Homeಚಳವಳಿನಕ್ಸಲ್ ಗುಮ್ಮಡಿವೆಲ್ಲಿ ರೇಣುಕಾರ ಜೀವನ ಮತ್ತು 'ಎನ್ ಕೌಂಟರ್' ಸಾವು

ನಕ್ಸಲ್ ಗುಮ್ಮಡಿವೆಲ್ಲಿ ರೇಣುಕಾರ ಜೀವನ ಮತ್ತು ‘ಎನ್ ಕೌಂಟರ್’ ಸಾವು

- Advertisement -
- Advertisement -

1980ರ ದಶಕದಲ್ಲಿ ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಕಡವೆಂಡಿ ಗ್ರಾಮದ ಯುವಕರು ಹಠಾತ್ತನೆ ಶಾಲೆ ಮತ್ತು ಕಾಲೇಜುಗಳನ್ನು ತೊರೆದು ರಾತ್ರೋರಾತ್ರಿ ಕಣ್ಮರೆಯಾಗಿ ನಕ್ಸಲರ ಸಶಸ್ತ್ರ ಹೋರಾಟಗಳಲ್ಲಿ ಭಾಗವಹಿಸುವುದು ಅಸಾಮಾನ್ಯವೇನು ಆಗಿರಲಿಲ್ಲ. ನಕ್ಸಲ್ ಚಳವಳಿಗೆ ಸಂಬಂಧಿಸಿದಂತೆ ಈ ಹಳ್ಳಿಯ ಪ್ರತಿ ಮನೆಗೂ ಹೇಳಲು ಒಂದೊಂದು ಕಥೆ ಇದೆ.

1980ರ ದಶಕದ ಆರಂಭದಲ್ಲಿ ಮತ್ತೆ ಭುಗಿಲೆದ್ದ ತೆಲಂಗಾಣ ಹೋರಾಟದ ಎರಡನೇ ಹಂತವು ಉತ್ತುಂಗದಲ್ಲಿತ್ತು, ಮತ್ತು ಕಡವೆಂಡಿ ಗ್ರಾಮವು ಪ್ರತ್ಯೇಕ ತೆಲಂಗಾಣ ಮತ್ತು ಮಾವೋವಾದಿ ಚಳುವಳಿಗಳೆರಡಕ್ಕೂ ಕೇಂದ್ರಬಿಂದುವಾಗಿತ್ತು. ಆದರೆ ಗುಮ್ಮಡಿವೆಲ್ಲಿ ರೇಣುಕಾ ಸ್ವತಃ ಆರಿಸಿಕೊಂಡ ಮಾರ್ಗ ಅದಾಗಿರಲಿಲ್ಲ. ಸಹೋದರ ಜಿ.ವಿ.ಕೆ. ಪ್ರಸಾದ್ ಅವರಂತೆಯೇ ಆಕೆಯೂ ಸಶಸ್ತ್ರ ಹೋರಾಟಕ್ಕೆ ಧುಮುಕಬಹುದು ಎಂಬ ಭಯದಿಂದ ರೇಣುಕಾ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಆಕೆಯ ಪೋಷಕರು ಅವಳನ್ನು ಮದುವೆ ಮಾಡಲು ನಿರ್ಧರಿಸಿದರು.

ರೇಣುಕಾರನ್ನು ಹಾಗೂ ಹೀಗೂ ಮಾಡಿ ಮದುವೆ ಮಾಡಲಾಯಿತು. ಸ್ವಲ್ಪ ಸಮಯದವರೆಗೆ ತನ್ನ ಗಂಡನ ನಿರಂತರ ಹಿಂಸಾಚಾರವನ್ನು ಸಹಿಸಿಕೊಂಡಿದ್ದ ರೇಣುಕಾ ಅಂತಿಮವಾಗಿ ಮನೆಯಿಂದ ಹೊರನಡೆದರು. “ನನ್ನ ತಂಗಿ ರೇಣುಕಾ ಗಂಡಾಳ್ವಿಕೆಯನ್ನು ಪ್ರಶ್ನಿಸಿದ್ದು ಅದೇ ಪ್ರಥಮ” ಎಂದು ಈಗ ಶರಣಾಗಿರುವ ಮಾಜಿ ಮಾವೋವಾದಿ ಮತ್ತು ತೆಲುಗು ಚಾನೆಲ್‌ನಲ್ಲಿ ಪತ್ರಕರ್ತರಾಗಿರುವ ಜಿ.ವಿ.ಕೆ. ಪ್ರಸಾದ್ ಹಂಚಿಕೊಳ್ಳುತ್ತಾರೆ.

