Homeಮುಖಪುಟಕೊರೊನಾ ಮುನ್ನೆಚ್ಚರಿಕೆ: ಮಂಡ್ಯದ ಗಾರ್ಮೆಂಟ್ಸ್‌ಗಳಿಗೆ 10ದಿನ ರಜೆ ಘೋಷಿಸಿ, ಏಕಾಏಕಿ ಹಿಂಪಡೆದ ಜಿಲ್ಲಾಡಳಿತ!

ಕೊರೊನಾ ಮುನ್ನೆಚ್ಚರಿಕೆ: ಮಂಡ್ಯದ ಗಾರ್ಮೆಂಟ್ಸ್‌ಗಳಿಗೆ 10ದಿನ ರಜೆ ಘೋಷಿಸಿ, ಏಕಾಏಕಿ ಹಿಂಪಡೆದ ಜಿಲ್ಲಾಡಳಿತ!

ಗಾರ್ಮೆಂಟ್ಸ್‌ ಮಾಲೀಕರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತದ ವಿರುದ್ಧ ಕಾರ್ಮಿಕರ ಅಸಮಾಧಾನ...

- Advertisement -
- Advertisement -

ಸಾಮುದಾಯಿಕವಾಗಿ ಕೊರೊನಾ ಹರಡದಂತೆ ತಡೆಯಲು ಎಲ್ಲೆಲ್ಲೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಐಟಿ ಕಂಪನಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಕರ್ನಾಟಕ ಸರ್ಕಾರವೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ತುರ್ತು ಪರಿಸ್ಥಿತಿ ಘೋಷಿಸಿದೆ. ಪ್ರಧಾನಿ ಮೋದಿಯವರು ಮಾರ್ಚ್‌ 22ರಂದು ಮನೆಯಲ್ಲಿಯೇ ಇದ್ದು ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಕೊರೊನಾ ಹರಡುವಿಕೆ ಭಾರತದಲ್ಲಿ ಮೊದಲ ಹಂತದಲ್ಲಿದ್ದ ಅದು ಎರಡು ಮತ್ತು ಮೂರನೇ ಹಂತಕ್ಕೆ ಹೋಗದಂತೆ ತಡೆಯಲು ತೀವ್ರ ಎಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಕೆಲವು ಕಾರ್ಖಾನೆಗಳು ಮತ್ತು ಗಾರ್ಮೆಂಟ್ಸ್‌ಗಳು ಮಾತ್ರ ಇನ್ನು ಲಾಭದ ಹಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ.

ಮಾರ್ಚ್‌ 19ರಂದು ಮಂಡ್ಯದ ಜಿಲ್ಲಾಧಿಕಾರಿಗಳಾದ ಎಂ.ವಿ ವೆಂಕಟೇಶ್‌ರವರು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಗಾರ್ಮೆಂಟ್ಸ್‌ಗಳಿಗೆ ಮಾರ್ಚ್‌ 31ರವರೆಗೆ ರಜೆ ಘೋಷಿಸಿದ್ದರು. ಅವರು ಹೊರಡಿಸಿದ್ದ ಆದೇಶದಲ್ಲಿ ಅದು ಸಂಬಳಸಹಿತ ರಜೆಯೊ, ಸಂಬಳ ರಹಿತ ರಜೆಯೊ ಅದನ್ನು ಕೂಡ ಕಾರ್ಮಿಕರಿಗೆ ತಿಳಿಸಿರಲಿಲ್ಲ. ಆದರೆ ಪತ್ರಿಕೆಗಳ ಜೊತೆ ಮಾತನಾಡಿದಾಗ ಸಂಬಳ ಸಹಿತ ರಜೆ ಎಂದು ತಿಳಿಸಿದ್ದರು. ಇದರಿಂದ ಜಿಲ್ಲೆಯಲ್ಲಿ ಕೆಲಸ ಮಾಡುವ ಸುಮಾರು 20 ಸಾವಿರ ಗಾರ್ಮೆಂಟ್ಸ್‌ ನೌಕರರು ನಿಟ್ಟುಸಿರು ಬಿಟ್ಟು ಮಾರ್ಚ್‌ 20ರಂದು ಕೆಲಸಕ್ಕೆ ತೆರಳದೆ ಮನೆಯಲ್ಲಿಯೇ ಉಳಿದರು.

