ಗಾಝಾದಲ್ಲಿ ಇಸ್ರೇಲ್ ಹತ್ಯಾಕಾಂಡವನ್ನು ಮುಂದುವರಿಸಿದ್ದು, ಇದನ್ನು ಖಂಡಿಸಿ ಅಮೆರಿಕದಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರನ್ನು ಥಳಿಸಿ ಪೊಲೀಸರು ದೌರ್ಜನ್ಯ ನಡೆಸಿರುವ ಬಗ್ಗೆ ಅಲ್‌ಜಝೀರಾ ವರದಿ ಮಾಡಿದೆ.
ಗಾಝಾದಲ್ಲಿ ಹತ್ಯಾಕಾಂಡವನ್ನು ನಡೆಸಲು ಅಮೆರಿಕ ಇಸ್ರೇಲ್‌ಗೆ ಬೆನ್ನಿಗೆ ನಿಂತಿತ್ತು. ಇದನ್ನು ಅಮೆರಿಕದ ನಾಗರಿಕರು ವಿರೋಧಿಸುತ್ತಲೇ ಬಂದಿದ್ದರು, ಇಸ್ರೇಲ್‌ಗೆ ಯಾವುದೇ ಯುದ್ಧ ನೆರವನ್ನು ನೀಡದಂತೆ ಆಗ್ರಹಿಸಿದ್ದರು. ಆದರೆ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳ ಸಾಗಣೆಯನ್ನು ಅಮೆರಿಕ ನಿಲ್ಲಿಸಿಲ್ಲ. ಅಂತರಾಷ್ಟ್ರೀಯ ಖಂಡನೆಗಳ ಹೊರತಾಗಿಯೂ ಟ್ಯಾಂಕ್ ಶೆಲ್‌ಗಳನ್ನು ಒಳಗೊಂಡಂತೆ ಹೊಸ 1 ಬಿಲಿಯನ್ ಪ್ಯಾಕೇಜ್‌ನ್ನು ಅಮೆರಿಕ ಮುಂದುವರಿಸಿದೆ.
ಅಮೆರಿಕದ ನೈರುತ್ಯ ಬ್ರೂಕ್ಲಿನ್‌ನ ಬೇ ರಿಡ್ಜ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ನೈರುತ್ಯ ಬ್ರೂಕ್ಲಿನ್ ಪ್ಯಾಲೆಸ್ತೀನಿಯನ್ನರು ಮತ್ತು ಯೆಮೆನ್ ಮೂಲದ ಜನರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ವಾಸಿಸುವ ನೆಲೆಯಾಗಿದೆ. ಪ್ರತಿಭಟನಕಾರರು ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಈ ವೇಳೆ ನ್ಯೂಯಾರ್ಕ್ ಪೊಲೀಸರು ಬಂದು ಪ್ರತಿಭಟನಾಕಾರರನ್ನು ಥಳಿಸಿ ಬಂಧಿಸಿದ್ದಾರೆ. ಪ್ರತಿಭಟನಾಕಾರರನ್ನು ನೆಲಕ್ಕೆ ತಳ್ಳಿ ತಲೆಗೆ ಹಲ್ಲೆ ನಡೆಸಿ ಬಂಧಿಸಲಾಗಿದೆ ಎಂದು ಸ್ವತಂತ್ರ ಪತ್ರಕರ್ತರಾದ ಕೇಟೀ ಸ್ಮಿತ್ ತಿಳಿಸಿದ್ದಾರೆ.
ಸ್ಮಿತ್ ಸ್ಥಳೀಯ ಸಮುದಾಯದ ಪ್ರತಿಕ್ರಿಯೆಯನ್ನು “ಆಕ್ರೋಶ’ ಎಂದು ಬಣ್ಣಿಸಿದ್ದಾರೆ. ಬೇ ರಿಡ್ಜ್ ಪ್ರದೇಶ ಒಂದು ದಶಕದಿಂದ ಪ್ಯಾಲೆಸ್ತೀನ್ ಪರ ಮೆರವಣಿಗೆಗಳನ್ನು ನೋಡಿದೆ, ಆದರೆ ಪೊಲೀಸ್ ಈ ರೀತಿ ಎಂದಿಗೂ ಕ್ರೂರವಾಗಿ ನಡೆದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ನೂರಾರು ಜನರ ಗುಂಪಿನಿಂದ ಕನಿಷ್ಠ ಹನ್ನೆರಡು ಮಂದಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಈ ಕುರಿತ ವೈರಲ್ ವಿಡಿಯೋಗಳು ಪ್ರತಿಭಟನಾಕಾರರನ್ನು ಪೊಲೀಸರು ಎಳೆದುಕೊಂಡು ಹೋಗುವುದನ್ನು ತೋರಿಸಿದೆ. ಅವರಿಗೆ ಕೈಗೆ ಸಂಕೋಲೆಗಳನ್ನು ಹಾಕಲಾಗಿದೆ ಎನ್ನುವುದನ್ನು ತೋರಿಸಿದೆ.
