಂಗಾಳ ರಾಜ್ಯದ ನದಿಯಾ, ಮುರ್ಷಿದಾಬಾದ್, ಕಲ್ಕತ್ತ ಜಿಲ್ಲೆಗಳಿಂದ ಕೂಲಿ ಅರಸಿ ಬಂದವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅಂತಹವರಲ್ಲಿ ಕೆಲವರನ್ನು ಪತ್ರಿಕೆಯು ಮಾತಾಡಿಸಿತು.

ಶೈಫುದ್ದೀನ್ ಶೇಖ್, (48ವರ್ಷ) 2 ವರ್ಷದ ಹಿಂದೆ ಮುರ್ಷಿದಾಬಾದ್‌ನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಬಿಬಿಎಂಪಿಯಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಯಾರೋ ಅಪರಿಚಿತರು ಬಂದು ಇಲ್ಲಿ ಬಾಂಗ್ಲಾದೇಶಿಯವರು ಇದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಅವರು ಮುಂಚೆ ಇದ್ದರು ಈಗ ಇಲ್ಲ ಎಂದು ಹೇಳಿದ್ದಾರೆ. ತದನಂತರ ನಾಲ್ಕು ದಿನ ಬಿಟ್ಟ ಪೊಲೀಸರು ಬಂದು 2 ಗಂಟೆಯಲ್ಲಿ ಖಾಲಿ ಮಾಡಿ ಎಂದು ಧಮಕಿ ಹಾಕಿದ್ದಾರೆ.

ನಾಸಿರ್ ಮಲ್ಲಿಕ್, 60 ವರ್ಷ, ಕಲ್ಕತ್ತದ ಗೋಪಿನಾಥ್‌ಪುರ್‌ದಿಂದ 9 ವರ್ಷದ ಹಿಂದೆ ವಲಸೆ ಬಂದಿದ್ದಾರೆ. ಇಲ್ಲಿ ಇವರು ಠೇಕೆದಾರ್ (ಮೇಸ್ತ್ರಿ) ಯಾಗಿ ಕೆಲಸ ಮಾಡುತ್ತಿದ್ದಾರೆ.

ಅಕ್ಬರ್ ಅಲಿ ಮಂಡಲ್, ರಫೀಕುಲ್‌ಶೇಖ್ ಸಹ ಸದ್ಯಕ್ಕೆ ನಿರಾಶ್ರಿತರಾಗಿದ್ದಾರೆ. 11 ವರ್ಷದಿಂದ ವಾಸಿಸುತ್ತಿರುವ ಇವರು, ವರ್ಷದಲ್ಲಿ ಐದಾರು ಬಾರಿ ಪೊಲೀಸರು ಬಂದು ತೊಂದರೆ ಕೊಡುತ್ತಾರೆ ಎಂದು ಆರೋಪಿಸುತ್ತಾರೆ. ಈ ಬಾರಿ ಕೋರ್ಟ್ ಮೆಟ್ಟಿಲೇರಲು ಸಿದ್ದತೆ ನಡೆಸಿದ್ದಾರೆ.

ಅರ್ಬನ್ ಕ್ಲಾಪ್ ಮೊಬೈಲ್ ಆಪ್‌ನ ಮುಖಾಂತರ ಕೆಲಸ ಮಾಡುವ ಬಹಳಷ್ಟು ಜನರು ಇಲ್ಲಿದ್ದಾರೆ. ಸುತ್ತಮುತ್ತಲಿನ ನೂರಾರು ಅಪಾರ್ಟ್ಮೆಂಟ್‌ನ ಸ್ವಚ್ಛತೆ ಇವರಿಲ್ಲದೇ ಸಾಧ್ಯವೇ ಇಲ್ಲ.

