ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರಕಾರದಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿ ಶಿವಸೇನೆ ಶಾಸಕ ನರೇಂದ್ರ ಭೋಂಡೇಕರ್ ಅವರು ಶಿವಸೇನೆಯ ಎಲ್ಲಾಹಂತದ ಸ್ಥಾನಗಳ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಭಾನುವಾರ ಭಂಡಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯ ಉಪ ನಾಯಕ ಮತ್ತು ಪೂರ್ವ ವಿದರ್ಭ ಜಿಲ್ಲೆಗಳ ಸಂಯೋಜಕನಾಗಿದ್ದ ನನಗೆ ಪಕ್ಷದ ಮುಖ್ಯಸ್ಥ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದರು ಎಂದು ಹೇಳಿದರು.
ಭಂಡಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಲು ಮತ್ತು ಅದರ ಅಭಿವೃದ್ಧಿಗೆ ಕೆಲಸ ಮಾಡಲು ಸಚಿವ ಸ್ಥಾನ ಪಡೆಯಲು ನಾನು ಆಕಾಂಕ್ಷಿಯಾಗಿದ್ದೆ ಎಂದು ಭೋಂಡೆಕರ್ ತಿಳಿಸಿದರು.
ನವೆಂಬರ್ 20 ರಂದು ನಡೆದ ರಾಜ್ಯ ಚುನಾವಣೆಯಲ್ಲಿ ಅವರು ಭಂಡಾರಾ ಕ್ಷೇತ್ರದಿಂದ ಕಾಂಗ್ರೆಸ್ ಪ್ರತಿಸ್ಪರ್ಧಿಯನ್ನು 38,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಗೆದಿದ್ದರು.
ದೇವೇಂದ್ರ ಫಡ್ನವೀಸ್ ನೇತೃತ್ವದ ಸಚಿವ ಸಂಪುಟದ ಮೊದಲ ಸಂಪುಟ ವಿಸ್ತರಣೆಯಲ್ಲಿ 16 ಹೊಸ ಮುಖಗಳು ಸೇರಿದಂತೆ ಮಹಾಯುತಿ ಮಿತ್ರಪಕ್ಷಗಳ ಒಟ್ಟು 39 ಶಾಸಕರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರೆ, 10 ಮಾಜಿ ಸಚಿವರನ್ನು ಹೊರಗಿಡಲಾಗಿದೆ. ಮಿತ್ರಪಕ್ಷಗಳ ಪೈಕಿ ಅತಿ ದೊಡ್ಡ ಪಕ್ಷ ಎಂಬ ಕಾರಣಕ್ಕೆ ಬಿಜೆಪಿ 19 ಸಚಿವ ಸ್ಥಾನಗಳನ್ನು ಪಡೆದುಕೊಂಡರೆ, ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಕ್ರಮವಾಗಿ 11 ಮತ್ತು 9 ಸ್ಥಾನಗಳನ್ನು ನೀಡಲಾಗಿದೆ.
ನನಗೆ ಕ್ಯಾಬಿನೆಟ್ ಸ್ಥಾನ ನೀಡಲಾಗುವುದು ಎಂಬ ಷರತ್ತಿನ ಮೇಲೆ ನಾನು ಶಿವಸೇನೆಗೆ ಸೇರಿದ್ದೇನೆ. ಶಿಂಧೆ ನನಗೆ ಅದೇ ಭರವಸೆ ನೀಡಿದ್ದರು. ಹಿಂದಿನ ಸರ್ಕಾರದಲ್ಲಿ ಶಿಂಧೆ ಮುಖ್ಯಮಂತ್ರಿಯಾದಾಗ ನಾನು ಸ್ವತಂತ್ರ ಶಾಸಕನಾಗಿದ್ದೆ ಮತ್ತು ಅವರಿಗೆ ಬೆಂಬಲ ನೀಡಿದ್ದೆ ಎಂದು ಭೋಂಡೆಕರ್ ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮ ಹೆಸರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲಾಗುವುದು ಎಂದು ಹೇಳಲಾಗಿತ್ತು, ನಾನು ಸಚಿವ ಸ್ಥಾನದ ಪಟ್ಟಿಯನ್ನು ಪರಿಶೀಲಿಸಿದಾಗ ಮತ್ತು ನನ್ನನ್ನು ಕೈಬಿಡಲಾಗಿದೆ ಎಂದು ಅರಿತುಕೊಂಡಾಗ, ನಾನು ಪಕ್ಷದ ಎಲ್ಲಾ ಸ್ಥಾನಗಳಿಂದ ಹೊರಬರಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ಭಂಡಾರಾ ಜಿಲ್ಲೆಯ ಉಸ್ತುವಾರಿ ಸಚಿವನಾಗಲು ಕ್ಯಾಬಿನೆಟ್ ಹುದ್ದೆಯನ್ನು ಪಡೆಯುವ ಉದ್ದೇಶ ಹೊಂದಿದ್ದೆ. ಈಗ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲಿದ್ದೇನೆ ಎಂದು ಭೋಂಡೆಕರ್ ತಿಳಿಸಿದ್ದಾರೆ.
