ಸೆಪ್ಟೆಂಬರ್ 2024ರಲ್ಲಿ ಅಸ್ಸಾಮಿ ಗಾಯಕ ಅಲ್ತಾಫ್ ಹುಸೇನ್ ಬಂಧನದ ಬಗ್ಗೆ ಪ್ರಸಾರವಾದ ಕಾರ್ಯಕ್ರಮದ ಭಾಗಗಳನ್ನು ತೆಗೆದುಹಾಕುವಂತೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ಟೈಮ್ಸ್ ನೌ ನವಭಾರತ್‌ಗೆ ನಿರ್ದೇಶನ ನೀಡಿದೆ.
ಡಿಸೆಂಬರ್ 2ರಂದು ಹೊರಡಿಸಿದ ತನ್ನ ಆದೇಶದಲ್ಲಿ, ಸುದ್ದಿ ನಿಯಂತ್ರಣ ಸಂಸ್ಥೆಯು ಬಂಧನದ ವರದಿ ಮಾಡುವಾಗ ಸುದ್ದಿ ನಿರೂಪಕ ‘ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದಂತೆ ಪೂರ್ವಾಗ್ರಹ ಪೀಡಿತ ವಿಷಯವನ್ನು ಹೇಳಿದ್ದಾರೆ. ಪೂರ್ವನಿರ್ಧರಿತ ಕಾರ್ಯಸೂಚಿಯೊಂದಿಗೆ ವರದಿ ಮಾಡಿದ್ದಾರೆ ಎಂದು ಹೇಳಿದೆ.
ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಎಂಬ ಮಾನವ ಹಕ್ಕುಗಳ ಸಂಘಟನೆಯ ದೂರಿನ ಮೇರೆಗೆ ಎನ್‌ಬಿಡಿಎಸ್‌ಎ ಕ್ರಮ ಕೈಗೊಂಡಿದೆ.
ಹಾಡಿನ ಮೂಲಕ ರಾಜ್ಯದ ಜನಾಂಗೀಯ ಸಮುದಾಯಗಳ ವಿರುದ್ಧ ದ್ವೇಷವನ್ನು ಪ್ರಚೋದಿಸಿದ್ದಾರೆ ಎಂಬ ಆರೋಪದ ಮೇಲೆ ಹುಸೇನ್ ಅವರನ್ನು ಆಗಸ್ಟ್ 31, 2024ರಂದು ಅಸ್ಸಾಂ ಪೊಲೀಸರು ಬಂಧಿಸಿದ್ದರು.
ಹಾಡಿನಲ್ಲಿ ಹುಸೇನ್ ಅವರು, “ಅಸ್ಸಾಂ ನಿಮ್ಮಪ್ಪನ ಆಸ್ತಿಯಾ? ಅದಕ್ಕೆ ಅವರನ್ನು (ಮಿಯಾ ಮುಸ್ಲಿಮರು) ಹೊರಗಟ್ಟಲು ನೋಡುತ್ತಿದ್ದೀರಾ? ಎಂದು ಸರ್ಕಾರವನ್ನು ಕೇಳಿದ್ದರು.
“ಎಲ್ಲಾ ಸಮುದಾಯದವರೂ ತಪ್ಪು ಮಾಡುತ್ತಾರೆ. ಆದರೆ ಕೇವಲ ‘ಮಿಯಾ’ಗಳ ಮೇಲೆಯೇ (ಅಂದರೆ ಅಸ್ಸಾಮಿನಲ್ಲಿ ವಾಸಿಸುತ್ತಿರುವ ಬಂಗಾಳಿ ಮೂಲದ ಮುಸ್ಲಿಮರ ಮೇಲೆಯೇ) ದಾಳಿ ಮಾಡಲಾಗುತ್ತಿದೆ. ಆಗಾಗ ಅವರು ‘ಅಕ್ರಮ ವಲಸಿಗರು’ ಎಂದು ಸುಳ್ಳಾರೋಪ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಹುಸೇನ್ ಬಂಧನದ ನಂತರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಬಿಹು ಹಾಡುಗಳನ್ನು ಬದಲಾಯಿಸುವ ಪ್ರಯತ್ನಗಳನ್ನು ರಾಜ್ಯದ ಜನರು ಸಹಿಸುವುದಿಲ್ಲ ಎಂದು ಹೇಳಿದ್ದರು.
