Homeಮುಖಪುಟಪ್ಯಾಲೆಸ್ತೀನ್ ಒಂದು ರಾಷ್ಟ್ರವೆಂದು ಮಾನ್ಯ ಮಾಡಿದ ನಾರ್ವೆ, ಸ್ಪೇನ್, ಐರ್ಲೆಂಡ್

ಪ್ಯಾಲೆಸ್ತೀನ್ ಒಂದು ರಾಷ್ಟ್ರವೆಂದು ಮಾನ್ಯ ಮಾಡಿದ ನಾರ್ವೆ, ಸ್ಪೇನ್, ಐರ್ಲೆಂಡ್

ಐತಿಹಾಸಿಕ ನಿರ್ಧಾರದ ಬೆನ್ನಲ್ಲೇ ನಾರ್ವೆ, ಐರ್ಲೆಂಡ್‌ನಿಂದ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ಇಸ್ರೇಲ್

- Advertisement -
- Advertisement -

ಐರ್ಲೆಂಡ್, ನಾರ್ವೆ ಮತ್ತು ಸ್ಪೇನ್ ದೇಶಗಳು ಪ್ಯಾಲೆಸ್ತೀನ್ ಅನ್ನು ‘ಪ್ರತ್ಯೇಖ ರಾಷ್ಟ್ರ’ ಎಂದು ಘೋಷಿಗಳು ನಿರ್ಧರಿಸಿವೆ. ಮೇ 28ರಿಂದ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.

ಇದು ಇಸ್ರೇಲ್ ವಿರುದ್ದ ಅಥವಾ ಹಮಾಸ್ ಪರವಾದ ನಿರ್ಧಾರವಲ್ಲ. ಇದು ‘ಶಾಂತಿಯ ಪರ’ವಾದ ನಿರ್ಧಾರ ಎಂದು ಸ್ಪೇನ್‌ ಹೇಳಿದೆ.

“ದ್ವಿರಾಷ್ಟ್ರ ಪರಿಹಾರ ಇಸ್ರೇಲ್‌ನ ಹಿತಾಸಕ್ತಿಯಲ್ಲಿದೆ” ಎಂದು ನಾರ್ವೆಯ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಬುಧವಾರ ಹೇಳಿದ್ದಾರೆ. ಮೇ 28ರಿಂದ ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಮಾನ್ಯತೆ ಸಿಗಲಿದೆ. ದ್ವಿರಾಷ್ಟ್ರ ಪರಿಹಾರವಲ್ಲದೆ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸದು ಎಂದಿದ್ದಾರೆ.

ಪ್ಯಾಲೆಸ್ತೀನ್‌ ಅನ್ನು ಪ್ರತ್ಯೇಖ ರಾಷ್ಟ್ರ ಎಂದು ಘೋಷಿಸುವುದು ಕ್ರೂರ ಆಕ್ರಮಣದಲ್ಲಿ ತಮ್ಮದೆಲ್ಲವನ್ನು ಕಳೆದುಕೊಂಡಿರುವ ಅಮಾಯಕ ಜನರನ್ನು ಬೆಂಬಲಿಸುವ ಕ್ರಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾರ್ವೆಯ ನಿರ್ಧಾರದ ಬೆನ್ನಲ್ಲೇ ಐರ್ಲೆಂಡ್ ಪ್ರಧಾನಿ ಸೈಮನ್ ಹ್ಯಾರಿಸ್ ಅವರು ತಮ್ಮ ದೇಶ ಕೂಡ ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ರಾಷ್ಟ್ರ ಎಂದು ಪರಿಗಣಿಸಲಿದೆ ಎಂದಿದ್ದಾರೆ.