ಭಂಡಾರ ಜಿಲ್ಲೆ ಸತತವಾಗಿ ಹಲವಾರು ವರ್ಷಗಳಿಂದ ಹೊರಗಿನ ಮಂತ್ರಿಗಳನ್ನು ಹೊಂದಿದೆ. ಇಂತಹ ಪದ್ಧತಿ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಅಡ್ಡಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾನು ಇನ್ನು ಮುಂದೆ ಯಾವುದೇ ಅಧಿಕೃತ ಸ್ಥಾನವನ್ನು ಹೊಂದುವ ಮನಸ್ಸು ಹೊಂದಿಲ್ಲ. ನಾನು ನನ್ನ ಪಕ್ಷದ ನಾಯಕರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಮತ್ತು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ಭೋಂಡೇಕರ್ ಹೇಳಿದರು.
…………………………..
ಮಹಾರಾಷ್ಟ್ರದಲ್ಲಿ ಮಹಾಯುತಿ ಸರಕಾರ ಸಂಪುಟ ವಿಸ್ತರಣೆ
-ಮಹಾರಾಷ್ಟ್ರದಲ್ಲಿ 39 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
-18 ಹೊಸ ಮುಖಗಳಿಗೆ ಮಣೆ, ನಾಲ್ವರು ಮಹಿಳೆಯರಿಗೆ ಮಾತ್ರ ಅವಕಾಶ
ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾಯುತಿ ಸರಕಾರದ ಸಚಿವ ಸಂಪುಟ ಭಾನುವಾರ ವಿಸ್ತರಣೆಯಾಗಿದೆ. ಮೊದಲ ವಿಸ್ತರಣೆಯಲ್ಲಿ ಮೂರೂ ಮೈತ್ರಿ ಪಕ್ಷಗಳ ಒಟ್ಟು 39 ಶಾಸಕರಿಗೆ ಮಂತ್ರಿಗಿರಿ ಲಭಿಸಿದೆ. ಆ ಪೈಕಿ 33 ಮಂದಿ ಸಂಪುಟ ಸಚಿವರಾಗಿ ಹಾಗೂ 6 ಮಂದಿ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಸಂಪುಟ ಸದಸ್ಯರ ಸಂಖ್ಯೆ 42ಕ್ಕೆ ಏರಿದೆ. ಇನ್ನೂ ಒಂದು ಸಚಿವ ಸ್ಥಾನ ಖಾಲಿ ಉಳಿದಿದೆ.
ನಾಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಪಿ.ಸಿ. ರಾಧಾಕೃಷ್ಣನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಡಿ. 16ರಿಂದ 21ರವರೆಗೆ ನಾಗಪುರದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಇಲ್ಲಿಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು.
4 ಮಹಿಳೆಯರು, ಹಿರಿಯರಿಗಿಲ್ಲ ಮಣೆ
ಸಚಿವ ಸಂಪುಟದಲ್ಲಿ ನಾಲ್ವರು ಮಹಿಳಾ ಶಾಸಕರು ಸ್ಥಾನ ಗಿಟ್ಟಿಸಿದ್ದಾರೆ. 39 ಸಚಿವರ ಪೈಕಿ ಬಿಜೆಪಿಯಿಂದ ಪಂಕಜಾ ಮುಂಡೆ, ಎನ್‌ಸಿಪಿ (ಅಜಿತ್ ಬಣ)ಯಿಂದ ಅದಿತಿ ತತ್ಕಾರೆ, ಪುಣೆಯಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಿಜೆಪಿ ಶಾಸಕಿ ಮಾಧುರಿ ಮಿಸಳ್ ಮತ್ತು ಬಿಜೆಪಿ ನಾಯಕಿ ಮೇಘನಾ ಬೊರ್ಡಿಕರ್ ಅವರಿಗೆ ಸಚಿವ ಸ್ಥಾನ ದೊರೆತಿದೆ.
ಬಿಜೆಪಿಯ ಮಹಿಳಾ ಸಚಿವರ ಪೈಕಿ ಎರಡು ಹೊಸಮುಖಗಳಿಗೆ ಮಣೆ ಹಾಕಲಾಗಿರುವುದು ನಾಯಕತ್ವ ಬೆಳೆಸುವ ಪಕ್ಷದ ಯೋಜನೆಯ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಉದಯ್ ಸಾಮಂತ್, ಶಂಭುರಾಜ್ ದೇಸಾಯಿ, ದಾದಾಜಿ ಭುಸೆ, ಸಂಜಯ್ ರಾಥೋಡ್, ಗುಲಾಬ್‌ರಾವ್ ಪಾಟೀಲ್ ಮತ್ತು ಸಂಜಯ್ ಶಿರ್ಸಾತ್ ಪ್ರಮಾಣವಚನ ಸ್ವೀಕರಿಸಿದ ಶಿವಸೇನಾದ ಪ್ರಮುಖರು.
ಇದನ್ನೂ ಓದಿ…ಉತ್ತರ ಪ್ರದೇಶ: ದಲಿತ ಕಾನ್‌ಸ್ಟೆಬಲ್ ಮದುವೆ ಮೆರವಣಿಗೆ ಮೇಲೆ ಠಾಕೂರ್ ವ್ಯಕ್ತಿಗಳಿಂದ ದಾಳಿ


