‘ಮೌಢ್ಯ ಬಿತ್ತುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ’ ತರುವ ಕಾರಣಕ್ಕೆ ಬಾಗೇಶ್ವರ್ ಬಾಬಾ ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಕೃಷ್ಣ ಶಾಸ್ತ್ರಿಯ ಸಂದರ್ಶನ ತೆಗೆದು ಹಾಕುವಂತೆ ಸುದ್ದಿವಾಹಿನಿ ನ್ಯೂಸ್ 18 ಇಂಡಿಯಾಗೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ಬುಧವಾರ (ನ.6) ಸೂಚಿಸಿದೆ.
ಕಳೆದ ವರ್ಷ ಜುಲೈ 10 ರಂದು ಪ್ರಸಾರವಾದ ಸಂದರ್ಶನವನ್ನು ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಒಂದು ವಾರದೊಳಗೆ ತೆಗೆದು ಹಾಕುವಂತೆ ಎನ್‌ಬಿಡಿಎಸ್‌ಎ ಸೂಚನೆ ನೀಡಿದೆ.
ಈ ಹಿಂದೆ ಸುದ್ದಿ ವಾಹಿನಿಗಳ ವಿರುದ್ಧ ಹಲವು ದೂರುಗಳನ್ನು ಸಲ್ಲಿಸಿರುವ ಪುಣೆ ಮೂಲದ ಟೆಕ್ಕಿ ಮತ್ತು ಹೋರಾಟಗಾರ ಇಂದ್ರಜೀತ್ ಘೋರ್ಪಡೆ ಅವರು ವಿಡಿಯೋ ವಿರುದ್ಧ ದೂರು ನೀಡಿದ್ದರು. ದೂರನ್ನು ಆಲಿಸಿದ ಎನ್‌ಬಿಡಿಎಸ್‌ಎ ಈ ನಿರ್ಧಾರ ಕೈಗೊಂಡಿದೆ.
ದೂರಿನಲ್ಲಿ ನ್ಯೂಸ್ 18 ಮ್ಯಾನೇಜಿಂಗ್ ಎಡಿಟರ್ ಕಿಶೋರ್ ಅಜ್ವಾನಿ ಜೊತೆಗಿನ ಶಾಸ್ತ್ರಿ ಅವರ ಸಂದರ್ಶನವು ಹಿಂದೂ ರಾಷ್ಟ್ರದ ಕಲ್ಪನೆ, ಲವ್ ಜಿಹಾದ್ ಪಿತೂರಿ ಸಿದ್ಧಾಂತ ಮತ್ತು ಮೂಢನಂಬಿಕೆಯನ್ನು ಪ್ರಚಾರ ಮಾಡಿದೆ. ಅಲ್ಲದೆ, “ನಾನು ವಜ್ರ ಹುಡುಕುತ್ತೇನೆ, ಚುನಾವಣಾ ಸಮೀಕ್ಷೆಗಳನ್ನು ಊಹಿಸುತ್ತೇನೆ ಮತ್ತು ಅಲೌಕಿಕ ಶಕ್ತಿಗಳ ಮೂಲಕ ಜನರನ್ನು ಗುಣಪಡಿಸುತ್ತೇನೆ” ಎಂದು ಹೇಳುವ ಮೂಲಕ ಧೀರೇಂದ್ರ ಶಾಸ್ತ್ರಿ ಮೌಢ್ಯ ಬಿತ್ತಿದ್ದಾರೆ” ಎಂದು ಆರೋಪಿಸಲಾಗಿತ್ತು.
