Homeಮುಖಪುಟಬ್ಲೂಮ್ಸ್‌ಬರಿ, ಬುಕ್‌ಬ್ರಹ್ಮ, ರದ್ದು ಸಂಸ್ಕೃತಿ ಮತ್ತು ರವೀಂದ್ರನಾಥ ಟ್ಯಾಗೋರ್

ಬ್ಲೂಮ್ಸ್‌ಬರಿ, ಬುಕ್‌ಬ್ರಹ್ಮ, ರದ್ದು ಸಂಸ್ಕೃತಿ ಮತ್ತು ರವೀಂದ್ರನಾಥ ಟ್ಯಾಗೋರ್

ಸಂವಾದದಲ್ಲಿ ನಂಬಿಕೆಯೇ ಇರದ, ಸುಳ್ಳು ಸುದ್ದಿ ಮತ್ತು ದ್ವೇಷದ ಹಾಗೂ ಪ್ರಚೋದನಕಾರಿ ಮಾತುಗಳನ್ನು ಹರಡುವ ಜನರ ಜೊತೆಗೆ ಸಂವಾದ ಮಾಡುವುದಕ್ಕೆ ನೆಲ ಸಪಾಟಿದೆಯೇ? ಒಂದು ಪಕ್ಷ ನೆಲ ಸಪಾಟಿದ್ದರೆ ಲವ್ ಜಿಹಾದ್‌ನಂತಹ, ಅರ್ಬನ್ ನಕ್ಸಲ್‌ನಂತಹ ಪದಪುಂಜಗಳು ಹುಟ್ಟಿಕೊಂಡು ಪ್ರಚಾರ ಪಡೆಯುತ್ತಲೇ ಇರಲಿಲ್ಲ.

- Advertisement -
- Advertisement -

ದೇಶದಲ್ಲಿ ನಡೆಯುತ್ತಿರುವ ಅಸಂಖ್ಯಾತ ವಿದ್ಯಮಾನಗಳ ಜೊತೆಗೆ ಪುಸ್ತಕ – ಪ್ರಕಾಶನ ಲೋಕಕ್ಕೆ ಸಂಬಂಧಿಸಿದ ಒಂದು ವಿದ್ಯಮಾನ ವಿವಾದಾತ್ಮಕ ಚರ್ಚೆಯನ್ನು ಹುಟ್ಟಿಸಿದೆ. ಬ್ಲೂಮ್ಸ್‌ಬರಿ ಎಂಬುದು ಇಂಗ್ಲಿಶ್ ಭಾಷೆಯ ಪ್ರಕಾಶನ ಸಂಸ್ಥೆ. 2020 ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಗಳ ಕುರಿತು ಪುಸ್ತಕ ಪ್ರಕಟಿಸಲು ಒಪ್ಪಿಕೊಂಡಿದ್ದ ಪ್ರಕಾಶನ ಸಂಸ್ಥೆ ಒಂದಿಷ್ಟು ವಿರೋಧದ ನಂತರ ಆ ಪುಸ್ತಕ ಪ್ರಕಟಣೆಯ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಘೋಷಿಸಿದೆ.

Image Courtesy: Sabrang India

ಐತಿಹಾಸಿಕವಾಗಿ ಹಾಗೂ ಸಾಮಾನ್ಯವಾಗಿ ಪುಸ್ತಕಗಳನ್ನು ನಿಷೇಧಿಸಲು ಕರೆ ಕೊಡುವುದು, ಪುಸ್ತಕಗಳನ್ನು ಬಿಡುಗಡೆಗೆ ಆಗದಂತೆ ಒತ್ತಡ ಹಾಕುವುದು, ಪುಸ್ತಕಗಳನ್ನು ಸುಟ್ಟುಹಾಕುವುದು ಬೌದ್ಧಿಕತೆಯ ವಿರೋಧಿಗಳಾದ ಸರ್ವಾಧಿಕಾರಿಗಳ, ಫ್ಯಾಸಿಸ್ಟ್‌ಗಳ, ತೀವ್ರ ಬಲಪಂಥೀಯರ ಮತ್ತು ಅವರ ಬೆಂಬಲಿಗರೆ ನಡೆ ಎಂದೇ ಜನಜನಿತ. (ಕೆಲವು ಅಪವಾದಗಳು ಇವೆ: ಭಾರತದಲ್ಲಿ ಸೆಂಟ್ರಿಸ್ಟ್ ಪಕ್ಷ ಎಂದು ಗುರುತಿಸಿಕೊಳ್ಳುವ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಸಲ್ಮಾನ್ ರಶ್ದಿ ಅವರ ದ ಸಟಾನಿಕ್ ವರ್ಸಸ್ ಪುಸ್ತಕ ನಿಷೇಧಿಸಿತ್ತು). ಭಾರತದ ಮಟ್ಟಿಗೆ ಇಷ್ಟು ದಿನ ಹಿಂದೂ ಮತೀಯ ಗುಂಪುಗಳು ಮತ್ತು ಅದನ್ನು ಪೋಷಿಸುವ ಬಲಪಂಥೀಯ ಸರ್ಕಾರಕ್ಕೆ ಆರೋಪಿಸಲಾಗುತ್ತಿದ್ದ ಈ ಗುಣಲಕ್ಷಣಗಳನ್ನು ಈಗ ಅವುಗಳನ್ನು ವಿರೋಧಿಸುತ್ತಿದ್ದ ಪಾಳಯಕ್ಕೆ (ಎಡಪಂಥೀಯ, ಲಿಬರಲ್ ಮುಂತಾದ ಹೆಸರುಗಳಿಂದ ಕರೆಯಲ್ಪಡುವ) ತೂರಿಬಿಡುವ ಪ್ರಯತ್ನಗಳಾಗುತ್ತಿದೆ. ಆದರೆ ಇದು ಮೊದಲೇನಲ್ಲ.