“ಇಂದು ಐರ್ಲೆಂಡ್, ನಾರ್ವೆ ಮತ್ತು ಸ್ಪೇನ್ ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ದೇಶವೆಂದು ಗುರುತಿಸಲು ನಿರ್ಧರಿಸಿದ್ದೇವೆ. ನಾವು ಪ್ರತಿಯೊಬ್ಬರೂ ಈ ನಿರ್ಧಾರವನ್ನು ಜಾರಿಗೆ ತರಲು ಅಗತ್ಯವಿರುವ ಎಲ್ಲಾ ರಾಷ್ಟ್ರೀಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹ್ಯಾರಿಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸ್ಪೇನ್‌ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರು, ನಮ್ಮ ದೇಶದ ಮಂತ್ರಿ ಮಂಡಲ (ಸರ್ಕಾರ) ಮೇ 28ರಿಂದ ಜಾರಿಗೆ ಬರುವಂತೆ ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಸ್ಪ್ಯಾನಿಷ್ ಸಂಸತ್ತಿನಲ್ಲಿ ಮಾತನಾಡಿದ ಸ್ಯಾಂಚೆಝ್, “ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಝಾದಲ್ಲಿ ವಿನಾಶಕಾರಿ ಆಕ್ರಮಣ ನಡೆಸುವ ಮೂಲಕ ದ್ವಿರಾಷ್ಟ್ರ ಪರಿಹಾರವನ್ನು ಅಪಾಯದಲ್ಲಿರಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಮಾಲ್ಟಾ ಮತ್ತು ಸ್ಲೊವೇನಿಯಾ ಕೂಡ ಪ್ಯಾಲೆಸ್ತೀನ್‌ ಅನ್ನು ಪ್ರತ್ಯೇಕ ದೇಶವೆಂದು ಘೋಷಿಸುವ ಸಾಧ್ಯತೆ ಇದೆ ಎಂದು ಅಲ್‌-ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಐರ್ಲೆಂಡ್, ಸ್ಪೇನ್ ಮತ್ತು ನಾರ್ವೆಯ ನಾಯಕರು ಇತರ ರಾಷ್ಟ್ರಗಳು ಕೂಡ ತಮ್ಮಂತೆ ನಿರ್ಧಾರ ಕೈಗೊಳ್ಳಲು ಮನವಿ ಮಾಡಿದ್ದಾರೆ.

ರಾಯಭಾರಿಗಳನ್ನು ವಾಪಸ್ ಕರೆಸಿದ ಇಸ್ರೇಲ್ :

ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲು ನಿರ್ಧರಿಸಿದ ಬೆನ್ನಲ್ಲೇ ಇಸ್ರೇಲ್ ಐರ್ಲೆಂಡ್ ಮತ್ತು ನಾರ್ವೆಯಿಂದ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ.

“ಐರ್ಲೆಂಡ್ ಮತ್ತು ನಾರ್ವೆಯ ನಿರ್ಧಾರ ನೋಡಿ ಇಸ್ರೇಲ್ ಸುಮ್ಮನೆ ಕೂರುವುದಿಲ್ಲ ಎಂದು ತೀಕ್ಷ್ಣವಾದ ಸಂದೇಶವನ್ನು ನೀಡಲು ಬಯಸುತ್ತೇನೆ. ಸ್ವೇನ್‌ನಿಂದ ಕೂಡ ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳುತ್ತೇವೆ” ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡುವುದು ‘ಭಯೋತ್ಪಾದನೆಗೆ ನೀಡುವ ಬಹುಮಾನ’. ಇದು ಗಾಝಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಸಂಧಾನದ ಮೂಲಕ ಕೊನೆಗೊಳಿಸುವ ಪ್ರಯತ್ನಕ್ಕೆ ಅಡ್ಡಿಯಾಗಲಿದೆ ಎಂದು ಕಾಟ್ಜ್ ವಿರೋಧ ವ್ಯಕ್ತಪಡಿಸಿದ್ದಾರೆ.

ಮೂರು ರಾಷ್ಟ್ರಗಳ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ‘ಪ್ಯಾಲೆಸ್ಟೀನಿಯನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ) ನ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುಸೇನ್ ಅಲ್-ಶೇಖ್ ” ಸಂಕಟ, ನೋವು, ಉದ್ಯೋಗ, ವರ್ಣಭೇದ ನೀತಿ, ಕೊಲೆ, ದಬ್ಬಾಳಿಕೆ, ನಿಂದನೆ ಮತ್ತು ವಿನಾಶಕ್ಕೆ ಒಳಗಾದ ಪ್ಯಾಲೆಸ್ತೀನ್ ಜನರ ಪ್ರತ್ಯೇಕ ರಾಷ್ಟ್ರ ಹೋರಾಟದ ಸುದೀರ್ಘ ದಶಕಗಳ ನಂತರ ಸತ್ಯ ಮತ್ತು ನ್ಯಾಯದ ವಿಚಾರದಲ್ಲಿ ಜಗತ್ತು ಜಯಗಳಿಸುವ ಐತಿಹಾಸಿಕ ಕ್ಷಣವಾಗಿದೆ ಇದು” ಎಂದಿದ್ದಾರೆ.

ಹಮಾಸ್ ಮೂರು ಯುರೋಪಿಯನ್ ರಾಷ್ಟ್ರಗಳ ನಿರ್ಧಾರವನ್ನು “ಪ್ರಮುಖ ಹೆಜ್ಜೆ” ಎಂದು ಕರೆದಿದೆ.

ಇದನ್ನೂ ಓದಿ : ವಿಧಿ 370 ರದ್ದತಿ ಎತ್ತಿಹಿಡಿದ ಸುಪ್ರೀಂಕೋರ್ಟ್‌ ತೀರ್ಪು ಮರುಪರಿಶೀಲನೆ ಕೋರಿ ಸಲ್ಲಿಸಿದ ಅರ್ಜಿ ವಜಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read