ಇದೇ ಮಾರ್ಚ್ 31ರಂದು ದಕ್ಷಿಣ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ರೇಣುಕಾ ಸಾವನ್ನಪ್ಪಿದರು ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ದಂತೇವಾಡ ಪೊಲೀಸರು ಹೇಳುತ್ತಾರೆ. ನನ್ನ ತಂಗಿ ರೇಣುಕಾ “ಎನ್‌ಕೌಂಟರ್” ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಇಂತಹ ಎಲ್ಲಾ ಹತ್ಯೆಗಳ ಸಂದರ್ಭದಲ್ಲಿ ಪೊಲೀಸರು ನಿರಂತರವಾಗಿ ಹೇಳಲಾಗುತ್ತಿರುವ ಹೇಳಿಕೆಯಂತೆ ಇದು ಕೂಡ. ಈ ಎನ್ ಕೌಂಟರ್ ಕುರಿತ ಸತ್ಯಾಸತ್ಯತೆಯ ಬಗ್ಗೆ ಹಲವು ಅನುಮಾನಗಳಿಗೆ ಇದು ಎಡೆಮಾಡಿಕೊಡುತ್ತದೆ. ನಕ್ಸಲ್ ಚಳುವಳಿಯಲ್ಲಿ ಭೂಗತ ಕಾರ್ಯಕರ್ತೆ ಮತ್ತು ಭೂಗತ ನಕ್ಸಲ್ ಗೆರಿಲ್ಲಾ ಪಡೆಯ ಎರಡರಲ್ಲೂ ಸುಮಾರು ಮೂರು ದಶಕಗಳನ್ನು ಕಳೆದ 54ರ ಹರೆಯದ ರೇಣುಕಾ ಅವರು “ಶ್ರೇಷ್ಠ ಸಣ್ಣ ಕತೆಗಳ ಕಥೆಗಾರ್ತಿ” ಮತ್ತು “ಅದ್ಭುತ ಪತ್ರಕರ್ತೆ” ಕೂಡ ಆಗಿದ್ದರು ಎಂದು ಪ್ರಸಾದ್ ನೆನಪಿಸಿಕೊಳ್ಳುತ್ತಾರೆ. ಅವರು ಸಾವನ್ನಪ್ಪಿದಾಗ ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯರಾಗಿದ್ದರು. ಅವರನ್ನು ಹಿಡಿದುಕೊಟ್ಟವರಿಗೆ 45 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಇದರಲ್ಲಿ ಛತ್ತೀಸ್‌ಗಢ ಸರ್ಕಾರವು 25 ಲಕ್ಷ ರೂ. ಮತ್ತು ತೆಲಂಗಾಣ ಸರ್ಕಾರವು 20 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದವು.

ಗುಮ್ಮಡಿವೆಲ್ಲಿಗಳು ಪದ್ಮಶಾಲಿ ಅಥವಾ ನೇಕಾರರ ಸಮುದಾಯದಿಂದ ಬಂದವರು, ಇದನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡರಲ್ಲೂ ಹಿಂದುಳಿದ ಸಮುದಾಯ ಎಂದು ವರ್ಗೀಕರಿಸಲಾಗಿದೆ. ಮಿಶ್ರ-ಜಾತಿಯ ಗ್ರಾಮವಾದ ಕಡವೆಂಡಿಯಲ್ಲಿ ಹೆಚ್ಚಾಗಿ ಭೂಹೀನ ಕುಟುಂಬಗಳು ಅಥವಾ ಅಲ್ಪ ಭೂ ಹಿಡುವಳಿ ಹೊಂದಿರುವ ಕುಟುಂಬಗಳಿವೆ. ಸಾಮಾನ್ಯವಾಗಿ ಭೂಮಾಲೀಕ ಸಮುದಾಯವಾಗಿರುವ ರೆಡ್ಡಿಗಳು ನಮ್ಮ ಗ್ರಾಮದಲ್ಲಿ ಹೆಚ್ಚಾಗಿ ಭೂರಹಿತರಾಗಿದ್ದರು ಎಂದು ಪ್ರಸಾದ್ ಹೇಳುತ್ತಾರೆ.

ಪ್ರಸಾದ್ 1980ರ ದಶಕದ ಮಧ್ಯಭಾಗದಲ್ಲಿ ಓದುತ್ತಿರುವಾಗ ಈ ಚಳುವಳಿಗೆ ಸೇರಿದರು. ಅವರಿಗಿಂತ ಎರಡು ವರ್ಷ ಕಿರಿಯಳಾಗಿದ್ದ ರೇಣುಕಾ ಆ ಸಮಯದಲ್ಲಿ ನಕ್ಸಲ್ ಚಳವಳಿ ಕುರಿತು ಅಂತಹ ಒಲವು ತೋರಿಸಿರಲಿಲ್ಲ. ”ತಂಗಿಯ ಸಂಪ್ರದಾಯಿಕ ಮದುವೆ ವಿಫಲವಾದ ನಂತರ, ಅವಳು ಕೌಟುಂಬಿಕ ರಚನೆಗಳನ್ನು ಪ್ರಶ್ನಿಸಲು ಪ್ರಾರಂಭಿಸಿದಳು.  ಒಮ್ಮೆ ನನಗೆ ಒಂದು ದೀರ್ಘ ಪತ್ರವನ್ನು ಬರೆದು ಮಾರ್ಕ್ಸ ವಾದಿಗಳು ಪಿತೃಪ್ರಭುತ್ವವನ್ನು ಹೇಗೆ ನೋಡುತ್ತಾರೆ ಮತ್ತು ಪಿತೃಪ್ರಭುತ್ವ ವ್ಯವಸ್ಥೆಗಳಲ್ಲಿ ಮಹಿಳೆಯರ ದೈನಂದಿನ ತೊಳಲಾಟವನ್ನು ಹೇಗೆ ಪರಿಹರಿಸುತ್ತಾರೆ ಎಂದು ಪ್ರಶ್ನಿಸಿದ್ದಳು. ಆಕೆಯೊಳಗೆ ಒಂದು ರೀತಿಯ ಚಂಚಲತೆ ಪ್ರಾರಂಭವಾಗಿದೆ ಎಂದು ನಾನು ಕಂಡುಕೊಂಡೆ” ಎಂದು ಪ್ರಸಾದ್ ದಿ ವೈರ್‌ಗೆ ತಿಳಿಸಿದರು. ಮುರಿದ ವಿವಾಹವು ಒಂದು ರೀತಿಯಲ್ಲಿ ತಂಗಿಯನ್ನು ವೈವಾಹಿಕ ಜೀವನದ ಜಂಜಾಟದಿಂದ ಬಂಧಮುಕ್ತಗೊಳಿಸಿತು ಎಂದು ಪ್ರಸಾದ್ ಹೇಳುತ್ತಾರೆ. ಇದರ ನಂತರ ಕಾನೂನು ಅಧ್ಯಯನ ಮಾಡಲು ರೇಣುಕಾ ಶೀಘ್ರದಲ್ಲೇ ಚಿತ್ತೂರಿನ ದೂರದ ಜಿಲ್ಲೆಗೆ ಪ್ರಯಾಣ ಬೆಳೆಸುತ್ತಾರೆ.