ಈ ಘಟನೆಯ ಕೆಲವು ವಿವರಗಳು

‘ದೆಹಲಿ ರಯಟ್ಸ್ 2020’ ಪುಸ್ತಕ ಮುದ್ರಣವಾಗುವುದಕ್ಕೆ ಮುಂಚಿತವಾಗಿಯೇ ಈ ಪುಸ್ತಕದ ಬಿಡುಗಡೆ ಯೋಜಿಸಲಾಗಿತ್ತು. ಪುಸ್ತಕ ಬಿಡುಗಡೆಯ ಅತಿಥಿಗಳು ಇಂತಿದ್ದರು: ದೆಹಲಿ ಗಲಭೆಗಳಿಗೆ ತಮ್ಮ ಪ್ರಚೋದನಕಾರಿ ಭಾಷಣದಿಂದ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ದೆಹಲಿ ಮುಖಂಡ ಕಪಿಲ್ ಮಿಶ್ರಾ, ತೀವ್ರ ಬಲಪಂಥೀಯ ನಿಲುವುಗಳನ್ನು ಹೊಂದಿರುವ ಮತ್ತು ಸುಳ್ಳುಸುದ್ದಿಗಳನ್ನು ನಿರ್ಭಿಡೆಯಿಂದ ಹಂಚುವ ಓಪಿಇಂಡಿಯಾದ ಸಂಪಾದಕ ನೂಪುರ್ ಶರ್ಮ ಮತ್ತು ಅರ್ಬನ್ ನಕ್ಸಲ್ ಎಂಬ ಹೆಸರು ನಾಮಕರಣ ಮಾಡಿ ಮುನ್ನಲೆಗೆ ತಂದು ಅದನ್ನು ಹಲವು ಚಿಂತಕರಿಗೆ ಆರೋಪಿಸಿ ವಿಕೃತವನ್ನು ಸಂಭ್ರಮಿಸಿದ್ದ ಚಿತ್ರಕರ್ಮಿ ವಿವೇಕ್ ಅಗ್ನಿಹೋತ್ರಿ. ಇನ್ನು ಪುಸ್ತಕದ ಲೇಖಕರಲ್ಲಿ ಒಬ್ಬರಾದ ಮೊನಿಕಾ ಅರೋರಾ ಅವರು 2011ರಲ್ಲಿ ವೆಂಡಿ ಡೋನಿಗರ್ ಅವರ ವಿದ್ವತ್‌ಪೂರ್ಣ ಪುಸ್ತಕ ‘ದ ಹಿಂದೂಸ್‌’ನಲ್ಲಿ ಕೆಲವು ಭಾಗಗಳನ್ನು ತೆಗೆದುಹಾಕಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವಕೀಲರಲ್ಲಿ ಒಬ್ಬರು. ಆಗ ‘ದ ಹಿಂದೂಸ್’ ಪುಸ್ತಕವನ್ನು ಪೆಂಗ್ವಿನ್ ಪ್ರಕಾಶನ ಸಂಸ್ಥೆ ಹಿಂತೆಗೆದುಕೊಂಡಿತ್ತು. ಇದರ ಹಿಂದೆ ಮತೀಯ ದುರ್ಭಾವನೆ ಕೆಲಸ ಮಾಡಿತ್ತು ಎಂಬುದು ಈಗ ದಾಖಲಾಗಿರುವ ಸಂಗತಿ.

ಸದರಿ ‘ದೆಹಲಿ ರಯಟ್ಸ್ 2020 ದ ಅನ್‌ಟೋಲ್ಡ್ ಸ್ಟೋರಿ’ (ದೆಹಲಿ ಗಲಭೆ 2020) ಪುಸ್ತಕವನ್ನು ತಾವು ಪ್ರಕಟಿಸುವುದಿಲ್ಲ ಎಂದು ಬ್ಲೂಮ್ಸ್‌ಬರಿ ಪ್ರಕಾಶನ ಸಂಸ್ಥೆ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕದ ವಿಷಯದ ಬಗ್ಗೆ ತಗಾದೆ ತೆಗೆದಿದ್ದ, ಈ ಪುಸ್ತಕದ ಪ್ರಕಟಣೆಯ ಔಚಿತ್ಯವನ್ನು ಪ್ರಶ್ನಿಸಿದ್ದ ಮತ್ತು ಪುಸ್ತಕ ಬಿಡುಗಡೆಯಾಗುತ್ತಿರುವ ಸಂದರ್ಭ ಮತ್ತು ಅದನ್ನು ಬಿಡುಗಡೆ ಮಾಡುತ್ತಿರುವವರ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ಪ್ರಗತಿಪರ ವಲಯದ ಬಗ್ಗೆ ಹಲವು ಜನರು ಪ್ರಶ್ನೆ ಎತ್ತಿದ್ದಾರೆ. ಬಲಪಂಥೀಯರು ಹಲವು ಪುಸ್ತಕಗಳ ನಿಷೇಧಕ್ಕೆ ಕರೆಕೊಟ್ಟಾಗ ವಿರೋಧಿಸಿದ ನೀವು ಈಗ ಮಾಡುತ್ತಿರುವುದು ಅಸಹನೆಯಲ್ಲವೇ ಎಂಬುದರಿಂದ ಹಿಡಿದು ಈ ಒಂದು ಘಟನೆಯನ್ನು ನಾಜಿಗಳು ತಮ್ಮನ್ನು ವಿರೋಧಿಸುತ್ತಿದ್ದವರ ಪುಸ್ತಕಗಳನ್ನು ಸುಟ್ಟ ಘಟನೆಗೆ ಹೋಲಿಸಿ ಫ್ಯಾಸಿಸಂ ಎಂದು ಕರೆಯುವವರೆಗೂ ಮುಂದುವರೆದಿದೆ. ಬಲಪಂಥೀಯ ಸೆನ್ಸಾರ್‌ಗಳನ್ನು ಹಲವು ಬಾರಿ ವಿರೋಧಿಸಿದ್ದ ಹಿಂದಿ ಚಿತ್ರನಿರ್ದೇಶಕ ಅನುರಾಗ್ ಕಶ್ಯಪ್, ಪುಸ್ತಕ ನಿಷೇಧವನ್ನು ನಾನು ಒಪ್ಪುವುದಿಲ್ಲ ಎಂದು ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪಶ್ಚಿಮ ದೇಶಗಳಲ್ಲಿ ಲಿಬರಲ್ ಮನೋಧೋರಣೆಯವರು ಎಡಪಂಥೀಯ ಚಿಂತನೆಯುಳ್ಳವರು ಅನ್ಯ ಸಿದ್ಧಾಂತದ ಬೌದ್ಧಿಕತೆಯನ್ನು ರದ್ದುಮಾಡುತ್ತಾರೆ ಎಂದು ಅರೋಪಿಸಿ ಪ್ರಾರಂಭವಾದ ಕ್ಯಾನ್ಸಲ್ ಕಲ್ಚರ್ ಟೀಕೆಯನ್ನು ಕೂಡ ಈ ವಿದ್ಯಮಾನಕ್ಕೆ ಟಂಕಿಸಿರುವುದು ನಡೆದಿದೆ.

