ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಇಬ್ಬರು ಇಂಜಿನಿಯರ್‌ಗಳನ್ನು ಎನ್‌ಐಎ ಅಧಿಕಾರಿಗಳು ಕಾನೂನು ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ಬಂಧಿಸಿರುವ ಆರೋಪ ಕೇಳಿ ಬಂದಿದೆ. ಬಂಧಿತರ ಕುಟುಂಬಸ್ಥರು ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದು, ತಮ್ಮ ಮಕ್ಕಳ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ.
ಮಂಗಳವಾರ(ಮೇ 21) ಬೆಳಿಗ್ಗೆ 5 ಗಂಟೆ ಸುಮಾರಿಗೆ ಎನ್‌ಐಎಯ 9 ಅಧಿಕಾರಿಗಳಿದ್ದ ತಂಡ ಸ್ಥಳೀಯ ಹುಬ್ಬಳ್ಳಿ ಪೊಲೀಸರ ನೆರವಿನೊಂದಿಗೆ ಬೆಂಗಳೂರಿನ ಖಾಸಗಿ ಐಟಿ ಸಂಸ್ಥೆಯೊಂದರಲ್ಲಿ ಕೆಲಸಮಾಡುತ್ತಿದ್ದ ಎಂಜಿನಿಯರ್ ಶೋಯೆಬ್ ಅಹಮದ್ ಮಿರ್ಜಾ(34) ಅವರ ಮನೆಗೆ ದಾಳಿ ನಡೆಸಿದ್ದಾರೆ. ಏಳು ಗಂಟೆಗಳ ಕಾಲ ಪರಿಶೀಲನೆ ನಡೆಸಿ ಒಂದು ಲ್ಯಾಪ್‌ಟಾಪ್, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಶೋಯೆಬ್ ಮತ್ತು ಆತನ ಅಣ್ಣ ಐಜಾಜ್‌ಗೆ ಕೆಲವು ಬಟ್ಟೆಗಳನ್ನು ಪ್ಯಾಕ್ ಮಾಡುವಂತೆ ಪೊಲೀಸರು ಹೇಳಿದ್ದಾರೆ. ಎನ್‌ಐಎ ದಾಳಿ ವೇಳೆ ಮನೆಯಲ್ಲಿದ್ದ ಅವರ ತಂದೆಗೆ ಇಬ್ಬರನ್ನು ಬೆಂಗಳೂರಿಗೆ ಕರೆದೊಯ್ಯುವುದಾಗಿ ತಿಳಿಸಲಾಗಿತ್ತು.
ಆದರೆ, NIA ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41A ಅಡಿಯಲ್ಲಿ ಕಡ್ಡಾಯವಾಗಿ ಬಂಧನ ನೋಟಿಸ್‌ನ್ನು ನೀಡಿಲ್ಲ. ಬದಲಾಗಿ CrPCಯ ಸೆಕ್ಷನ್ 160ರಡಿಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದೆ. ಮಾರ್ಚ್ 1ರಂದು ಬೆಂಗಳೂರಿನಲ್ಲಿ ಸಂಭವಿಸಿದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಸಂಖ್ಯೆ ‘01/2024/NIA/BLR’ ಎಂದು ಸಾಕ್ಷಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಏಪ್ರಿಲ್ 12ರಂದು ಎನ್ಐಎ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮಥೀನ್ ತಾಹಾ ಎಂಬ ಇಬ್ಬರನ್ನು ಬಂಧಿಸಿತ್ತು. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳಾದ ಇವರಿಬ್ಬರನ್ನು ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೆಸರಿಸಲಾಗಿದೆ.
ಮಂಗಳವಾರ ಸುದ್ದಿ ವಾಹಿನಿಗಳು ವಿವಿಧ ರಾಜ್ಯಗಳಾದ್ಯಂತ ಅನೇಕ ದಾಳಿಗಳು ನಡೆದಿರುವ ಬಗ್ಗೆ ವರದಿ ಮಾಡಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ನಾಲ್ಕು ರಾಜ್ಯಗಳ 11 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿರುವುದಾಗಿ ರಾತ್ರಿ 8 ಗಂಟೆಗೆ ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ. ಶಂಕಿತರಿಂದ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ದಾಳಿ ಪ್ರಾರಂಭವಾದ 15 ಗಂಟೆಗಳ ನಂತರ ಬಿಡುಗಡೆಯಾದ ಪತ್ರಿಕಾ ಹೇಳಿಕೆಯು ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಯಾವುದೇ ಹೊಸ ಬಂಧನಗಳು ನಡೆದಿರುವ ಬಗ್ಗೆ ಉಲ್ಲೇಖಿಸಿಲ್ಲ.
