“ಮದ್ರಸಾಗಳನ್ನು ಮುಚ್ಚುವಂತೆ ನಾನು ಯಾವತ್ತೂ ಹೇಳಿಲ್ಲ, ಬಡ ಮುಸ್ಲಿಂ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುತ್ತಿರುವ ಕಾರಣ ಮದ್ರಸಾಗಳಿಗೆ ಸರ್ಕಾರ ಧನಸಹಾಯ ನಿಲ್ಲಿಸುವಂತೆ ಶಿಫಾರಸು ಮಾಡಿದ್ದೇನೆ” ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದ್ದಾರೆ.
“ಬಡತನದ ಹಿನ್ನೆಲೆಯಿಂದ ಬರುವ ಮುಸ್ಲಿಂ ಮಕ್ಕಳನ್ನು ಲೌಕಿಕ ಶಿಕ್ಷಣಕ್ಕಿಂತ ಹೆಚ್ಚಾಗಿ ಧಾರ್ಮಿಕ ಶಿಕ್ಷಣಕ್ಕೆ ಒತ್ತಾಯಿಸಲಾಗುತ್ತಿದೆ. ನಾವು ಎಲ್ಲಾ ಮಕ್ಕಳಿಗೂ ಸಮಾನವಾದ ಶೈಕ್ಷಣಿಕ ಅವಕಾಶಗಳನ್ನು ಪ್ರತಿಪಾದಿಸುತ್ತೇವೆ” ಎಂದಿದ್ದಾರೆ.
“ದೇಶದಲ್ಲಿ ಕೆಲವೊಂದು ಗುಂಪುಗಳಿಗೆ ಬಡ ಮುಸ್ಲಿಂ ಸಮುದಾಯ ಶಿಕ್ಷಣ ಪಡೆದು ಸಬಲೀಕರಣಗೊಳ್ಳುವ ಬಗ್ಗೆ ಭಯವಿದೆ. ಅವರು ಮುಸ್ಲಿಂ ಮಕ್ಕಳು ಶಿಕ್ಷಣ ಪಡೆದು ಮುಂದೆ ಬರುವುದನ್ನು ಸಹಿಸುತ್ತಿಲ್ಲ” ಎಂದು ಹೇಳಿದ್ದಾರೆ.
ಮದ್ರಸಾಗಳು ಮತ್ತು ಮದ್ರಸಾ ಮಂಡಳಿಗಳಿಗೆ ಧನಸಹಾಯ ನೀಡುವುದನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಿಯಾಂಕ್ ಕಾನೂಂಗೊ ಇತ್ತೀಚೆಗೆ ಪತ್ರ ಬರೆದಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ದೇಶದ ವಿವಿಧ ಪ್ರಮುಖ ಮುಸ್ಲಿಂ ಸಂಘಟನೆಗಳು ಕಾನೂಂಗೊ ಪತ್ರವನ್ನು ಕಟುವಾಗಿ ವಿರೋಧಿಸಿವೆ. ವಿಶೇಷವಾಗಿ ಕೇರಳದ ಪ್ರಭಾವಿ ಮುಸ್ಲಿಂ ಸಂಘಟನೆಗಳಾದ ಸಮಸ್ತ ಎಪಿ ಮತ್ತು ಇಕೆ ವಿಭಾಗ ವಿರೋಧ ವ್ಯಕ್ತಪಡಿಸಿವೆ.
ಕೇರಳದ ಇಸ್ಲಾಮಿಕ್ ವಿದ್ವಾಂಸರ ಅತಿದೊಡ್ಡ ಸಂಘಟನೆಯಾದ ಸಮಸ್ತ ಕೇರಳ ಜಂ-ಇಯತುಲ್ ಉಲಮಾ (ಸಮಸ್ತ) ಸದಸ್ಯರು ಎನ್‌ಸಿಪಿಸಿಆರ್ ಶಿಫಾರಸು ಸಂಘ ಪರಿವಾರದ ಸೈದ್ಧಾಂತಿಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಾರ್ಯಸೂಚಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆಡಳಿತಾರೂಢ ಬಿಜೆಪಿ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಆಯ್ದು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) “ಇದು ಕೇಂದ್ರ ಸರ್ಕಾರ ಮತ್ತು ಅದರ ಏಜೆನ್ಸಿಗಳ ಕೋಮುವಾದಿ ಕಾರ್ಯಸೂಚಿಯ ಇತ್ತೀಚಿನ ನಡೆ” ಎಂದು ಹೇಳಿದೆ.
ಇದನ್ನೂ ಓದಿ : ಮದ್ರಸಾಗಳಿಗೆ ಧನ ಸಹಾಯ ನಿಲ್ಲಿಸುವಂತೆ ಮಕ್ಕಳ ಹಕ್ಕುಗಳ ಆಯೋಗ ಪತ್ರ : ವಿರೋಧ ವ್ಯಕ್ತಪಡಿಸಿದ ಮುಸ್ಲಿಂ ಸಂಘಟನೆಗಳು