ಕಾನೂನು ವಿದ್ಯಾರ್ಥಿನಿಯಾಗಿದ್ದಾಗ ರೇಣುಕಾ, ವರದಕ್ಷಿಣೆ ಸಾವು ಮತ್ತು ನೈರ್ಮಲ್ಯದಂತಹ ವಿಷಯಗಳ ಕುರಿತು ಕೆಲಸ ಮಾಡುವ ಮಹಿಳಾ ಗುಂಪಿನ ಭಾಗವಾದರು. ಶೀಘ್ರದಲ್ಲೇ ಅವರು ಕ್ರಾಂತಿಕಾರಿ ಮಾಸಿಕ ನಿಯತಕಾಲಿಕೆ ಮಹಿಳಾ ಮಾರ್ಗಮ್‌ಗೆ ಬರೆಯಲು ಪ್ರಾರಂಭಿಸಿದರು. ಕಾನೂನು ಶಿಕ್ಷಣ ಮುಗಿದ ನಂತರ ಅವರು ವಿಶಾಖಪಟ್ಟಣಕ್ಕೆ ತೆರಳಿದರು, ಅಲ್ಲಿ ಅವರು ವಕೀಲರಾಗಿ ಕೆಲಸ ಮಾಡಿದರು. 1996ರ ಹೊತ್ತಿಗೆ ರೇಣುಕಾ ಭೂಗತ ನಕ್ಸಲ್ ನಾಯಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು, ಸಣ್ಣ ಕಥೆಗಳನ್ನು ಬರೆಯುವುದು, ಸಭೆಗಳನ್ನು ಆಯೋಜಿಸುವುದು ಮತ್ತು ಭೂಗತರಾದವರ ಕುಟುಂಬಗಳಿಗೆ ಕಾನೂನು ಬೆಂಬಲ ನೀಡುತ್ತಿದ್ದರು.