ಅಸ್ಕರ್ ಅಲಿ ಶೇಖ್, ವಿಬ್‌ಗಯಾರ್ ಶಾಲೆಯಲ್ಲಿ ಹಗಲೊತ್ತು ಶಾಲಾ ವಾಹನ ಡ್ರೈವರ್ ಆಗಿ ಕೆಲಸ ಮಾಡಿದರೆ, ರಾತ್ರಿ ವೇಳೆ ವಾಟರ್ ಟ್ಯಾಂಕರ್ ಡ್ರೈವಿಂಗ್ ಮಾಡುತ್ತಾರೆ. ಹೇಗಾದರೂ ಮಾಡಿ ಒಂದಷ್ಟು ಹಣ ಸಂಪಾದಿಸಿ ಉತ್ತಮ ಬದುಕು ಕಂಡುಕೊಳ್ಳಬೇಕೆಂದುಬುದು ಅವರ ಆಸೆ. ತನ್ನ ಮಗಳು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾಳೆ ಎಂಬುದೇ ಅವರಿಗೊಂದು ಸಂತಸ.

ಬಿಲಾಲ್ ಎಂಬುವವರು ಪಶ್ಚಿಮ ಬಂಗಾಳದ ನದಿಯ ಜಿಲ್ಲೆಯಿಂದ ವಲಸೆ ಬಂದು, ಸ್ವಲ್ಪ ಹಣ ಸಂಪಾದಿಸಿ ಈಗ ಚಿಲ್ಲರೆ ಅಂಗಡಿ ಹಾಕಿಕೊಂಡಿದ್ದಾರೆ. ತನ್ನ ಮಗಳು ಓದಿ ಉತ್ತಮ ಕೆಲಸ ಹಿಡಿಯಬೇಕೆಂಬುದು ಅವರ ಬಯಕೆ. ಹಾಗಾಗಿ 6ನೇ ತರಗತಿಯ ಆಕೆಯನ್ನು ಕುಂದನಹಳ್ಳಿ ಬಳಿಯ ಬ್ರಿಲಿಯಂಟ್ ಶಾಲೆಗೆ ಸೇರಿಸಿದ್ದಾರೆ. ಆದರೆ ಯಾವಾಗ ಈ ಸ್ಲಂನಲ್ಲಿ ಬಾಂಗ್ಲಾದವರು ಇದ್ದಾರೆ ಎಂಬ ವದಂತಿ ಹಬ್ಬಿತೋ ಆಗ ಶಾಲೆಯವರು ಬಿಲಾಲ್‌ಗೆ ತಮ್ಮ ಮಗಳ ಟಿ.ಸಿ ತೆಗೆದುಕೊಂಡು ಹೋಗಿ ಎಂದು ಒತ್ತಡ ಹಾಕಿದ್ದಾರೆ.

ತನ್ನ ಮಗಳಾದರೂ ತಮ್ಮಂತೆ ಆಗಬಾರದೆಂದು ಬಯಸಿದ ಬಿಲಾಲ್‌ಗೆ ಇದರಿಂದ ಆಘಾತಕ್ಕೊಳಗಾಗಿದ್ದಾರೆ. ಆನಂತರ ಕಲೀಂಉಲ್ಲಾರವರು ಶಾಲೆಯವರೊಂದಿಗೆ ಮಾತನಾಡಿ ಅವರ ದಾಖಲೆಗಳೆಲ್ಲವೂ ಇರುವುದರಿಂದ ನೀವು ಶಾಲೆ ಬಿಡುವಂತೆ ಒತ್ತಡ ಹಾಕುವುದು ಕಾನೂನುಬಾಹಿರ ಎಂದು ಎಚ್ಚರಿಕೆ ಕೊಟ್ಟ ನಂತರ ಆ ಮಗು ಶಾಲೆಗೆ ಹೋಗುತ್ತಿದೆ.

