Homeಮುಖಪುಟಹೊಸ ಅನುವಾದ; ಅನ್ನಾ ಅಖ್ಮತೋವಾರ ಶಾಂತಿಗೀತೆ

ಹೊಸ ಅನುವಾದ; ಅನ್ನಾ ಅಖ್ಮತೋವಾರ ಶಾಂತಿಗೀತೆ

- Advertisement -
- Advertisement -

ಅನ್ನಾ ಅಖ್ಮತೋವಾ: ಸಂಕ್ಷಿಪ್ತ ಜೀವನ ಚಿತ್ರ

ಅನ್ನಾ ಅಖ್ಮತೋವಾ ಹುಟ್ಟಿದ್ದು ಜೂನ್ 23, 1899, ಉಕ್ರೇನ್‌ನ ಒಡೆಸ್ಸಾದಲ್ಲಿ. ಆಕೆಯ ತಂದೆ ಆಂದ್ರೆ ಗೊರೆನ್ಕೋ ನೌಕಾಪಡೆಯಲ್ಲಿ ಇಂಜಿನಿಯರ್; ಆಕೆಯ ತಾಯಿ ಇನ್ನಾ ಎರಾಝ್ಮೋವಾ ರಶಿಯನ್ ಉನ್ನತವರ್ಗಕ್ಕೆ ಸೇರಿದ ಮಹಿಳೆ. ಗೊರೆನ್ಕೋನ ಗೆಳೆಯನೊಬ್ಬ ಸಂಚಿನಲ್ಲಿ ಭಾಗಿಯಾಗಿದ್ದ; ಆ ಕಾರಣಕ್ಕೆ ಗೊರೆನ್ಕೋನ ಕೆಲಸ ಹೋಯಿತು. ಆತ ಬೇರೊಂದು ಕೆಲಸ ಹಿಡಿದು ಪೀಟರ್ಸ್‌ಬರ್ಗ್‌ನ ಹೊರವಲಯದ ತ್ಸಾರ್‌ಸ್ಕೋಯೆ ಸೆಲೋ (ಚಕ್ರವರ್ತಿಯ ಹಳ್ಳಿ)ಗೆ ಬಂದು ನೆಲೆಸಿದ. ಅದು ಮಹಾನ್ ಲೇಖಕ ಪುಷ್ಕಿನ್ ಕೂಡ ಹುಟ್ಟಿ ಬೆಳೆದಿದ್ದ ಊರು. ಅಲ್ಲಿರುವಾಗ ಅನ್ನಾ ಅಖ್ಮತೋವಾ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಕವಿತೆ ಬರೆದಳು. ಕವಿತೆಯ ರಚನೆ ತಮ್ಮ ಅಂತಸ್ತಿಗೆ ತಕ್ಕುದಲ್ಲವೆಂಬುದು ಅವಳಪ್ಪನ ನಿಲುವು. ಅನ್ನಾ ತನ್ನ ಕುಟುಂಬದ ಹೆಸರಾದ ’ಗೊರೆನ್ಕೋ’ ಅನ್ನುವುದನ್ನು ಕೈಬಿಟ್ಟು ತನ್ನ ತಾಯಿಯ ಕುಟುಂಬದ ಹೆಸರನ್ನು ತನ್ನದು ಮಾಡಿಕೊಂಡಳು, ಆಕೆ ಅಖ್ಮತ್ ಖಾನ್‌ನ ವಂಶದವಳು; ಅಖ್ಮತ್ ಮಂಗೋಲರ ಛೆಂಗಿಸ್ ಖಾನ್‌ನ ವಂಶದ ಕೊನೆಯ ಪ್ರಮುಖ ರಾಜ. ತಾನು ಆ ವಂಶದವಳೆಂದು ಅನ್ನಾ ಅಖ್ಮತೋವಾ ತನ್ನ ಹೆಸರಿನ ಮೂಲಕ ತೋರ್ಪಡಿಸಿಕೊಂಡಳು. ಅವಳ ಅಪ್ಪ ಅಮ್ಮ 1905ರಲ್ಲಿ ವಿಚ್ಛೇದನ ಪಡೆಯುವವರೆಗೆ ಅನ್ನಾ ಅಖ್ಮತೋವಾ ತ್ಸಾರ್‌ಸ್ಕೋಯೆಯಲ್ಲೇ ಇದ್ದಳು ಆನಂತರ ಕೀವ್‌ಗೆ ಹೋಗಿ ಅಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದಳು.

