ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಗೆ ತಯಾರಿ ನಡೆಸುತ್ತಿದ್ದ 18 ವರ್ಷದ ವಿದ್ಯಾರ್ಥಿ ಶುಕ್ರವಾರ(ಜ.17) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ವರ್ಷ ಕೋಟಾದಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಕಳೆದ ವರ್ಷ ರಾಜಸ್ಥಾನದ ಕೋಚಿಂಗ್ ಹಬ್‌ಗಳಲ್ಲಿ ಕನಿಷ್ಠ 23 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ 20 ಜನರು ಕೋಟಾದವರು ಎಂಬುವುದು ಗಮನಾರ್ಹ ಸಂಗತಿ.
ಕೋಟಾದ ಅಂಬೇಡ್ಕರ್ ಕಾಲೋನಿಯಲ್ಲಿರುವ ಖಾಸಗಿ ಹಾಸ್ಟೆಲ್‌ನಿಂದ ವಿದ್ಯಾರ್ಥಿಯೊಬ್ಬ ತನ್ನ ಕೋಣೆಯ ಬಾಗಿಲು ತೆರೆಯುತ್ತಿಲ್ಲ ಎಂಬ ಮಾಹಿತಿ ಬಂದಿತ್ತು. ಪೊಲೀಸ್ ಸಿಬ್ಬಂದಿ ಹಾಸ್ಟೆಲ್‌ಗೆ ತೆರಳಿ ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿಯ ಶವ ಕಂಡು ಬಂದಿದೆ ಎಂದು ವಿಜ್ಞಾನ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಲಾಲ್ ಸಿಂಗ್ ತನ್ವರ್ ಹೇಳಿದ್ದಾರೆ.
ವಿದ್ಯಾರ್ಥಿಯ ಶವವನ್ನು ತಕ್ಷಣ ಎಂಬಿಎಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ವೈದ್ಯರೂ ಕೂಡ ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತ ವಿದ್ಯಾರ್ಥಿನೀಟ್‌ಗೆ ತಯಾರಿ ನಡೆಸಲು ಕೋಟಾಗೆ 2024 ರ ಏಪ್ರಿಲ್‌ನಲ್ಲಿ ಬಂದಿದ್ದರು ಎಂದು ಲಾಲ್ ಸಿಂಗ್ ತನ್ವರ್ ಮಾಹಿತಿ ನೀಡಿದ್ದಾರೆ.
ಜನವರಿ 7ರಂದು, ಹರಿಯಾಣದ 19 ವರ್ಷದ ಜೆಇಇ ಆಕಾಂಕ್ಷಿ ಕೋಟಾದ ರಾಜೀವ್ ಗಾಂಧಿ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದೇ ಜೆಇಇ ಕೋರ್ಸ್‌ಗೆ ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಜನವರಿ 8ರಂದು ವಿಜ್ಞಾನ್ ನಗರದಲ್ಲಿರುವ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104