ಇದು ಎನ್‌ಆರ್‌ಸಿ ಬಂದರೆ ಏನಾಗಬಹುದು ಎಂಬ ಒಂದು ಝಲಕ್ ಅಷ್ಟೇ – ವಿನಯ್

‘ಖಾಸಗಿ ಜಾಗವೊಂದರಲ್ಲಿ ಶೆಡ್ಡುಗಳನ್ನು ಹಾಕಿಕೊಂಡು ಕೆಲವರು ವಾಸಿಸುತ್ತಿದ್ದಾರೆ. ಒಂದು ವೇಳೆ ಆ ಕಟ್ಟಡಗಳೂ ಅಕ್ರಮ ಎನ್ನುವುದಾದರೆ ಅದಕ್ಕೆ ಸಂಬಂಧಿಸಿದವರು ನೋಟೀಸ್ ಕೊಡಬೇಕು. ನಿಯಮಾನುಸಾರ ಬಿಬಿಎಂಪಿಯವರು ಎತ್ತಂಗಡಿ ಮಾಡಬೇಕು. ಅದಕ್ಕೊಂದು ಎತ್ತಂಗಡಿ ಆದೇಶ ಇರಬೇಕು. ಅದನ್ನು ಸ್ಥಳೀಯ ಎಇಇ ಮಾಡಲು ಸಾಧ್ಯವಿಲ್ಲ. ಆದರೆ, ಅಂಥದ್ದೇನೂ ಇಲ್ಲದೇ ನೂರಾರು ವಸತಿಗಳನ್ನು ಧ್ವಂಸ ಮಾಡಲಾಗಿದೆ. ಅಂದರೆ ಯಾವುದೇ ಅಥಾರಿಟಿ ಇಲ್ಲದೇ, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಇದನ್ನು ಮಾಡಿದ್ದಾರೆ. ಬಲಪಂಥೀಯ ಮಾಧ್ಯಮ ಸಂಸ್ಥೆಯು ದುಷ್ಟತನದ ಈ ಪ್ರಯೋಗದಲ್ಲಿ ಶಾಮೀಲಾಗಿದೆ. ಪೊಲೀಸ್ ಕಮೀಷನರ್ ಅವರ ಹೇಳಿಕೆ ನೋಡಿದರೆ, ಅವರು ಬಾಂಗ್ಲಾದೇಶೀಯರೇ ಅಲ್ಲಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿರುವುದು ಕಾಣುತ್ತದೆ. ಬಿಬಿಎಂಪಿಯಾದರೂ ತನ್ನ ಎಇಇ ಮೇಲೆ ಕ್ರಮ ತೆಗೆದುಕೊಂಡಿತು. ಪೊಲೀಸರು ಇದುವರೆಗೂ ಅದನ್ನು ಮಾಡಿಲ್ಲ. ಸಚಿವನಾಗಲು ಪ್ರಯತ್ನಿಸುತ್ತಿರುವ ಸ್ಥಳೀಯ ಬಿಜೆಪಿ ಎಂಎಲ್‌ಎ ತನ್ನ ಹಿತಾಸಕ್ತಿಗಾಗಿ ಈ ಚಿತಾವಣೆ ಶುರು ಮಾಡಿರುವುದು ಎದ್ದು ಕಾಣುತ್ತಿದೆ.

ವಿನಯ್‌ ಶ್ರೀನಿವಾಸನ್‌

ಹೀಗಿರುವಾಗ ನಾಳೆ ಎನ್‌ಆರ್‌ಸಿ ಜಾರಿಯಾದರೆ ಈ ದೇಶದ, ರಾಜ್ಯದ ಬಡವರ ಕಥೆ ಏನಾಗಬಹುದು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಎನ್‌ಆರ್‌ಸಿ ಬಂದರೆ ಎಲ್ಲ ಜಾತಿ, ಧರ್ಮಗಳ ಬಡವರ ಕಥೆ ಏನಾಗಬಹುದು? ಶೋಷಿತ ಸಮುದಾಯಗಳು ಯಾವ ರೀತಿ ಸಂಕಷ್ಟಕ್ಕೆ ಗುರಿಯಾಗಬಹುದು ಎಂಬ ಝಲಕ್‌ಅನ್ನು ಬೆಂಗಳೂರಿನಲ್ಲಿ ತೋರಿಸಲಾಗಿದೆ’ ಇಂದು ಪರ್ಯಾಯ ಕಾನೂನು ವೇದಿಕೆಯ ವಿನಯ್ ಶ್ರೀನಿವಾಸ್ ಅವರ ಮಾತು.

ಬಹುಶಃ ಇಡೀ ದೇಶದಲ್ಲಿ ಪ್ರತಿಧ್ವನಿಸುತ್ತಿರುವ ಸಿಎಎ, ಎನ್‌ಆರ್‌ಸಿ ಪ್ರತಿಭಟನೆಗಳ ಹಿಂದೆಯೂ ಇದೇ ಆತಂಕ ಮತ್ತು ಧ್ವನಿ ಇದೆಯೆನಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. I believe the report of public TV it is why they are not reporting if Bangladesh want to merge with India are our peoples ready if Pakistan is ready to merge are they ready. Thoughts are need to come

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...