ಅಲ್ಲಿನ ಕಾನೂನು ಶಾಲೆಯಲ್ಲಿ ಓದುವಾಗ ಕವಿ ನಿಕೊಲಾಯ್ ಗುಮಿಲೆವ್ ಪರಿಚಯವಾಯಿತು. ಅವರಿಬ್ಬರೂ 1910ರಲ್ಲಿ ಮದುವೆಯಾದರು. ಮುಂದಿನ ಹತ್ತು ವರ್ಷಗಳಲ್ಲಿ ಆತನೇ ಆಕೆಯ ಕಾವ್ಯದ ಪ್ರಮುಖ ವಸ್ತುವಾಗಿದ್ದ. ಮದುವೆಯಾದ ಎರಡು ವರ್ಷಕ್ಕೆ ಮಗ ಲೆವ್ ಹುಟ್ಟಿದ. ಅದೇ ವರ್ಷ ಅವಳ ಮೊದಲ ಕವನ ಸಂಕಲನ ’ಸಂಜೆ’ ಪ್ರಕಟಗೊಂಡಿತು, ಜನಪ್ರಿಯ ಕವಿಯಾದಳು ಅಖ್ಮತೋವಾ. ಮುಂದೆ ಇನ್ನೆರಡೇ ವರ್ಷಕ್ಕೆ ’ಜಪಮಾಲೆ’ ಕವನ ಸಂಕಲನ ಪ್ರಕಟಿಸಿದಳು. ಇಷ್ಟು ಹೊತ್ತಿಗೆ ಅವಳನ್ನು ಅನುಕರಿಸಿ ಕವಿತೆ ರಚಿಸುವ ಪಂಥವೇ ರೂಪುಗೊಂಡಿತ್ತು. ಗ್ಯುಮಿಲೆವ್ 1913ರಲ್ಲಿ ಸೈನ್ಯಕ್ಕೆ ಸೇರಿದ, ಮುಂದೆ 1918ರಲ್ಲಿ ಅವನ ಮತ್ತು ಅನ್ನಾಳ ಮದುವೆ ಮುರಿದುಬಿತ್ತು; ವ್ಲಾಡಿಮಿರ್ ಶಿಲೆಯ್‌ಕೋನೊಂದಿಗೆ ವಿವಾಹ ಸಂಬಂಧ ಏರ್ಪಟ್ಟಿತು. ಆತ ಆಸ್ಸೀರಿಯನ್ ನಾಗರಿಕತೆಯ ವಿದ್ವಾಂಸ ಮತ್ತು ಕವಿ. ಅಕ್ಟೋಬರ್ ಕ್ರಾಂತಿಯ ನಂತರ ಅಖ್ಮತೋವ ಸಾಹಿತ್ಯವಲಯದಿಂದ ದೂರವಾದಳು. ಅವಳ ಮೊದಲ ಗಂಡ ಗ್ಯುಮಿಲೆವ್ ಕ್ರಾಂತಿ ವಿರೋಧಿ ಕೆಲಸದಲ್ಲಿ ತೊಡಗಿದ್ದನೆಂದು ಆರೋಪಿಸಿ ಅವನಿಗೆ ಮರಣದಂಡನೆಯಾಯಿತು. ನೋವು ಅನುಭವಿಸುತ್ತ ಅಖ್ಮತೋವ ಮತ್ತೆ ಅಂತರ್ಮುಖಿಯಾದಳು. ಪೀಟರ್ಸ್‌ಬರ್ಗ್ ನಗರದ ಚರಿತ್ರೆ, ಪ್ರಾಚೀನ ವಾಸ್ತುಶಿಲ್ಪ, ಪುಶ್ಕಿನ್ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಕೊಂಡಳು.

ನಿಕೊಲಾಯ್ ಗುಮಿಲೆವ್

ನಾಝೀಗಳು ಲೆನಿನ್‌ಗ್ರಾಡ್‌ಗೆ ಮುತ್ತಿಗೆ ಹಾಕಿದ್ದಾಗ ಅಖ್ಮತೋವ ತಾಷ್ಕೆಂಟ್‌ಗೆ ಸ್ಥಳಾಂತರಗೊಂಡಳು. ಅಲ್ಲಿ ಕುಟುಂಬದ ಹಳೆಯ ಗೆಳೆಯರೊಡನೆ ಇದ್ದಳು. ಲೆನಿನ್‌ಗ್ರಾಡ್ ಮುತ್ತಿಗೆಯ ಸಮಯದಲ್ಲಿ ಅನ್ನಾಳ ಕವಿತೆಯನ್ನು ಕೈಯಲ್ಲಿ ಪ್ರತಿಮಾಡಿಕೊಂಡು ಸೈನಿಕರು, ನಿರಾಶ್ರಿತರು, ನೋವಿಗೆ ಸಿಕ್ಕಿ ನರಳುವವರು ಓದಿ ಸಮಾಧಾನ ಪಡುತಿದ್ದರು. ವೈಯಕ್ತಿಕ ಸುಖ ದುಃಖಗಳ ಭಾವಗೀತೆ ಜನರಿಗೆ ನೆಮ್ಮದಿ ಕೊಟ್ಟಿತ್ತು. ಜೂನ್ 1944ರಲ್ಲಿ ಅಖ್ಮತೋವಾ ಲೆನಿನ್‌ಗ್ರಾಡ್‌ಗೆ ಮರಳಿದಳು. ಆಕೆ ಗ್ಯುಮಿಲೆವ್‌ನ ಪತ್ನಿಯಾಗಿದ್ದ ಕಾರಣ, ಆಕೆಯ ಕವಿತೆ ಸಮಾಜಮುಖಿಯಲ್ಲ ಎಂದು ಆರೋಪಿಸಿ 1925-40ರವರೆಗೆ ಬಹಿಷ್ಕಾರಕ್ಕೆ ಒಳಗಾಗಿತ್ತು. ಮುಂದೆ 1940ರ ದಶಕದ ಕೊನೆಯವರೆಗೂ ಸೊವಿಯತ್ ಗುಪ್ತಚರರ ಕಣ್ಗಾವಲಿನಲ್ಲೇ ಆಕೆ ಬದುಕಬೇಕಾಯಿತು. ಅವಳ ಮಗ ಲೆವ್ ದಸ್ತಗಿರಿಯಾದ; ಮಗನ ಬಿಡುಗಡೆಗೆಂದು ಅನ್ನಾ, ಸ್ಟಾಲಿನ್ ಪರವಾದ ಕವಿತೆಗಳನ್ನು ಬರೆದಳು. ಆದರೂ ಹದಿನೆಂಟು ವರ್ಷಕಾಲ ಸೆರೆಯಲ್ಲಿದ್ದ ಲೆವ್ ಬಿಡುಗಡೆಯಾದದ್ದು 1956ರಲ್ಲಿ. ಈ ವೇಳೆಗೆ ಅನ್ನಾಳ ಮೂರನೆಯ ಪತಿ ನಿಕೊಲಾಯ್ ಪುನಿನ್ ಬಂಧನಕ್ಕೆ ಒಳಗಾಗಿ ಸೈಬೀರಿಯದ ಸೆರೆಮನೆಯಲ್ಲಿ 1953ರಲ್ಲಿ ತೀರಿಕೊಂಡಿದ್ದ. ಸ್ಟಾಲಿನ್ ಜಾರಿಗೆ ತಂದಿದ್ದ ಶುದ್ಧೀಕರಣದ ತೀವ್ರತೆ ಎರಡನೆಯ ಮಹಾಯುದ್ಧದ ನಂತರ ಕಡಿಮೆಯಾಗಿ ಅಖ್ಮತೋವಳನ್ನು ಲೇಖಕರ ಸಂಘಕ್ಕೆ ಮತ್ತೆ ಸೇರಿಸಿಕೊಳ್ಳಲಾಯಿತು. ಅನ್ನಾ ಅಖ್ಮತೋವ ವಿಕ್ಟರ್ ಹ್ಯೂಗೋ, ರಬೀಂದ್ರನಾಥ ಠಾಕೂರ್, ಗಿಯಾಕೊಮೊ ಲಿಯೊಪಾರ್ಡಿಯರ ಕೃತಿಗಳನ್ನು ಅನುವಾದಿಸಿದಳು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು 1965ರಲ್ಲಿ ಆಕೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಅಖ್ಮತೋವ ತನ್ನ ಎಪ್ಪತ್ತೇಳನೆಯ ವಯಸ್ಸಿನಲ್ಲಿ, ಮಾರ್ಚ್ 5, 1966ರಂದು ಲೆನಿನ್‌ಗ್ರಾಡ್‌ನಲ್ಲಿ ತೀರಿಕೊಂಡಳು. ಆಕೆ ವಾಸವಾಗಿದ್ದ ಸೇಂಟ್‌ಪೀಟರ್ಸ್‌ಬರ್ಗಿನ ಫೌಂಟನ್ ಮನೆ ಈಗ ವಸ್ತುಸಂಗ್ರಹಾಲಯವಾಗಿದೆ. ಯುನೆಸ್ಕೋ 1989ನೆಯ ವರ್ಷವನ್ನು ಅನ್ನಾ ಅಖ್ಮತೋವಳ ಸ್ಮರಣೆಯ ವರ್ಷವೆಂದು ಘೋಷಿಸಿತು.

