ನವದೆಹಲಿಯ ಲೋಕ ನಾಯಕ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಯ ಅರಿವಳಿಕೆ ವಿಭಾಗದ ಹಿರಿಯ ಸಲಹೆಗಾರ ಡಾ.ಅಶೀಮ್ ಗುಪ್ತಾ(55) ಅವರು ಕೊರೊನಾ ಸೋಂಕಿನಿಂದಾಗಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮಾರ್ಚ್ 17 ರಂದು ಎಲ್ಎನ್‌ಜೆಪಿಯನ್ನು ಕೊರೊನಾ ಸೌಲಭ್ಯವಿರುವ ಆಸ್ಪತ್ರೆಯೆಂದು ಘೋಷಿಸಿದ ನಂತರ ಡಾ.ಅಶೀಮ್ ಆಸ್ಪತ್ರೆಯ ತೀವ್ರ ನಿಗಾ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗಾಜಿಯಾಬಾದ್‌ನಲ್ಲಿ ಕೆಲಸ ಮಾಡುತ್ತಿರುವ ವಿಕಿರಣಶಾಸ್ತ್ರಜ್ಞೆ ಅವರ ಪತ್ನಿ ಡಾ.ನಿರುಪಮಾ ಗುಪ್ತಾ ಕೂಡ ವೈರಸ್‌ಗೆ ತುತ್ತಾಗಿದ್ದರು. ಆದರೆ ಕೆಲವು ದಿನಗಳ ಹಿಂದೆ ಚೇತರಿಸಿಕೊಂಡಿದ್ದಾರೆ.
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಅವರಲ್ಲಿ ಒಬ್ಬರು ಆಸ್ಟ್ರೇಲಿಯಾದಲ್ಲಿದ್ದು, ಭಾನುವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
“ಅವರು ಉಸಿರಾಟದಿಂದ ಬಳಲುತ್ತಿದ್ದರಿಂದ ಪರೀಕ್ಷೆಯನ್ನು ಮಾಡಿಸಿದ್ದರು. ಜೂನ್ 8 ರಂದು ಅವರ ಪರೀಕ್ಷಾ ಫಲಿತಾಂಶವೂ ಕೊರೊನಾ ಪಾಸಿಟಿವ್ ವರದಿ ನೀಡಿತ್ತು. ಸಾಕೆತ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ಅವರನ್ನು ಎಲ್‌ಎನ್‌ಜೆಪಿಯ ಐಸಿಯುಗೆ ದಾಖಲಿಸಲಾಯಿತು” ಎಂದು ಎಲ್‌ಎನ್‌ಜೆಪಿಯ ವೈದ್ಯಕೀಯ ಅಧೀಕ್ಷಕ ಡಾ.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಎಲ್‌ಎನ್‌ಜೆಪಿ ಆಸ್ಪತ್ರೆಯ ಅಧಿಕೃತ ಹೇಳಿಕೆಯ ಪ್ರಕಾರ, “ಅವರು 3.6.2020 ರಂದು ಸೌಮ್ಯವಾಗಿ ರೋಗಲಕ್ಷಣಗಳನ್ನು ಹೊಂದಿದ್ದಾಗ ಕೊರೊನಾ ಪಾಸಿಟಿವ್ ಆಗಿದ್ದರು. ಅದಕ್ಕಾಗಿ ಅವರನ್ನು ಸಂಪರ್ಕತಡೆ ಸೌಲಭ್ಯಕ್ಕೆ ವರ್ಗಾಯಿಸಲಾಯಿತು. 7.6.2020 ರಂದು ಅವರ ರೋಗಲಕ್ಷಣಗಳು ಉಲ್ಬಣಗೊಂಡವು ಮತ್ತು ಅವರನ್ನು ಲೋಕ ನಾಯಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಯಿತು. ನಂತರ ಅವರ ಕೋರಿಕೆಯ ಮೇರೆಗೆ ಅವರನ್ನು 8.6.2020 ರಂದು ಸಾಕೇಟ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಕ್ಕಿಂತಲೂ ಮುಂಚೆ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ, ಇಬ್ಬರು ಆರೋಗ್ಯ ಕಾರ್ಯಕರ್ತರು, ಒಬ್ಬ ಲ್ಯಾಬ್ ತಂತ್ರಜ್ಞ ಮತ್ತು ಒಬ್ಬ ಸಿಬ್ಬಂದಿ ಸೇರಿದಂತೆ ಒಟ್ಟು ನಾಲ್ಕು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಆಸ್ಪತ್ರೆಯು ಈವರೆಗೆ ತನ್ನ 72 ಸದಸ್ಯರನ್ನು ಕೊರೊನಾ ಪಾಸಿಟಿವ್ ಎಂದು ವರದಿ ಮಾಡಿದೆ ಎಂದು ಜೂನ್ 16 ರಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.
ವರದಿಗಳ ಪ್ರಕಾರ, ಮಾರ್ಚ್‌ನಿಂದ ದೆಹಲಿಯಾದ್ಯಂತ 1,200 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ಪಾಸಿಟಿವ್ ಆಗಿದ್ದಾರೆ.
ಓದಿ: ಹೈದರಾಬಾದ್‌ನಲ್ಲಿ ಕೊರೊನಾ ರೋಗಿಗಳು ಹಾಸಿಗೆ ಸಿಗದೆ ರಸ್ತೆಯಲ್ಲಿದ್ದಾರೆಯೆ?;ಫ್ಯಾಕ್ಟ್‌ಚೆಕ್.