ಆದರೆ ಅದೇ ದಿನ ಗಾರ್ಮೆಂಟ್ಸ್‌ಗಳ ಮ್ಯಾನೇಜರ್‌ಗಳು ಈ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿನ ಈ ನಿರ್ಧಾರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಬೇಕಾಗುತ್ತದೆ. ಇದರಿಂದ ಕಂಪನಿಗೆ ನಷ್ಟವುಂಟಾಗುತ್ತದೆ ಎಂದು ಜಿಲ್ಲಾಧಿಕಾರಿಗಳೊಡನೆ ಸಭೆ ನಡೆಸಿ, ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಂದಲೇ ಜಿಲ್ಲಾಧಿಕಾರಿಗೆ ಫೋನ್‌ ಮಾಡಿಸಲಾಗಿದೆ ಎನ್ನಲಾಗಿದೆ. ಒತ್ತಾಯಕ್ಕೆ ಮಣಿದ ಜಿಲ್ಲಾಧಿಕಾರಿಗಳು ರಜೆ ರದ್ದುಗೊಳಿಸಿದ್ದಾರೆ. ಗಾರ್ಮೆಂಟ್ಸ್‌ನಿಂದ ಎಲ್ಲಾ ಕಾರ್ಮಿಕರಿಗೆ ಕರೆ ಮಾಡಿ ಮಾರ್ಚ್‌ 21ರಿಂದಲೇ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಕಾರ್ಮಿಕರೊಬ್ಬರು ನಾನುಗೌರಿ.ಕಾಂಗೆ ಖಚಿತಪಡಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಗಾರ್ಮೆಂಟ್ ಅಂಡ್ ಟೆಕ್ಸ್ ಟೈಲ್ ವರ್ಕರ್ಸ್ ಯೂನಿಯನ್‌ನ ಜಯರಾಮ್ ಎ. ಹೆಚ್ ರವರನ್ನು ಮಾತನಾಡಿಸಿತು. ಅವರು “ಒಟ್ಟು ಮಂಡ್ಯ ಜಿಲ್ಲೆಯಲ್ಲಿ 10-15 ಸಾವಿರ ಮಹಿಳಾ ಕಾರ್ಮಿಕರು ಹಲವು ಗಾರ್ಮೆಂಟ್ಸ್‌‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 30ಜನರ ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ಅಪ್ಪಿ ತಪ್ಪಿ ಸೋಂಕು ಹರಡಿದರೆ ಬಹಳ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಸಂಬಳ ಸಹಿತ ರಜೆ ನೀಡಿ ಈ ಕಾರ್ಮಿಕರ ಹಿತಕಾಯಬೇಕಾಗಿರುವುದು ಸರ್ಕಾರ ಮತ್ತು ಜಿಲ್ಲಾಢಳಿತದ ಕೆಲಸ. ಆದರೆ ರಜೆ ರದ್ದುಗೊಳಿಸಿವುದು ದೊಡ್ಡ ಪ್ರಮಾದವಾಗಿದೆ. ಶಾಹಿ ಎಕ್ಸ್‌ಪೋರ್ಟ್‌ ಗಾರ್ಮೆಂಟ್ಸ್‌ನ ಆಡಳಿತ ಮಂಡಳಿಯೇ ಇದಕ್ಕೆಲ್ಲಾ ನೇತೃತ್ವ ವಹಿಸಿದ್ದಾರೆ. ತಮ್ಮ ಲಾಭದ ದುರಾಸೆಗಾಗಿ ತಾವೇ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿ ರಜೆಯನ್ನು ರದ್ದುಗೊಳಿಸಲು ಕಾರಣರಾಗಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿಗಳು ರಜೆಯ ಆದೇಶವನ್ನು ಹಿಂಪಡೆಯುವ ಮೂಲಕ ತಾನೆಂಥ ಜನ ವಿರೋಧಿ, ಮಹಿಳಾ ಕಾರ್ಮಿಕ ವಿರೋಧಿ, ಹೊಣೆಗೇಡಿ ಮತ್ತು