ಶಾಂತಿಗೀತೆ (ರಿಕ್ವಿಯಂ)

ಪರದೇಶದಾಕಾಶದ ನೆರಳಲ್ಲಲ್ಲ
ಪರರ ರಕ್ಷಣೆ ರೆಕ್ಕೆಯಾಸರೆಯಲ್ಲಲ್ಲ
ದುರದೃಷ್ಟದ ಪಾಲಾಗಿದ್ದ ನನ್ನ ದೇಶ
ಇದ್ದಲ್ಲೇ ನಾನೂ ಇದ್ದು ಹಂಚಿಕೊಂಡೆ
ನನ್ನವರ ಪಾಡು [1961]

ಪ್ರಸ್ತಾವನೆಯ ಬದಲಾಗಿ

ಯೆಝೋವ್‌ನ ಭೀತಿಯ ದಿನಗಳಲ್ಲಿ, ಲೆನಿನ್‌ಗ್ರಾಡಿನ ಸೆರೆಮನೆಯ ಮುಂದೆ ಕ್ಯೂನಲ್ಲಿ ನಿಂತು ಹದಿನೇಳು ತಿಂಗಳು ಕಳೆದಿದ್ದೆ. ಒಂದು ದಿನ ಯಾರೋ ನನ್ನ ಹೇಗೋ ’ಪತ್ತೆ’ ಹಚ್ಚಿದರು. ನನ್ನ ಹಿಂದೆ ನಿಂತಿದ್ದ ಹೆಂಗಸು, ಚಳಿಗೆ ಸಿಕ್ಕಿ ತುಟಿಯೆಲ್ಲ ನೀಲಿ ತಿರುಗಿದ್ದವಳು, ನನ್ನ ಹೆಸರು ಎಂದೂ ಕೇಳದಿದ್ದವಳು, ಮೂರ್ಛೆಯಿಂದ ಎದ್ದವಳ ಹಾಗೆ [ನಮ್ಮೆಲ್ಲರ ಸ್ಥಿತಿಯೂ ಹಾಗೇ ಇತ್ತು] ಮುಂದೆ ಬಗ್ಗಿ ಕಿವಿಯಲ್ಲಿ ಪಿಸುಗುಟ್ಟಿದಳು, [ಅಲ್ಲಿ ಎಲ್ಲರ ಮಾತೂ ಹಾಗೇ ಇತ್ತು]
’ಇದನ್ನೆಲ್ಲಾ ಹೇಳುವುದಕ್ಕೆ ಆಗುತ್ತದಾ?’
’ಹ್ಞೂಂ’
ಮುಖದ ಹಾಗೆ ಕಾಣುತಿದ್ದಲ್ಲಿ ನಗುವಿನಂಥದ್ದು ಏನೋ ತೇಲಿತು. [1957]

ಅರ್ಪಣೆ

ಈ ದುಃಖದೆದುರು ಬಂಡೆ ಬೆಟ್ಟವೂ ನಾಚಿ ತಲೆಬಾಗುವುದು
ಉಕ್ಕಿ ಹರಿಯುವ ನದಿಯೂ ಬತ್ತುವುದು
ಸಾವಿಗೆ ಕಾದು ನೋಯುತಿರುವ ಸೆರೆಯಾಳುಗಳಿರುವ
ಸೆರೆಮನೆಯ ಕಲ್ಲಿನ ಈ ಗೋಡೆ
’ಬಂದಿ-ಕುಳಿಗಳ’ ಬಾಗಿಲ ಈ ಬೀಗ ಮಾತ್ರ ಜಗ್ಗದು.