ಇದೇ ಕೆಲವು ದಿನಗಳ ನಂತರ ಕರ್ನಾಟಕದಲ್ಲಿ ಸಾಹಿತ್ಯಿಕ ಚಟುವಟಿಕೆಗಳು ಮತ್ತು ಕನ್ನಡ ಪುಸ್ತಕಗಳ ಪರಿಚಯಕ್ಕೆಂದೇ ಕೆಲಸ ಮಾಡುತ್ತಿರುವ ಬುಕ್ ಬ್ರಹ್ಮ ಜಾಲತಾಣದಲ್ಲಿ ಕುಂದಾಪುರ ಮೂಲದ ಚೈತ್ರಾ ಎಂಬುವವರ ‘ಪ್ರೇಮಪಾಶ’ ಎಂಬ ಕಾದಂಬರಿಯ ಪರಿಚಯ ವಿಡಿಯೋವನ್ನು ಪ್ರಕಟಿಸಲಾಯಿತು. ಚೈತ್ರಾ ತಮ್ಮ ದ್ವೇಷಪೂರಿತ ಭಾಷಣಗಳಿಗೆ ಹೆಸರುವಾಸಿಯಾದವರು. ಆ ಪುಸ್ತಕ ಕಾದಂಬರಿ ಎಂದು ಹೇಳಿಕೊಂಡಿದ್ದರೂ, ಹಿಂದೂ ಬಲಪಂಥಿಯ ಸಂಘಟನೆಗಳ ಕಪೋಲಕಲ್ಪಿತ ಲವ್ ಜಿಹಾದ್ ಸುತ್ತ ಇರುವ ಕಾದಂಬರಿ ಎಂಬುದು ಮೇಲ್ನೋಟಕ್ಕೆ ತಿಳಿಯುವಂತಾದ್ದಾಗಿತ್ತು. ಭಾರತದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವನ್ನು ಗುಮ್ಮವಾಗಿ ಚಿತ್ರಿಸಲು ಹುಟ್ಟಿಕೊಂಡ ರಾಜಕೀಯ ಪಿತೂರಿ ಲವ್ ಜಿಹಾದ್ ಎಂದು ಈಗಾಗಲೇ ಹಲವು ಚರ್ಚೆಗಳಾಗಿವೆ. ಆ ಚರ್ಚೆಗಳನ್ನು ಹೊರತುಪಡಿಸಿಯೂ, ಈ ಕಾದಂಬರಿ ತಾತ್ವಿಕ ಜಿಜ್ಞಾಸೆಗಳನ್ನು ಹೊಂದಿರುವುದರ ಬಗ್ಗೆ ಮಾಹಿತಿಯೂ ಇಲ್ಲ.

Image Cortesy: Sanatana suddi

ಈ ಕಾದಂಬರಿಯ ಬಗ್ಗೆ ಇನ್ನಷ್ಟು ಅಪನಂಬಿಕೆ ಮೂಡುವುದಕ್ಕೆ ಮತ್ತೊಂದು ಕಾರಣ ಅದಕ್ಕೆ ಮುನ್ನುಡಿ ಬರೆದವರು ಪೋಸ್ಟ್‌ಕಾರ್ಡ್ ಎಂಬ ಸುಳ್ಳುಸುದ್ದಿಯನ್ನು ಮಾತ್ರ ಹರಡಲು ಇರುವ ತಾಣದ ಸಂಸ್ಥಾಪಕ-ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಎಂಬ ಸಂಗತಿ. ಇದು ಪ್ರಗತಿಪರ ವಲಯದ ಹಲವರಿಗೆ ಕಸಿವಿಸಿ ತಂದದ್ದಲ್ಲದೆ ಬುಕ್‌ಬ್ರಹ್ಮ ತಾಣದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮೂಡಿದ ಹಲವು ಬಿಡಿಬಿಡಿ ಪೋಸ್ಟ್‌ಗಳು ಕೆಲವರಿಗೆ ಕ್ಯಾಂಪೇನ್ ರೀತಿಯಲ್ಲಿ ಕಂಡವು. ಅನ್ಯ ಸಿದ್ಧಾಂತದ ಚಿಂತನೆಗಳನ್ನು ಓದಲು ನನಗೆ ಅಡ್ಡಿಯೇನಿಲ್ಲ; ಆದರೆ ಸುಳ್ಳುಸುದ್ದಿಯನ್ನೇ ಬಂಡವಾಳ ಮಾಡಿಕೊಂಡವರಿಗೆ ವೇದಿಕೆ ಇದಾಗುವುದಾದರೆ ನಾನು ಅಲ್ಲಿ ಬರೆಯಲು ಸಿದ್ಧನಿಲ್ಲ ಎಂದು ಬುಕ್‌ಬ್ರಹ್ಮದ ಅಂಕಣಕಾರರೊಬ್ಬರು ಇನ್ನುಮುಂದೆ ಅಲ್ಲಿಗೆ ಬರೆಯುವುದನ್ನು ನಿಲ್ಲಿಸುವುದಾಗಿ ಘೋಷಿಸಿದರು. ಇದರ ಬೆನ್ನಲ್ಲಿಯೇ ಅದೊಂದು ವ್ಯವಹಾರಿಕ ತಾಣ. ಪುಸ್ತಕಗಳ ಮಾಹಿತಿಗಳನ್ನು ಸಂಗ್ರಹಿಸುವ ನ್ಯೂಟ್ರಲ್ ವೇದಿಕೆ. ಅಲ್ಲಿ ಎಲ್ಲ ರೀತಿಯವರೂ ಇರುತ್ತಾರೆ. ಎಲ್ಲ ರೀತಿಯ ಪುಸ್ತಕಗಳು ಜಾಗ ಪಡೆಯುತ್ತವೆ. ಅಲ್ಲಿ ಎಲ್ಲರನ್ನು ಎಂಗೇಜ್ ಮಾಡಿಕೊಳ್ಳಬೇಕು. ಈ ರೀತಿಯ ನಿಷೇಧ ಅಥವಾ ವಿರೋಧದ ಕ್ಯಾಂಪೇನ್ ಸರಿಯಲ್ಲ ಎಂಬ ಮಾತುಗಳು ಕೂಡ ಕೇಳಿಬಂದವು.