ರೇಣುಕಾ ಹಲವಾರು ಕಾವ್ಯನಾಮಗಳಲ್ಲಿ ತನ್ನ ಬರವಣಿಗೆಯನ್ನು ಪ್ರಾರಂಭಿಸಿದರು. 2003ರ ಆರಂಭದಲ್ಲಿ ರೇಣುಕಾ ಅವರ ಕಿರಿಯ ಸಹೋದರ ಮತ್ತು ಅವರ ಪೋಷಕರು ಕಾಡಿನಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ನಿರತರಾಗಿ ಪ್ರಸಾದ್ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿ, ಸಹೋದರನನ್ನು ಹಿಂಸಿಸಿದರು. ತಮ್ಮನ ಅಕ್ರಮ ಬಂಧನದ ಬಿಡುಗಡೆಗಾಗಿ ರೇಣುಕಾ ತನ್ನ ಕಾನೂನು ಶಿಕ್ಷಣವನ್ನು ಬಳಸಿಕೊಂಡರು. ಆ ಘಟನೆಯಲ್ಲಿ ದಮಯಂತಿ ಎಂಬ ಯುವತಿಯು ಪೊಲೀಸ್ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಳು ಮತ್ತು ಶೀಘ್ರದಲ್ಲೇ ರೇಣುಕಾ ಬಿ.ಡಿ. ದಮಯಂತಿ ಎಂಬ ಹೆಸರಿನಲ್ಲಿ ಬರೆಯಲು ಪ್ರಾರಂಭಿಸಿದಳು. “ಅವಳ ಹೆಚ್ಚಿನ ಪತ್ರಿಕೋದ್ಯಮ ಕೆಲಸ (ಪಕ್ಷದ ಮುಖವಾಣಿಯಲ್ಲಿ ಪ್ರಕಟವಾಗಿದೆ) ಈ ಹೆಸರಿನಡಿಯಲ್ಲಿತ್ತು” ಎಂದು ಪ್ರಸಾದ್ ಹೇಳುತ್ತಾರೆ. ಅವರ ಕೆಲವು ಅತ್ಯುತ್ತಮ ಬರವಣಿಗೆಗಳೆಂದರೆ ಸರಕಾರ ಪ್ರಾಯೋಜಿತ ಅರೆಕಾಲಿಕ ಸರಕಾರಿ ಸೈನ್ಯ ಪಡೆ “ಸಾಲ್ವಾ ಜುಡಮ್” ಬಸ್ತಾರ್‌ನ ಆದಿವಾಸಿಗಳ ಮೇಲೆ ಮಾಡಿದ ಹಿಂಸಾಚಾರದ ಬಗ್ಗೆ ಅವರು ಬರೆದದ್ದಾಗಿದೆ. ಅವರು ಅದಿವಾಸಿಗಳ ಒಕ್ಕಲೆಬ್ಬಿಸುವಿಕೆ ಮತ್ತು ಬುಡಕಟ್ಟು ಸಮುದಾಯಗಳ ಸಂಪನ್ಮೂಲಗಳ ಕ್ಷೀಣಿಸುವಿಕೆಯ ಬಗ್ಗೆಯೂ ಬರೆದಿದ್ದಾರೆ ಎಂದು ಪ್ರಸಾದ್ ಹೇಳುತ್ತಾರೆ.
ಅವರು ತಮ್ಮ ಸಣ್ಣ ಕಥೆಗಳನ್ನು ಬರೆಯಲು “ಮಿಡ್ಕೊ” ಎಂಬ ಹೆಸರನ್ನು ಬಳಸಿದರು. ಇದು ಅದಿವಾಸಿಗಳ ಗೊಂಡಿ ಭಾಷೆಯ ಪದವಾಗಿದ್ದು ಇದರ ಅರ್ಥ ಮಿಂಚುಹುಳುವಾಗಿದೆ. ನಂತರ ನಕ್ಸಲ್ ಪಾರ್ಟಿಯಲ್ಲಿ ಅವರನ್ನು ಭಾನು ಅಥವಾ ಚೈಟೆ ಎಂದೂ ಕರೆಯಲಾಗುತ್ತಿತ್ತು.

2003ರ ಕೊನೆಯಲ್ಲಿ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ತಿರುಪತಿ ಹತ್ತಿರ ನಕ್ಸಲರು ನೆಲಬಾಂಬ್ ಸ್ಪೋಟಿಸಿ “ಹತ್ಯೆ”ಯ ವಿಫಲ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆದ ವ್ಯಾಪಕ ಬಂಧನಗಳ ಭಾಗವಾಗಿ ಅವರ ಕಿರಿಯ ಸಹೋದರನನ್ನು ಬಂಧಿಸಲಾಯಿತು. ಅವರನ್ನು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಯಿತು. ಆದರೆ ಅಂತಿಮವಾಗಿ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಯಿತು. ತಮ್ಮನು ವಕೀಲನಾಗಿ ತನ್ನ ಕೆಲಸವನ್ನು ಮುಂದುವರಿಸಿದನು ಮತ್ತು ಆ ಪ್ರದೇಶದ ವಿವಿಧ ಮಾನವ ಹಕ್ಕು ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದ್ದರು, ಆದರೆ ರೇಣುಕಾ ನಕ್ಸಲ್ ಸಂಘಟನೆಯಲ್ಲಿ ಭೂಗತರಾಗಲು ನಿರ್ಧರಿಸಿದರು. 2004ರಲ್ಲಿ ಅವರು ನಕ್ಸಲೀಯರ ಗೆರಿಲ್ಲಾ ಚಳುವಳಿಗೆ ಸೇರಿದರು.

ಸಪೂರ ಮಹಿಳೆಯಾಗಿದ್ದ ಅವರು ಶೀಘ್ರದಲ್ಲೇ ಶಸ್ತ್ರಾಸ್ತ್ರ ತರಬೇತಿಯನ್ನು ಪಡೆದರು. “ಇಬ್ಬರೂ ಭೂಗತರಾಗಿದ್ದಾಗ ನಮ್ಮ ಭೇಟಿ ವಿರಳವಾಗಿರುತ್ತಿತ್ತು. ನಾವು ನಕ್ಸಲ್ ಪಕ್ಷದ ವಿಭಿನ್ನ ಘಟಕಗಳ ಭಾಗವಾಗಿದ್ದೆವು ಮತ್ತು ವಿಭಿನ್ನ ಪ್ರದೇಶಗಳಲ್ಲಿ ಸ್ಥಳಾಂತರಗೊಂಡೆವು” ಎಂದು ಪ್ರಸಾದ್ ನೆನಪಿಸಿಕೊಳ್ಳುತ್ತಾರೆ.