ಎಳೆ ಬಿಸಿಲ ಬೆಳಗು, ಸುಳಿವ ತಂಬೆಲರು
ಇದ್ದಾವು ಎಲ್ಲೋ ಯಾರ ಪಾಲಿಗೋ.
ಇಲ್ಲಿ ನಾವರಿಯೆವು ಮತ್ತೇನೂ–
ಪಹರೆಯವನ ಬೂಟಿನ ಸದ್ದಿನ ಭಾರ
ಬೀಗದೊಳಗೆ ತಿರುಗುವ ಬೀಗದ ಕೈಯ ಕೀಚು ದನಿ, ಇಷ್ಟೇ ಕೇಳುವುದು.
ಬೆಳಗಿನ ಜಾವ ಪ್ರಾರ್ಥನೆಗೆ ಏಳುವವರ ಹಾಗೆ ಎದ್ದು
ಜೀವಾದಿ ತುಂಬಿದ ಕಾಡಿನಂಥ ರಾಜಧಾನಿಯ ಬೀದಿಯಲ್ಲಿ ಸಾಗಿ
ಅರೆಸತ್ತ ಹೆಣಗಳ ಹಾಗೆ ಕ್ಯೂ ನಿಲ್ಲುತ್ತೇವೆ.
ಸೂರ್ಯ ಹುಟ್ಟುವುದೇ ಇಲ್ಲ, ನದಿಯ ಮೇಲಿನ ಮಂಜು ಕರಗುವುದೇ ಇಲ್ಲ
ದೂರದಲ್ಲಿ ಕೇಳುತ್ತಲೇ ಇರುವ ಭರವಸೆಯ ಹಾಡು ಹತ್ತಿರವಾಗುವುದೇ ಇಲ್ಲ.
ಫರ್ಮಾನು ಹೊರಬಿತ್ತು. ನಿಶ್ಯಬ್ದ ಸಂದಣಿಯಲ್ಲೊಂದು ಚಿಟ್ಟನೆ ಚೀರು
ಉಕ್ಕುಕ್ಕಿ ಹರಿಯುವ ಕಣ್ಣೀರು. ಮಿಡಿಯುವ ಅವಳೆದೆಯನ್ನ
ಯಾರೋ ಕಿತ್ತು ಎಸೆದ ಹಾಗೆ, ಚಪ್ಪಡಿ ಮೇಲೆ ಹಾಕಿ ಹೊಸಕಿದ ಹಾಗೆ.
ಆದರೂ ತಟ್ಟಾಡಿಕೊಂಡು ಏಳುತಾಳೆ,
ಒಬ್ಬಂಟಿ ತಟ್ಟಾಡುತ್ತ ನಡೆಯುತ್ತಾಳೆ.
ಎರಡು ವರ್ಷ ಈ ಸೈತಾನ ಲೋಕದಲ್ಲಿ
ಅಕಸ್ಮಾತ್ ಜೊತೆಗಿದ್ದ ಗೆಳೆಯರು ಎಲ್ಲಿ?
ಸೈಬೀರಿಯದ ಯಾವ ಬಿರುಗಾಳಿಗೆ ಎದೆಯೊಡ್ಡಿದ್ದಾರೆ?
ಗುಡಿ ಕಟ್ಟಿರುವ ಚಂದಿರನ ವರ್ತುಲದಲ್ಲಿ ಯಾವ ಶಕುನ ಕಂಡಿದ್ದಾರೆ?
ಅವರೊಬ್ಬೊಬ್ಬರಿಗೂ ಇಗೋ ನನ್ನ
ಅಳು-ಸಲಾಮು. [ಮಾರ್ಚ್, 1940)

ಪೀಠಿಕೆ

ಬಿಡುಗಡೆ ಸಿಕ್ಕಿತೆಂದು ಸಂತೋಷಪಡುತ್ತ
ಸತ್ತವರು ಮಾತ್ರ ನಗುವ ಹೊತ್ತು.
ಇಡೀ ಲೆನಿನ್‌ಗ್ರಾಡು ಬೇಡವಾದ ಭಾರದ ಹಾಗೆ
ಜೈಲುಗಳ ಸುತ್ತ ಕಿಕ್ಕಿರಿದು ನೆರೆದಿರುವ ಹೊತ್ತು.
ಹಿಂಸೆಯಿಂದ ಹುಚ್ಚರಾಗಿ ಸಾವಿಗೆ ಹೆಜ್ಜೆ ಹಾಕುತ್ತ
ಕೊನೆಯಿರದ ಸಾಲು ಸಾಲು ಸಾಗಿ ಸಾಗಿ ಬರುತ್ತ
ದನ ಸಾಗಿಸುವ ರೈಲುಬಂಡಿಗಳು
ಕೊನೆಯ ಸಿಳ್ಳೆ ವಿದಾಯ ಚೀರುತ್ತ
ದಟ್ಟ ಹೊಗೆ ಉಗುಳುತ್ತ
ನಮ್ಮೆಲ್ಲರ ತಲೆಯ ಮೇಲೆ ಮೃತ್ಯು ನಕ್ಷತ್ರ ಮಿನುಗಿವೆ,
ಮುಗ್ಧ ನಿರ್ದೋಷಿ ರಶಿಯದ ನೆಲದ ಮೇಲೆ
ರಕ್ತ ಮೆತ್ತಿದ ಪೊಲೀಸು ಬೂಟಿನ
ಕಡುಗಪ್ಪು ಪೊಲೀಸು ವ್ಯಾನಿನ ಗಾಲಿಯ ಗುರುತು ಮೂಡಿವೆ.

1

ಬೆಳಗಿನ ಜಾವ ನಿನ್ನ ಕರಕೊಂಡು ಹೋದರು.
ಹೆಣ ಹೊತ್ತವರ ಹಿಂದೆ ಹೋಗುವವಳ ಹಾಗೆ ನಾನೂ ನಡೆದೆ.
ಅರೆಗತ್ತಲು ಕೋಣೆಯಲ್ಲಿ ಮಕ್ಕಳು ಅತ್ತರು.
ಮೇರಿ ಮಾತೆಯ ಮುಂದಿನ ಮೇಣದಬತ್ತಿ ಅರುಗುತಿತ್ತು.
ವಿಗ್ರಹಕ್ಕಿತ್ತ ತಣ್ಣನೆ ಮುತ್ತು ನಿನ್ನ ತುಟಿಯ ಮೇಲಿತ್ತು.
ಹಣೆ ಬೆವರಿತ್ತು. ಮರೆಯಲಾರೆ, ಮರೆಯಲಾರೆ.
ದಂಗೆಯೆದ್ದವನನ್ನು ಕೆಂಪುಚೌಕದಲ್ಲಿ
ಚಕ್ರವರ್ತಿ ಸಾಯಿಸುವಾಗ
ಆಳುತಿದ್ದ ಹೆಂಡಿರ ಹಾಗೆ
ಗೋಳಾಡಿ ಆಳುವೆ. [1935]

2

ತಣ್ಣಗೆ ಹರಿದಿದೆ ಡಾನ್ ಹೊಳೆ
ಕತ್ತು ಸೊಟ್ಟ ಮಾಡಿ
ಮನೆ ಕಿಟಕಿಯಲ್ಲಿಣುಕಿದೆ
ಸೊಟ್ಟಟೊಪ್ಪಿ ಇಕ್ಕಿರುವ ಚಂದ್ರನ ಭೂತ.
ಇಗೋ ಇಲ್ಲಿ ಕಂಡಿದ್ದಾಳೆ ನೆರಳಿನಂಥ ಹೆಂಗಸು
ಪೂರಾ ಕಾಯಿಲೆಯವಳು,
ಪೂರಾ ಒಬ್ಬಂಟಿ.
ಗಂಡ ಸತ್ತಿದ್ದಾನೆ, ಮಗ ಜೈಲು ಸೇರಿದ್ದಾನೆ.
ಪ್ರಾರ್ಥನೆ ಮಾಡು, ಪ್ರಾರ್ಥನೆ ಮಾಡು ನನಗಾಗಿ.