ಬಂಡವಾಳ ಶಾಹಿ ಮಾಲೀಕರ ಪರ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ರಾಜ್ಯದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಬಡ, ಮಹಿಳಾ ಕಾರ್ಮಿಕರು ಗಾರ್ಮೆಂಟ್ಸ್ ಗಳಲ್ಲಿ ಕನಿಷ್ಠ ವೇತನ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಜೆ ಹಿಂಪಡೆದಿರುವುದು ಸರಿಯಲ್ಲ. ಸರಕಾರ ಈಗ ಹೊರಡಿಸಿರುವ ಆದೇಶ ಪತ್ರವನ್ನು ಮರುಪರಿಶೀಲಿಸಿ ಕೊರೊನಾ ವೈರಸ್ ತಹಬಂದಿಗೆ ಬರುವವರೆಗೆ ಗಾರ್ಮೆಂಟ್ಸ್ ಉದ್ದಿಮೆಗಳನ್ನು ಮುಚ್ಚುವಂತೆ ಆದೇಶಿಸಿ ಗಾರ್ಮೆಂಟ್ಸ್ ನೌಕರರ ಅರೋಗ್ಯ ಮತ್ತು ಪ್ರಾಣ ಕಾಪಾಡಲಿ ಇಲ್ಲದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಅವರ ಕಚೇರಿಗೆ ಸಂಪರ್ಕಿಸಿದರೂ ಸಹ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಕೊರೊನಾದಂತಹ ಸಾಮುದಾಯಿಕವಾಗಿ ಹಬ್ಬುವ ವೈರಸ್‌ಗಳನ್ನು ತಡೆಯುವುದು ಇಡೀ ದೇಶದ ನಾಗರಿಕರ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ದೂರ ಇದ್ದು, ಮನೆಗಳಲ್ಲಿಯೇ ಉಳಿದು ಪ್ರತಿಯೊಬ್ಬರೂ ಅದರ ವಿರುದ್ಧ ಹೋರಾಡಬೇಕಿದೆ. ಇಂತಹ ಸಂದರ್ಭದಲ್ಲಿ ಕೇವಲ ಗಾರ್ಮೆಂಟ್ಸ್‌ಗಳ ಲಾಭದ ದುರಾಸೆಗಾಗಿ ರಜೆ ರದ್ದುಗೊಳಿಸಿ ಅವರಿಂದ ದುಡಿಸಿಕೊಳ್ಳಲು ಹೊರಟಿರುವುದು ಅಪಾಯಕಾರಿ ನಡೆಯಾಗಿದೆ. ಇನ್ನು ಭಾನುವಾರ ಮೋದಿಯವರೇ ಮನೆಯಿಂದ ಹೊರಬರಬೇಡಿ ಎಂದರೆ ಬೆಂಗಳೂರಿನ ಶಾಹಿ ಎಕ್ಸ್‌ಪೋರ್ಟ್‌ ಗಾರ್ಮೆಂಟ್ಸ್‌ನಲ್ಲಿ ತನ್ನ ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗಬೇಕೆಂದು ತಾಕೀತು ಮಾಡಿದೆ. ಇದೆಂತೆಹ ದ್ವಂದ್ವ?

ಸರ್ಕಾರ ಈ ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಂಬಳ ಸಹಿತ ರಜೆ ನೀಡಿ ಕಾರ್ಮಿಕರ ಹಿತ ಕಾಯಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದೆ ಒದಗುವ ಭಾರೀ ಅನಾಹುತವನ್ನು ಎದುರಿಸಬೇಕಾಗುತ್ತದೆ.


ಇದನ್ನೂ ಓದಿ: ಕೊರೊನಾ ಮುನ್ನೆಚ್ಚರಿಕೆ : ಸಾವಿರಾರು ಜನ ಸೇರುವ ಗಾರ್ಮೆಂಟ್ಸ್, ಕಂಪನಿಗಳಿಗೆ ರಜೆ ಇಲ್ಲ ಏಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...