ತಮಿಳುನಾಡಿನ ಪೊಲೀಸ್‌ ದೌರ್ಜನ್ಯಕ್ಕೆ ಮತ್ತೊಬ್ಬ ಆಟೋ ಡ್ರೈವರ್ ಬಲಿ: ಪ್ರತಿಭಟನೆ

ಸಾವಿನ ವಿಷಯ ತಿಳಿಯುತ್ತಿದ್ದಲೇ ಸಂತ್ರಸ್ತನ ಸ್ನೇಹಿತರು ಮತ್ತು ಸಂಬಂಧಿಗಳು ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳಾದ ಎಸ್‌ಯ ಚಂದ್ರಶೇಖರ್ ಮತ್ತು ಕಾನ್ಸ್‌ಟೇಬಲ್ ಮೇಲೆ ಕೊಲೆ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ.

1

ಲಾಕ್‌ಡೌನ್‌ ಸಮಯದಲ್ಲಿ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಪೊಲೀಸರು ತಂದೆ-ಮಗನನ್ನು ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಪೊಲೀಸ್‌ ದೌರ್ಜನ್ಯಕ್ಕೆ ತುತ್ತಾಗಿ 25 ವರ್ಷದ ಯುವಕನೊಬ್ಬ ಸಾವನಪ್ಪಿರುವ ದುರ್ಘಟನೆ ಜರುಗಿದೆ.

ತೆಂಕಾಸಿ ಜಿಲ್ಲೆಯ ಆಟೋಡ್ರೈವರ್ ಈ ಶನಿವಾರ ಮೃತಪಟ್ಟಿದ್ದು, ಅವರು 48 ದಿನಗಳ ಮೊದಲು ಇಬ್ಬರು ಪೊಲೀಸರಿಂದ ತೀವ್ರ ಹಲ್ಲೆಗೆ ಒಳಗಾಗಿ ಒಳ ಗಾಯಗಳು, ರಕ್ತಸ್ರಾವದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಹತ್ಯೆಗೊಳಗಾದ ವ್ಯಕ್ತಿಯ ತಂದೆ ನೀಡಿದ ದೂರಿನ ಪ್ರಕಾರ “ಎನ್ ಕುಮರೇಶನ್ ಎಂಬ ಆಟೋ ಡ್ರೈವರ್‌ ಮೇಲೆ ವೀರಕೇರಳಂಪುದುರ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮತ್ತು ಕಾನ್ಸ್‌ಟೇಬಲ್ ಕುಮಾರ್ ಎಂಬುವವರು ತೀವ್ರ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಸಿಆರ್‌ಪಿಸಿ 174(3)ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತನ ತಂದೆ ನವನೀತಕೃಷ್ಣನ್ ಮಾತನಾಡಿ “ಕುಮರೇಶನ್‌ಗೆ ಸೆಂಥಿಲ್ ಎಂಬುವವರ ಜೊತೆ ಆಸ್ತಿ ವಿಚಾರಕ್ಕೆ ವಿವಾದವುಂಟಾಗಿತ್ತು. ಈ ವಿಚಾರವಾಗಿ ಸೆಂಥಿಲ್ ನೀಡಿದ ದೂರಿನ ಆಧಾರದಲ್ಲಿ ವೀರಕೇರಳಂಪುದುರ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಕುಮರೇಶನ್‌ನನ್ನು ಮೇ 08ರಂದು ಠಾಣೆಗೆ ಕರೆಸಿಕೊಂಡು ಥಳಿಸಿದ್ದಾರೆ. ಅದನ್ನು ನಾವು ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಮತ್ತಷ್ಟು ಥಳಿಸಿದ್ದಾರೆ” ಎಂದು ದೂರಿದ್ದಾರೆ.

ಮೇ 09ರ ಮಧ್ಯಾಹ್ನ ಆಟೋ ಸ್ಟ್ಯಾಂಡ್‌ನಲ್ಲಿದ್ದ ಕುಮರೇಶನ್‌ನನ್ನು ಮತ್ತೆ ಸಬ್‌ ಇನ್ಸ್‌ಪೆಕ್ಟರ್‌ ಕರಸಿಕೊಂಡಿದ್ದಾರೆ. ಅಲ್ಲಿ ಮಾತಿಗೆ ಮಾತು ಬೆಳೆದು ವಿವಾದವಾಗಿದೆ. ನನ್ನ ಮಗ ಕುಮರೇಶನ್ ನಾನು ಕೂಡ ನಿಮ್ಮಂತೆಯೇ ಖಾಕಿ ಧರಿಸಿದ್ದೇನೆ ಎಂದಿದ್ದರಿಂದ ಕೋಪಗೊಂಡ ಎಸ್‌ಐ ಮೊಬೈಲ್ ಕಿತ್ತುಕೊಂಡು ಕಳಿಸಿದ್ದಾರೆ. ಈ ಕುರಿತು ಮೇ 10ರಂದು ಪೊಲೀಸ್‌ ಠಾಣೆಗೆ ಹೋದ ಕುಮರೇಶನ್ ಮೇಲೆ ಎಸ್‌ಐ ಮತ್ತು ಕಾನ್ಸ್‌ಟೇಬಲ್‌ ಕ್ರೂರವಾಗಿ ಥಳಿಸಿದ್ದಾರೆ. ಆತನನ್ನು ಮೊಣಕಾಲ ಮೇಲೆ ಕುಳ್ಳಿರಿಸಿ ಒದ್ದಿದ್ದಾರೆ ಎಂದು ನವನೀತಕೃಷ್ಣನ್ ಆರೋಪಿಸಿದ್ದಾರೆ.