ಇದನ್ನೂ ಓದಿ: ಇದುವರೆಗೂ ಯಾವುದೇ ಲವ್‌ ಜಿಹಾದ್‌ ನಡೆದಿಲ್ಲವೆಂದ ಮೋದಿ ಸರ್ಕಾರ : ಇದು ಬಿಜೆಪಿ V/S ಬಿಜೆಪಿಯ ಕದನ.. 


ತೀವ್ರ ಬಲಪಂಥೀಯ ಪಾಪ್ಯುಲಿಸ್ಟ್ ಪ್ರಭುತ್ವಗಳು ತಲೆಯೆತ್ತಿರುವ ಎಲ್ಲ ದೇಶಗಳಲ್ಲಿ ಜನರ ಚಿಂತನೆಗಳು, ರಾಜಕೀಯ ಧೋರಣೆಗಳಲ್ಲಿ ಧ್ರುವೀಕರಣ ಗರಿಷ್ಠ ಮಟ್ಟದಲ್ಲಿ ಇರುವಾಗ ಇಂತಹ ಚರ್ಚೆಗಳು ಸಾಮಾನ್ಯವಾಗಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಆದರೆ ಇತಿಹಾಸದುದ್ದಕ್ಕೂ ಬಹುತ್ವದ ಚಿಂತನೆಗಳು, ಮಾನವ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಸೂಕ್ಷ್ಮವಾಗಿರುವ ಬರಹಗಳನ್ನು-ಚಿಂತನೆಗಳನ್ನು ಹತ್ತಿಕ್ಕಲು ತಮ್ಮೆಲ್ಲಾ ಅಧಿಕಾರವನ್ನೂ ಬಳಸಲು ಹಿಂಜರಿಯದವರು, ಜನರ ಸ್ಪಾಂಟೇನಿಯಸ್ ಪ್ರತಿರೋಧವನ್ನು ಫ್ಯಾಸಿಸಂ ಎನ್ನುವುದು, ಅದಕ್ಕೆ ಕ್ಯಾನ್ಸಲ್ ಕಲ್ಚರ್ ಎಂಬ ಪದವನ್ನು ನಾಮಕರಣ ಮಾಡಿ ಹೀಗಳೆಯುವುದು ಕೂಡ ಅವರ ಪ್ರಪೋಗಾಂಡಾದ ಮುಂದುವರೆದ ಭಾಗ. ಪ್ರಗತಿಪರರ ಆತ್ಮಾವಲೋಕನ ಬೇಡವೇ ಎಂಬುದು ಪ್ರಮುಖ ಸಾಂದರ್ಭಿಕ ಪ್ರಶ್ನೆಯಾದರೂ ಅಧಿಕಾರ ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳದೆ, ಅಧಿಕಾರ ದುರುಪಯೋಗದಿಂದ ಹೇರುವ ಸೈದ್ಧಾಂತಿಕ ನಿಷೇಧಗಳನ್ನೂ, ಸೈದ್ಧಾಂತಿಕವಾಗಿ ಇದ್ದರೂ ಜನಪರ ಕಾಳಜಿಯಿಂದ ನಡೆಯುವ ಪ್ರತಿರೋಧವನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸಾಧುವಲ್ಲ.

ಇದಕ್ಕೆ ಪೂರಕವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿರವ ವಿವೇಕವೊಂದು ನಮಗೆ ದಾರಿದೀಪವಾಗಬಹುದೇನೋ! 30ರ ದಶಕದಲ್ಲಿ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರು ಯುರೋಪ್ ಪ್ರವಾಸ ಬೆಳೆಸಿದ್ದಾಗ, ಫ್ಯಾಸಿಸ್ಟ್ ಪ್ರಭುತ್ವವಿದ್ದ ಇಟಲಿಗೆ ಭೇಟಿ ಕೊಟ್ಟು, ಫ್ಯಾಸಿಸ್ಟ್ ನಾಯಕ ಮುಸಲೋನಿಯನ್ನು ಭೇಟಿಯಾಗಿದ್ದು ಹಲವು ಗೆಳೆಯರಿಗೆ ಇರಿಸುಮುರಿಸು ಉಂಟುಮಾಡುತ್ತದೆ, ಆಕ್ರೋಶ ತರಿಸುತ್ತದೆ. ಅದೇ ಸಂದರ್ಭದಲ್ಲಿ ಇಟಲಿ ಪ್ರಭುತ್ವ ಟ್ಯಾಗೋರ್ ಅವರ ಶಾಂತಿನಿಕೇತನಕ್ಕೆ ಹಲವು ಸಹಾಯಗಳನ್ನು ಮಾಡಿರುತ್ತದಲ್ಲದೆ, ಅಲ್ಲಿಗೆ ಇಬ್ಬರು ಶಿಕ್ಷಕರನ್ನು ಕೂಡ ಕಳಿಸಿಕೊಟ್ಟಿರುತ್ತದೆ.

Image Courtesy: Wikimedia Commons

ಆದರೆ, ಯೂರೋಪಿನಿಂದ ಟ್ಯಾಗೋರ್ ಅವರು ಸ್ವಿಟ್ಸರ್‌ಲ್ಯಾಂಡ್‌ನ ಜಿನಿವಾಗೆ ತೆರಳಿ ಅಲ್ಲಿ ಅವರ ದೀರ್ಘಕಾಲದ ಗೆಳೆಯ ರೋಮನ್ ರೋಲಂಡ್ ಅವರನ್ನು ಭೇಟಿ ಮಾಡಿದಾಗ, ಇಟಲಿಗೆ ಭೇಟಿ ಕೊಟ್ಟಿದ್ದರ ಬಗ್ಗೆ ಅಸಮಾಧಾನ ಸೂಚಿಸುವ ರೋಲಂಡ್ ಅವರು ಫ್ಯಾಸಿಸಮ್ ಚಹರೆಯನ್ನು ಟ್ಯಾಗೋರ್ ಅವರ ಮುಂದೆ ಅನಾವರಣಗೊಳಿಸುತ್ತಾರೆ. ಇದು ಟ್ಯಾಗೋರ್ ಅವರನ್ನು ಚಿಂತನೆಗೆ ಹಚ್ಚಿದ್ದಲ್ಲದೆ ಅವರು 13, ಜುಲೈ 1926 ರಂದು ರೋಲಂಡ್ ಅವರಿಗೆ ಬರೆಯುವ ಪತ್ರದಲ್ಲಿ ಇಟಲಿಯಲ್ಲಿ ನಾನು ಆಶುದ್ಧತೆಗೆ ಒಡ್ಡಿಕೊಂಡಿದ್ದರಿಂದ ಹೊರಬರಲು ಶುದ್ಧತೆಯ ವ್ರತಾಚರಣೆ ಮಾಡಿಕೊಳ್ಳಬೇಕಿದೆ ಎಂದು ಬರೆಯುತ್ತಾರೆ.