ಮೇ ತಿಂಗಳ ಆರಂಭದಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ನಡೆದ ದಾಳಿ ಸೇರಿದಂತೆ ಗಾಝಾದ ಮೇಲಿನ ಯುದ್ಧವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ನಡೆದ ಪ್ರತಿಭಟನೆಗಳಲ್ಲಿ ಅಮೆರಿಕದ ಪೊಲೀಸರು ನೂರಾರು ಮಂದಿಯನ್ನು ಬಂಧಿಸಿದ್ದಾರೆ.
ಶನಿವಾರ ನೂರಾರು ಜನರ ಗುಂಪು ವಾಷಿಂಗ್ಟನ್‌ನಲ್ಲಿ ಮಳೆಯ ಮಧ್ಯೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಪ್ಯಾಲೆಸ್ತೀನ್ ಅಮೇರಿಕನ್ನರು ಮತ್ತು ಅವರು ಬೆಂಬಲಿಗರಾಗಿದ್ದರು. ಅವರು ‘ಫ್ರೀ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗುತ್ತಿದ್ದರು ಮತ್ತು ಯುಎಸ್ ಅಧ್ಯಕ್ಷ ಜೋ ಬಿಡೆನ್ ನರಮೇಧದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಘೋಷಣೆ ಕೂಗಿದ್ದಾರೆ.
ಅಮೆರಿಕನ್ ಮುಸ್ಲಿಂ ಫಾರ್ ಪ್ಯಾಲೆಸ್ತೀನ್ (AMP) ಸಂಘಟನೆಯ ಸದಸ್ಯ ಮೊಹಮದ್ ಹಬೆಹ್ ಮಾತನಾಡಿ, ನಾವು ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಬಗ್ಗೆ ಜನರಿಗೆ ಅರಿವು ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇಸ್ರೇಲ್ ಕಳೆದ 8 ತಿಂಗಳಿನಿಂದ ಗಾಝಾ ಮೇಲೆ ಆಕ್ರಮಣವನ್ನು ನಡೆಸುತ್ತಿದೆ. 35,000ಕ್ಕೂ ಅಧಿಕ ಮಂದಿ ಈ ವೇಳೆ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿ ರಫಾದ ನಿರಾಶ್ರಿತರ ಶಿಬಿರದಲ್ಲಿ ದಿನದೂಡುತ್ತಿದ್ದರು. ಆದರೆ ಇದೀಗ ಇಸ್ರೇಲ್ ರಫಾದ ಮೇಲೆ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಕಳೆದ ವಾರ ಇಸ್ರೇಲ್ ದಕ್ಷಿಣ ಗಾಝಾ ನಗರವಾದ ರಫಾ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಸುಮಾರು 8,00,000 ಪ್ಯಾಲೆಸ್ತೀನಿಯನ್ನರು ರಫಾದಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ನಿರಾಶ್ರಿತರಿಗಾಗಿ ನೆರವು ನೀಡುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿಯ ಮುಖ್ಯಸ್ಥ ಫಿಲಿಪ್ ಲಝಾರಿನಿ ಹೇಳಿದ್ದಾರೆ.
ಶನಿವಾರ ಗಾಝಾದಾದ್ಯಂತ ಇಸ್ರೇಲ್ ತನ್ನ ಆಕ್ರಮಣವನ್ನು ತೀವ್ರವಾಗಿ ಮುಂದುವರಿಸಿತ್ತು. ರಫಾ ಸೇರಿದಂತೆ ವಿವಿಧೆಡೆ ಇಸ್ರೇಲ್ ನಡೆಸಿದ ದಾಳಿಗೆ 12ಕ್ಕೂ ಅಧಿಕ ನಾಗರಿಕರ ಹತ್ಯೆ ನಡೆದಿದೆ. ಕಳೆದ 24 ಗಂಟೆಗಳಲ್ಲಿ 83 ಪ್ಯಾಲೆಸ್ತೀನ್ ನಾಗರಿಕರ ಹತ್ಯೆ ನಡೆದಿದೆ ಎಂದು ಗಾಝಾದ ಆರೋಗ್ಯ ಸಚಿವಾಲಯವು ತಿಳಿಸಿದೆ.
ಇದನ್ನು ಓದಿ: ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾ ಬಿಡುಗಡೆ; ಇನ್ನೆಷ್ಟು ಮಂದಿ ಜೈಲಿನಲ್ಲಿದ್ದಾರೆ?


