ಬ್ರಿಟನ್‌ನ ಭಾರತೀಯರು ಅಥವಾ ಆ ದೇಶದಲ್ಲಿ ನೆಲೆಸಿರುವ ಭಾರತೀಯರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.52ರಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಯತೆಯನ್ನು ರಕ್ಷಿಸಲು ಪ್ರಯತ್ನಿಸುವ ಸಮುದಾಯ ನೇತೃತ್ವದ ಸಂಸ್ಥೆ ಎಂದು ಗುರುತಿಸಿಕೊಂಡಿರುವ ‘ಪ್ಲಾಟ್‌ಫಾರ್ಮ್ ಫಾರ್ ಇಂಡಿಯನ್ ಡೆಮಾಕ್ರಸಿ’ ಬ್ರಿಟಿಷ್ ಭಾರತೀಯರಾದ 500 ಜನರ ಮೇಲೆ ಬ್ರಿಟನ್‌ನಲ್ಲಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಗೆ ಒಳಗಾದವರಲ್ಲಿ ಶೇಕಡಾ 50ರಷ್ಟು ಹಿಂದೂಗಳು ಹಿಂದುತ್ವ ತತ್ವಗಳನ್ನು ತಿರಸ್ಕರಿಸಿದ್ದಾರೆ.
ಶೇ.50ರಷ್ಟು ಮಹಿಳೆಯರು ಮತ್ತು ಶೇ.50ರಷ್ಟು ಪುರುಷರ ಮೇಲೆ ಸಮೀಕ್ಷೇ ನಡೆಸಲಾಗಿದೆ. ಈ ಸಮೀಕ್ಷೆಗೆ ಒಳಗಾದವರಲ್ಲಿ 18 ರಿಂದ 44 ವರ್ಷ ವಯಸ್ಸಿನವರು 57%, ಹಿಂದೂಗಳು 43%, ಪದವೀದರರು 62% ಮತ್ತು ಬ್ರಿಟನ್‌ನಿಂದ ಹೊರಗೆ ಜನಿಸಿದವರು 56% ಇದ್ದಾರೆ.
ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಅರ್ಧದಷ್ಟು ಜನರು ನಾಲ್ಕು ವರ್ಷಗಳವರೆಗೆ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದರೆ, ಉಳಿದ ಅರ್ಧದಷ್ಟು ಜನರು ಕನಿಷ್ಠ ಐದು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ.
ಒಟ್ಟು ಪ್ರತಿಕ್ರಿಯಿಸಿದವರಲ್ಲಿ 35 ಶೇ. ಜನರು ಮೋದಿಯವರ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಶೇ.52ರಷ್ಟು ಜನರು ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಹಿಂದೂಗಳಲ್ಲಿ, ಶೇ.57ರಷ್ಟು ಜನರು ಭಾರತದ ಪ್ರಧಾನಿಯ ಪರ ಒಲವು ತೋರಿದ್ದಾರೆ, ಆದರೆ ಶೇ. 71ರಷ್ಟು ಹಿಂದೂಯೇತರರು ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಭಾರತದಲ್ಲಿ ಜನಿಸಿದವರು, ವಯಸ್ಸಾದವರು ಮತ್ತು ಇಂಗ್ಲಿಷ್ ಮಾತನಾಡಲು ಬಾರದ ಮನೆಯಲ್ಲಿರುವವರು ಮೋದಿಯವರ ಬಗ್ಗೆ ಹೆಚ್ಚು ಒಲವು ತೋರಿದ್ದಾರೆ ಎಂದು ಪ್ಲಾಟ್‌ಫಾರ್ಮ್ ಫಾರ್ ಇಂಡಿಯನ್ ಡೆಮಾಕ್ರಸಿ ಪ್ರಕಟಣೆಯಲ್ಲಿ ಹೇಳಿದೆ.
ಪುರುಷರಿಗಿಂತ ಹೆಚ್ಚು ಶೇ.34ರಷ್ಟು ಮಹಿಳೆಯರು ಮೋದಿಯವರ ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.28ರಷ್ಟು ಪುರುಷರು ಮೋದಿ ಪರ ಮಾತನಾಡಿದ್ದಾರೆ.
ಭಾರತದ ಪಥ (ಭಾರತ ಮುನ್ನಡೆಯುತ್ತಿರುವ ಹಾದಿ)ದ ಬಗ್ಗೆ ಕೇಳಿದಾಗ, ಶೇ. 68ರಷ್ಟು ಹಿಂದೂಗಳು ಭಾರತವು ಸರಿಯಾದ ಹಾದಿಯಲ್ಲಿದೆ ಎಂದು ಹೇಳಿದ್ದಾರೆ. ಆದರೆ, ಶೇ. 73ರಷ್ಟು ಹಿಂದೂಯೇತರರು ಮತ್ತು ಶೇ. 81ರಷ್ಟು ಮುಸ್ಲಿಮರು ಇದನ್ನು ಒಪ್ಪಿಲ್ಲ.
