ತಮಿಳುನಾಡಿನಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (ಎಐಎಡಿಎಂಕೆ) ಮತ್ತು ಬಿಜೆಪಿ ಮೈತ್ರಿಯ ನಡುವೆ ಬಿರುಕುಂಟಾಗಿದ್ದು, ಈ ಸೂಚನೆಯನ್ನು ಆಡಳಿತ ಪಕ್ಷ ನೀಡಿದೆ. “ಸರ್ವಾಧಿಕಾರ ಮಾಡಲು ಬಂದರೆ ರಾಷ್ಟ್ರೀಯ ಪಕ್ಷದ ಮೈತ್ರಿಯೇ ಅಗತ್ಯವಿಲ್ಲ” ಎಂದು ಬಿಜೆಪಿಗೆ ಕಠಿಣ ಸಂದೇಶವನ್ನು ನೀಡಲಾಗಿದೆ. ಹಾಗಾಗಿ ಇದು NDA ಮೈತ್ರಿಯ ಒಂದೊಂದೇ ಕೊಂಡಿ ಕಳಚಿಕೊಳ್ಳುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ರಾಜ್ಯ ಚುನಾವಣೆಗಳ ಸಹ-ಸಂಯೋಜಕರೂ ಆಗಿರುವ ಎಐಎಡಿಎಂಕೆ ಸಂಸದ ಕೆ.ಪಿ ಮುನುಸಾಮಿ, “ತಮ್ಮ ಪಕ್ಷವೇ ಚುನಾವಣೆಯಲ್ಲಿನ ಮೈತ್ರಿಕೂಟವನ್ನು ಮುನ್ನಡೆಸಲಿದೆ. ರಾಷ್ಟ್ರೀಯ ಪಕ್ಷವು ಇದನ್ನು ನಿರ್ದೇಶಿಸಲು ಬಯಸಿದರೆ, ಅವರು ಮೈತ್ರಿಯ ಭಾಗವಾಗುವುದು ಬೇಕಿಲ್ಲ” ಎಂದು ಅವರು ಒತ್ತಿಹೇಳಿದ್ದಾರೆ.
ಇದನ್ನೂ ಓದಿ: ಎನ್‌ಡಿಎ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವತ್ತ ಶಿರೋಮಣಿ ಅಕಾಲಿದಳ!
ಈ ಹಿಂದೆ, ತಮಿಳುನಾಡು ಮುಖ್ಯಮಂತ್ರಿ ಅಭ್ಯರ್ಥಿ ಪಳನಿಸ್ವಾಮಿಯವರೇ ಆಗಲಿದ್ದಾರೆಯೇ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಾಡೇಕರ್ ಅವರನ್ನು ಕೇಳಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ಹೇಳಿಕೆ ಕುತೂಹಲ ಮೂಡಿಸಿದೆ. 2021 ರ ಏಪ್ರಿಲ್-ಮೇ ತಿಂಗಳಲ್ಲಿ ತಮಿಳುನಾಡು ಚುನಾವಣೆ ನಡೆಯಲಿದೆ.
ಬಿಜೆಪಿಗೆ ರಾಜ್ಯದಲ್ಲಿ ಒಬ್ಬರೂ ಶಾಸಕ ಅಥವಾ ಸಂಸದರಿಲ್ಲ. ಒಂಬತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರ್ಕಾರವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಜೊತೆಗೆ ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ದೊಡ್ಡ ಹಿನ್ನಡೆ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಇದು ತಲೆನೋವಾಗಿದೆ.
ದೇಶದಲ್ಲಿ ಬಿಜೆಪಿಯೊಟ್ಟಿಗೆ NDA ಅಡಿಯಲ್ಲಿ ಮೈತ್ರಿ ಮಾಡಿಕೊಂಡಿರುವ ಹಲವು ಪಕ್ಷಗಳು ಬಿಜೆಪಿಯ ಸರ್ವಾಧಿಕಾರಿ ಮನಸ್ಥಿಯನ್ನು ಬಹಿರಂಗವಾಗಿ ವಿರೋಧಿಸುತ್ತಿವೆ.
ಇದನ್ನೂ ಓದಿ: ಎನ್‌ಡಿಎ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಲಾಲು ಪ್ರಸಾದ್: ಸುಶೀಲ್ ಮೋದಿ ಆರೋಪ!
ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಬಿಜೆಪಿಯ ಮೈತ್ರಿಯ ನಡುವೆ ಬಿರುಕುಂಟಾಗಿದೆ. ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ತರಲು ಹೊರಟಿರುವ ಮತಾಂತರ ನಿಷೇಧ ಕಾನೂನಿಗೆ ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಜೆಪಿಯೊಂದಿಗಿನ ಅಸಮಾಧಾನವನ್ನು ವ್ಯಕ್ತಪಡಿಸಲಾಗುತ್ತಿದೆ.
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳವು ಸೆಪ್ಟಂಬರ್‌ನಲ್ಲಿ NDA ಮೈತ್ರಿಯನ್ನು ತೊರೆದಿತ್ತು. ಕಳೆದ ವಾರ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷ NDA ಮೈತ್ರಿಯನ್ನು ತೊರೆದಿದೆ. ಶಿವಸೇನೆ ಕಳೆದ ವರ್ಷವೇ ಎನ್‌ಡಿಎ ಮೈತ್ರಿಯಿಂದ ಹೊರಬಂದಿತ್ತು.
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ, ಬಿಜೆಪಿ ಮುಂದಾಳತ್ವದ NDA ಮೈತ್ರಿಯ ಒಂದೊಂದೇ ಕೊಂಡಿ ಕಳಚಿಕೊಳ್ಳುತ್ತಿದೆ ಎಂಬುದಂತೂ ಸ್ಪಷ್ಟವಾಗಿದೆ.
ಇದನ್ನೂ ಓದಿ: ನಿತೀಶ್ ಎನ್‌ಡಿಎ ಬಿಡಬೇಕು, ತೇಜಸ್ವಿಯನ್ನು ಸಿಎಂ ಮಾಡಬೇಕು- ದಿಗ್ವಿಜಯ ಸಿಂಗ್