ಹಾಗೆಯೇ, 20 ಜುಲೈ 1926ರಂದು ಟ್ಯಾಗೋರ್ ತಮ್ಮ ಗೆಳೆಯ ಚಾರ್ಲ್ಸ್ ಆಂಡ್ರ್ಯೂಸ್ ಅವರಿಗೆ ಬರೆಯುವ ದೀರ್ಘ ಪತ್ರದಲ್ಲಿ ಫ್ಯಾಸಿಸಂ ಬಗ್ಗೆ ತಮಗೆ ಇದ್ದ ತೆಳು ತಿಳುವಳಿಕೆಯಿಂದ ಆದ ಸಮಸ್ಯೆಯ ಬಗ್ಗೆ ವಿಷಾದ ವ್ಯಕ್ತಪಡಿಸುವುದಲ್ಲದೆ, ಫ್ಯಾಸಿಸಂ ಪ್ರಭುತ್ವದ ಮತ್ತು ಆ ರಾಜಕೀಯ ತತ್ವದ ದೌರ್ಜನ್ಯಗಳ ಬಗ್ಗೆ ಚರ್ಚೆ ಮಾಡಿ “ಫ್ಯಾಸಿಸಂನ ಮಾರ್ಗಗಳು ಮತ್ತು ಲಕ್ಷಣಗಳು ಇಡೀ ಮನುಷ್ಯತ್ವಕ್ಕೆ ಅಪಾಯ ಒಡ್ಡುವಂತವು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ದಯವಾಗಿ ದಮನಿಸುವ ಹಾಗೂ ವ್ಯಕ್ತಿಯ ಆತ್ಮಪ್ರಜ್ಞೆಗೆ ವಿರುದ್ಧವಾಗಿರುವ ನೀತಿ ನಿಯಮಗಳನ್ನು ಹೇರುವ ಮತ್ತು ಹಿಂಸೆ ಹಾಗು ರಹಸ್ಯ ಅಪರಾಧಗಳ ಹಾದಿಯಲ್ಲಿ ನಡೆಯುತ್ತಿರುವ ಈ ಚಳವಳಿಗೆ ನಾನು ಬೆಂಬಲಿಸುತ್ತೀನಿ ಅಂದುಕೊಳ್ಳುವುದು ಅಸಂಬದ್ಧ” ಎಂದು ಬರೆಯುತ್ತಾರೆ.

ಶಾಂತಿನಿಕೇತನಕ್ಕೆ ಹಲವು ರೀತಿಯ ಸಹಾಯಗಳನ್ನು ನೀಡಿದ್ದ ಇಟಲಿ ಪ್ರಭುತ್ವದ ಮುಸಲೋನಿಯನ್ನು ಭೇಟಿ ಮಾಡಿದ್ದು, ಅದನ್ನು ಫ್ಯಾಸಿಸ್ಟ್ ಪ್ರಭುತ್ವ ದುರುಪಯೋಗಪಡಿಸಿಕೊಂಡು ಟ್ಯಾಗೋರ್ ಹೇಳಿಕೆಗಳನ್ನು ತಿರುಚಿ ಮಾಧ್ಯಮಗಳಲ್ಲಿ ಮೂಡಿದ ಅಭಿಪ್ರಾಯಗಳ ಬಗ್ಗೆ ವಿಷಾದ ವ್ಯಕ್ತಪಡಿಸುವ ಟ್ಯಾಗೋರ್ ಅವರು ತಮ್ಮ ಗೆಳೆಯರಲ್ಲಿ ಮೂಡಿದ್ದ ಆತಂಕವನ್ನು ನಿವಾರಿಸಲು ಪ್ರಯತ್ನಪಡುತ್ತಾರೆ. ನ್ಯಾಶನಲಿಸಂನ ಅಪಾಯಗಳ ಬಗ್ಗೆ 1919ರಿಂದಲೂ ಗಟ್ಟಿ ಧ್ವನಿಯಲ್ಲಿ ವಿರೋಧಿಸಿ ಭಾಷಣಗಳನ್ನು ಮಾಡಿ, ಹಲವು ಪ್ರಭುತ್ವಗಳ ಮತ್ತು ಹಲವು ದೇಶಗಳ ರಾಷ್ಟ್ರೀಯವಾದಿ ಜನರ ಅಸಮಾಧಾನ-ವಿರೋಧವನ್ನು ಕಟ್ಟಿಕೊಂಡಿದ್ದ ಟ್ಯಾಗೋರ್ ಅವರಿಗೆ ಅಪ್ರಿಯ ಸತ್ಯಗಳನ್ನು ಹೇಳುವುದಕ್ಕೆ ಯಾವುದೇ ಮುಜುಗರವಿರಲಿಲ್ಲ. ತಮಗೆ ಅರಿವಿಲ್ಲದೆ ಮನುಷ್ಯತ್ವ ವಿರೋಧಿ ಪ್ರಭುತ್ವದೊಂದಿಗೆ ಗುರುತಿಸಿಕೊಂಡ ಬಗ್ಗೆ ವಿಷಾದ ವ್ಯಕ್ತಪಡಿಸಿ, ಅದನ್ನು ಸರಿಪಡಿಸಿಕೊಳ್ಳುವ-ಖಂಡಿಸುವ ಬಗ್ಗೆಯೂ ಅವರು ದಾರಿ ಅನುಕರಣೀಯ. ಟ್ಯಾಗೋರ್ ಎಚ್ಚರಿಸಿದ ಅವರ ಹಲವು ಗೆಳೆಯರು ದಾರಿಯೂ!