1997ರ ಸುಮಾರಿಗೆ ರೇಣೂಕಾ ಅವರು ಇನ್ನೂ ಭೂಗತರಾಗದಿದ್ದಾಗ ಪಕ್ಷದ ಹಿರಿಯ ನಾಯಕರೊಬ್ಬರು  ರೇಣುಕಾ ಮತ್ತು ಆಗಿನ ಪಕ್ಷದ ಆಂಧ್ರಪ್ರದೇಶ ರಾಜ್ಯ ಸಮಿತಿ ಕಾರ್ಯದರ್ಶಿ ಮತ್ತು ಕೇಂದ್ರ ಸಮಿತಿ ಸದಸ್ಯ ಸಂತೋಷ್ ರೆಡ್ಡಿ ಇಬ್ಬರಿಗೂ ಮದುವೆಯನ್ನು ಪರಿಗಣಿಸಲು ಸೂಚಿಸಿದರು. ಅದೇ ಕಡವೆಂಡಿ ಗ್ರಾಮದವರಾಗಿದ್ದರೂ, ರೆಡ್ಡಿ ಹಲವು ವರ್ಷಗಳ ಹಿಂದೆ ಚಳುವಳಿಗೆ ಸೇರಲು ತೆರಳಿದ್ದರು. ಪರಸ್ಪರ ಒಬ್ಬರಿಗೊಬ್ಬರು ತಿಳಿದಿರಲಿಲ್ಲ. ಒಂದು ಸಂದರ್ಭದಲ್ಲಿ 1997ರಲ್ಲಿ ರೇಣುಕಾ ಆಂಧ್ರಪ್ರದೇಶದ ನಲ್ಲಮಲ್ಲ ಕಾಡಿಗೆ ಹೋಗಿ ರೆಡ್ಡಿಯನ್ನು ಭೇಟಿಯಾಗಿ ಪಕ್ಷವು ತಿರುಪತಿ ಘಟಕದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅವರ ಸಲಹೆಗಳನ್ನು ಪಡೆದರು. ಇದೇ ಸಂದರ್ಭದಲ್ಲಿ ಇಬ್ಬರು ಪ್ರೀತಿಯಲ್ಲಿ ಸಿಲುಕಿದರು.

ರೆಡ್ಡಿಯವರು ಪಕ್ಷದ ಹಿರಿಯ ನಾಯಕರಾಗಿದ್ದರು ಮತ್ತು ರೇಣುಕಾ ಇನ್ನೂ ಭೂಗತ ಕಾರ್ಯಕರ್ತೆಯಾಗಿರಲಿಲ್ಲವಾದ್ದರಿಂದ ಅವರಿಬ್ಬರ ಮದುವೆಯನ್ನು ರಹಸ್ಯವಾಗಿಡಬೇಕಾಯಿತು. ಡಿಸೆಂಬರ್ 2, 1999ರಂದು ರೆಡ್ಡಿ ಕೊಲ್ಲಲ್ಪಟ್ಟರು. ಆಗ ಮಾವೋವಾದಿ ಸಂಘಟನೆಯನ್ನು ಪೀಪಲ್ಸ್ ವಾರ್ ಪಕ್ಷವೆಂದು ಕರೆಯಲಾಗುತಿತ್ತು. ಇದರ ಕೇಂದ್ರ ಸಮಿತಿಯ ಮೂವರು ಸದಸ್ಯರಾದ ಶ್ಯಾಮ್, ಮಹೇಶ್, ಮುರುಳಿ ಎಂಬುವರನ್ನು ಬೆಂಗಳೂರಿನ ಸಾರಕ್ಕಿ ಗೇಟಿನ ಮನೆಯೊಂದರಲ್ಲಿ ಸಭೆ ನಡೆಸುತ್ತಿದ್ದಾಗ ಇವರನ್ನು ಆಂಧ್ರ ಪೊಲೀಸರು ಎತ್ತಾಕಿಕೊಂಡು ಹೋಗಿ ಆಂಧ್ರದಲ್ಲಿ ಎನ್ ಕೌಂಟರ್ ಮಾಡಿದ್ದಾರೆ ಎಂದು ಆಗ ಮಾನವ ಹಕ್ಕು ಸಂಘಟನೆಗಳು ಆರೋಪಿಸಿದ್ದವು. ಇದರಲ್ಲಿ ಮಹೇಶ್ ಎಂಬುವರೇ ಸಂತೋಷ ರೆಡ್ಡಿಯಾಗಿದ್ದಾರೆ. ಈ ಸಂದರ್ಭದಲ್ಲಿ ರೇಣುಕಾಗೆ ಬಹಿರಂಗವಾಗಿ ಕೊಲ್ಲಲ್ಪಟ್ಟ ಮಹೇಶ್ ಅಥವಾ ಸಂತೋಷ್ ರೆಡ್ಡಿಯನ್ನು ತಾನು ಮದುವೆಯಾಗಿದ್ದೇನೆ ಎಂದು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಹೃದಯ ತುಂಬಿ ಅಳಲು ಸಹ ಸಾಧ್ಯವಾಗಲಿಲ್ಲ. ಅವರ ಪ್ರೇಮ ಜೀವನವು ಹೀಗೆ ದುರಂತ ಅಂತ್ಯವನ್ನು ಕಂಡಿತ್ತು. ”ರೇಣುಕಾ ನಿಜವಾಗಿಯೂ ಸಂತೋಷ್ ಅವರನ್ನು ತುಂಬಾ ಪ್ರೀತಿಸುತ್ತಿದ್ದಳು” ಎಂದು ಪ್ರಸಾದ್ ಹೇಳುತ್ತಾರೆ.