3

ನಾನಲ್ಲ, ಈ ನರಳು ಬೇರೆ ಯಾರದೋ.
ಅಷ್ಟು ನೋವು ತಾಳಲಾರೆ.
ಹೊದಿಕೆ ಹೊದಿಸಿ.
ದೀಪ ಆರಿಸಿ.
ಕತ್ತಲೇ ಇರಲಿ.

4

ತ್ಸಾರ್‌ಸ್ಕೋಯೆ ಸೆಲೋದ ಮಗಳೇ,
ಕಿಲಕಿಲ ನಕ್ಕು ನಗಿಸಿ ಜನ ಮೆಚ್ಚಿದ್ದ ಮುದ್ದು ಪೋರೀ
ಭವಿಷ್ಯದ ಈ ಬದುಕಿನ ಈ ತಿರುವು
ನಿನಗೆ ಕಾಣಬೇಕಾಗಿತ್ತು.

ಈ ಕ್ರಾಸ್ ಜೇಲಿನ ಮುಂದೆ
ಹಿಂದೆ ಮುಂದೆ ಹಿಂದೆ ಮುಂದೆ ತುಯ್ಯುವ ಪೋಲಾರ್ ಮರದ ಅಡಿಯಲ್ಲಿ
ಕೈಯಲ್ಲಿ ಪೊಟ್ಟಣ ಗಟ್ಟಿ ಹಿಡಿದು, ಸಾಲಿನಲ್ಲಿ ಮುನ್ನೂರನೆಯವಳು,
ಕಣ್ಣಿನ ಬಿಸಿ ಕಂಬನಿ ಉದುರಿಸಿ ಹೊಸ ವರ್ಷದ ಹಿಮ ಸುಡುತಿರುವೆ,

ಅಷ್ಟೊಂದು ಜನರಿದ್ದರೂ
ಸದ್ದಿರದ ನಿಶ್ಯಬ್ದದಲ್ಲಿ
ಕೊನೆಗಾಣುತಿರುವ ನಿಷ್ಟಾಪಿ ಜನರ ಬದುಕು..

5

ಮನೆಗೆ ಬಾ, ಬಾ, ಮಗಾ,
ಬಾರೆಂದು ಗೋಳಿಟ್ಟು ಕರೆದಿರುವೆ
ಹದಿನೇಳು ತಿಂಗಳೂ.
ಕಟುಕರ ಕಾಲಿಗೆರಗಿ ನಿನಗಾಗಿ
ಭಯಪಟ್ಟು ಬೇಡಿರುವೆ.
ಸಕಲವೂ ನೆಲೆ ತಪ್ಪಿದೆ ಈ ಗೊಂದಲದಲ್ಲಿ.
ಈ ಮೋರೆ ಮೃಗದ್ದೋ ಮನುಷ್ಯನದೋ ಅರಿಯದಾಗಿದೆ.
ನಿನ್ನ ಮರಣಕ್ಕಿನ್ನೆಷ್ಟು ತಿಂಗಳೋ ತಿಳಿಯದಾಗಿದೆ.
ಕೊಲ್ಲುವರು ನಿನ್ನ.
ಧೂಳು ಹಿಡಿದ ಹೂವ ದಳ,
ತೆಳ್ಳನೆ ಗಾಳಿ ಬೀದಿಯಲ್ಲಿ ಮಾಯವಾಗುವ ಧೂಪ
ಆಗಸದಲ್ಲಿ ಧಗಧಗ ಉರಿಯುವ ಮೃತ್ಯು ನಕ್ಷತ್ರ.

6

ವಾರ, ವಾರ ಉರುಳಿ ಉರುಳಿ ಸಾಗಿವೆ.
ಏನಾಯಿತೋ ತಿಳಿದಿಲ್ಲ.
ಕಲ್ಲಿನ ಸೆರೆಮನೆಯಲ್ಲಿ ಬೇಸಗೆಯ ರಾತ್ರಿ ಹೇಗೆ ಕಾಣುವುದು ಮಗೂ?
ರಣಹದ್ದಿನ ಕಣ್ಣು ದುರುದುರು ದಿಟ್ಟಿಸುತ್ತ
ವರ್ಣಿಸುತ್ತವೆಯೇ ನಿನ್ನನ್ನು ಏರಿಸುವ ಎತ್ತರದ ಶಿಲುಬೆಯನ್ನು,
ಮೆಲ್ಲಮೆಲ್ಲಗೆ ಸಾವಧಾನ ಬರುವ ನಿನ್ನ ಸಾವನ್ನು? [1939 ಬೇಸಗೆ]

7

ಶಿಕ್ಷೆ

ಶಿಕ್ಷೆಯ ವಾಕ್ಯ ಬಿದ್ದಿದೆ ಇನ್ನೂ ಮಿಡಿಯುವ
ಎದೆಯ ಮೇಲೆ ಚಪ್ಪಡಿಯ ಹಾಗೆ.
ಆಶ್ಚರ್ಯವೇನಿಲ್ಲ, ಗೊತ್ತಾ,
ಸಿದ್ಧವಾಗಿದ್ದೆ ನಾನು, ನರಳಲಿಲ್ಲ.

