ವಿವಾದಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಯನ್ನು ಕರ್ನಾಟಕದಲ್ಲಿಯೇ ಮೊದಲು ಜಾರಿಗೊಳಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಘೋಷಿಸಿರುವ ಬೆನ್ನಲ್ಲೇ, ಜಾರಿಗೂ ಮುನ್ನ ರಾಜ್ಯ ಅಧಿವೇಶನದಲ್ಲಿ NEP-2020 ಚರ್ಚೆಯಾಗಲಿ ಎಂದು ಎಸ್.ಐ.ಓ ಆಗ್ರಹಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳು ಗೊಂದಲಕಾರಿಯಾಗಿದ್ದು ಅವುಗಳನ್ನು ಮರೆಮಾಚುವ ಮತ್ತು ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅದನ್ನು ಜಾರಿಗೊಳಿಸಲು ಹೊರಟಿದೆ ಎಂಬ ಆರೋಪಗಳು ಕೇಳಿಬರುತ್ತಿರುವಾಗ ಈ ಕುರಿತು ಸಮರ್ಪಕ ಚರ್ಚೆಯಾಗಲಿ ಎಂದು ಸಂಘಟನೆ ಒತ್ತಾಯಿಸಿದೆ.
ಈ ರಾಷ್ಟ್ರೀಯ ಶಿಕ್ಷಣ ನೀತಿಯು 3 ವರ್ಷದ ಮಕ್ಕಳಿಂದ 18 ವರ್ಷದ ಮಕ್ಕಳಿಗೆ ಸಂಬಂಧಿಸಿದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುವಾಗ ಅದರ ಪೂರ್ಣ ಪಠ್ಯ ಸ್ಥಳೀಯ ಭಾಷೆಯಲ್ಲಿ ದೊರಕಿ ಎಲ್ಲರಿಗೂ ತಿಳಿಯುವಂತಾಗಬೇಕು ಎಂದು sio ಅಧ್ಯಕ್ಷರಾದ ನಿಹಾಲ್ ಕಿದಿಯೂರು ಒತ್ತಾಯಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯಿದೆ ಕಲಂ 6, 9, 21 ಹಾಗು 22 ರ ಅನ್ವಯ ಶಾಲಾ ಮತ್ತು ಪಂಚಾಯತಿ ಹಂತದಲ್ಲಿ ಶಾಲಾ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮತ್ತು ಗ್ರಾಮ ಪಂಚಾಯತಿಗಳ ಮೇಲಿರುವುದರಿಂದ ನೀತಿಯನ್ನು ಸಾರ್ವಜನಿಕರ ಓದಿಗೆ ಮತ್ತು ಚರ್ಚೆಗೆ ಅವಕಾಶ ನೀಡಿ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ. ಮೂಲ ವಾರಸುದಾರರಾದ ನಾವು ನಮ್ಮ ಮಕ್ಕಳ ಶಿಕ್ಷಣವನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ತಿಳಿಯದೆ ಅದನ್ನು ಜಾರಿಗೊಳಿಸುವುದು ಪ್ರಜಾಸತ್ತಾತ್ಮಕವಾಗಿ ಸರಿಯಾದ ಪ್ರಕ್ರಿಯೆಯಲ್ಲ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ , ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ಜನ ಸ್ನೇಹಿ ಕೈಪಿಡಿಯನ್ನು ಸಾರ್ವಜನಿಕರಿಗೆ ಲಭ್ಯವಾಗಿಸಿ ಶಾಲೆ, ಪಂಚಾಯತಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಈ ಚರ್ಚೆಗಳ ಆಧಾರದ ಮೇಲೆ ನಮ್ಮ ರಾಜ್ಯಕ್ಕೆ ಅನುವಾಗುವ “ಕರ್ನಾಟಕ ಶಿಕ್ಷಣ ನೀತಿ”(ಕಶಿನೀ) ರೂಪಿಸುವುದು ಸೂಕ್ತವೆಂದು ಸಂಘಟನೆ ತಿಳಿಸಿದೆ.
ಇದನ್ನೂ ಓದಿ: NEP ಜಾರಿ ಕರ್ನಾಟಕದಲ್ಲಿಯೇ ಮೊದಲು ಎಂದ ಡಿಸಿಎಂ: ಟ್ವಿಟ್ಟರ್‌ನಲ್ಲಿ ‘#RejectNEP2020’ ಟ್ರೆಂಡ್


