ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ನವವಿವಾಹಿತೆ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗಾರ್ಮೆಂಟ್ಸ್ ಕಂಪನಿ ನಡೆಸುತ್ತಿರುವ ಅಣ್ಣಾದೊರೈ ಎಂಬವರ ಮಗಳು ರಿಧನ್ಯಾ ಸಾವಿಗೆ ಶರಣಾದ ಯುವತಿ ಎಂದು ತಿಳಿದು ಬಂದಿದೆ. ರಿಧನ್ಯಾ ಅವರ ಮದುವೆ ಈ ವರ್ಷದ ಏಪ್ರಿಲ್‌ನಲ್ಲಿ 28 ವರ್ಷದ ಕವಿನ್ ಕುಮಾರ್ ಎಂಬಾತನ ಜೊತೆ ನಡೆದಿತ್ತು. ವರದಿಗಳ ಪ್ರಕಾರ, ಮದುವೆ ಸಮಯದಲ್ಲಿ 100 ಸವರನ್ (800 ಗ್ರಾಂ.) ಚಿನ್ನಾಭರಣ ಮತ್ತು 70 ಲಕ್ಷ ರೂಪಾಯಿ ಮೌಲ್ಯದ ವೋಲ್ವೋ ಕಾರು ವರದಕ್ಷಿಣೆಯಾಗಿ ನೀಡಲಾಗಿತ್ತು.
ಭಾನುವಾರ, ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ರಿಧನ್ಯಾ, ಮಾರ್ಗ ಮಧ್ಯೆ ತನ್ನ ಕಾರನ್ನು ನಿಲ್ಲಿಸಿ ಕೀಟನಾಶಕದ ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ವರದಿಯಾಗಿದೆ. ತುಂಬಾ ಹೊತ್ತು ರಸ್ತೆ ಬದಿ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಶೀಲಿಸಿದಾಗ ರಿಧನ್ಯಾ ಶವ ಕಂಡು ಬಂದಿದೆ. ಆಕೆಯ ಬಾಯಲ್ಲಿ ನೊರೆ ಬಂದಿತ್ತು ಎಂದು ವರದಿ ವಿವರಿಸಿದೆ.
ಮೂಲಗಳ ಪ್ರಕಾರ, ರಿಧನ್ಯಾ ಸಾಯುವ ಮೊದಲು ತಮ್ಮ ತಂದೆಗೆ ವಾಟ್ಸಾಪ್‌ನಲ್ಲಿ ಏಳು ಆಡಿಯೋ ಸಂದೇಶಗಳನ್ನು ಕಳುಹಿಸಿದ್ದರು. ಅದರಲ್ಲಿ ಅವರು ತಮ್ಮ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದು, ಆಪಾದಿತ ವರದಕ್ಷಿಣೆ ಕಿರುಕುಳ ಸಹಿಸಲಾಗದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಒಂದು ಆಡಿಯೋ ಮೆಸೇಜ್‌ನಲ್ಲಿ ಆಕೆ, ಕವಿನ್ ಜೊತೆಗಿನ ತನ್ನ ಮದುವೆಯು ಆತ ಮತ್ತು ಆತನ ಪೋಷಕರು ರೂಪಿಸಿದ ಯೋಜನೆಯ ಭಾಗವಾಗಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
“ನಾನು ಪ್ರತಿದಿನ ಅವರ ಮಾನಸಿಕ ಹಿಂಸೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಯಾರಿಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ಹೇಳಿದರೆ ಜೀವನ ಅಂದ್ರೆ ಹೀಗೆ ಸುಧಾರಿಸುಕೊಂಡು ಹೋಗು ಎಂದು ಹೇಳುತ್ತಾರೆ. ನನ್ನ ನೋವನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ” ಎಂದು ರಿಧನ್ಯಾ ಮೆಸೇಜ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪೋಷಕರು ತನ್ನನ್ನು ಅನುಮಾನಿಸಬಹುದು. ಆದರೆ ತಾನು ಸುಳ್ಳು ಹೇಳುತ್ತಿಲ್ಲ. ನನ್ನ ಸುತ್ತಲಿನ ಎಲ್ಲರೂ ನಟಿಸುತ್ತಿದ್ದಾರೆ. ನಾನು ಯಾಕೆ ಮೌನವಾಗಿದ್ದೇನೆ ಅಥವಾ ಹೀಗೆ ಆಗಿದ್ದೇನೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ರೀತಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಮತ್ತೊಂದು ಮಸೇಜ್‌ನಲ್ಲಿ ರಿಧನ್ಯಾ ಹೇಳಿದ್ದಾರೆ.
“ನನ್ನ ಜೀವನದುದ್ದಕ್ಕೂ ನಾನು ನಿಮಗೆ ಹೊರೆಯಾಗಿರಲು ಬಯಸುವುದಿಲ್ಲ. ಈ ಬಾರಿ ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಈ ಜೀವನ ಇಷ್ಟವಿಲ್ಲ. ಅವರು ನನ್ನ ಮೇಲೆ ಮಾನಸಿಕವಾಗಿ ಹಲ್ಲೆ ಮಾಡುತ್ತಿದ್ದಾರೆ. ಅವನು ನನ್ನನ್ನು ದೈಹಿಕವಾಗಿ ಹಿಂಸಿಸುತ್ತಿದ್ದಾನೆ. ನನಗೆ ಜೀವನ ಮುಂದುವರಿಸಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ.
“ನೀನು ಮತ್ತು ಅಮ್ಮ ನನ್ನ ಪ್ರಪಂಚ. ನನ್ನ ಕೊನೆಯ ಉಸಿರಿನವರೆಗೂ ನೀನು ನನ್ನ ಭರವಸೆಯಾಗಿದ್ದೆ. ಆದರೆ, ನಾನು ನಿನ್ನನ್ನು ತುಂಬಾ ನೋಯಿಸಿದೆ. ನೀನು ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಾಗುತ್ತಿಲ್ಲ, ಆದರೂ, ನೀನು ನನ್ನನ್ನು ಹೀಗೆ ನೋಡಲು ಸಾಧ್ಯವಾಗುತ್ತಿಲ್ಲ. ನಿನ್ನ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಕ್ಷಮಿಸಿ ಅಪ್ಪಾ, ಎಲ್ಲವೂ ಮುಗಿದುಹೋಗಿದೆ. ನಾನು ಹೊರಡುತ್ತಿದ್ದೇನೆ” ರಿಧನ್ಯಾ ಆಡಿಯೋ ಮೆಸೇಜ್‌ನಲ್ಲಿ ಹೇಳಿದ್ದಾಗಿ ವರದಿಗಳು ವಿವರಿಸಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಅತ್ಯಾಚಾರ ಸಂತ್ರಸ್ತೆ ಕುರಿತು ವಿವಾದಾತ್ಮಕ ಹೇಳಿಕೆ: ಶಾಸಕನಿಗೆ ಶೋಕಾಸ್ ನೋಟಿಸ್ ಕೊಟ್ಟ ಟಿಎಂಸಿ