ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗಾಗಿ 1,05,092 ಮರಗಳನ್ನು ಕಡಿಯಲು ಮುಂದಾಗಿರುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಸಿಂಗರೇಣಿ ಕೋಲೀಯರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್) ಗೆ ನೋಟಿಸ್ ಜಾರಿ ಮಾಡಿದೆ.
ಅರಣ್ಯ ಸಂರಕ್ಷಣಾ ಕಾಯ್ದೆ-1980ರ ನಿಯಮಗಳನ್ನು ಸರಿಯಾಗಿ ಅನುಸರಿಸದೆ ನೈನಿ ಓಪನ್‌ಕಾಸ್ಟ್ ಕಲ್ಲಿದ್ದಲು ಯೋಜನೆಗಾಗಿ ಎಸ್‌ಸಿಸಿಎಲ್ ಕಂಪನಿಗೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಚೆಂಡಿಪಾಡಾ ಮತ್ತು ಸಲೂಯಿಖಾಮನ್‌ನ ಒಂಬತ್ತು ಗ್ರಾಮಸ್ಥರು ಎನ್‌ಜಿಟಿಯ ಪೂರ್ವ ವಲಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ತೆಲಂಗಾಣ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜಂಟಿ ಒಡೆತನದ ಸಾರ್ವಜನಿಕ ವಲಯದ ಕಂಪನಿಯಾದ ಎಸ್‌ಸಿಸಿಎಲ್ ಅಂಗುಲ್‌ನ ಚೆಂಡಿಪಾಡಾ ತಾಲೂಕಿನಲ್ಲಿ ಗಣಿಗಾರಿಕೆ ಮಾಡಲು ತಯಾರಿ ನಡೆಸುತ್ತಿದೆ.
ಅರ್ಜಿದಾರರ ಪ್ರಕಾರ, ಎಸ್‌ಸಿಸಿಎಲ್ ಈಗಾಗಲೇ ಅರಣ್ಯದ ಕೆಲವು ಭಾಗಗಳಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮರಗಳನ್ನು ಕಡಿಯಲು ಪ್ರಾರಂಭಿಸಿದೆ.
“ಚೆಂಡಿಪಾಡಾ ಮೀಸಲು ಅರಣ್ಯದ 643.095 ಹೆಕ್ಟೇರ್ ಪ್ರದೇಶವನ್ನು ಕಲ್ಲಿದ್ದಲು ಗಣಿಗಾರಿಕೆಗಾಗಿ ಹಸ್ತಾಂತರಿಸುವ ಸಂಬಂಧ ಅಂಗುಲ್‌ನ ವಿಭಾಗೀಯ ಅರಣ್ಯಾಧಿಕಾರಿಯವರು ಎಸ್‌ಸಿಸಿಎಲ್ ಕಂಪನಿಯ ಜನರಲ್ ಮ್ಯಾನೇಜರ್‌ಗೆ ಪತ್ರ ಬರೆದಿದ್ದಾರೆ. ಚೆಂಡಿಪಾಡಾ ಮೀಸಲು ಅರಣ್ಯ ಪ್ರದೇಶದ ಸುಮಾರು 1,05,092 ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಈ ಪೈಕಿ ಕಂದಾಯ ಅರಣ್ಯದ 1,087 ಮರಗಳು ಮತ್ತು ಅರಣ್ಯೇತರ ಪ್ರದೇಶದ 327 ಮರಗಳು ಒಳಗೊಂಡಿದೆ. ಇದು ಸಂಪೂರ್ಣ ಕಾನೂನು ಬಾಹಿರವಾಗಿದೆ” ಎಂದು ಗ್ರಾಮಸ್ಥರ ಪರ ವಕೀಲ ಶಂಕರ್ ಪಾಣಿ ಹೇಳಿದ್ದಾರೆ.
