ನಾರಾಯಣಪುರ: ಬುಧವಾರದಂದು ಭದ್ರತಾ ಪಡೆಗಳಿಂದ ಹತ್ಯೆಯಾಗಿರುವ ಸಿಪಿಎಂ ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಂಬಲಾ ಕೇಶವ್ ರಾವ್ ಅಲಿಯಾಸ್ ಬಸವರಾಜ್ ಅವರು 2004ರಲ್ಲಿ ಕೊರಾಪುತ್ (ಒಡಿಶಾ)ದಲ್ಲಿ ನಡೆದ ಶಸ್ತ್ರಾಸ್ತ್ರ ಲೂಟಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆಗ ನಕ್ಸಲರಿಂದ 1,000 ಅತ್ಯಾಧುನಿಕ ಬಂದೂಕುಗಳು ಮತ್ತು ಸುಮಾರು 50 ಕೋಟಿ ರೂ. ಮೌಲ್ಯದ 1,000 ಇತರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿತ್ತು. ಈ ದಾಳಿಯಲ್ಲಿ ಮೂವರು ಜೀವಗಳು ಬಲಿಯಾಗಿದ್ದವು ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರ್ದೇಶಕ ಪಿ.ಸುಂದರ್ ರಾಜ್ ಹೇಳಿದ್ದಾರೆ.
2005ರಲ್ಲಿ ನಡೆದ ಜೆಹನಾಬಾದ್ ಜೈಲು ಲೂಟಿಯಲ್ಲಿ (ಬಿಹಾರ) ಬಸವರಾಜ್ ಭಾಗಿಯಾಗಿದ್ದರು. ಈ ದಾಳಿಯಲ್ಲಿ ಮಾವೋವಾದಿಗಳು ಮತ್ತು ಕುಖ್ಯಾತ ಅಪರಾಧಿಗಳು ಸೇರಿದಂತೆ 389 ಕೈದಿಗಳು ಪರಾರಿಯಾಗಿದ್ದರು ಎಂದು ಐಜಿ ಮಾಹಿತಿ ನೀಡಿದರು.
ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಹತರಾದವರಲ್ಲಿ 12 ಮಹಿಳೆಯರು ಸೇರಿದಂತೆ 27 ನಕ್ಸಲರ ಕಟ್ಟಾ ಕಾರ್ಯಕರ್ತರಾಗಿದ್ದಾರೆ. ಇವರೆಲ್ಲಾ ರಾಜ್ಯದಲ್ಲಿ 3.33 ಕೋಟಿ ರೂ.ಗಳ ಒಟ್ಟು ಬಹುಮಾನ ಹೊಂದಿದ್ದರು ಎಂದು ಅವರು ತಿಳಿಸಿದ್ದಾರೆ.
ನಕ್ಸಲರ ವಿರುದ್ಧ ನಡೆದ ಅತಿದೊಡ್ಡ ದಾಳಿಗಳಲ್ಲಿ ಒಂದಾದ ಇದರಲ್ಲಿ ಭದ್ರತಾ ಪಡೆಗಳು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಮತ್ತು ಇತರ 26 ಜನರನ್ನು ಬುಧವಾರ ಬಿಜಾಪುರ-ನಾರಾಯಣಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಅರಣ್ಯದ ಅಭುಜ್‌ಮದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಂದಿವೆ ಎಂದು ಅವರು ಹೇಳಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಯ ಇಬ್ಬರು ಜವಾನರು ಸಹ ಪ್ರಾಣ ಕಳೆದುಕೊಂಡರು. “ಮೃತರಾದ ನಕ್ಸಲರಲ್ಲಿ ಬಸವರಾಜು (70) ಎಂದು ಬುಧವಾರವೇ ಗುರುತಿಸಲಾಗಿದ್ದು, ಛತ್ತೀಸ್‌ಗಢದಲ್ಲಿ ಈತನಿಗೆ 1 ಕೋಟಿ ರೂ. ಬಹುಮಾನ ನೀಡಲಾಗಿತ್ತು. ಉಳಿದವರ ಗುರುತು ಗುರುವಾರ ಪತ್ತೆಯಾಗಿದೆ” ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರ್ದೇಶಕ ಸುಂದರರಾಜ್ ಪಿ ಪಿಟಿಐಗೆ ತಿಳಿಸಿದ್ದಾರೆ.