“ಕೆಲವರು ‘ಮಿಯಾ ಬಿಹು’ವನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಒಬ್ಬ ಗಾಯಕ ಅಲ್ತಾಫ್ ಹುಸೇನ್ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ” ಎಂದಿದ್ದರು.
ಸೆಪ್ಟೆಂಬರ್ 2, 2024 ರಂದು ಟೈಮ್ಸ್ ನೌ ನವಭಾರತ್ ಪ್ರಸಾರ ಮಾಡಿದ ಹುಸೇನ್ ಬಂಧನದ ವರದಿಯಲ್ಲಿ ಪ್ರತಿಭಟನಾ ಹಾಡನ್ನು ಒಂದು ಸಮುದಾಯದ ವಿರುದ್ದ ದ್ವೇಷ ಹರಡಲು ಬಳಸಿಕೊಳ್ಳಲಾಗಿದೆ ಎಂದು ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಎನ್‌ಬಿಡಿಎಸ್‌ಎಗೆ ನೀಡಿದ ದೂರಿನಲ್ಲಿ ತಿಳಿಸಿತ್ತು.
ಚಾನೆಲ್‌ನ ನಿರೂಪಕ ಪರಸ್ಪರ ಸಂಬಂಧವಿಲ್ಲದ ಹಲವು ಘಟನೆಗಳನ್ನು ಒಟ್ಟಾಗಿ ಜೋಡಿಸಿ, ಅವೆಲ್ಲವೂ ಒಂದು ದೊಡ್ಡ ಷಡ್ಯಂತ್ರದ ಭಾಗ ಎಂಬಂತೆ ತೋರಿಸಿದ್ದಾರೆ ಎಂದು ಹೇಳಿತ್ತು.
ನಿರೂಪಕ ಹುಸೇನ್ ಅವರ ಹಾಡನ್ನು ಹಿಂದೂ ಸಂಸ್ಕೃತಿಯ ವಿರುದ್ಧ ನಡೆಯುತ್ತಿರುವ ದೇಶವ್ಯಾಪಿ ಷಡ್ಯಂತ್ರದ ಒಂದು ಭಾಗ ಎಂದು ತೋರಿಸಿದ್ದಾರೆ. ಅದಕ್ಕಾಗಿ ಅಸ್ಸಾಂ, ಕೇರಳ ಮತ್ತು ಕಾಶ್ಮೀರದಲ್ಲಿ ನಡೆದ ಬೇರೆ ಬೇರೆ ಘಟನೆಗಳನ್ನು ಜೋಡಿಸಿದ್ದಾರೆ. ಇಡೀ ದೇಶದಲ್ಲಿ ಹಿಂದೂಗಳ ಮೇಲೆ ಒಂದು ಯುದ್ಧದಂತೆ ದಾಳಿ ನಡೆಯುತ್ತಿದೆ ಎಂಬ ಸಂಪೂರ್ಣ ಕೃತಕವಾದ, ಭಯ ಹುಟ್ಟಿಸುವ ಕಥೆಯನ್ನು ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
‘ಮಿಯಾ’ ಎಂಬ ಪದವನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರೊಂದಿಗೆ ಸಮೀಕರಿಸಿ, ನಿರೂಪಕ ಇಡೀ ಸಮುದಾಯವನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಆರೋಪಿಸಿತ್ತು.
ಚಾನೆಲ್ ತನ್ನ ವಿರುದ್ದದ ಎಲ್ಲಾ ಆರೋಪಗಳನ್ನು ನಿರಾಕರಿಸಿತ್ತು. ತಾನು ಬಂಧನ ಮತ್ತು ಮುಖ್ಯಮಂತ್ರಿಯ ಹೇಳಿಕೆಗಳನ್ನು ಮಾತ್ರ ವರದಿ ಮಾಡಿದ್ದೇನೆ. ವರದಿಯಲ್ಲಿ ಹೇಳಿದ ವಿಷಯಗಳೆಲ್ಲವೂ ವಾಸ್ತವಿಕ ಎಂದು ವಾದಿಸಿತ್ತು.
ಹುಸೇನ್ ಅವರ ಬಂಧನ ಸುದ್ದಿಯನ್ನು ವರದಿ ಮಾಡುವುದು ‘ಸುದ್ದಿ ಪ್ರಸಾರಕರ ಹಕ್ಕಿನ ಭಾಗ’ ಎಂಬುವುದನ್ನು ಎನ್‌ಬಿಡಿಎಸ್‌ಎ ಒಪ್ಪಿಕೊಂಡಿದೆ. ಆದರೆ, ಸುದ್ದಿ ನಿರೂಪಕ ಹುಸೇನ್ ಅವರ ಹಾಡನ್ನು ಒಂದು ದೈಹಿಕ ಹಲ್ಲೆ ಅಥವಾ ಬಲಾತ್ಕಾರದ ಘಟನೆಯೊಂದಿಗೆ ಜೋಡಿಸಿದ್ದಾರೆ. ಆ ಘಟನೆಗೂ ಹಾಡಿಗೂ ಸಂಬಂಧವೇ ಇಲ್ಲ ಎಂದು ಹೇಳಿದೆ.
ನಿರೂಪಕ ನಿಷ್ಪಕ್ಷಪಾತವಾಗಿ ಸುದ್ದಿ ಮಾಡಲು ಬಂದವರಲ್ಲ; ಬದಲಿಗೆ ತಾನು ಮೊದಲೇ ರೂಪಿಸಿಟ್ಟಿದ್ದ ದ್ವೇಷದ ಕಥೆಗೆ ಈ ಘಟನೆಯನ್ನು ಒಂದು ಸಾಧನವನ್ನಾಗಿ ಮಾತ್ರ ಬಳಸಿಕೊಂಡಿದ್ದಾರೆ. ಈ ರೀತಿಯ ವರದಿಯು ಸುದ್ದಿ ಪ್ರಸಾರದ ನೈತಿಕ ನಿಯಮ ಸಂಹಿತೆ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ.
ಪ್ರಸಾರ ಮಾಡಲಾದ ಕಾರ್ಯಕ್ರಮದ ಆಕ್ಷೇಪಾರ್ಹವಾದ ಎಲ್ಲಾ ಭಾಗಗಳನ್ನು (ವಿಡಿಯೋ, ಟೈಟಲ್, ನಿರೂಪಕರ ಹೇಳಿಕೆ ಇತ್ಯಾದಿ) ತಕ್ಷಣ ತೆಗೆದುಹಾಕಬೇಕು. ನಂತರ ತಿದ್ದುಪಡಿ ಮಾಡಿದ ಕಾರ್ಯಕ್ರಮದ ಆವೃತ್ತಿಯನ್ನು ಏಳು ದಿನಗಳ ಒಳಗೆ ಸಂಸ್ಥೆಗೆ ಸಲ್ಲಿಸಬೇಕು ಎಂದು ಎನ್‌ಬಿಡಿಎಸ್‌ಎ ಟೈಮ್ಸ್ ನೌ ನವಭಾರತ್ ಚಾನೆಲ್‌ಗೆ ಆದೇಶಿಸಿದೆ. ಇದನ್ನು ಮಾಡದಿದ್ದರೆ ಮುಂದಿನ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.