2005ರಲ್ಲಿ ರೇಣುಕಾ ಇನ್ನೊಬ್ಬ ಪಕ್ಷದ ಕಮಾಂಡರ್ ಆದ ಅಪ್ಪಾ ರಾವ್ ಎನ್ನುವವರನ್ನು  ಮರುಮದುವೆಯಾದರು. ಅವರು ಕೂಡ 2010ರಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟರು.  ರೇಣುಕಾ ಸಶಸ್ತ್ರ ಚಳುವಳಿಗೆ ಧುಮುಕುವುದಕ್ಕೆ ಇವರು ಯಾರು ಕಾರಣವಾಗಿರಲಿಲ್ಲ ಎಂದು ಪ್ರಸಾದ್ ಹೇಳುತ್ತಾರೆ. ಅವರು ಇದಕ್ಕೆ ಅನೇಕ ವಿಷಯಗಳನ್ನು ಕಾರಣವೆಂದು ಹೇಳುತ್ತಾರೆ. ಈ ಪ್ರದೇಶದ ರಾಜಕೀಯ ವಾತಾವರಣದಿಂದ ಹಿಡಿದು ರೇಣುಕಾ ಅವರ ನಡುವೆ ನಿಧಾನವಾಗಿ ಬೆಳೆಯುತ್ತಿದ್ದ ವಿಮರ್ಶಾತ್ಮಕ ಸಾಮರ್ಥ್ಯವು ಇದಕ್ಕೆ ಕಾರಣವಾಗಿತ್ತು. “ಅವಳು ತನ್ನ ಸುತ್ತಲೂ ನಡೆಯುತ್ತಿರುವ ವಿಷಯಗಳಿಂದ ತೀವ್ರವಾಗಿ ಕಸಿವಿಸಿಯಾಗಿದ್ದಳು ಮತ್ತು ಪ್ರಶ್ನಿಸುತ್ತಿದ್ದಳು” ಎಂದು ಪ್ರಸಾದ್ ನೆನಪಿಸಿಕೊಳ್ಳುತ್ತಾರೆ.

ರೇಣುಕಾ ಸಾವಿನ ಸುದ್ದಿಯನ್ನು ತೆಲಂಗಾಣದ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಮಾಹಿತಿ ನೀಡಿದಾಗ, ಪ್ರಸಾದ್ ಕೆಲಸದಲ್ಲಿದ್ದರು. ”ಅವಳ ಹತ್ಯೆಯ ಸುದ್ದಿ ತಮ್ಮನ್ನು ಬೆಚ್ಚಿಬೀಳಿಸಿತು, ಆದರೆ ಅವಳ ಜೀವನವು ಹಾಗೆಯೇ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿತ್ತು” ಎಂದು ಪ್ರಸಾದ್ ಹೇಳುತ್ತಾರೆ.

“ಪ್ರತಿದಿನ ಬೆಳಿಗ್ಗೆ ನನ್ನ ಹೆಂಡತಿ (2014ರಲ್ಲಿ ಪ್ರಸಾದ್ ಜೊತೆ ಶರಣಾದವರು) ಬಸ್ತಾರ್ ಪ್ರದೇಶದಲ್ಲಿ ಯಾವುದೇ ಹೊಸ ಹತ್ಯೆ ನಡೆದಿದೆಯೇ ಎಂದು ನೋಡಲು ಎಲ್ಲಾ ಪತ್ರಿಕೆಗಳು ಮತ್ತು ಚಾನೆಲ್‌ಗಳನ್ನು ಪರಿಶೀಲಿಸುತ್ತಿದ್ದಳು. ಹೈದರಾಬಾದ್‌ನಲ್ಲಿರುವ ನನ್ನ ತಾಯಿಯೂ ಹಾಗೆಯೇ ಮಾಡುತ್ತಿದ್ದರು. ಕಳೆದ ವರ್ಷದಲ್ಲಿ ಮಾವೋವಾದಿ ಚಳುವಳಿಯನ್ನು ಹತ್ತಿಕ್ಕುವ ಹೆಸರಿನಲ್ಲಿ ಸರ್ಕಾರ ನೂರಾರು ಜನರನ್ನು ಕ್ರೂರವಾಗಿ ಕೊಂದಿದೆ. ಸರಕಾರವು ಮಾವೋವಾದಿಗಳೊಂದಿಗೆ ಯಾವುದೇ ಮಾತುಕತೆ ನಡೆಸುತ್ತಿಲ್ಲ, ಕೇವಲ ಕ್ರೂರ ಹತ್ಯೆ ನಡೆಸುತ್ತಿದೆ” ಎಂದು ಪ್ರಸಾದ್ ಹೇಳುತ್ತಾರೆ.