ಧೀರೇಂದ್ರ ಶಾಸ್ತ್ರಿಯ ಹೇಳಿಕೆಗಳಿಗೆ ತಾನು ಜವಾಬ್ದಾರನಲ್ಲ ಎಂದು ಸುದ್ದಿವಾಹಿನಿ ಹೇಳಿದೆ. ಆದರೆ, ಎನ್‌ಬಿಡಿಎಸ್‌ಎ ಮಾರ್ಗಸೂಚಿ ಮತ್ತು ಬಾಂಬೆ ಹೈಕೋರ್ಟ್ ತೀರ್ಪಿನ ಪ್ರಕಾರ ಕಾರ್ಯಕ್ರಮ ಆಹ್ವಾನಿತರು ನೀಡುವ ಹೇಳಿಕೆಗಳಿಗೆ ಸುದ್ದಿವಾಹಿನಿಗಳು ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಕೋಮು ದಳ್ಳುರಿಗೆ ಕಾರಣವಾಗುವ ಹೇಳಿಕೆ ನೀಡುವಂತಹವರನ್ನು ಆಹ್ವಾನಿಸುವುದನ್ನು ತಪ್ಪಿಸಬೇಕು. ಪ್ರಸಾರಕರೇ ಇಂತಹ ಹೇಳಿಕೆಗಳಿಗೆ ಜವಾಬ್ದಾರಿ ಎಂಬುವುದನ್ನು ಸಾರಲು ಪ್ರಸಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿತ್ತು.
ಸಂದರ್ಶನದಲ್ಲಿ ಮೌಢ್ಯವನ್ನು ಉತ್ತೇಜಿಸುವಂತಹ ಹಲವು ನಿಲುವುಗಳನ್ನು ಧೀರೇಂದ್ರ ಶಾಸ್ತ್ರಿ ಮಾಡಿದ್ದು, ಹಿಂದೂ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಹಲವಾರು ಹೇಳಿಕೆಗಳನ್ನು ನೀಡಲಾಗಿದೆ. ಇದು ಸ್ವಭಾವತಃ ವಿಭಜನಕಾರಿಯಾಗಿದ್ದು, ಭಾರತದಲ್ಲಿ ವಾಸಿಸಲು “ಸೀತಾ ರಾಮ್” ಎಂದು ಹೇಳುವುದು ಕಡ್ಡಾಯ. ಅಲ್ಲದೆ, ಲವ್ ಜಿಹಾದ್‌ನಲ್ಲಿ ಹಿಂದೂ ಯುವತಿಯರನ್ನು ಸಿಲುಕಿಸಿ ನಂತರ ಅವರನ್ನು ಕೊಲ್ಲುವಂತೆ ಇಸ್ಲಾಂ ಧರ್ಮ ಹೇಳುತ್ತದೆ ಎಂಬುವುದಾಗಿ ಅವರು ಹೇಳಿದ್ದರು ಎಂದು ಎನ್‌ಬಿಡಿಎಸ್‌ಎ ಅಧ್ಯಕ್ಷ (ನಿವೃತ್ತ) ನ್ಯಾಯಮೂರ್ತಿ ಎ ಕೆ ಸಿಕ್ರಿ ತಿಳಿಸಿದ್ದಾರೆ.
ಅಂತಹ ವ್ಯಕ್ತಿಯನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದೇಕೆ? ಎಂದು ಎನ್‌ಬಿಡಿಎಸ್‌ಎ ನ್ಯೂಸ್ 18 ಅನ್ನು ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯೂಸ್ 18, ಶಾಸ್ತ್ರಿ ಅವರು ತಿಂಗಳುಗಳ ಕಾಲ ಪ್ರಮುಖ ಸುದ್ದಿ ವ್ಯಕ್ತಿಯಾಗಿದ್ದರು. ಬಿಹಾರದ ರಾಜಕಾರಣಿ ತೇಜ್ ಪ್ರತಾಪ್ ಯಾದವ್ ಅವರಿಂದ ಬೆದರಿಕೆ ಎದುರಿಸಿದ್ದರು. ಅವರ ಪ್ರಸಾರಕ್ಕೆ ಗಮನಾರ್ಹ ಸುದ್ದಿ ಮೌಲ್ಯವನ್ನು ಒದಗಿಸಿದ್ದರು. ಕಾರ್ಯಕ್ರಮ ನಿರೂಪಕರು ಕೋಮುವಾದಿ ಹೇಳಿಕೆಗಳನ್ನು ತಡೆಯಲು ಯತ್ನಿಸಿದ್ದರು ಎಂದು ಸಮಜಾಯಿಸಿ ನೀಡಿತ್ತು.
ಇದನ್ನೂ ಓದಿ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆ : ಐದು ಗ್ಯಾರಂಟಿಗಳನ್ನು ಘೋಷಿಸಿದ ಪ್ರತಿಪಕ್ಷಗಳ ಒಕ್ಕೂಟ ಎಂವಿಎ