ಹಾಗಾದರೆ ಶೋಯೆಬ್ ಮತ್ತು ಐಜಾಜ್ ಅವರನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆಯೇ? ಎಂಬ ಪ್ರಶ್ನೆ ಮೂಡಿದೆ. ಅವರ ಕುಟುಂಬದವರು ಹಂಚಿಕೊಂಡ ವಿವರಗಳು ಮತ್ತು ಇಬ್ಬರಿಗೆ ನೀಡಲಾದ ನೋಟಿಸ್‌ಗಳ ಆಧಾರದ ಮೇಲೆ ಅವರನ್ನು ನಿಜವಾಗಿಯೂ ಅಕ್ರಮವಾಗಿ ಬಂಧಿಸಿರುವಂತೆ ತೋರುತ್ತದೆ.
ವಿಚಾರಣೆ ಅಥವಾ ಬಂಧನದ ಸಂದರ್ಭದಲ್ಲಿ ಅನುಸರಿಸಬೇಕಾದ ಕಾನೂನು ವಿಧಾನಗಳನ್ನು ಎನ್‌ಐಎ ಉಲ್ಲಂಘಿಸಿದೆ. ಬಂಧನ ಕಾನೂನು ಪ್ರಕ್ರಿಯೆಗೆ ಬದ್ಧವಾಗಿರಬೇಕು ಎಂದು ಸುಪ್ರೀಂಕೋರ್ಟ್ ಪದೇ ಪದೇ ಒತ್ತಿ ಹೇಳುತ್ತಿದೆ. ಕಳೆದ ವಾರ, ಹಿರಿಯ ಪತ್ರಕರ್ತ ಮತ್ತು ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ಜಾಮೀನು ನೀಡುವಾಗ, ತನಿಖಾ ಸಂಸ್ಥೆಯು ಬಂಧನಕ್ಕೆ ಕಾರಣಗಳನ್ನು ಲಿಖಿತವಾಗಿ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಆದರೆ ಶೋಯೆಬ್ ಮತ್ತು ಐಜಾಜ್‌ಗೆ ಬಂಧನದ ಬಗ್ಗೆ ಕಾರಣವನ್ನು ಎನ್‌ಐಎ ಒದಗಿಸಿಲ್ಲ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಯಿಂದ ಮಿರ್ಜಾ ಕುಟುಂಬವು ಒತ್ತಡಕ್ಕೆ ಒಳಗಾಗಿದೆ. ಮೂರು ತಿಂಗಳ ಗರ್ಭಿಣಿಯಾಗಿರುವ ಶೋಯೆಬ್ ಅವರ ಪತ್ನಿ ಲಾಜಿನಾ ಈ ಬಗ್ಗೆ ಮಾತನಾಡಿ, ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂದು ಕಂಡುಹಿಡಿಯಲು ಕುಟುಂಬವು ಇಡೀ ದಿನ ಕಾಯುತ್ತಿದೆ. ಅವರನ್ನು ಬಂಧಿಸದ್ದರೆ ಎನ್ಐಎ ಅವರನ್ನು ಏಕೆ ಹೀಗೆ ಕರೆದುಕೊಂಡು ಹೋಗಿದೆ? ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 13ರಂದು, ಪಶ್ಚಿಮ ಬಂಗಾಳದಲ್ಲಿ ಎನ್ಐಎ ಇಬ್ಬರನ್ನು ಬಂಧಿಸಿದ ಒಂದು ದಿನದ ನಂತರ, ಶೋಯೆಬ್ ಅವರನ್ನು ವಿಚಾರಣೆಗಾಗಿ ಕರೆಸಲಾಗಿತ್ತು. NIA ಅಧಿಕಾರಿಗಳು ಕೆಲವು ಹೆಸರುಗಳ ಬಗ್ಗೆ ಕೇಳಿದರು ಮತ್ತು ಫೋನ್‌ಗಳಲ್ಲಿ ಅವರ ಮೊಬೈಲ್ ಸಂಖ್ಯೆ ಏಕೆ ಇದೆ ಎಂದು ವಿಚಾರಿಸಿದ್ದಾರೆ. ಕೆಲವು ಗಂಟೆಗಳ ನಂತರ ಅವರನ್ನು ವಾಪಾಸ್ಸು ಬಿಟ್ಟಿದ್ದಾರೆ ಎಂದು ಇದಕ್ಕೆ ಮೊದಲು ಶೋಯೆಬ್ ಹೇಳಿದ್ದರು.
ಇದನ್ನು ಓದಿ: ವಿಧಿ 370 ರದ್ದತಿ ಎತ್ತಿಹಿಡಿದ ಸುಪ್ರೀಂಕೋರ್ಟ್ ತೀರ್ಪು ಮರುಪರಿಶೀಲನೆ ಕೋರಿ ಸಲ್ಲಿಸಿದ ಅರ್ಜಿ ವಜಾ