ರೇಣುಕಾ ಅವರ ದೇಹವನ್ನು ಸ್ವೀಕರಿಸಲು ಪ್ರಸಾದ್ ದಂತೇವಾಡಕ್ಕೆ ಪ್ರಯಾಣ ಬೆಳೆಸಿದರು, ಅವರ ಮೃತದೇಹವನ್ನು ಪೊಲೀಸರು ಪಾಲಿಥಿನ್ ಚೀಲದಲ್ಲಿ ಸುತ್ತಿ ಪ್ರದರ್ಶನಕ್ಕೆ ಇಟ್ಟಿದ್ದರು. “ಅ ಕ್ಷಣದವರೆಗೂ, ರೇಣುಕಾಳನ್ನು ಇತರ ಒಡನಾಡಿಗಳೊಂದಿಗೆ ಕೊಲ್ಲಲಾಗಿದೆ ಎಂದು ನಾನು ಭಾವಿಸಿದ್ದೆ” ಎಂದು ಪ್ರಸಾದ್ ಹೇಳುತ್ತಾರೆ. ಒಂದು ದಿನದ ಮೊದಲು ನೆರೆಯ ಸುಕ್ಮಾ ಜಿಲ್ಲೆಯಲ್ಲಿ 17 ನಕ್ಸಲರು ಕೊಲ್ಲಲ್ಪಟ್ಟಿದ್ದರು. ಆದರೆ ರೇಣುಕಾ ಅವರ ಮೃತದೇಹ ಮಾತ್ರ ಅಲ್ಲಿ ಪ್ರದರ್ಶಿಸಲಾಗಿತ್ತು. ಇದು ಪ್ರಸಾದ್ ಅವರಿಗೆ ಅನುಮಾನ ಬಂದಿತ್ತು ಎಂದು ಹೇಳುತ್ತಾರೆ.

“ಯಾವುದೇ ಕಿವಿಯೋಲೆ ಅಥವಾ ಬಿಂದಿ ಧರಿಸದ ನನ್ನ ತಂಗಿ ರೇಣುಕಾ ಇದ್ದಕ್ಕಿದ್ದಂತೆ ಅವುಗಳನ್ನು ಧರಿಸಿರುವುದು ಕಂಡುಬಂದಿತು. ಇದರರ್ಥ ಅವಳು ಒಂದು ಹಳ್ಳಿಯಲ್ಲಿ ಸುತ್ತಾಡುತ್ತಿದ್ದಳು ಮತ್ತು ಇಲ್ಲಿನ ಒಂದು ಹಳ್ಳಿಯಲ್ಲಿ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಳು ಎಂದರ್ಥ. ಹಾಗಾದರೆ ಪೊಲೀಸರು ಅವಳನ್ನು ಏಕೆ ಬಂಧಿಸಲಿಲ್ಲ” ಎಂದು ಅವರು ಪ್ರಶ್ನಿಸುತ್ತಾರೆ.

ಇಂದ್ರಾವತಿ ನದಿಯ ದಡದಲ್ಲಿರುವ “ದಂತೇವಾಡ-ಬಿಜಾಪುರ ಗಡಿ”ಯಲ್ಲಿ ನಡೆದ “ಗುಂಡು ಹಾರಾಟ”ದಲ್ಲಿ ರೇಣುಕಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಅವರ ಕೈಗಳನ್ನು ವಿರೂಪಗೊಳಿಸಲಾಗಿದೆ ಎಂದು ಕುಟುಂಬ ಹೇಳುತ್ತದೆ, ಇದು ಪೊಲೀಸ್ ಪಡೆಯ ಕೈಯಲ್ಲಿ ಸಿಕ್ಕಿದ್ದರಿಂದ ಚಿತ್ರಹಿಂಸೆ ನೀಡಿರಬಹುದು ಅಥವಾ ಅವರನ್ನು ಕೊಂದ ನಂತರ ಯಾವುದೇ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಅಳಿಸಲು ಉದ್ದೇಶಪೂರ್ವಕ ತಂತ್ರವಾಗಿರಬಹುದು ಎಂದು ಸೂಚಿಸುತ್ತದೆ. ರೇಣುಕಾರ ಮೃತದೇಹದ ಜೊತೆಗೆ ಮದ್ದುಗುಂಡುಗಳ ಸಂಗ್ರಹವನ್ನು ತೋರಿಸಲಾಗಿದೆ, ಅದು ಅವರ ಬಳಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡಿದರು, ಆದರೆ ಇದರ ವರದಿ ಇದುವರೆಗೂ ಅವರ ಕುಟುಂಬಕ್ಕೆ ಲಭ್ಯವಾಗಿಲ್ಲ.

ಏಪ್ರಿಲ್ 2ರಂದು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ದಂಡಕಾರಣ್ಯ ವಿಶೇಷ ವಲಯ ಸಮಿತಿಯು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿತು. ಅದರಲ್ಲಿ ಅವರು ಬಿಜಾಪುರ ಜಿಲ್ಲೆಯ ಭೈರಾಮಗಢ ಬ್ಲಾಕ್‌ನ ಬೆಲ್ನಾರ್ ಗ್ರಾಮದ ಒಂದು ಸಣ್ಣ ಮನೆಯಿಂದ ರೇಣುಕಾ ಅವರನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿದೆ.  ಪತ್ರಿಕಾ ಪ್ರಕಟಣೆಯಲ್ಲಿ ರೇಣುಕಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಇಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

