ಇಂದು ವಿಶ್ವ ಕವನ ದಿನ. ಕಲೆ ಸಾಹಿತ್ಯ ಜನರಿಗಾಗಿ ಎಂದು ನಂಬಿರುವ ಶಿವಮೊಗ್ಗದ ಪತ್ರಕರ್ತರಾದ ಎನ್.ರವಿಕುಮಾರ್ ಟೆಲೆಕ್ಸ್‌ರವರು ಇಂದು ಜನರ ಕವನವೊಂದನ್ನು ಬರೆದಿದ್ದಾರೆ. ಸದ್ಯದ ದೇಶದ ಪರಿಸ್ಥಿತಿಯಲ್ಲಿ ಸಾಮಾನ್ಯರೊಬ್ಬರ ನೋವುಗಳ ಕವನದ ಮೂಲಕ ಹೊರಬಂದಿದೆ. ನಾನುಗೌರಿ ಓದುಗರಿಗಾಗಿ ಆ ಕವನ ನಿಮ್ಮ ಮುಂದಿದೆ.
ಚಪ್ಪಾಳೆ ತಟ್ಟಲು ಒಂದು ಬಾಲ್ಕನಿ ಬೇಕು
ಬಾಲ್ಕನಿಯಲ್ಲಿ ನಿಂತು
ನನಗೂ ಚಪ್ಪಾಳೆ ತಟ್ಟಬೇಕೆನಿಸುತ್ತಿದೆ…
ಎಲ್ಲರೂ ನನ್ನತ್ತ ನೋಡುವಾಗ
ನಾನು ಬೀಗಬೇಕು ಭಿನ್ನಾಣದಿಂದ
ಎತ್ತರದಲ್ಲಿದ್ದೇನೆ ಎಲ್ಲರಿಗಿಂತಲೂ
ಎಂದೊಮ್ಮೆಯಾದರೂ ….
ಇಲ್ಲೇ ನೆಲಕ್ಕೆ ಹೂತು ಹೋದ ಜಗುಲಿ
ಹುಡುಕುತ್ತಿದ್ದೇನೆ
ಅನಾದಿಕಾಲದಿಂದಲೂ..
ಅದರ ಮೇಲಾದರೂ ನಿಂತು ಇಂದು
ದೊರೆಯ ಕಿವಿಗಳಿಗೆ,
ನನ್ನ ಮುಟ್ಟಲಾರದ ‘ವೈರಸ್’ ಗಳಿಗೆ ತಲುಪುವಂತೆ
ದೇಶಕ್ಕಾಗಿ ಒಂದು ಚಪ್ಪಾಳೆ ತಟ್ಟಬೇಕಿದೆ.
ನಿಮ್ಮ ಆದೇಶ ಪಾಲಿಸಿ
ದೇಶವಾಸಿಯಾಗುತ್ತೇನೆ
ನನ್ನ ನೋವು- ಸಂಕಟಗಳಲ್ಲದಿದ್ದರೂ
ನನ್ನ ಒಂದು ಚಪ್ಪಾಳೆಯಾದರೂ
ನಿಮ್ಮೆಲ್ಲರಿಗೂ ಕೇಳಿಸಲಿ
ಒಂದು ಬಾಲ್ಕನಿ ಕಟ್ಟಿಸಿಕೊಡಿ
ಆ ಒಂದು ಸಂಜೆಯಾದರೂ ಕಣ್ಣ ಕೆಳಗೆ ಕಾಣುವ
ಬಣ್ಣ ಬಣ್ಣದ ಬೆಳಕ ನೋಡಿ
ನಲಿಯುತ್ತೇನೆ.
***


