“ಅಮೆರಿಕ ಮಾಡಿರುವ ಮಾದಕವಸ್ತು ಕಳ್ಳಸಾಗಣೆ ಆರೋಪ ಪ್ರಕರಣಗಳಲ್ಲಿ ನಾನು ತಪ್ಪೊಪ್ಪಿಕೊಂಡಿಲ್ಲ. ನಾನು ನಿರಪರಾಧಿ, ನನ್ನನ್ನು ಅಪಹರಿಸಲಾಗಿದೆ. ನಾನು ಈಗಲೂ ವೆನೆಜುವೆಲಾದ ಸಾಂವಿಧಾನಿಕ ಅಧ್ಯಕ್ಷ” ಎಂದು ನಿಕೋಲಸ್ ಮಡುರೊ ಅಮೆರಿಕದ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ವೆನೆಜುವೆಲಾ ದೇಶಕ್ಕೆ ನುಗ್ಗಿ ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿದ ಅಮೆರಿಕ ಸೇನೆ, ಬಳಿಕ ಇಬ್ಬರನ್ನೂ ನ್ಯೂಯಾರ್ಕ್‌ಗೆ ಸ್ಥಳಾಂತರಿಸಿತ್ತು. ಸೋಮವಾರ (ಜ.5) ಮೊದಲ ಬಾರಿಗೆ ಮಡುರೊ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಮಾದಕವಸ್ತು, ಭಯೋತ್ಪಾದನೆ ಸೇರಿದಂತೆ ಹಲವು ಆರೋಪಗಳ ಮೇಲೆ ವಿಚಾರಣೆಗಾಗಿ ಮಡರೊ ಅವರನ್ನು ಸೋಮವಾರ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಆಲ್ವಿನ್ ಕೆ ಹೆಲ್ಲರ್‌ಸ್ಟೈನ್ ಅವರ ಮುಂದೆ ಹಾಜರುಪಡಿಸಲಾಗಿತ್ತು ಎಂದು ಸುದ್ದಿ ಸಂಸ್ಥೆ ಅಲ್ ಜಝೀರಾ ವರದಿ ಮಾಡಿದೆ.
ವಿಚಾರಣೆ ವೇಳೆ ಮಡುರೊ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಕೂಡ ತಪ್ಪೊಪ್ಪಿಕೊಂಡಿಲ್ಲ. ಗಂಡ-ಹೆಂಡತಿ ಇಬ್ಬರೂ ಜಾಮೀನು ಅಥವಾ ಬಿಡುಗಡೆಯನ್ನು ಕೋರಿಲ್ಲ. ನ್ಯಾಯಾಧೀಶರು ಮಡುರೊ ಅವರ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ನಿಗದಿಪಡಿಸಿದ್ದಾರೆ.
ಈ ನಡುವೆ ಕ್ಯಾರಕಾಸ್‌ನಲ್ಲಿ, ನಿಕೋಲಸ್ ಮಡುರೊ ಅವರ ಮಗ ನಿಕೋಲಸ್ ಮಡುರೊ ಗುಯೆರಾ, ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಗೆ ತಮ್ಮ ತಂದೆಯನ್ನು ಅಮೆರಿಕ ‘ಅಪಹರಿಸಿದೆ’ ಎಂದು ಹೇಳಿದ್ದು,ಅವರ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ‘ಅಂತಾರಾಷ್ಟ್ರೀಯ ಒಗ್ಗಟ್ಟಿಗೆ’ ಕರೆ ನೀಡಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಮಡುರೊ ದಂಪತಿಯನ್ನು ಸೆರೆಹಿಡಿಯಲಾದ ಎರಡು ದಿನಗಳ ನಂತರ ನಡೆದ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿದ ನಿಕೋಲಸ್ ಮಡುರೊ ಗುಯೆರಾ, ಅಮೆರಿಕದ ಕಾರ್ಯಾಚರಣೆ ವೆನೆಜುವೆಲಾದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ. ಇಂತಹ ಬೆಳವಣಿಗೆ ಬೇರೆ ದೇಶದಲ್ಲೂ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.
“ರಾಷ್ಟ್ರದ ಮುಖ್ಯಸ್ಥರ ಅಪಹರಣವನ್ನೇ ನಾವು ಸಾಮಾನ್ಯಗೊಳಿಸಿದರೆ, ಯಾವುದೇ ದೇಶವು ಸುರಕ್ಷಿತವಾಗಿರುವುದಿಲ್ಲ. ಇದು ಪ್ರಾದೇಶಿಕ ಸಮಸ್ಯೆಯಲ್ಲ, ಇದು ಜಾಗತಿಕ ಸ್ಥಿರತೆಗೆ, ಮಾನವೀಯತೆಗೆ ಮತ್ತು ರಾಷ್ಟ್ರಗಳ ಸಾರ್ವಭೌಮ ಸಮಾನತೆಗೆ ನೇರ ಬೆದರಿಕೆಯಾಗಿದೆ” ಎಂದು ನಿಕೋಲಸ್ ಮಡುರೊ ಗುಯೆರಾ ಹೇಳಿದ್ದಾಗಿ ಸಿಎನ್‌ಎನ್ ಉಲ್ಲೇಖಿಸಿದೆ.
ಅಮೆರಿಕವು ಮಡುರೊ ವಿರುದ್ಧ ಮಾದಕವಸ್ತು ಭಯೋತ್ಪಾದನೆ (Narco Terrorism)ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಇತರ ಆರೋಪಗಳನ್ನು ಹೊರಿಸಿದೆ. ವೆನೆಜುವೆಲಾ ಸರ್ಕಾರ ಈ ಆರೋಪಗಳನ್ನು ತಿರಸ್ಕರಿಸಿದೆ.
ವೆನೆಜುವೆಲಾ ಸರ್ಕಾರವು ಅಮೆರಿಕದ ಕೃತ್ಯವನ್ನು ‘ಮಿಲಿಟರಿ ಆಕ್ರಮಣ’ ಎಂದು ಬಣ್ಣಿಸಿದೆ. ಮಡುರೊ ಮತ್ತು ಫ್ಲೋರ್ಸ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಭಾನುವಾರ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಹಂಗಾಮಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಮೆರಿಕದೊಂದಿಗೆ ಸಹಕರಿಸಲು ಅವರು ನಿರ್ಧರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನೀಡಿದ ಸಂದೇಶವೊಂದರಲ್ಲಿ ರೊಡ್ರಿಗಸ್ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ‘ಗೌರವಯುತ ಸಂಬಂಧಗಳನ್ನು’ ಸ್ಥಾಪಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.