ಮಾರ್ಚ್ 31ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸರು ಆಕೆಯ ಮನೆಗೆ ಘೇರಾವ್ ಹಾಕಿದರು. ಬೆಳಿಗ್ಗೆ 9-10ರ ಸುಮಾರಿಗೆ ಅವರು ಚೈಟೆ (ನಿಷೇಧಿತ ಪಕ್ಷದಲ್ಲಿ ಆಕೆಗೆ ಈ ಹೆಸರಿನಿಂದ ಕರೆಯಲಾಗುತ್ತಿತ್ತು) ಅವರನ್ನು ಇಂದ್ರಾವತಿ ನದಿಯ ಕಡೆಗೆ ಕರೆದೊಯ್ದು ಹತ್ಯೆ ಮಾಡಲಾಗಿದೆ” ಎಂದು ಮಾವೋವಾದಿಗಳು ಪತ್ರಿಕಾ ಟಿಪ್ಪಣಿಯಲ್ಲಿ ಹೇಳಿಕೊಂಡಿದ್ದಾರೆ. ಈ ವರ್ಷ ಒಂದರಲ್ಲಿಯೇ ಸಶಸ್ತ್ರ ಚಳುವಳಿಗಾರರು ಮತ್ತು ಹಲವಾರು ನಾಗರಿಕರು ಸೇರಿದಂತೆ ಈ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಹತ್ಯೆಗಳನ್ನು ನಡೆಸಲಾಗಿದೆ. ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಾವು ಬಯಸುವುದಾಗಿ ನಿಷೇಧಿತ ಮಾವೋವಾದಿ ಸಂಘಟನೆಯು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ.

ರೇಣುಕಾ ಅವರ ಮೃತದೇಹವನ್ನು ಪ್ರಸಾದ್ ಮತ್ತು ಅವರ ಪತ್ನಿ ತಮ್ಮ ಹುಟ್ಟೂರು ಕಡವೆಂಡಿಗೆ ಕರೆತಂದಾಗ ಪ್ರದೇಶದಾದ್ಯಂತ ಸಾವಿರಾರು ಜನರು ಸೇರಿದ್ದರು. ಅವರಿಗೆ ಹುತಾತ್ಮರ ವಿದಾಯ ನೀಡಲಾಯಿತು. ಕಾಮ್ರೆಡ್ ರೇಣುಕಾ ಹಮರ್ ರಹೇ, ಅಮರ ವೀರರ ಆಶಯಗಳನ್ನು ಈಡೇರಿಸೋಣ ಎಂಬ ಮುಂತಾದ ಘೋಷಣೆಗಳನ್ನು ಕೂಗಲಾಯಿತು ಎಂದು ಪ್ರಸಾದ್ ಹೇಳುತ್ತಾರೆ.

ಮೂಲ: ಸುಕನ್ಯಾ ಶಾಂತ, ದಿ ವೈರ್

ಜಾತಿಗಣತಿ ವರದಿ ಅಂಕಿ-ಅಂಶ; ರಾಜ್ಯದಲ್ಲಿ ದಲಿತರೇ ನಂ.1, ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶ ಕುರಿತ ವಿಶ್ವಸಂಸ್ಥೆಯ ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಎಸ್. ಮುರಳೀಧರ್

ಪೂರ್ವ ಜೆರುಸಲೆಮ್ ಮತ್ತು ಇಸ್ರೇಲ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಕುರಿತಾದ ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ವಿಚಾರಣಾ ಆಯೋಗದ ಅಧ್ಯಕ್ಷರನ್ನಾಗಿ ಹಿರಿಯ ವಕೀಲ ಮತ್ತು ಒರಿಸ್ಸಾ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್....

ಲೈಂಗಿಕ ದೌರ್ಜನ್ಯ: ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ದೂರು ದಾಖಲು

ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ನಂತರ ಕೇರಳ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ...

ಉತ್ತರ ಪ್ರದೇಶ-ಮಹಾರಾಷ್ಟ್ರದಲ್ಲಿ ಜನನ ಪ್ರಮಾಣಪತ್ರಕ್ಕೆ ಆಧಾರ್ ಮಾನ್ಯವಲ್ಲ: ಹೊಸ ಮಾರ್ಗಸೂಚಿ

ಜನನ ಪ್ರಮಾಣಪತ್ರಗಳನ್ನು ನೀಡಲು ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಮಾನ್ಯ ಪುರಾವೆಯಾಗಿ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಘೋಷಿಸಿವೆ. ಈ ಉದ್ದೇಶಕ್ಕಾಗಿ ಆಧಾರ್ ಬಳಸುವುದನ್ನು...

ಉತ್ತರಾಖಂಡ| 150 ವರ್ಷಗಳ ಜಾತಿ ತಡೆಗೋಡೆ ಮುರಿದು ತಮ್ಮದೇ ಮುಖ್ಯಸ್ಥರ ಆಯ್ಕೆ ಮಾಡಿಕೊಂಡ ದಲಿತರು

ಉತ್ತರಾಖಂಡದ ದೂರದ ಜೌನ್ಸರ್-ಬವಾರ್ ಪ್ರದೇಶದ ಬಿಜ್ನು ಬಿಜ್ನಾಡ್ ಗ್ರಾಮದ ದಲಿತ ಸಮುದಾಯವು ಸುಮಾರು 150 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನದೇ ಆದ 'ಸೈನಾ' (ಗ್ರಾಮದ ಮುಖ್ಯಸ್ಥ) ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ...

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...