ಆನಂತರ ಕುಮರೇಶನ್‌ನನ್ನು ಮನೆಗೆ ಕಳುಹಿಸಲಾಯಿತಾದರೂ ಹಲ್ಲೆಯ ಕುರಿತು ಎಲ್ಲಾದರೂ ಬಾಯಿಬಿಟ್ಟರೆ ಅಪ್ಪ ಮಗನ ವಿರುದ್ಧ ತೀವ್ರ ಕೇಸ್‌ಗಳನ್ನು ಹಾಕಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಇದರಿಂದ ಕುಮರೇಶನ್ ತನ್ನ ಕುಟುಂಬ ಸೇರಿದಂತೆ‌ ಎಲ್ಲಿಯೂ ಸಹ ಹೇಳಿಕೊಂಡಿಲ್ಲ. ಆದರೆ  ದಿನೇ ದಿನೇ ಆತ ಊಟ ಮಾಡುವುದು ಕಡಿಮೆಯಾಗುತ್ತಾ, ವಾಂತಿ ಶುರುವಾಗಿದೆ. ಕೆಲವೊಮ್ಮೆ ರಕ್ತವಾಂತಿಯಾಗುತ್ತಿತ್ತು ಎಂದು ಅವರ ತಂದೆ ಹೇಳಿದ್ದಾರೆ.

ಜೂನ್ 10ರಂದು ಕುಮರೇಶನ್‌ ರಕ್ತವಾಂತಿ ಮಾಡಿಕೊಂಡಿದ್ದಲ್ಲದೇ ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ಆಗ ಆತನನ್ನು ಆಸ್ಪತ್ತೆಗೆ ದಾಖಲು ಮಾಡಿದ್ದು ಅಲ್ಲಿಯೂ ಸಹ ಆತ ತನ್ನ ಮೇಲಾದ ಹಲ್ಲೆಯ ಕುರಿತು ಮಾಹಿತಿ ನೀಡಿಲ್ಲ. ಆದರೆ ಮೂರು ದಿನಗಳ ನಂತರ ಆತನ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಾಗ ಅವರನ್ನು ತಿರುನೆಲ್ವೆಲಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.

ಅಲ್ಲಿ ವೈದ್ಯರು ಚಿಕಿತ್ಸೆ ನೀಡುವ ವೇಳೆ ಒಳಗಾಯಗಳು, ಕರುಳು, ಕಿಡ್ನಿಗೆ ತೊಂದರೆ ಮತ್ತು ರಕ್ತಸ್ರಾವ ಉಂಟಾಗಿರುವುದಾಗಿ ತಿಳಿಸಿದ್ದಾರೆ. ಆಗ ಕುಮರೇಶನ್ ತನ್ನ ಮೇಲಾದ ಪೊಲೀಸ್‌ ಹಲ್ಲೆಯ ಕುರಿತು ಬಾಯ್ಬಿಟ್ಟಿದ್ದಾನೆ ಎಂದು ಅವರ ತಂದೆ ತಿಳಿಸಿದ್ದಾರೆ. ಆನಂತರ ಪೊಲೀಸರು ಬಂದು ದೂರು ದಾಖಲಿಸಿಕೊಂಡಿದ್ದರು ಸಹ ಕ್ರೂರ ಹಲ್ಲೆಯ ಕುರಿತು ಯಾವುದೇ ಹೇಳಿಕೆ ಪಡೆದಿಲ್ಲ ಎಂದು ಅವರ ತಂದೆ ದೂರಿದ್ದಾರೆ.

ಆನಂತರ ನವನೀತಕೃಷ್ಣನ್ ತೆಂಕಾಸಿ ಎಸ್‌ಪಿ ಸುಗಣ ಸಿಂಗ್ ಬಳಿ ದೂರು ದಾಖಲಿಸಿದ್ದಾರೆ. ಆದರೆ ಆರೋಪಿ ಪೊಲೀಸರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆಸ್ಪತ್ರೆಗೆ ದಾಖಲಿಸಿದ 16 ದಿನದ ನಂತರ ನಮ್ಮ ಮಗ ಸಾವನಪ್ಪಿದ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಸಾವಿನ ವಿಷಯ ತಿಳಿಯುತ್ತಿದ್ದಲೇ ಸಂತ್ರಸ್ತನ ಸ್ನೇಹಿತರು ಮತ್ತು ಸಂಬಂಧಿಗಳು ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳಾದ ಎಸ್‌ಯ ಚಂದ್ರಶೇಖರ್ ಮತ್ತು ಕಾನ್ಸ್‌ಟೇಬಲ್ ಮೇಲೆ ಕೊಲೆ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಆನಂತರ ಪೊಲೀಸರು ಅನುಮಾನಸ್ಪದ ಸಾವಿನ ದೂರು ದಾಖಲಿಸಿಕೊಂಡಿದ್ದಾರೆ.

ಮೃತನ ಮರಣೋತ್ತರ ಪರೀಕ್ಷೆಯನ್ನು ತಿರುನೆಲ್ವೆಲಿ ಮೆಡಿಕಲ್ ಕಾಲೇಜಿನಲ್ಲಿ ಭಾನುವಾರ ನಡೆಸಿದ್ದು ಅದನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಸುರಕ್ಷಿತವಾಗಿವೆ ಎಂದು ಎಸ್‌ಪಿ ತಿಳಿಸಿದ್ದಾರೆ.


ತಮಿಳುನಾಡು ಲಾಕಪ್‌ ಸಾವು: ಪೊಲೀಸರ ಹಲ್ಲೆಗೆ ಸಿಕ್ಕಿವೆ ಹತ್ತಾರು ದಾಖಲೆಗಳು

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

LEAVE A REPLY

Please enter your comment!
Please enter your name here