ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೆಬ್ರಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮಾವಾರ (ನ.18) ರಾತ್ರಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತರಾಗಿದ್ದಾರೆ ಎಂದು ವರದಿಯಾಗಿದೆ.
ಹೆಬ್ರಿ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ನಕ್ಸಲ್ ಓಡಾಟದ ಶಂಕೆ ವ್ಯಕ್ತವಾದ್ದರಿಂದ ಎಎನ್‌ಎಫ್ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿತ್ತು. ಸೋಮವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತಬೈಲು ಸಮೀಪ ಆಹಾರ ಸಾಮಗ್ರಿಗಳ ಸಂಗ್ರಹಕ್ಕೆ ಬಂದಾಗ ಎಎನ್‌ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ದಾಳಿ-ಪ್ರತಿದಾಳಿ ನಡೆದು ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಐದು ಮಂದಿಯ ಪೈಕಿ ವಿಕ್ರಂ ಗೌಡ ಸಾವನ್ನಪ್ಪಿದರೆ, ಉಳಿದ ನಾಲ್ವರು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಎಎನ್‌ಎಫ್ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದೆ. ಉಳಿದವರಿಗಾಗಿ ಶೋಧ ನಡೆಸುತ್ತಿದೆ. ವಿಕ್ರಂ ಗೌಡ ಹತ್ಯೆ ಕುರಿತು ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.
ಕರ್ನಾಟಕದ ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಕಡಬ, ಸುಳ್ಯ ತಾಲೂಕುಗಳು ಮತ್ತು ಚಿಕ್ಕಮಗಳೂರಿನಲ್ಲಿ ಮಾವೋವಾದಿಗಳ ಉಪಸ್ಥಿತಿ ವರದಿಯಾಗಿದೆ. ಮಾವೋವಾದಿ ನಾಯಕಿ ಮುಂಗಾರು ಲತಾ ಮತ್ತು ಅವರ ತಂಡದ ಭೇಟಿಯ ನಂತರ ಮನೆಯೊಂದರಿಂದ ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ : ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದ ಸರ್ಕಾರಿ ಸಿಬ್ಬಂದಿ ವಿರುದ್ಧ ಕ್ರಮ: ಜಿ.ಪರಮೇಶ್ವರ