ಮಾವೋವಾದಿಗಳ ಕೇಂದ್ರ ಸಮಿತಿ ಮತ್ತು ಪಾಲಿಟ್‌ಬ್ಯೂರೋ ಸದಸ್ಯರು ಹಾಗೂ ಮಾದ್ ವಿಭಾಗದ ಹಿರಿಯ ಕಾರ್ಯಕರ್ತರು ಮತ್ತು ಪಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಸದಸ್ಯರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮೇ 18ರಂದು ನಾರಾಯಣಪುರ, ದಂತೇವಾಡ, ಬಿಜಾಪುರ ಮತ್ತು ಕೊಂಡಗಾಂವ್ ಜಿಲ್ಲೆಗಳ ಡಿಆರ್‌ಜಿ ಸಿಬ್ಬಂದಿಯನ್ನು ಒಳಗೊಂಡ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.
ಮೂರು ದಿನಗಳ ಹುಡುಕಾಟದ ನಂತರ ಬುಧವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು. ಮಾವೋವಾದಿಗಳ ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯ ಜಂಗು ನವೀನ್ ಅವರಿಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ನಕ್ಸಲರ ಶಸ್ತ್ರ ವಿಭಾಗವಾದ ‘ಕಂಪನಿ’ ಸಮಿತಿ ಸದಸ್ಯರಾದ (ಸಿವೈಪಿಸಿಎಂ) ಸಂಗೀತಾ (35), ಭೂಮಿಕಾ (35), ಸೋಮ್ಲಿ (30) ಅವರಿಗೆ ತಲಾ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ರೋಷನ್ ಅಲಿಯಾಸ್ ಟಿಪ್ಪು (35) ಸಹ ಕೊಲ್ಲಲ್ಪಟ್ಟವರಲ್ಲಿ ಸೇರಿದ್ದಾರೆ ಎಂದು ಅವರು ಹೇಳಿದರು.
“ನಕ್ಸಲರ ಇನ್ನೊಂದು ಶಸ್ತ್ರ ವಿಭಾಗವಾದ ‘ಕಂಪನಿ’ಯ ಕೆಳ ಸಮಿತಿಯಾದ ‘ಪ್ಲಟೂನ್’ ಸಮಿತಿ ಸದಸ್ಯರು ಮತ್ತು ಪಿಎಲ್‌ಜಿಎ ಕಂಪನಿ ಸಂಖ್ಯೆ-7ರ 18 ಸದಸ್ಯರನ್ನು ಒಳಗೊಂಡ ಉಳಿದ 21 ಕಾರ್ಯಕರ್ತರ ತಲೆಗೆ ತಲಾ 8 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಹತ್ಯೆಗೀಡಾದ ನಕ್ಸಲರಲ್ಲಿ ಮೂವರು ತೆಲಂಗಾಣಕ್ಕೆ ಸೇರಿದವರು ಮತ್ತು ಇಬ್ಬರು ಆಂಧ್ರಪ್ರದೇಶಕ್ಕೆ ಸೇರಿದವರು ಎಂದು ಅವರು ಮಾಹಿತಿ ನೀಡಿದ್ದಾರೆ.
“ಎನ್‌ಕೌಂಟರ್ ಸ್ಥಳದಿಂದ ಮೂರು ಎಕೆ-47 ರೈಫಲ್‌ಗಳು, ನಾಲ್ಕು ಸೆಲ್ಫ್ ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್), ಆರು ಇನ್ಸಾಸ್ ರೈಫಲ್‌ಗಳು, ಒಂದು ಕಾರ್ಬೈನ್, ಆರು .303 ರೈಫಲ್‌ಗಳು, ಒಂದು ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್), ಎರಡು ರಾಕೆಟ್ ಲಾಂಚರ್‌ಗಳು, ಎರಡು 12 ಬೋರ್ ಗನ್‌ಗಳು, ಒಂದು ದೇಶೀಯ ನಿರ್ಮಿತ ಪಿಸ್ತೂಲ್, ಎರಡು ಮಜಲ್ ಲೋಡಿಂಗ್ ಗನ್‌ಗಳು ಮತ್ತು ಸ್ಫೋಟಕಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಐಜಿ ಹೇಳಿದರು.
“ಬಸವರಾಜು ಕೇಂದ್ರ ಗೃಹ ಸಚಿವಾಲಯ ಘೋಷಿಸಿದ 1 ಕೋಟಿ ರೂ., ರಾಷ್ಟ್ರೀಯ ತನಿಖಾ ಸಂಸ್ಥೆ 50 ಲಕ್ಷ ರೂ. ಮತ್ತು ಆಂಧ್ರಪ್ರದೇಶ ಮತ್ತು ಒಡಿಶಾ ಸರ್ಕಾರಗಳು ತಲಾ 25 ಲಕ್ಷ ರೂ. ಬಹುಮಾನವನ್ನು ಸಹ ಹೊಂದಿದ್ದನು. ದೇಶದ ಎಲ್ಲಾ ಎಲ್‌ಡಬ್ಲ್ಯೂಇ ಪೀಡಿತ ರಾಜ್ಯಗಳಲ್ಲಿ ಅವನು ಒಟ್ಟು 10 ಕೋಟಿ ರೂ. ಬಹುಮಾನವನ್ನು ಹೊಂದಿದ್ದನು ಎಂದು ಅಂದಾಜಿಸಲಾಗಿದೆ. ಇದರ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ,” ಎಂದು ಅವರು ತಿಳಿಸಿದರು.