ಎಷ್ಟೊಂದೆಲ್ಲ ಬಾಕಿ ಉಳಿದಿದೆ
ನೆನಪೆಲ್ಲ ನುಣ್ಣಗೆ ರುಬ್ಬಬೇಕು,
ಎದೆ ಕಲ್ಲುಮಾಡಿಕೊಳ್ಳಬೇಕು,
ಹೇಗೋ ಬದುಕಲು ಕಲಿಯಬೇಕು.

ಮುಚ್ಚಿರುವ ಕಿಟಕಿಯಾಚೆ ವಸಂತ ಸಡಗರ
ಯಾವತ್ತೋ ಕಂಡಿತ್ತು ಮನಸ್ಸು ಈ ಗಳಿಗೆ
ಸುಂದರ ದಿನದ ಥಳ ಥಳ
ಖಾಲಿ ಬಿದ್ದ ಬಿಕೋ ಮನೆ. [1939]

8

ಸಾವಿಗೆ

ಹೇಗಿದ್ದರೂ ಬಂದೇ ಬರುವೆ, ಬರಬಾರದೇಕೆ ಈ ಹೊತ್ತೇ?
ನೀನೇ ಬೇಕು, ಬಾ. ಸಾಕಾಗಿದೆ ಬದುಕು.
ದೀಪವಾರಿಸಿರುವೆ ಬಾಗಿಲು ತೆರೆದು ಕಾದಿರುವೆ
ಸಹಜ ಸರಳ ಬೆರಗೇ, ಬಾ.

ನಿನಗಿಷ್ಟಬಂದ ರೂಪ ತಳೆದು ಬಾ
ವಿಷದ ಅನಿಲವಾಗಿ ಅಪ್ಪಿಕೋ
ಕಳ್ಳನ ಹಾಗೆ ಬಂದು ಬೆನ್ನಿಗೆ ಚೂರಿ ಹಾಕು
ಸೋಂಕು ರೋಗದುಬ್ಬಸವಾಗಿ ಉಸಿರು ಹಿಸುಕು

ಎಲ್ಲರಿಗೂ ಗೊತ್ತಿರುವ ಕೇಳಲು
ಯಾರೂ ಇಷ್ಟವಿರದ ಕಥೆಯ
ನೀಲಿ ಟೊಪ್ಪಿಗೆಯ ಕಮಾಂಡರನಾಗಿ
ಬಿಳುಪೇರಿದ ಮುಖದ ಸೇವಕನೊಡನೆ ಬಾ.

ಹೇಗೆ ಬಂದರೂ ಸರಿಯೇ. ತೆವಳಿ ಸಾಗುವ
ತಣ್ಣನೆ ಯನಿಸೈ ಹೊಳೆಯ ಮೇಲೆ ಮಂಜು ಮುಸುಕಿದೆ
ಉತ್ತರದ ಚುಕ್ಕೆ ಮೇಲೇರಿ ಹೊಳೆದಿದೆ
ನೀಲಿ ಕಣ್ಣ ನಕ್ಷತ್ರದ ಹೊಳಪಿಗೆ ಭಯದ ಕತ್ತಲು ಬೆರೆತಿದೆ. [1939]

9

ಹುಚ್ಚು ಚಾಚಿರುವ ರೆಕ್ಕೆಯ ನೆರಳು
ನನ್ನ ಅರ್ಧಮನಸನ್ನು ಕವಿದಿದೆ
ಸಾವಿನ ಹೆಂಡ ಹೀರಿ ಗಂಟಲು ಉರಿದಿದೆ
ಕತ್ತಲ ದಾರಿಯಲ್ಲಿ ಸಾವಿನ ಗಿರಣಿ ಸದ್ದು ಕೇಳಿದೆ.
ಹೋರಾಡಿ ಫಲವಿಲ್ಲ, ಒಪ್ಪಿಸಬೇಕು ಗೆಲುವನ್ನು.
ಬದುಕು ಅರ್ಥವಿರದ ಜೋಕು.
ಎದೆಯ ಮುರುಕು ತುಣುಕು ಬಡಬಡಿಕೆ ಕೇಳಿಸಿದೆ ವಿಚಿತ್ರವಾಗಿ
ಯಾರದೋ ಮಾತಿನ ಹಾಗೆ.

ಬೇಡಿದರಿಲ್ಲ, ಕಾಡಿದರಿಲ್ಲ,
ನನ್ನದೇನೂ ನನ್ನೊಡನೆ
ಒಯ್ಯಲು ಸಾವು ಬಿಡುವುದಿಲ್ಲ.
ಬಿನ್ನಹಕ್ಕೆ ಬಾಯಿಲ್ಲ;

ಮಗನ ಭಯ ತುಂಬಿದ ಕಣ್ಣು
ಕೊನೆಯಿರದ ನೋವು ಸಹಿಸಿ ಕಲ್ಲಾದ ಮನಸು
ಪಹರೆಯವನ ಕಣ್ಗಾವಲಲ್ಲಿ ನಡೆದ ನಮ್ಮ ಭೇಟಿ
ಮೋಡ ಕವಿದ ದಿನ ಕಿವಿ ತುಂಬಿದ ಗುಡುಗಿನ ಸದ್ದು

ಅವನ ಕೈಯ ಶೀತಲ ಮಧುರ ಸ್ಪರ್ಶ
ನಿಂಬೆಗಿಡದ ಅಡಿಯ ತಳಮಳದ ನೆರಳು
ನನ್ನ ಸಮಾಧಾನಕ್ಕೆ ನುಡಿದ
ಯಾವುದೋ ದೂರ ದೇಶದಿಂದ ಕೇಳಿದ ಮಾತು.
[ಏನನ್ನೂ ಒಯ್ಯುವಂತಿಲ್ಲ ನನ್ನೊಡನೆ -1940]

10

ಶಿಲುಬೆಗೇರಿದ್ದು

ಮಣ್ಣಿಗಿಟ್ಟಿರುವ ನನಗಾಗಿ
ಅಳಬೇಡ, ಅಮ್ಮಾ.