ವಿಭಾಗೀಯ ಅರಣ್ಯಾಧಿಕಾರಿಯು ತನ್ನ ಪತ್ರದಲ್ಲಿ ಅರಣ್ಯ ಭೂಮಿ ವರ್ಗಾವಣೆಗೆ ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಸೆಕ್ಷನ್ (2) ಅಡಿಯಲ್ಲಿ ನೀಡಿರುವ ಅನುಮೋದನೆ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಅನುಮೋದನೆ ಆದೇಶದ ಷರತ್ತುಗಳ ಹಂತ-Iಮತ್ತು ಹಂತ-IIರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಶಂಕರ್ ಪಾಣಿ ತಿಳಿಸಿದ್ದಾರೆ.
ಅನುಮೋದನೆ ಷರತ್ತಿನ ಹಂತ-I ಮತ್ತು ಹಂತ-IIನ್ನು ಇಲ್ಲಿ ಅನುಸರಿಸಿಲ್ಲ. ವಿಶೇಷವಾಗಿ ಹಂತ-IIರ ಕ್ಲಿಯರೆನ್ಸ್‌ನ ಷರತ್ತು ಸಂಖ್ಯೆ (ಬಿ) 13 ಅನ್ನು ಪೂರೈಸಿಲ್ಲ. ಈ ಷರತ್ತು, ಅರಣ್ಯ ಹಕ್ಕುಗಳ ಇತ್ಯರ್ಥ, ಗ್ರಾಮ ಸಭೆಯ ಲಿಖಿತ ಒಪ್ಪಿಗೆ ಪಡೆಯುವುದು ಮತ್ತು ಕಛೇರಿಯ ಜ್ಞಾಪಕ ಪತ್ರದ ಸಂಪೂರ್ಣ ಅನುಸರಣೆಯನ್ನು ಒಳಗೊಂಡಿರುತ್ತದೆ ಎಂದು ಶಂಕರ್ ಪಾಣಿ ವಿವರಿಸಿದ್ದಾರೆ.
ಆದಾಗ್ಯೂ, ಷರತ್ತು 13ರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಅರಣ್ಯೇತರ ಬಳಕೆಗಾಗಿ ಭೂಮಿಯನ್ನು ಅಕ್ರಮವಾಗಿ ಎಸ್‌ಸಿಸಿಎಲ್ ಕಂಪನಿಗೆ ವರ್ಗಾಯಿಸಲಾಗಿದೆ ಎಂದು ಪಾಣಿ ಆರೋಪಿಸಿದ್ದಾರೆ. ಅರಣ್ಯ ಪ್ರದೇಶದ ನಿವ್ವಳ ಪ್ರಸ್ತುತ ಮೌಲ್ಯವನ್ನು (ಎನ್‌ಪಿವಿ) ಪೂರ್ಣವಾಗಿ ಠೇವಣಿ ಮಾಡುವಂತೆ ಎಸ್‌ಸಿಸಿಎಲ್ ಕೇಳಲಾಗಿದೆ. ಆದರೆ, ಅದನ್ನೂ ಮಾಡಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ನ್ಯಾಯಾಂಗ ಸದಸ್ಯ ಅಮಿತ್ ಸ್ಥಾಲೇಕರ್ ಮತ್ತು ತಜ್ಞ ಸದಸ್ಯ ಅರುಣ್ ಕುಮಾರ್ ವರ್ಮಾ ಅವರನ್ನೊಳಗೊಂಡ ಎನ್‌ಜಿಟಿ ಪೀಠವು ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಎಸ್‌ಸಿಸಿಎಲ್ ಕಂಪನಿಗೆ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 21ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ : ಲಂಚ ಪ್ರಕರಣ: ಉದ್ಯಮಿ ಅದಾನಿ ವಿರುದ್ಧ ಜಂಟಿ ವಿಚಾರಣೆಗೆ ಯುಎಸ್ ನ್ಯಾಯಾಲಯ ಆದೇಶ