ಗಂಗಣ್ಣ, ಬಿ.ಆರ್.ದಾದಾ ಮತ್ತು ಪ್ರಕಾಶ್, ಕೃಷ್ಣ, ದರಪು ನರಸಿಂಗ್ ರೆಡ್ಡಿ ಎಂಬ ಅಡ್ಡಹೆಸರುಗಳಿಂದ ಪರಿಚಿತರಾದ ಬಸವರಾಜು 1970ರ ದಶಕದಲ್ಲಿ ಈ ನಕ್ಸಲ್ ಚಳುವಳಿಗೆ ಸೇರಿದ್ದರು. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿಯಣ್ಣಪೇಟೆ ಗ್ರಾಮದ ನಿವಾಸಿಯಾಗಿದ್ದ ಈ ಉನ್ನತ ಮಾವೋವಾದಿ ನಾಯಕ, ಆಗಿನ ವಾರಂಗಲ್‌ನ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಟೆಕ್ ಪದವಿ ಪಡೆದಿದ್ದರು ಎಂದು ಅವರು ಹೇಳಿದರು.
ಬಸವರಾಜು 2018ರಲ್ಲಿ ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ನ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು, ಆಗ 71 ವರ್ಷ ವಯಸ್ಸಿನ ಮುಪ್ಪಳ ಲಕ್ಷ್ಮಣ ರಾವ್ ಅಲಿಯಾಸ್ ಗಣಪತಿ ಅವರು ಆರೋಗ್ಯ ಕ್ಷೀಣಿಸುವಿಕೆ ಮತ್ತು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ರಾಜೀನಾಮೆ ನೀಡಿದ್ದರು. ಬಸವರಾಜು ಅವರು ಮಾವೋವಾದಿಗಳ ಕೇಂದ್ರ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದರು, ಹಾಲಿ ಪಾಲಿಟ್‌ಬ್ಯೂರೋ ಸದಸ್ಯ ಮತ್ತು ಮಾವೋವಾದಿಗಳ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿದ್ದರು ಎಂದು ಐಜಿ ತಿಳಿಸಿದರು.
ಬಸವರಾಜು ಮಿಲಿಟರಿ ತರಬೇತಿಯಲ್ಲಿ, ವಿಶೇಷವಾಗಿ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು) ಮತ್ತು ಸ್ಫೋಟಕಗಳ ಬಳಕೆ ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿಗಳಲ್ಲಿ ಪರಿಣತರಾಗಿದ್ದರು ಮತ್ತು ಪೊಲೀಸ್ ಠಾಣೆಗಳಲ್ಲಿ ನಡೆದ ದಾಳಿಯಲ್ಲಿ ಅವರು ಪ್ರಮುಖವಾಗಿ ಭಾಗಿಯಾಗಿದ್ದರು. 2010ರ ದಂತೇವಾಡ (ಛತ್ತೀಸ್‌ಗಢ) ಹತ್ಯಾಕಾಂಡದಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ಪ್ರಕರಣ ಮತ್ತು 2013ರ ಝಿರಾಮ್ ಘಾಟಿ ದಾಳಿಯಲ್ಲಿ (ಛತ್ತೀಸ್‌ಗಢದ ಬಸ್ತಾರ್) ಈ ಬಸವರಾಜು ಭಾಗಿಯಾಗಿದ್ದರು, ಇದರಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ 27 ಜನರು ಸಾವನ್ನಪ್ಪಿದ್ದರು ಮತ್ತು 2018ರಲ್ಲಿ ಆಂಧ್ರಪ್ರದೇಶದಲ್ಲಿ ಶಾಸಕರೊಬ್ಬರ ಹತ್ಯೆಯಲ್ಲಿಯೂ ಈ ಬಸವರಾಜ್ ಭಾಗಿಯಾಗಿದ್ದರು ಎಂದು ಐಜಿ ಹೇಳಿದರು.
ಭದ್ರತಾ ಪಡೆಗಳು ಈತನ ಹತ್ಯೆಯೊಂದಿಗೆ ಮಾವೋವಾದಿಗಳಿಗೆ ದೊಡ್ಡ ಹೊಡೆತ ನೀಡಿವೆ ಎಂದು ಅವರು ಹೇಳಿದರು.
ಛತ್ತೀಸ್‌ಗಢ ಎನ್‌ಕೌಂಟರ್: ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಸವರಾಜು ಹತ್ಯೆ