ಈ ಇತಿಹಾಸದ ವಿವೇಕದ ಹಿನ್ನಲೆಯಲ್ಲಿ ಭಾರತದಲ್ಲಿ ನಡೆದ ಬ್ಲೂಮ್ಸ್‌ಬರಿ ಮತ್ತು ಬುಕ್‌ಬ್ರಹ್ಮ ಘಟನೆಗಳನ್ನು ನೋಡುವುದು ವಿವೇಕದ ನಡೆಯಾಗಬಹುದು! ದೆಹಲಿ ಗಲಭೆಯ ಪುಸ್ತಕದಲ್ಲಿದ್ದ ವಿಷಯದ ತುಣುಕುಗಳ ಭಾಗಗಳಲ್ಲಿಯೇ ಆ ಗಲಭೆಗಳ ಪ್ರಚೋದನೆ-ಹಿನ್ನೆಲೆ-ವಾಸ್ತವಾಂಶಗಳನ್ನು ತಿರುಚಿ ಅಪಪ್ರಚಾರ ಮಾಡುವ ಪ್ರಪೊಗಾಂಡವನ್ನು ಕಾಣಬಹುದಿತ್ತು ಎಂದು ಈಗಾಗಲೇ ವರದಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಪ್ರಾಣ ಕಳೆದುಕೊಂಡ ಈ ಗಲಭೆಗಳ ಬಗ್ಗೆ, ಸಂಘ ಪರಿವಾರದ ತಥಾಕತಿತ ಲಿಬರಲ್-ಲೆಫ್ಟ್-ಅಲ್ಪಸಂಖ್ಯಾತರ ದೂಷಣೆಯ ಕರಪತ್ರವಾಗಿ ಮೂಡುತ್ತಿದ್ದ ಈ ಪುಸ್ತಕದ ಪ್ರಕಟಣೆಯ ವಿರುದ್ಧ ಸಾತ್ವಿಕ ಸಿಟ್ಟು ತೋರಿಸಿದ್ದನ್ನ, ಇಂತಹ ಪುಸ್ತಕವನ್ನು ಪ್ರಕಟಿಸಿದರೆ ನಿಮ್ಮ ವೇದಿಕೆಯಲ್ಲಿ ನಮ್ಮ ಬರಹಗಳನ್ನು ಪ್ರಕಟಿಸಲು ನಾವು ಮುಂದಾಗುವುದಿಲ್ಲ ಎಂದು ಗಟ್ಟಿಯಾಗಿ ಎದ್ದುನಿಂತರೆ ಅದು ಬಹಿಷ್ಕಾರದ ಕೂಗಾದೀತೇ? ಇಲ್ಲಿ ಅಸಂವಿಧಾನಿಕವಾದ ಯಾವುದೇ ಮಾರ್ಗವನ್ನು ಪ್ರತಿರೋಧ ತೋರಿರುವ ಜನರು ಹಿಡಿದಿಲ್ಲ. ನಿಮ್ಮ ವೇದಿಕೆ ನಮಗೆ ಅಪ್ರಸ್ತುತವಾಗುವ ಸಾಧ್ಯತೆ ಇದೆ ಎನ್ನುವ ಎಚ್ಚರಿಕೆಯನ್ನು ತೋರಿಸುವುದು ಇಲ್ಲಿಬರಲ್ ಆಗುತ್ತದೆಯೇ? ಈ ಸಮಯದಲ್ಲಿ ಬ್ಲೂಮ್ಸ್‌ಬರಿ ಪ್ರಕಾಶನ ಸಂಸ್ಥೆ ವಿವೇಕದ ಹೆಜ್ಜೆಯನ್ನಿಟ್ಟು ಪುಸ್ತಕದ ಪ್ರಕಾಶನದಿಂದ ಹಿಂದೆ ಸರಿದಿರುವುದು ಮಹತ್ವದ ಮತ್ತು ತಪ್ಪನ್ನು ಸರಿಪಡಿಸಿಕೊಳ್ಳುವ ಹೆಜ್ಜೆಯಾಗಿಯೇ ಕಾಣುತ್ತದೆ. ಟ್ಯಾಗೋರ್ ಅವರಿಗೆ ಗೆಳೆಯರು ಎಚ್ಚರಿಸಿದ್ದು ನಂತರ ಅವರು ಸ್ಪಷ್ಟನೆ ನೀಡಿದ್ದು ಇಲ್ಲಿಗೆ ಸಮಾನಾಂತರವಾಗಿ ನಿಲ್ಲುತ್ತದೆ.

ಬುಕ್‌ಬ್ರಹ್ಮ ಪ್ರಕರಣದಲ್ಲಿಯೂ ತಾತ್ವಿಕವಾಗಿ ಚರ್ಚೆ ಮಾಡಬೇಕೆ ಹೊರತು ಚೈತ್ರ ಕುಂದಾಪುರ ಅವರ ವಿಡಿಯೋವನ್ನು ತೆಗೆದುಹಾಕುವಂತೆ ಕೇಳುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ. ಸಂವಾದದಲ್ಲಿ ನಂಬಿಕೆಯೇ ಇರದ, ಸುಳ್ಳು ಸುದ್ದಿ ಮತ್ತು ದ್ವೇಷದ ಹಾಗೂ ಪ್ರಚೋದನಕಾರಿ ಮಾತುಗಳನ್ನು ಹರಡುವ ಜನರ ಜೊತೆಗೆ ಸಂವಾದ ಮಾಡುವುದಕ್ಕೆ ನೆಲ ಸಪಾಟಿದೆಯೇ? ಒಂದು ಪಕ್ಷ ನೆಲ ಸಪಾಟಿದ್ದರೆ ಲವ್ ಜಿಹಾದ್‌ನಂತಹ, ಅರ್ಬನ್ ನಕ್ಸಲ್‌ನಂತಹ ಪದಪುಂಜಗಳು ಹುಟ್ಟಿಕೊಂಡು ಪ್ರಚಾರ ಪಡೆಯುತ್ತಲೇ ಇರಲಿಲ್ಲ. ಇದು ಯಾವುದೂ ರಾಜಕೀಯ ಸಿದ್ಧಾಂತಗಳಿಗೆ ಸಂಬಧಪಟ್ಟ ವ್ಯಾಜ್ಯಗಳೂ ಅಲ್ಲ, ಬದಲಾಗಿ ಇಡೀ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬುಡಮೇಲು ಮಾಡುತ್ತಿರುವ ಜನರಿಗೆ, ಅಂತಹ ಜನರ ಸಾಹಿತ್ಯಕ್ಕೆ ವೇದಿಕೆ ಒದಗಿಸುವ ಔಚಿತ್ಯದ ಪ್ರಶ್ನೆ ಇದು. ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು, ಎಲ್ಲಾ ಪ್ರಜಾಸತ್ತಾತ್ಮಕ ವೇದಿಕೆಗಳನ್ನು ಇಂತಹ ಮತೀಯ ದ್ವೇಷಗಳ ಸಂಗತಿಗಳಿಂದ ಮುಕ್ತವಾಗಿಸುವುದಕ್ಕೆ ಪ್ರತಿರೋಧ ಜಾರಿಯಲ್ಲಿಡುವುದು ಅಗತ್ಯ ಅಲ್ಲವೇ?