ಸಮೀಕ್ಷೆಯ ಸಾರಾಂಶವು, ಉತ್ತರಿಸಿದ ಬಹುಪಾಲು ಜನರು “ಮೋದಿಯಿಂದ ಪ್ರಚಾರಗೊಂಡ ಧಾರ್ಮಿಕ ಹಿಂಸಾಚಾರವು ಬ್ರಿಟನ್‌ಗೆ ವ್ಯಾಪಿಸುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ. ಪ್ರತಿಕ್ರಿಯಿಸಿದವರಲ್ಲಿ ಅರ್ಧದಷ್ಟು ಹಿಂದೂಗಳು, ಅಂದರೆ ಶೇ. 65ರಷ್ಟು ಜನರು ಸಂಬಂಧಿತ ಘಟನೆಗಳಿಗೆ ಮೋದಿಯನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಇನ್ನು ಈ ಕುರಿತು ಶೇ.65ರಷ್ಟು ಜನರು 1ರಿಂದ 10ರೊಳಗಿನ ರೇಟಿಂಗ್ಸ್‌ನಲ್ಲಿ 8 ರೇಟಿಂಗ್ ನೀಡಿದ್ದಾರೆ. ಇದು ಗಂಭೀರ ಕಳವಳವನ್ನು ಸೂಚಿಸುತ್ತದೆ. 2022ರಲ್ಲಿ ಲೀಸೆಸ್ಟರ್‌ನಲ್ಲಿ ಹಿಂದೂ-ಮುಸ್ಲಿಮರ ನಡುವೆ ನಡೆದ ಹಿಂಸಾಚಾರವನ್ನು ಹೆಚ್ಚಿನ ಜನರು ಉಲ್ಲೇಖಿಸಿದ್ದಾರೆ.
ಈ ಸಮೀಕ್ಷೆಯು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಕಾರ್ಯಸೂಚಿಯನ್ನು ಇಡೀ ಬ್ರಿಟಿಷ್ ಭಾರತೀಯ ಸಮುದಾಯ ಬೆಂಬಲಿಸುತ್ತಿದೆ ಎಂಬ ಚಾಲ್ತಿಯಲ್ಲಿರುವ ನಂಬಿಕೆಯನ್ನು ಸುಳ್ಳಾಗಿಸಿದೆ ಎಂದು ಪ್ಲಾಟ್‌ಫಾರ್ಮ್ ಫಾರ್ ಇಂಡಿಯನ್ ಡೆಮಾಕ್ರಸಿ ಹೇಳಿದೆ.
ಹಿಂದುತ್ವದ ಬಗೆಗಿನ ಧೋರಣೆಗಳು ಮತ್ತು ಭಾರತದ ಬಗ್ಗೆ ಕಾಳಜಿ
ಶೇ. 50ರಷ್ಟು ಹಿಂದೂ ಪ್ರತಿಕ್ರಿಯಿಸಿದವರು ಸೇರಿದಂತೆ ಬಹುಪಾಲು ಪ್ರತಿಕ್ರಿಯಿಸಿದವರು ತಾವು ಹಿಂದುತ್ವದೊಂದಿಗೆ ಗುರುತಿಸಿಕೊಂಡಿಲ್ಲ ಎಂದು ತಿಳಿಸಿರುವುದಾಗಿ ಸಮೀಕ್ಷೆ ಹೇಳಿದೆ. ಹಿಂದುತ್ವದ ಕಡೆ ಒಲವು ಹೊಂದಿರುವವರಲ್ಲಿ ಹೆಚ್ಚಿನವರು ಪುರುಷರು, ಅವರು ಜಾತಿ, ಅರೇಂಜ್ ಮ್ಯಾರೇಜ್, ಗೋಮಾಂಸ ನಿಷೇಧ ಇತ್ಯಾದಿ ವಿಚಾರಗಳಲ್ಲಿ ಹಿಂದುತ್ವದ ಕಡೆ ಒಲವು ತೋರಿಸಿದ್ದಾರೆ.
ಪ್ರತಿಕ್ರಿಯಿಸಿದವರಲ್ಲಿ ಮೋದಿ ಪರವಾಗಿ ಒಲವು ತೋರಿಸದವರು ‘ಧಾರ್ಮಿಕ ಉದ್ವಿಗ್ನತೆ ಮತ್ತು ಪ್ರಜಾಪ್ರಭುತ್ವದ ನಿರ್ಬಂಧಗಳು ಭಾರತ ಎದುರಿಸುತ್ತಿದೆ’ ಎಂದು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ : ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಸುಪ್ರೀಂ ತಡೆ


