ಕಳೆದೆರಡು ತಿಂಗಳುಗಳಿಂದ ಪಂಜಾಬ್ ರಾಜ್ಯದ ರಾಜಕೀಯ ಬೆಳವಣಿಗೆಗಳ ಕೇಂದ್ರ ಬಿಂದುವಾಗಿದ್ದ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಹುದ್ದೆಗೇರಿದ ಎರಡು ತಿಂಗಳಿನಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಸಿಧು, ನಾನು ಕಾಂಗ್ರೆಸ್ ನಲ್ಲಿ ಮುಂದುವರೆಯುವುದಾಗಿ ಘೋಷಿಸಿದ್ದಾರೆ.
“ರಾಜಿಯು ಮನುಷ್ಯನೊಬ್ಬನ ವ್ಯಕ್ತಿತ್ವವನ್ನು ನಾಶಗೊಳಿಸುತ್ತದೆ. ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ ನಾನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಂದಕ್ಕೂ ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ” ಎಂದು ನವಜೋತ್ ಸಿಧು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
— Navjot Singh Sidhu (@sherryontopp) September 28, 2021
ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ರವರ ತೀವ್ರ ವಿರೋಧದ ನಡುವೆಯೂ ಜುಲೈ 23 ರಂದು ನವಜೋತ್ ಸಿಧುರವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮರಿಂದರ್ ಸಿಂಗ್ ರವರನ್ನು ಸಿಎಂ ಸ್ಥಾನದಿಂದ ಇಳಿಸಿ ಸಿಧು ಆಪ್ತರಾದ ಚರಣ್‌ಜಿತ್ ಸಿಂಗ್ ಚನ್ನಿಯವರನ್ನು ಸಿಎಂ ಆಗಿ ಮಾಡಲಾಗಿತ್ತು. ಈಗ ಸಿಧುರವರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮರಿಂದರ್ ಸಿಂಗ್ “ನಾನು ಈ ಕುರಿತು ಮೊದಲೇ ಹೇಳಿದ್ದೆ. ಈತ ಸ್ಥಿರವಾದ ಮನುಷ್ಯನಲ್ಲ ಮತ್ತು ಗಡಿರಾಜ್ಯ ಪಂಜಾಬ್‌ಗೆ ಹೊಂದುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
I told you so…he is not a stable man and not fit for the border state of punjab.
— Capt.Amarinder Singh (@capt_amarinder) September 28, 2021
ಪಂಜಾಬ್ ವಿಧಾನಸಭಾ ಚುಣಾವಣೆಗೆ ಕೇವಲ ಕೆಲವೇ ತಿಂಗಳು ಇರುವಾಗ ಕಾಂಗ್ರೆಸ್ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಇದನ್ನು ಹೇಗೆ ಬಗೆಹರಿಸಿಕೊಳ್ಳುತ್ತದೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಮೈಸೂರು ದೇವಾಲಯ ಧ್ವಂಸ – ತಹಶೀಲ್ದಾರ್ ತಲೆದಂಡ!