1

ಶಿಲುಬೆಗೇರಿದ ಗಳಿಗೆಯ ಹಾಡಿ ಹರಸಿತು ದೇವತೆಗಳ ದಿವ್ಯಗಾನ.
ಉರಿಯಲೆಗಳೆದ್ದು ಬಾನ ಕಡಲು ತತ್ತರಗುಟ್ಟಿತು.
’ಏಕೆನ್ನ ಮರೆತೆ?’ ತಂದೆಯ ಕೇಳಿದ.
’ಅಳಬೇಡಮ್ಮ.’ ಎಂದು ತಾಯಿಗೆ ಅಂದ. [1940]

2

ಮ್ಯಾಗ್ದಲೀನ ಎದೆ ಬಡಿದುಕೊಂಡು ಅತ್ತಳು.
ಶಿಲೆಯಾಗಿ ನಿಂತವನು ಪ್ರಿಯಶಿಷ್ಯ.
ತಾಯ ಕಡೆಗೆ ಅರೆಕ್ಷಣವಾದರೂ ನೋಡಲಿಲ್ಲ ಯಾರೂ.
ನಿಶ್ಚಲ, ನಿಶ್ಯಬ್ದ ನಿಂತವಳ ನೋಡುವ ಧೈರ್ಯವಿರಲಿಲ್ಲ. [1943]

ಸಮಾರೋಪ

1

ಮುಖ ಕುಗ್ಗಿ, ಹಳ್ಳ ಬಿದ್ದು, ಮೂಳೆ ಕಾಣುವ ಹಾಗೆ ಕೆಡುವುವುದು ಗೊತ್ತಾಗಿದೆ.
ಕಣ್ಣಿನ ಗುಳಿಯಾಳದಿಂದ ಇಣುಕುವ ಭಯ ಗೊತ್ತಾಗಿದೆ.
ನೋವಿನ ಅಕ್ಷರದ ಸಹಿ ಕೆನ್ನೆ ಪುಟದ ಮೇಲೆ ಕಲೆಯಾಗುವ ಬಗೆ ಗೊತ್ತಾಗಿದೆ.
ಕಡುಗಪ್ಪು ಗುಂಗುರು ಕೂದಲು ಒಂದೇ ಇರುಳಲ್ಲಿ
ಬೆಳ್ಳಿ ಧೂಳು ಬೆರೆತ ಹಾಗೆ ಬಿಳಿಯಾಗುವುದು ಗೊತ್ತಾಗಿದೆ.
ಶರಣಾಗತ ತುಟಿಯ ಮೇಲೆ ನಗು ವಿಧೇಯವಾಗಿ ಒಣಗುವುದು
ಸಾವಿನ ಭಯ ತುಂಬುವ ಕ್ರೌರ್ಯದ ಶುಷ್ಕ ನಗು ಕೇಳಿದ್ದೇನೆ.
ದೇವರೇ, ನನಗಾಗಿ ಅಲ್ಲ ಈ ಪ್ರಾರ್ಥನೆ
ಸುಡುವ ಬೇಸಗೆಯಲ್ಲಿ ಕೊರೆಯುವ ಚಳಿಯಲ್ಲಿ
ಜೇಲಿನ ಕುರುಡು ಕೆಂಪು ಗೋಡೆಯುದ್ದಕ್ಕೂ
ಮಾತಿಲ್ಲದೆ ನಿಂತ ಎಲ್ಲರ ಪರವಾಗಿ ಈ ಬಿನ್ನಹ.

2

ಸತ್ತವರ ನೆನೆಯುವ ಹೊತ್ತು ಮತ್ತೆ ಬಂದಿದೆ
ನಿನ್ನ ನೋಡುವೆ, ಮುಟ್ಟುವ, ಕೇಳುವೆ.

ನಿಲ್ಲಲಾಗದವಳನ್ನು, ನೆಲಕ್ಕೆ ಕಾಲೂರಲಾಗದವಳನ್ನು

ಬಲವಂತವಾಗಿ ಎಳೆದೊಯ್ದು ಕಾಲ ಬರುವ ಮೊದಲೇ ಮಣ್ಣಿಗಿಟ್ಟವಳನ್ನು

ತಲೆ ಚಿಮ್ಮಿ ಕೂದಲು ಚದುರಿಸಿ, ’ಬಂದರೆ ಇಲ್ಲಿಗೆ
ಇರುತ್ತದೆ ಮನೆಯಲ್ಲಿದ್ದ ಹಾಗೇ’,
ಅನ್ನುತಿದ್ದವಳನ್ನು.

ಎಲ್ಲರನ್ನೂ ಹೆಸರಿಟ್ಟು ಕರೆದು ನೆನೆಯುವ ಆಸೆ.
ಬರೆದುಕೊಂಡ ಹೆಸರ ಪಟ್ಟಿ ಜಪ್ತಿಯಾಗಿದೆ.

ಕಿವಿಯಲ್ಲಳಿದ ನಿಮ್ಮ ಮಾತು ಬಳಸಿ
ಹಣಬಟ್ಟೆ ಇದನ್ನು ನೀಡಿದ್ದೇನೆ ನಿಮಗೆ.

ಎಲ್ಲೆಲ್ಲೂ ದಿನದಿನವೂ ನೆನೆದಿದ್ದೇನೆ ಅವರನ್ನು
ಪ್ರತಿ ದಿನದ ಹೊಸ ಭೀತಿ ಮರೆಮಾಡಿಲ್ಲ ಅವರ ನೆನಪನ್ನು.

ಹಿಂಸೆ ಕೊಟ್ಟರೂ ಬಾಯಿಗೆ ಬೀಗ ಹಾಕಿದರೂ
ನನ್ನ ಅಳು ಲಕ್ಷ ಜನರ ಅಳುವಾಗುವುದು ತಪ್ಪಲಾರದು.

ನನ್ನನ್ನು ನೆನೆವ ಹೊತ್ತು ಬಂದಾಗ ನೆನೆಯಲ್ಲಿ ಅವರು,
ನನ್ನ ಈ ನೆಲ ನನ್ನ ಪ್ರತಿಮೆ ನಿಲ್ಲಿಸಿದರೆ ನಿಲ್ಲಿಸಲಿ

ನಾನು ಹುಟ್ಟಿದೂರಿನ ಕಡಲ ದಂಡೆಯಲ್ಲಲ್ಲ.
ಆ ಊರಿಗೂ ನನಗೂ ಈಗ ಸಂಬಂಧವೇ ಇಲ್ಲ.