ಇದನ್ನೂ ಓದಿ: ಫೇಸ್‌ಬುಕ್‌ನ “ಹೇಟ್‌ಸ್ಪೀಚ್” ನಿಯಮಗಳು ಮತ್ತು ಭಾರತದ ರಾಜಕೀಯ: ವಾಲ್‌ಸ್ಟ್ರೀಟ್‌ ಜರ್ನಲ್ ಲೇಖನದ ಅನುವಾದ


ಕೆಲವು ದಿನಗಳ ಹಿಂದೆ ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಫೇಸ್‌ಬುಕ್ ಹೇಗೆ ಭಾರತದಲ್ಲಿ ಪಕ್ಷಪಾತಿಯಾಗಿ ಬಿಜೆಪಿ ಪಕ್ಷದ ನಾಯಕರಿಗೆ ಸಂಬಂಧಿಸಿದ ಪ್ರಚೋದನಕಾರಿ ಪೋಸ್ಟ್‌ಗಳನ್ನು ಅಳಿಸಿಹಾಕದೆ ಆಳುವ ಪಕ್ಷಕ್ಕೆ ಸಹಕರಿಸುತ್ತಿದೆ ಎಂಬ ವರದಿ ಮಾಡಿತ್ತು. ಇಲ್ಲಿ ಗಮನಾರ್ಹ ಅಂಶವೆಂದರೆ, ಪತ್ರಿಕೆ ಪ್ರತಿಕ್ರಿಯೆ ಕೇಳಿ ಉದಾಹರಿಸಿದ್ದ ಹಲವು ಪೋಸ್ಟ್‌ಗಳನ್ನು ತದನಂತರ ಡಿಲೀಟ್ ಮಾಡುವ ತೋರಿಕೆಯನ್ನಾದರೂ ಫೇಸ್‌ಬುಕ್ ಪ್ರದರ್ಶಿಸಿತ್ತು. ಮುಂದೆ ಅದು ಪ್ರಾಮಾಣಿಕವಾಗಿ ಹೇಟ್ ಸ್ಪೀಚ್ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡಬಹುದೇನೋ! ಇಂತಹ ದ್ವೇಷ ಹರಡುವ ಮಾಧ್ಯಮಗಳಿಗೆ ಜಾಹೀರಾತು ನೀಡಬಾರದು ಎಂಬ ಆಂದೋಲನ ಕೂಡ ಪಶ್ಚಿಮ ದೇಶಗಳಲ್ಲಿ ಸಕ್ರಿಯವಾಗಿದೆ. ಸಮಾಜದಲ್ಲಿ ಒಡಕುಂಟುಮಾಡುವ, ದ್ವೇಷ ಹೆಚ್ಚಿಸುವ, ಪ್ರಚೋದಿಸುವ ಜನರಿಗೆ ಅವರ ಮಾತುಗಳಿಗೆ ವೇದಿಕೆ ಕೊಡಬೇಡಿ ಎಂದು ಪ್ರತಿರೋಧ ತೋರಿಸುವುದು, ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸುವುದು, ತಿದ್ದಿಕೊಳ್ಳದಿದ್ದರೆ ನಿಮ್ಮ ವೇದಿಕೆ ನಮಗೆ ಅಪ್ರಸ್ತುತ ಎಂದು ಹಿಂದೆ ಹೆಜ್ಜೆ ಇಡುವುದನ್ನೆ ಫ್ಯಾಸಿಸಂ ಧೋರಣೆ ಎಂದು ಕರೆಯುವ ಪ್ರಪೊಗಾಂಡಕ್ಕೆ ಲಿಬರಲ್ ಮನೋಧೋರಣೆಯವರು – ನಡುಪಂಥೀಯರು ಬಲಿಯಾಗುವುದು ಸರಿಯಲ್ಲವೆನಿಸುತ್ತದೆ.

ಕೆಲವು ತಿಂಗಳುಗಳ ಹಿಂದೆ ಅಮೆರಿಕಾದ ಹಾರ್ಪರ್ ಮ್ಯಾಗಜಿನ್‌ನಲ್ಲಿ, ಬಲಪಂಥೀಯರಷ್ಟೇ ಎಡಪಂಥೀಯರಲ್ಲಿಯೂ ಇಲ್ಲಿಬರಲ್ ವಾತಾವರಣ ಇದ್ದು, ಐಡಿಯಾಗಳ ಮುಕ್ತ ಚರ್ಚೆಗೆ ಈ ಕ್ಯಾನ್ಸಲ್ ಕಲ್ಚರ್ ಅಡ್ಡಿಯಾಗಿದೆ ಎಂದು ಒಂದು ಬಹಿರಂಗ ಪತ್ರ ಬರೆದು ಅದಕ್ಕೆ ಸಲ್ಮಾನ್ ರಶ್ದಿ, ಜೆ.ಕೆ.ರೌಲಿಂಗ್‌ರಂತಹ ಬರಹಗಾರು ಕೂಡ ಸಹಿಹಾಕಿದ್ದರು. ಜೆ.ಕೆ.ರೌಲಿಂಗ್ ಅವರು ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಅವಹೇಳನಕಾರಿ ಟ್ವಿಟ್ಟರ್ ಪೋಸ್ಟ್ ಹಾಕಿ ತೀವ್ರ ಟೀಕೆಗೆ ಒಳಗಾಗಿದ್ದವರು. ಇಂತಹ ಪತ್ರಕ್ಕೆ ಬರಹಗಾರ ಪಂಕಜ್ ಮಿಶ್ರಾ ಅವರನ್ನು ಸೇರಿಸಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಪರಂಪರಾಗತವಾಗಿ ಅಲ್ಪಸಂಖ್ಯಾತ ಸಮುದಾಯಗಳಿಗೆ, ಅಧಿಕಾರಹೀನರಿಗೆ ಅತಿ ಹೆಚ್ಚು ಅಪಾಯ ಒಡ್ಡಿರುವ ಬಲಪಂಥೀಯರ ಇಲ್ಲಿಬರಲ್ ಧೋರಣೆಯನ್ನು, ದ್ವೇಷವನ್ನು ಹರಡುವ, ಬಲಹೀನರ ಬಗ್ಗೆ ಸಣ್ಣತನದ ಪ್ರತಿಕ್ರಿಯೆಗಳನ್ನು ಮಾಡುವುದನ್ನು ವಿರೋಧಿಸುವ ಬಳಗಕ್ಕೆ ಸಮೀಕರಿಸುವುದನ್ನು ಹಲವರು ವಿರೋಧಿಸಿದ್ದರು.

