ಭಾರತ್ ಬಯೋಟೆಕ್ ಅಭಿವೃದ್ದಿಪಡಿಸುವ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ತಯಾರಿಕೆಯಲ್ಲಿ ನವಜಾತ ಕರುವಿನ ರಕ್ತದ್ರವ ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಗೌರವ್ ಪಾಂಡಿ ಆರೋಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಅವರು ಟ್ವಿಟರ್‌ನಲ್ಲಿ ಆರ್‌ಟಿಐ ಮಾಹಿತಿ ಆಧರಿಸಿದ ಪೋಸ್ಟ್ ಒಂದನ್ನು ಹಾಕಿದ್ದು, ಅದರಲ್ಲಿ ಕೊವಾಕ್ಸಿನ್ ತಯಾರಿಸಲು ಗೋವಿನ ರಕ್ತವನ್ನು ಬಳಸುತ್ತಾರೆ. ಇದು ಗೋವಧೆ ಎಂದು ಹೇಳಿದ ನಂತರ ಕೇಂದ್ರ ಸರ್ಕಾರ ಮತ್ತು ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಬಗ್ಗೆ ಸ್ಪಷ್ಟೀಕರಣವನ್ನು ನೀಡಿವೆ.
BJP Govt should NOT betray the faith & belief of people, if Covaxin or any other vaccine consists of cow-calf serum, then people have the right to know.
Vaccines are the life line today and everyone must get vaccinated (as & when available) keeping faiths & beliefs aside. ? pic.twitter.com/Khplk3iOb6
— Gaurav Pandhi (@GauravPandhi) June 16, 2021
“ಕೋವ್ಯಾಕ್ಸಿನ್ ಲಸಿಕೆಯ ಸಂಯೋಜನೆಗೆ ಸಂಬಂಧಿಸಿದಂತೆ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಬಂದಿವೆ, ಅಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ನವಜಾತ ಕರುವಿನ ರಕ್ತದ್ರವವನ್ನು (ಸೀರಮ್) ಬಳಸಲಾಗಿರುತ್ತದೆ ಎಂದು ಸೂಚಿಸಲಾಗಿದೆ. ಈ ಪೋಸ್ಟ್‌ಗಳಲ್ಲಿ ಸತ್ಯಗಳನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ನಿರೂಪಿಸಲಾಗಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಾಂಗ್ರೆಸ್ ವಕ್ತಾರ ಗೌರವ್ ಪಾಂಡಿ ಬುಧವಾರ ತಮ್ಮ ಟ್ವೀಟ್‍ನಲ್ಲಿ, “ಆರ್‌ಟಿಐ ಪ್ರತಿಕ್ರಿಯೆಯಲ್ಲಿ, ಕೋವ್ಯಾಕ್ಸಿನ್ ನವಜಾತ ಕರುವಿನ ರಕ್ತದ್ರವ (ಸೀರಮ್) ಅನ್ನು ಒಳಗೊಂಡಿದೆ ಎಂದು ಮೋದಿ ಸರ್ಕಾರ ಒಪ್ಪಿಕೊಂಡಿದೆ… ಇದು 20 ದಿನಗಳಿಗಿಂತ ಕಡಿಮೆ ವಯಸ್ಸಿನ ನವಜಾತ ಹಸು-ಕರುಗಳ ವಧೆಯ ಮೂಲಕ ಪಡೆದ ಹೆಪ್ಪುಗಟ್ಟಿದ ರಕ್ತದ ಒಂದು ಭಾಗವಾಗಿದೆ. ಇದು ಭೀಕರವಾಗಿದೆ! ಈ ಮಾಹಿತಿಯನ್ನು ಈ ಮೊದಲೇ ಸಾರ್ವಜನಿಕವಾಗಿ ಪ್ರಕಟಿಸಬೇಕಾಗಿತ್ತು” ಎಂದು ಟೀಕಿಸಿದ್ದರು.
According to this research doc, this is how cow calf serum is obtained.https://t.co/hIVTUULKUC pic.twitter.com/kP12tcUW7l
— Gaurav Pandhi (@GauravPandhi) June 16, 2021
“ನವಜಾತ ಕರುವಿನ ಸೀರಮ್ ಅನ್ನು ವೆರೋ ಕೋಶಗಳ ತಯಾರಿಕೆ/ಬೆಳವಣಿಗೆಗೆ ಮಾತ್ರ ಬಳಸಲಾಗುತ್ತದೆ. ವಿವಿಧ ರೀತಿಯ ಗೋವಿನ ಮತ್ತು ಇತರ ಪ್ರಾಣಿ ಸೀರಮ್‍ಗಳನ್ನು ವೆರೋ ಕೋಶಗಳ ಬೆಳವಣಿಗೆಗೆ ಬಳಸಲಾಗುತ್ತದೆ. ಇದು ಜಾಗತಿಕವಾಗಿ ಪ್ರಮಾಣಿತ ವೈಜ್ಞಾನಿಕ ಅಂಶವಾಗಿದೆ. ಲಸಿಕೆಗಳ ಉತ್ಪಾದನೆಗೆ ಸಹಾಯ ಮಾಡುವ ಜೀವಕೋಶದ ಬೆಳವಣಿಗೆಯನ್ನು ಸ್ಥಾಪಿಸಲು ವೆರೋ ಕೋಶಗಳನ್ನು ಬಳಸಲಾಗುತ್ತದೆ. ಪೋಲಿಯೊ, ರೇಬೀಸ್ ಮತ್ತು ಇತರ ಹಲವು ಲಸಿಕೆಗಳಲ್ಲಿ ಈ ತಂತ್ರವನ್ನು ದಶಕಗಳಿಂದ ಬಳಸಲಾಗುತ್ತಿದೆ’ ಎಂದು ಕೇಂದ್ರವು ಪ್ರತಿಕ್ರಿಯೆ ನೀಡಿದೆ.
