ದೇಶಾದ್ಯಂತ ರಸ್ತೆ ಅಪಘಾತಗಳು ಮತ್ತು ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ತಮ್ಮ ಸಚಿವಾಲಯದ ಅಸಮರ್ಥತೆಯು ಕಳೆದ ಐದು ವರ್ಷಗಳಲ್ಲಿ ಅತಿದೊಡ್ಡ ವೈಫಲ್ಯವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದಾರೆ.
ಮಿಂಟ್ ಐಡಿಯಾ ಹೂಡಿಕೆ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ರಸ್ತೆ ಅಪಘಾತದಿಂದಾಗಿ ಭಾರತವು ಪ್ರತಿವರ್ಷ ಜಿಡಿಪಿಯ 2% ನಷ್ಟವನ್ನು ಕಳೆದುಕೊಳ್ಳುತ್ತಿದೆ ಎಂದ ಅವರು ಸಂಖ್ಯೆಯಲ್ಲಿ ಅಲ್ಪ ಕುಸಿತದ ಹೊರತಾಗಿಯೂ ಪರಿಸ್ಥಿತಿ ಭೀಕರವಾಗಿದೆ ಎಂದರು.
ವಿಶ್ವ ರಸ್ತೆ ಅಂಕಿಅಂಶ 2018 ರಲ್ಲಿ ವರದಿಯಾದ ಪ್ರಕಾರ 199 ದೇಶಗಳ ರಸ್ತೆ ಅಪಘಾತ ಸಾವುಗಳ ಸಂಖ್ಯೆಯಲ್ಲಿ ಭಾರತವು ಚೀನಾ ಮತ್ತು ಯುಎಸ್ ನಂತರದ ಮೂರನೇಯ ಸ್ಥಾನದಲ್ಲಿದೆ. ರಸ್ತೆ ಸುರಕ್ಷತೆ 2018 ರ ಡಬ್ಲ್ಯುಎಚ್‌ಒ ಜಾಗತಿಕ ವರದಿಯ ಪ್ರಕಾರ ವಿಶ್ವದಾದ್ಯಂತ ಅಪಘಾತಗಳಿಂದಾದ ಸಾವುಗಳಲ್ಲಿ ಭಾರತದ ಪಾಲು 11% ಇದೆ.
ಗಡ್ಕರಿ “ಪ್ರಸ್ತುತ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ಪ್ರತಿ ವರ್ಷ 5 ಲಕ್ಷ ಅಪಘಾತಗಳನ್ನು ಮತ್ತು 1.5 ಲಕ್ಷ ಸಾವುಗಳನ್ನು ಎದುರಿಸುತ್ತಿದ್ದೇವೆ. ಕಳೆದ 3 ತಿಂಗಳಲ್ಲಿ ಮೊದಲ ಬಾರಿಗೆ ಇದು ಶೇಕಡಾವಾರು ಕಡಿಮೆಯಾಗಿದೆ. ಆದರೆ ಕಳೆದ 5 ವರ್ಷಗಳಲ್ಲಿ ಒಂದು ದೊಡ್ಡ ವೈಫಲ್ಯವೆಂದರೆ, ಅಪಘಾತಗಳು ಮತ್ತು ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಈ ಅಪಘಾತಗಳಿಂದಾಗಿಯೇ ನಮ್ಮ ಜಿಡಿಪಿಯ 2% ನಷ್ಟವಾಗುತ್ತಿದೆ” ಎಂದರು.
ಭಾರತದಲ್ಲಿ ರಸ್ತೆ ಅಪಘಾತಗಳು 2018 ರ ವರದಿಯ ಪ್ರಕಾರ ದೇಶಾದ್ಯಂತ 4,67,044 ರಸ್ತೆ ಅಪಘಾತಗಳು ಸಂಭವಿಸಿದೆ. ಅಪಘಾತಗಳಲ್ಲಿ ಪ್ರತಿ ಗಂಟೆಗೆ 17 ಜನರು ಸಾವನ್ನಪ್ಪುತ್ತಾರೆ.
ಭವಿಷ್ಯದಲ್ಲಿ ಅಫಘಾತಗಳ ಸಂಖ್ಯೆಯನ್ನು ಕಡಿತಗೊಳಿಸುವ ಒಂದು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವನ್ನು ಗಡ್ಕರಿ ಒತ್ತಿ ಹೇಳಿದರು. ಅವರು “ನಮ್ಮ ದೇಶದಲ್ಲಿ 52 ಲಕ್ಷ ಕಿ.ಮೀ ಉದ್ದದ ರಸ್ತೆಯದೆ, ಅದರಲ್ಲಿ 96,000 ಕಿ.ಮೀ ಮಾತ್ರ ರಾಷ್ಟ್ರೀಯ ಹೆದ್ದಾರಿ. ದೇಶದ 40% ದಟ್ಟಣೆಯು 2% ರಸ್ತೆಗಳಲ್ಲಿದೆ. ರಾಷ್ಟ್ರೀಯ ಹೆದ್ದಾರಿಗಳ ಉದ್ದವನ್ನು 2 ಲಕ್ಷ ಕಿ.ಮೀ.ಗೆ ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ಮುಂದಿನ 5 ವರ್ಷಗಳಲ್ಲಿ ದಟ್ಟಣೆಯ 80% ಹೆದ್ದಾರಿಗಳಲ್ಲಿರುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿದರು.