ತೃಪ್ತಿ ಇರದ ಆತ್ಮ ಅಲೆದಾಡುವ ತ್ಸಾರ್‌ಸ್ಕೋಯೆಯ
ಉದ್ಯಾನದ ಮರದ ಮೋಟಿನ ಪಕ್ಕದಲ್ಲೂ ಅಲ್ಲ

ಇಲ್ಲಿ, ಮುನ್ನೂರು ಗಂಟೆ ಹೊತ್ತು ನಿಂತು ಕಾದಿದ್ದ
ಚಿಲಕವೆಂದೂ ತೆಗೆಯದ, ಬಾಗಿಲೆಂದೂ ಅಲುಗದ ಸೆರೆಮನೆಯ ಮುಂದೆ.

ಮರಣ ತರುವ ಮರೆವಿನ ಸುಖದಲ್ಲೂ
ಪೊಲೀಸು ವ್ಯಾನಿನ ಸದ್ದು ಬಾಗಿಲು ಮುಚ್ಚುವ ಸದ್ದು,

ಮರೆವೆಗೆ ಸಂದೇನು ಎಂದು
ಗಾಯಗೊಂಡ ಮೃಗದಂಥ ಮುದುಕಿಯ ಅಳು.

ನನ್ನ ಕಿವಿಯಿಂದ ಮರೆಯಾಗದಿರಲೆಂದು ಇಲ್ಲಿರಲಿ ನನ್ನ ಪ್ರತಿಮೆ.
ಕಂಚಿನ ಪ್ರತಿಮೆಯ ತೊಯ್ದ ಹಿಮ ಬಿಂದು ಕಣ್ಣೀರಾಗಿ ಇಳಿಯಲಿ,

ಸೆರೆಮನೆಯ ಪಾರಿವಾಳ ನನಗಾಗಿ ಗುಬ್ಬಳಿಸಲಿ
ನೆವಾ ನದಿಯ ಮೇಲೆ ದೋಣಿಗಳು ಸದ್ದಿಲ್ಲದೆ ಸಾಗುತಿರಲಿ.

ಮಾರ್ಚ್, 1940

(ಕಿರು ಟಿಪ್ಪಣಿ: ಹಿರಿಯರಾದ ಶ್ರೀ ಶಾ ಬಾಲೂರಾವ್ ಅವರು ರಶಿಯನ್ ಕಲಿತು ನೇರವಾಗಿ ಅದೇ ಭಾಷೆಯಿಂದ 1991ರಲ್ಲಿ “ಆನಾ ಆಖ್ಮತೋವಾ- ’ರಿಕ್ವಿಯಂ’ ಮತ್ತಿತರ ನೂರು ಕವಿತೆಗಳು” ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಕವಿಯ ಬದುಕು ಮತ್ತು ಕಾಲವನ್ನು ಕುರಿತು ವಿಸ್ತೃತವಾದ ಪ್ರಸ್ತಾವನೆಯನ್ನೂ ಆ ಪುಸ್ತಕದಲ್ಲಿ ನೀಡಿದ್ದಾರೆ. ಅನ್ನಾ ಅಖ್ಮತೋವಾ ಕುರಿತು ತಿಳಿಯಲು ಕನ್ನಡದಲ್ಲಿರುವ ಮುಖ್ಯ ಆಕರ ಆ ಪುಸ್ತಕ ಅದು)

(ಅನ್ನಾ ಅಖ್ಮತೋವಾ ಅವರ ’ರಿಕ್ವಿಯಂ’ ಕವಿತೆಯನ್ನು ಓಎಲ್‌ಎನ್ ಅವರು ಹೊಸದಾಗಿ ಅನುವಾದಿಸಿ, ಅದಕ್ಕೆ ಪ್ರಸ್ತಾವನೆಯಾಗಿ ದೀರ್ಘ ಪ್ರಬಂಧವೊಂದನ್ನು ಬರೆದಿದ್ದಾರೆ. ಈ ಪ್ರಬಂಧವನ್ನು ಮುಂದಿನ ವಾರಗಳಲ್ಲಿ ಕಂತುಗಳಾಗಿ ಪ್ರಕಟಿಸಲಾಗುವುದು. ಮುಂದಿನ ವಾರ: ಶಾಂತಿಗೀತೆಗೊಂದು ಪ್ರವೇಶ)

ಪ್ರೊ. ಓ ಎಲ್ ನಾಗಭೂಷಣಸ್ವಾಮಿ

ಪ್ರೊ. ಓ ಎಲ್ ನಾಗಭೂಷಣಸ್ವಾಮಿ
ನಾಗಭೂಷಣಸ್ವಾಮಿ ಖ್ಯಾತ ಬರಹಗಾರರು. ’ನನ್ನ ಹಿಮಾಲಯ’, ’ಯುದ್ಧ ಮತ್ತು ಶಾಂತಿ’ (ವಾರ್ ಅಂಡ್ ಪೀಸ್), ನೆರೂಡ ನೆನಪುಗಳು (ಪಾಬ್ಲೋ ನೆರೂಡ ಆತ್ಮಕತೆ), ’ಬೆಂಕಿಗೆ ಬಿದ್ದ ಬಯಲು ಮತ್ತು ಪೆದ್ರೋ ಪರಾಮೋ’ (ಹ್ವಾನ್ ರುಲ್ಫೋನ ಕಥೆಗಳು ಮತ್ತು ಕಾದಂಬರಿ) ಅವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು. ’ಕ್ರೈಂ ಅಂಡ್ ಫನಿಶ್ಮೆಂಟ್’ ಅನುವಾದ ಪ್ರಕಟಣೆಗೆ ಸಿದ್ಧವಾಗಿದೆ.


ಇದನ್ನೂ ಓದಿ: ದಾಸ್ತಯೆವ್‌ಸ್ಕಿ 200; ಇಡೀ ಮನುಕುಲಕ್ಕೆ ಸಲ್ಲುವ ಕಥೆಗಳನ್ನು ರಚಿಸಿದ ಫ್ಯೊದೋರ್ ಮಿಖಾಯ್ಲೊವಿಚ್ ದಾಸ್ತಯೆವ್‌ಸ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...