ಬೆಳವಣಿಗೆಯ ನಂತರ ಈ ವೆರೋ ಕೋಶಗಳನ್ನು ನೀರು ಅಥವಾ ರಾಸಾಯನಿಕಗಳಿಂದ ತೊಳೆಯಲಾಗುತ್ತದೆ. ನವಜಾತ ಕರುವಿನ ಸೀರಮ್‌ನಿಂದ ಮುಕ್ತವಾಗಿಸಲು ಈ ವಿಧಾನ ಅನುಸರಿಸಲಾಗುತ್ತದೆ. ಆ ನಂತರ ಈ ವೆರೋ ಕೋಶಗಳು ಕೊರೋನಾ ವೈರಸ್ ಸೋಂಕಿಗೆ ಒಳಗಾಗುತ್ತವೆ. ವೈರಸ್ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವೆರೋ ಕೋಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅದರ ನಂತರ ಈ ಬೆಳೆದ ವೈರಸ್ ಅನ್ನು ಸಹ ಕೊಲ್ಲಲಾಗುತ್ತದೆ (ನಿಷ್ಕ್ರಿಯಗೊಳಿಸಲಾಗುತ್ತದೆ) ಮತ್ತು ಶುದ್ಧೀಕರಿಸಲಾಗುತ್ತದೆ. ಈ ಕೊಲ್ಲಲ್ಪಟ್ಟ ವೈರಸ್ ಅನ್ನು ಅಂತಿಮ ಲಸಿಕೆ ತಯಾರಿಸಲು ಬಳಸಲಾಗುತ್ತದೆ. ಅಂತಿಮ ಲಸಿಕೆ ಸೂತ್ರೀಕರಣದಲ್ಲಿ ಯಾವುದೇ ಕರುವಿನ ಸೀರಮ್ ಅನ್ನು ಬಳಸಲಾಗುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತ್ ಬಯೋಟೆಕ್ ಸಹ ಹೇಳಿಕೆ ನೀಡಿ, “ಹೊಸದಾಗಿ ಹುಟ್ಟಿದ ಕರುವಿನ ಸೀರಮ್ ಅನ್ನು ವೈರಲ್ ಲಸಿಕೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಕೋಶಗಳ ಬೆಳವಣಿಗೆಗೆ ಬಳಸಲಾಗುತ್ತದೆ, ಆದರೆ ವೈರಸ್‍ನ ಬೆಳವಣಿಗೆಯಲ್ಲಿ ಅಥವಾ ಅಂತಿಮ ಸೂತ್ರೀಕರಣದಲ್ಲಿ ಬಳಸಲಾಗುವುದಿಲ್ಲ. ಎಲ್ಲಾ ಇತರ ಕಲ್ಮಶಗಳನ್ನು ತೆಗೆದುಹಾಕುವ ಮೂಲಕ ನಿಷ್ಕ್ರಿಯಗೊಂಡ ವೈರಸ್ ಘಟಕಗಳನ್ನು ಮಾತ್ರ ಒಳಗೊಂಡಿರುವಂತೆ ಕೊವಾಕ್ಸಿನ್ ಅನ್ನು ಶುದ್ಧೀಕರಿಸಲಾಗಿದೆ” ಎಂದು ವಿವರಣೆ ನೀಡಿದೆ.
“ಹಲವಾರು ದಶಕಗಳಿಂದ ಜಾಗತಿಕವಾಗಿ ಲಸಿಕೆಗಳ ತಯಾರಿಕೆಯಲ್ಲಿ ಪ್ರಾಣಿಗಳ ಸೀರಮ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹೊಸದಾಗಿ ಹುಟ್ಟಿದ ಕರುವಿನ ಸೀರಮ್ ಬಳಕೆಯನ್ನು ಕಳೆದ 9 ತಿಂಗಳುಗಳಿಂದ ಪಾರದರ್ಶಕವಾಗಿ ದಾಖಲಿಸಲಾಗಿದೆ’ ಎಂದು ಅದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನಿರಾಕರಿಸಿದ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ


