ಕಾಣದ ನಾಳೆಗಳಿಗಾಗಿ
ಕನಸುಗಳ ಮಡಚಿಡದೆ
ನಿನ್ನೆಗಳೆಡೆಗೆ ಈ ದಿನವ ದೂಡಿ ಬಿಡಲಷ್ಟೇ
ಅವಳು ಕೈ ಚಾಚಿದ್ದು
ಸಭ್ಯತೆಯ ಮುಖವಾಡ ತೊಟ್ಟ
ಕ್ರೂರ ಬೀದಿಯಲಿ
ಸೊರಗಿ ಬೆಂಡಾದ ದೇಹ
ಸತ್ವವಾರಿದ ಕಂಗಳ ಮುಂದೆ
ಅವಳರಿಯದ ಸಂಜ್ಞೆಗಳೆಷ್ಟೋ
ಹಾದು ಹೋಗಿರಬಹುದು
ಪಡೆದ ಪುಡಿ ಭಿಕ್ಷೆಗೂ
ಅಸಹ್ಯ ಸ್ಪರ್ಶ ಸೋಕಿರಬಹುದು
ಬಣ್ಣ ಮಾಸಿದ ದಿನಗಳ ಹೊತ್ತು
ರಂಗು ರಂಗಿನ ಬೀದಿಯಲಿ
ಒಬ್ಬಂಟಿಯಾಗಿ ಅಲೆದಾಡುವಾಗ
ಹೊಂಚು ಹಾಕಿರಬಹುದೆಷ್ಟು ಕಣ್ಣುಗಳು
ಕೊನೆಗೂ ಬೇಟೆಯಾದಳವಳು
ವಿಕೃತ ಹಸಿವಿಗೆ
ಬೇಡಿಯೂ ಬದುಕಲು ಬಿಡದೆ
ಹೆಣವಾಗಿಸಿದೆ ಭೋಗಿಸಿದೆ
ನಿನ್ನ ಸಾಮ್ರಾಜ್ಯಕೀಗ ಎಗ್ಗಿಲ್ಲದ ಸ್ವಾತಂತ್ರ್ಯ
ಆದರೂ ಕೇಳು,
ಅಂತರಂಗವೆ ಸತ್ತ ನಿನ್ನ ಹೆಣದೆದುರು
ಸ್ವಾಭಿಮಾನವ ಬಿಕರಿಗಿಡದೆ
ಎದೆಗಪ್ಪಿಕೊಂಡೇ ಕಣ್ಣೆವೆ ಮುಚ್ಚಿದಳು
ಹೇಳು, ನಿನ್ನ ಬಳಿಯೀಗ
ಉಳಿದಿರುವುದಾದರೂ ಏನು?
(ಇತ್ತೀಚೆಗೆ ಹಾಸನದಲ್ಲಿ ಬಿಕ್ಷುಕಿಯೊಬ್ಬಳನ್ನು ಕೊಂದು, ಆಕೆಯ ಮೃತದೇಹದ ಮೇಲೆ ಅತ್ಯಾಚಾರಗೈದ ಅಮಾನುಷ ಘಟನೆ ಹೃದಯವನ್ನು ಹಿಂಡಿದಾಗ…)
ಇದನ್ನೂ ಓದಿ; ಅಮರೇಶ ನುಗಡೋಣಿ ಅವರ ಹೊಸ ಕಾದಂಬರಿ `ಕೊರೊನಾ ಕಥೆ’ಗೆ ಕಾದಂಬರಿಕಾರನ ಮುನ್ನುಡಿ


