ನೀಟ್-ಯುಜಿ ಮರು ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದು (ಜುಲೈ 1) ಪ್ರಕಟಿಸಿದ್ದು, ಟಾಪರ್‌ಗಳ ಸಂಖ್ಯೆ ಇಳಿಕೆಯಾಗಿದೆ.
ಒಟ್ಟು 1,563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ನಿಗದಿಪಡಿಸಲಾಗಿತ್ತು. ಆದರೆ, 813 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಅವರ ಫಲಿತಾಂಶ ಪ್ರಕಟಿಸಲಾಗಿದ್ದು, ಮೊದಲ ಫಲಿತಾಂಶದಲ್ಲಿ 67 ಇದ್ದ ಟಾಪರ್‌ಗಳ ಸಂಖ್ಯೆ 61ಕ್ಕೆ ಇಳಿಕೆಯಾಗಿದೆ.
ಜೂನ್ 4ರಂದು ಪ್ರಕಟಗೊಂಡ 2024ರ ನೀಟ್-ಯುಜಿ ಫಲಿತಾಂಶದಲ್ಲಿ 1,563 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದು ಮತ್ತು 67 ವಿದ್ಯಾರ್ಥಿಗಳು 720 ಪೂರ್ಣ ಅಂಕ ಗಳಿಸಿರುವುದು ಹಾಗೂ ಕೆಲ ವಿದ್ಯಾರ್ಥಿಗಳು 718, 719 ಅಂಕಗಳನ್ನು ಪಡೆದಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗಿತ್ತು.
ಬರೋಬ್ಬರಿ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದ ಪರೀಕ್ಷೆ ಮೇ 5, 2024 ರಂದು ನಡೆದಿತ್ತು. ಜೂನ್ 4, 2024ರಂದು ಫಲಿತಾಂಶ ಪ್ರಕಟಗೊಂಡ ನಂತರ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಪರೀಕ್ಷೆ ಬರೆಯಲು ಸರಿಯಾಗಿ ಸಮಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ. ಈ ಕಾರಣದಿಂದ 718, 719 ಅಂಕಗಳು ಲಭಿಸಿವೆ. ಕೆಲ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸುಲಭವಾಗಿದ್ದುದೇ ಅವರು ಭಾರೀ ಅಂಕ ಪಡೆಯಲು ಕಾರಣ ಎಂದು ರಾಷ್ಟ್ರೀಯ ಪರಿಕ್ಷಾ ಸಂಸ್ಥೆ (ಎನ್‌ಟಿಎ) ಆರಂಭದಲ್ಲಿ ಹೇಳಿತ್ತು.
ಆದರೆ, ವಿದ್ಯಾರ್ಥಿಗಳು ಮತ್ತು ಇತರರಿಂದ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕೃಪಾಂಕ ಕುರಿತು ಮರು ಪರಿಶೀಲಿಸಲು ಕೇಂದ್ರ ಶಿಕ್ಷಣ ಸಚಿವಾಲಯ ನಾಲ್ವರ ಸಮಿತಿ ರಚಿಸಿದೆ ಎಂದು ಎನ್‌ಟಿಎ ಮಹಾನಿರ್ದೇಶಕ ಸುಬೋಧ್ ಕುಮಾರ್ ಸಿಂಗ್ ಜೂನ್ 8ರಂದು ಸುದ್ದಿಗೋಷ್ಟಿ ನಡೆಸಿ ತಿಳಿಸಿದ್ದರು.
ಈ ನಡುವೆ ನೀಟ್ ಮರು ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ಸಂಬಂಧ ಪ್ರತಿಕ್ರಿಯೆ ಕೇಳಿ ಜೂನ್ 11ರಂದು ಸುಪ್ರೀಂ ಕೋರ್ಟ್ ಎನ್‌ಟಿಎಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ಎನ್‌ಟಿಎ 1,563 ವಿದ್ಯಾರ್ಥಿಗಳ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗುವುದು. ಅವರು ಮತ್ತೆ ಪರೀಕ್ಷೆಗೆ ಹಾಜರಾಗಲು ಆಯ್ಕೆಯನ್ನು ಹೊಂದಿರುತ್ತಾರೆ ಎಂದು ತಿಳಿಸಿತ್ತು. ಅದರಂತೆ ಗ್ರೇಸ್ ಅಂಕ ರದ್ದುಪಡಿಸಿ ಮರು ಪರೀಕ್ಷೆ ನಡೆಸಿತ್ತು.
ವರದಿಗಳ ಪ್ರಕಾರ, ಮರು ಪರೀಕ್ಷೆಗೆ ಚಂಡೀಗಢದ ಇಬ್ಬರು ಅಭ್ಯರ್ಥಿಗಳಲ್ಲಿ ಯಾರೂ ಹಾಜರಾಗಲಿಲ್ಲ. ಛತ್ತೀಸ್‌ಗಢದಿಂದ ಒಟ್ಟು 602 ವಿದ್ಯಾರ್ಥಿಗಳಲ್ಲಿ 291, ಗುಜರಾತ್‌ನಿಂದ ಒಬ್ಬರು ವಿದ್ಯಾರ್ಥಿ, ಹರಿಯಾಣದಿಂದ 494 ರಲ್ಲಿ 287 ಮತ್ತು ಮೇಘಾಲಯದ ತುರಾದಿಂದ 234 ವಿದ್ಯಾರ್ಥಿಗಳು ಹಾಜರಾಗಿದ್ದರು.
ಇದನ್ನೂ ಓದಿ : ನೀಟ್-ಯುಜಿ ಮರು ಪರೀಕ್ಷೆ: ಪರಿಷ್ಕೃತ ಶ್ರೇಣಿಯ ಪಟ್ಟಿ ಪ್ರಕಟಿಸಿದ ಎನ್‌ಟಿಎ