ಪಾರಂಪಾರಿಕವಾಗಿ ವೈದಿಕ ಧರ್ಮ ಮೇಲುಗೈ ಪಡೆದಿರುವ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಲವೇ ಜಾತಿಯ ಜನರು ಬಹುತೇಕ ಎಲ್ಲ ಕ್ಷೇತ್ರದಲ್ಲಿಯೂ ಅವಕಾಶ ಪಡೆಯುವ ಜಗತ್ತಿನಲ್ಲಿ ಇತ್ತೀಚೆಗಷ್ಟೇ ಶೋಷಿತ ವರ್ಗ ತಮ್ಮ ಹಕ್ಕುಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿ ಅಂಬೆಗಾಲು ಇಡುತ್ತಿರುವ ಸಮಯದಲ್ಲಿ ಅದನ್ನು ಒಂದು ಕಡೆ ಪ್ರಭುತ್ವ ತನ್ನ ಅಧಿಕಾರ ಬಳಸಿ ದಮನಕ್ಕೆ ನಿಂತಿದ್ದರೆ, ಮತ್ತೊಂಡೆ ಅವರನ್ನು ಬೆಂಬಲಿಸುವವರ ವಿರುದ್ಧ ಕ್ಯಾನ್ಸಲ್ ಕಲ್ಚರ್ ಎಂಬ ಪುರಾಣಗಳನ್ನು ಹಬ್ಬಿಸಿ ಹಿಮ್ಮೆಟ್ಟಿಸುವ ಕೆಲಸಗಳು ದೊಡ್ಡಮಟ್ಟದಲ್ಲಿ ನಡೆದಿರುವುದನ್ನು ಗುರುತಿಸುವುದು ಕಷ್ಟವೇನಲ್ಲ.

ಸ್ಟ್ರಾಟಜಿಯ ಪ್ರಶ್ನೆ: ಈ ವಿದ್ಯಮಾನಗಳಿಗೆ ಒಂದು ತಂತ್ರಗಾರಿಕೆಯ ಆಯಾಮವೂ ಇದೆ ಎಂಬುದನ್ನು ಹಲವರು ಬೆಟ್ಟು ಮಾಡಿ ತೋರಿಸಿದ್ದಾರೆ. ಹಲವು ಲಿಬರಲ್ ವೇದಿಕೆಗಳನ್ನು ಬಲಪಂಥೀಯರು ತಮ್ಮ ವಿಶಾಲ ತಂತ್ರಗಾರಿಕೆಯ ನಿಟ್ಟಿನಲ್ಲಿ ಕಬ್ಜಾ ಮಾಡುತ್ತಿರುವುದರಿಂದ ಅಲ್ಲಿ ತಮ್ಮ ಚಿಂತನೆಗಳನ್ನು ಬರಹಗಳ ಮೂಲಕ, ವಿಡಿಯೋ ಇತ್ಯಾದಿಗಳ ಮೂಲಕ ಪ್ರಸ್ತುಪಡಿಸುವುದು ಅವ್ಯಾಹತವಾಗಿ ಮುಂದುವರೆದಿರುವಾಗ, ಅಂತಹ ಕಾರಣಕ್ಕೆ ಆ ವೇದಿಕೆಗಳನ್ನು ತೊರೆದುಹೋಗುವುದು ಲಿಬರಲ್ ವಲಯಕ್ಕೆ ಸರಿಯಾದ ನಡೆಯಲ್ಲ ಎಂಬುದು. ಇದು ಚಿಂತಿಸಬೇಕಾದ ವಿಷಯವೇ. ಬಹುವರ್ಷಗಳ ಕಾಲ ಪ್ರಗತಿಪರ ಚಿಂತನೆಗಳಿಗೆ ನಂಬಿಕೆಗಳಿಗೆ ಪೋಷಣೆ ನೀಡಿದ್ದ ಪ್ರಜಾವಾಣಿಯ ಪತ್ರಿಕೆಯೇ ಎಲ್ಲೋ ಹೊರಳುದಾರಿಯಲ್ಲಿದೆ ಎಂಬ ಆತಂಕ ಮೂಡುವಷ್ಟು ಬೆಳವಣಿಗೆಗಳು ನಡೆದಿರುವುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಆ ನಿಟ್ಟಿನಲ್ಲಿ ಇಂತಹ ವೇದಿಕೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ, ಅಂತಹ ವೇದಿಕೆಗಳು ಎಂದಿಗೂ ದ್ವೇಷವನ್ನು ಹಬ್ಬಿಸುವ, ಪ್ರಚೋದನೆಯನ್ನು ನೀಡುವ, ಸುಳ್ಳು ಸುದ್ದಿಗಳನ್ನು ಜನರಿಗೆ ತಲುಪಿಸುವುದಕ್ಕೆ ಬಳಕೆಯಾಗಬಾರದು ಎಂಬ ಪ್ರತಿರೋಧದ ಹೋರಾಟ ಜಾರಿಯಲ್ಲಿ ಇರಬೇಕು.


ಇದನ್ನೂ ಓದಿ: ಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್ – ದೇವನೂರ ಮಹಾದೇವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...